ವಿಶ್ವಸಂಸ್ಥೆಯಲ್ಲಿ ನೆತನ್ಯಾಹು ಭಾಷಣಕ್ಕೆ ಧಿಕ್ಕಾರ: ವೇದಿಕೆ ಏರುತ್ತಿದ್ದಂತೆ ಹೊರನಡೆದ ಜಾಗತಿಕ ಪ್ರತಿನಿಧಿಗಳು

ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾಷಣಕ್ಕೆ ಜಾಗತಿಕ ಪ್ರತಿನಿಧಿಗಳು ಸಭಾತ್ಯಾಗ ಮಾಡಿದರು. ಇದಕ್ಕೆ ತಿರುಗೇಟು ನೀಡಿದ ನೆತನ್ಯಾಹು, ತಮ್ಮ ಸೇನಾ ಕ್ರಮಗಳನ್ನು ಸಮರ್ಥಿಸಿಕೊಂಡರು. ನ್ಯೂಯಾರ್ಕ್ ಮೇಯರ್ ಮತ್ತು ಯುರೋಪ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಇರಾನ್‌ಗೆ ಎಚ್ಚರಿಕೆ ನೀಡಿ, ಸ್ಟಾರ್‌ಲಿಂಕ್ ಪ್ರದರ್ಶಿಸಿದರು. ದೇಶೀಯ ಚುನಾವಣೆಯ ಭೀತಿ, ಹಾಗೂ ಐಸಿಸಿಯಿಂದ ಯುದ್ಧಾಪರಾಧ ವಾರಂಟ್ ಭೀತಿಯ ನಡುವೆ ಅವರ ಭಾಷಣ ಗಮನ ಸೆಳೆಯಿತು.

ವಿಶ್ವಸಂಸ್ಥೆಯಲ್ಲಿ ನೆತನ್ಯಾಹು ಭಾಷಣಕ್ಕೆ ಧಿಕ್ಕಾರ: ವೇದಿಕೆ ಏರುತ್ತಿದ್ದಂತೆ ಹೊರನಡೆದ ಜಾಗತಿಕ ಪ್ರತಿನಿಧಿಗಳು
ಬೆಂಜಮಿನ್ ನೆತನ್ಯಾಹು
Image Credit source: PTI

Updated on: Sep 25, 2026 | 7:21 AM

ನ್ಯೂಯಾರ್ಕ್​, ಸೆಪ್ಟೆಂಬರ್ 25:ನ್ಯೂಯಾರ್ಕ್​ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾಷಣ ಮಾಡಿದ್ದು, ಈ ವೇಳೆ ಜಾಗತಿಕ ಮಟ್ಟದಲ್ಲಿ ತೀವ್ರ ಪ್ರತಿಭಟನೆ ಹಾಗೂ ರಾಜತಾಂತ್ರಿಕ ಬಿರುಕು ಕಂಡುಬಂದಿದೆ. ನೆತನ್ಯಾಹು ಭಾಷಣ ಮಾಡಲು ವೇದಿಕೆಯತ್ತ ಹೆಜ್ಜೆ ಹಾಕುತ್ತಿದ್ದಂತೆ ವಿಶ್ವದ ವಿವಿಧ ರಾಷ್ಟ್ರಗಳ ಹಲವು ಪ್ರತಿನಿಧಿಗಳು ಸಭಾಂಗಣದಿಂದ ಹೊರನಡೆದು ತಮ್ಮ ತೀವ್ರ ವಿರೋಧ ವ್ಯಕ್ತಪಡಿಸಿದರು.

