ನಡುಸಮುದ್ರದಲ್ಲಿ ಧಗಧಗ ಹೊತ್ತಿ ಉರಿದ ‘ಎಂವಿ ಜೂನ್ ಆಸ್ಟರ್’ ಹಡಗು: ಐವರು ಸಾವು, 42 ಜನರ ರಕ್ಷಣೆ, ಮುಂದುವರೆದ ತೀವ್ರ ಶೋಧ

ಫಿಲಿಪೈನ್ಸ್ ಕಡಲಿನಲ್ಲಿ 'ಎಂವಿ ಜೂನ್ ಆಸ್ಟರ್' ಹಡಗಿನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 5 ಜನರು ಮೃತಪಟ್ಟಿದ್ದಾರೆ. 42 ಜನರನ್ನು ರಕ್ಷಿಸಲಾಗಿದ್ದು, 87ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಮನಿಲಾದಿಂದ ಪಲವಾನ್ ಕಡೆಗೆ ತೆರಳುತ್ತಿದ್ದ ಹಡಗಿಗೆ ನಡುಸಮುದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಫಿಲಿಪೈನ್ಸ್‌ನಲ್ಲಿ ಇಂತಹ ಕಡಲ ದುರಂತಗಳು ಹೆಚ್ಚಾಗುತ್ತಿದ್ದು, ಸುರಕ್ಷತಾ ಕ್ರಮಗಳ ಕೊರತೆ ಇದರ ಹಿಂದಿನ ಕಾರಣ.

ನಡುಸಮುದ್ರದಲ್ಲಿ ಧಗಧಗ ಹೊತ್ತಿ ಉರಿದ ‘ಎಂವಿ ಜೂನ್ ಆಸ್ಟರ್’ ಹಡಗು: ಐವರು ಸಾವು, 42 ಜನರ ರಕ್ಷಣೆ, ಮುಂದುವರೆದ ತೀವ್ರ ಶೋಧ
ರಕ್ಷಣಾ ಸಿಬ್ಬಂದಿ
Image Credit source: bloomberg News

Updated on: Sep 10, 2026 | 8:32 AM

ಮನಿಲಾ, ಸೆಪ್ಟೆಂಬರ್ 10: ಫಿಲಿಪೈನ್ಸ್‌ನ ಕಡಲ ವ್ಯಾಪ್ತಿಯಲ್ಲಿ ಪ್ರಯಾಣಿಕರ  ಹಡಗೊಂದರಲ್ಲಿ ಗುರುವಾರ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 5 ಮಂದಿ ಮೃತಪಟ್ಟಿದ್ದು, 87ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಮನಿಲಾದಿಂದ ಪಲವಾನ್ ಪ್ರಾಂತ್ಯದ ಕಡೆಗೆ ತೆರಳುತ್ತಿದ್ದ ‘ಎಂವಿ ಜೂನ್ ಆಸ್ಟರ್’ ಎಂಬ ಹಡಗಿನಲ್ಲಿ ನಡುಸಮುದ್ರದಲ್ಲಿದ್ದಾಗ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯ ಕರಾವಳಿ ಕಾವಲು ಪಡೆ ತಕ್ಷಣ ಕಾರ್ಯಾಚರಣೆ ನಡೆಸಿ ೪೨ ಜನರನ್ನು ರಕ್ಷಿಸಿದೆ.

ನೌಕೆಯಲ್ಲಿದ್ದವರ ಸಂಖ್ಯೆ: ಅಪಘಾತ ಸಂಭವಿಸಿದ ಸಮಯದಲ್ಲಿ ಹಡಗಿನಲ್ಲಿ 112 ಪ್ರಯಾಣಿಕರು ಮತ್ತು 17 ಸಿಬ್ಬಂದಿ ಸೇರಿದಂತೆ ಒಟ್ಟು134 ಮಂದಿ ಇದ್ದರು. ದುರಂತದಲ್ಲಿ ಮೃತಪಟ್ಟ ಐವರ ದೇಹಗಳನ್ನು ದಡಕ್ಕೆ ತರಲಾಗಿದೆ. ಉಳಿದಂತೆ 38 ಪ್ರಯಾಣಿಕರು ಹಾಗೂ 4 ಮಂದಿ ಸಿಬ್ಬಂದಿ ಸೇರಿದಂತೆ ಒಟ್ಟು 42 ಜನರನ್ನು ಸಣ್ಣ ದೋಣಿಗಳು ಮತ್ತು ರಕ್ಷಣಾ ಹಡಗುಗಳ ಮೂಲಕ ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಪಲವಾನ್ ಪ್ರಾಂತ್ಯದ ಕೊರೊನ್ ಕಡಲತೀರದಿಂದ ಸುಮಾರು 2.2 ಕಿ.ಮೀ ದೂರದಲ್ಲಿದ್ದಾಗ ಹಡಗಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಇಡೀ ನೌಕೆ ಜ್ವಾಲೆಗೆ ಆಹುತಿಯಾಗಿದೆ. ಇನ್ನೂ 87 ಪ್ರಯಾಣಿಕರ ಸುಳಿವು ಸಿಕ್ಕಿಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿರುವುದರಿಂದ ನಾಪತ್ತೆಯಾದವರ ಸಂಖ್ಯೆಯಲ್ಲಿ ಬದಲಾವಣೆಯಾಗಬಹುದು ಎಂದು ಕೋಸ್ಟ್ ಗಾರ್ಡ್ ವಕ್ತಾರ ಕಮೋಡೋರ್ ನೊಯೆಮಿ ಕಯಾಬ್ಯಾಬ್ ತಿಳಿಸಿದ್ದಾರೆ.

ಮತ್ತಷ್ಟು ಓದಿ: ವಿದ್ಯುತ್ ಕಂಬಕ್ಕೆ ಬೊಲೆರೊ ವಾಹನ ಡಿಕ್ಕಿ: ಮೂವರು ದುರ್ಮರಣ; 8 ಕೂಲಿ ಕಾರ್ಮಿಕರ ಸ್ಥಿತಿ ಗಂಭೀರ

ರಕ್ಷಣಾ ಕಾರ್ಯಾಚರಣೆಗೆ ಹವಾಮಾನ ಅಡ್ಡಿ: ನಡುರಾತ್ರಿಯಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆಯ ವೇಳೆ ಕಡಲಿನಲ್ಲಿ ಬಲವಾದ ಅಲೆಗಳು ಮತ್ತು ಪ್ರಬಲ ಪ್ರವಾಹ ಎದುರಾಗಿದ್ದು, ಬೆಂಕಿ ನಂದಿಸಲು ಮತ್ತು ನಾಪತ್ತೆಯಾದವರನ್ನು ಹುಡುಕಲು ಸಿಬ್ಬಂದಿಗೆ ತೀವ್ರ ಸವಾಲಾಗಿ ಪರಿಣಮಿಸಿದೆ.

ವಿಡಿಯೋ

ದ್ವೀಪ ರಾಷ್ಟ್ರದಲ್ಲಿ ಮರುಕಳಿಸುತ್ತಿರುವ ಕಡಲ ದುರಂತಗಳು: 7 ಸಾವಿರಕ್ಕೂ ಹೆಚ್ಚು ದ್ವೀಪಗಳನ್ನು ಹೊಂದಿರುವ ಫಿಲಿಪೈನ್ಸ್‌ನಲ್ಲಿ ದೋಣಿ ಸಂಚಾರವೇ ಪ್ರಮುಖ ಸಾರಿಗೆ ಸಂಪರ್ಕವಾಗಿದೆ. ಆದರೆ ಹಳೆಯ ಹಡಗುಗಳ ಬಳಕೆ, ನಿಯಮ ಮೀರಿ ಪ್ರಯಾಣಿಕರನ್ನು ತುಂಬುವುದು ಮತ್ತು ಕಳಪೆ ಸುರಕ್ಷತಾ ಮಾನದಂಡಗಳಿಂದಾಗಿ ಇಂತಹ ದುರಂತಗಳು ಅಲ್ಲಿ ನಿರಂತರವಾಗಿ ಸಂಭವಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us