ಹೊರನಡೆದ ನಾಯಕರಿಗೆ ನೆತನ್ಯಾಹು ತಿರುಗೇಟು

ತಮ್ಮ ಭಾಷಣಕ್ಕೆ ವಿರೋಧ ವ್ಯಕ್ತಪಡಿಸಿ ಹೊರನಡೆದ ಪ್ರತಿನಿಧಿಗಳನ್ನು ನೈತಿಕ ಹೇಡಿಗಳು ಎಂದು ಕರೆದ ನೆತನ್ಯಾಹು, ಇಸ್ರೇಲ್‌ನ ಸೇನಾ ಕ್ರಮಗಳನ್ನು ಬಲವಾಗಿ ಸಮರ್ಥಿಸಿಕೊಂಡರು. ಇದೇ ವೇಳೆ ಗ್ಯಾಲರಿಯಲ್ಲಿದ್ದ ಅವರ ಬೆಂಬಲಿಗರು ಹೀಬ್ರೂ ಭಾಷೆಯಲ್ಲಿ ಇಸ್ರೇಲ್‌ನ ಜನರು ಸದಾ ಜೀವಂತ ಎಂದು ಘೋಷಣೆ ಕೂಗಿ ಬೆಂಬಲ ವ್ಯಕ್ತಪಡಿಸಿದರು.

ನ್ಯೂಯಾರ್ಕ್ ಮೇಯರ್ ಮತ್ತು ಯುರೋಪ್ ನಾಯಕರ ವಿರುದ್ಧ ವಾಗ್ದಾಳಿ

ನೆತನ್ಯಾಹು ತಮ್ಮ ಸುಮಾರು 40 ನಿಮಿಷಗಳ ಭಾಷಣದಲ್ಲಿ ನ್ಯೂಯಾರ್ಕ್‌ನ ನೂತನ ಮೇಯರ್ ಜೋಹ್ರಾನ್ ಮಮ್ದಾನಿ ವಿರುದ್ಧ ನೇರವಾಗಿ ಹರಿಹಾಯ್ದರು. ನೀವು ನನ್ನನ್ನು ತಡೆಯಲು ಮತ್ತು ಮೌನಗೊಳಿಸಲು ಪ್ರಯತ್ನಿಸಿದಿರಿ. ಆದರೆ ಸತ್ಯವನ್ನು ಮೌನಗೊಳಿಸಲು ಸಾಧ್ಯವಿಲ್ಲ. ಇಸ್ರೇಲ್ ನರಮೇಧ ಮಾಡಿಲ್ಲ, ಬದಲಾಗಿ ನರಮೇಧವನ್ನು ತಡೆದಿದೆ.

ವಿಡಿಯೋ

ನಮ್ಮ ಸೈನಿಕರ ಬಗ್ಗೆ ಸುಳ್ಳು ಹರಡುವವರಿಗೆ ನಾಚಿಕೆಯಾಗಬೇಕು ಎಂದು ಗುಡುಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಮಮ್ದಾನಿ, ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು (ICC) ಯುದ್ಧಾಪರಾಧಗಳಿಗಾಗಿ ನೆತನ್ಯಾಹು ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ ಎಂಬ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.

ಯುರೋಪ್ ನಾಯಕರಿಗೆ ಎಚ್ಚರಿಕೆ: ಪಶ್ಚಿಮ ಯುರೋಪಿಯನ್ ನಾಯಕರು ಯೆಹೂದ್ಯ ವಿರೋಧಿ ಗುಂಪುಗಳಿಗೆ ಶರಣಾಗಿ ದೌರ್ಬಲ್ಯ ಪ್ರದರ್ಶಿಸುತ್ತಿದ್ದಾರೆ ಎಂದು ಬ್ರಿಟನ್, ಫ್ರಾನ್ಸ್ ಮತ್ತು ಕೆನಡಾ ವಿರುದ್ಧ ಆಕ್ರೋಶ ಹೊರಹಾಕಿದರು.

ಇರಾನ್ ಮತ್ತು ಹೆಜ್ಬೊಲ್ಲಾ ಸಂಘಟನೆಗಳಿಗೆ ಎಚ್ಚರಿಕೆ ನೀಡಲು ನೆತನ್ಯಾಹು ವೇದಿಕೆಯಲ್ಲೇ ಪೇಜರ್ ಸಾಧನವನ್ನು ಮತ್ತು ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ರಿಸೀವರ್ ಅನ್ನು ಪ್ರದರ್ಶಿಸಿದರು. ಇರಾನ್‌ನ ಸರ್ವಾಧಿಕಾರಿ ಆಡಳಿತವನ್ನು ಅಲ್ಲಿನ ಜನರೇ ಕಿತ್ತೊಗೆಯುವ ದಿನಗಳು ದೂರವಿಲ್ಲ ಎಂದು ಅವರು ಭವಿಷ್ಯ ನುಡಿದರು. ಜತೆಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದೃಢ ನಾಯಕತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಮತ್ತಷ್ಟು ಓದಿ: ಅಮೆರಿಕದ ಜೊತೆಗಿನ ಉದ್ವಿಗ್ನತೆ ಬೆನ್ನಲ್ಲೇ ನ್ಯೂಯಾರ್ಕ್‌ಗೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಭೇಟಿ

ದೇಶೀಯ ಚುನಾವಣೆಯ ಮೇಲೆ ಕಣ್ಣು: ಇಸ್ರೇಲ್‌ನಲ್ಲಿ ಸಾರ್ವತ್ರಿಕ ಚುನಾವಣೆಗೆ ಕೇವಲ ಐದು ವಾರಗಳು ಬಾಕಿ ಇದ್ದು, ಇತ್ತೀಚಿನ ಸಮೀಕ್ಷೆಗಳಲ್ಲಿ ನೆತನ್ಯಾಹು ಜನಪ್ರಿಯತೆ ಕುಸಿಯುತ್ತಿದೆ. ಹೀಗಾಗಿ ಇಸ್ರೇಲ್‌ನ ಪ್ರಮುಖ 4 ಟಿವಿ ಚಾನೆಲ್‌ಗಳಲ್ಲಿ ಪ್ರೈಮ್ ಟೈಮ್‌ನಲ್ಲಿ ನೇರ ಪ್ರಸಾರವಾದ ಈ ಭಾಷಣವು ದೇಶೀಯ ಮತದಾರರನ್ನು ಸೆಳೆಯುವ ಚುನಾವಣಾ ಭಾಷಣದಂತಿತ್ತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ನ್ಯೂಯಾರ್ಕ್ ಬೀದಿಗಳಲ್ಲಿ ಭಾರಿ ಪ್ರತಿಭಟನೆ: ವಿಶ್ವಸಂಸ್ಥೆ ಕಟ್ಟಡದ ಹೊರಗೆ ನೂರಾರು ಪ್ರತಿಭಟನಾಕಾರರು ಜಮಾಯಿಸಿ ರಸ್ತೆ ತಡೆ ನಡೆಸಿದರು. ಇಸ್ರೇಲ್‌ಗೆ ಶಸ್ತ್ರಾಸ್ತ್ರ ನೀಡುವುದನ್ನು ನಿಲ್ಲಿಸಿ, ಗಾಜಾವನ್ನು ಬದುಕಲು ಬಿಡಿ” ಎಂದು ಘೋಷಣೆ ಕೂಗಿದ ಹಲವು ಪ್ರತಿಭಟನಾಕಾರರನ್ನು ನ್ಯೂಯಾರ್ಕ್ ಪೊಲೀಸರು ವಶಕ್ಕೆ ಪಡೆದರು.

ಅಂತಾರಾಷ್ಟ್ರೀಯ ಬಂಧನ ವಾರಂಟ್ ಭೀತಿ: ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು (ICC) ನೆತನ್ಯಾಹು ಅವರ ವಿರುದ್ಧ ಯುದ್ಧಾಪರಾಧಗಳ ಬಂಧನ ವಾರಂಟ್ ಹೊರಡಿಸಿರುವುದರಿಂದ, ಅವರು ಐಸಿಸಿ ಒಪ್ಪಂದಕ್ಕೆ ಸಹಿ ಹಾಕಿರುವ ಬಹುತೇಕ ಯುರೋಪಿಯನ್ ರಾಷ್ಟ್ರಗಳಿಗೆ ಪ್ರಯಾಣಿಸಲು ಸಾಧ್ಯವಾಗದೆ ರಾಜತಾಂತ್ರಿಕವಾಗಿ ತೀವ್ರ ಪ್ರತ್ಯೇಕತೆ ಎದುರಿಸುತ್ತಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us