ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ (Kim Jong Un )ಪತ್ನಿ ರಿ ಸೋಲ್ ಜು ಬರೋಬ್ಬರಿ ಒಂದು ವರ್ಷದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದಲೂ ರಿ ಸೋಲ್ ಜು ಹೊರಗೆಲ್ಲೂ ಕಾಣಿಸಿಕೊಳ್ಳದ ಕಾರಣ ಅನೇಕ ಊಹಾಪೋಹಗಳು ಎದ್ದಿದ್ದವು. ಇದೀಗ ಉತ್ತರ ಕೊರಿಯಾದ ಮಾಜಿ ನಾಯಕ ಕಿಮ್, ಈಗಿನ ಅಧ್ಯಕ್ಷ ಜಿಮ್ ಜಾಂಗ್ ಉನ್ ತಂದೆ, ಜಾಂಗ್ ಇಲ್ ಅವರ ಜನ್ಮವಾರ್ಷಿಕೋತ್ಸವ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಸಂಗೀತ ಸಮಾರಂಭವೊಂದರಲ್ಲಿ ಪತಿಯೊಂದಿಗೆ ಭಾಗವಹಿಸಿ, ಎಲ್ಲ ಅನುಮಾನಗಳಿಗೂ ತೆರೆ ಎಳೆದಿದ್ದಾರೆ.
ಈ ಸಂಗೀತ ಸಮಾರಂಭ ಭರ್ಜರಿಯಾಗಿ ನಡೆಯಿತು. ಇಲ್ಲಿಗೆ ಆಗಮಿಸಿದ ಕಿಮ್ ಜಾಂಗ್ ಉನ್ ದಂಪತಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಇವರನ್ನು ನೋಡಿ ನೆರೆದಿದ್ದ ಸಾವಿರಾರು ಜನರು ಹರ್ಷೋದ್ಘಾರ ಮಾಡಿದ್ದಾರೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ. ಸಂಗೀತ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕಿನ್ ಜಾಂಗ್ ಉನ್ ಮತ್ತು ಪತ್ನಿ ರಿ ಸೋಲ್ ಜು ಅವರ ಫೋಟೋಗಳನ್ನು ಆಡಳಿತ ಪಕ್ಷವಾದ ವರ್ಕರ್ಸ್ ಪಾರ್ಟಿಯ ಪತ್ರಿಕೆಯಾದ ರೊಡಾಂಗ್ ಸಿನ್ಮುನ್ ಕೂಡ ಪ್ರಕಟಿಸಿದೆ. ಪ್ಯೋಂಗ್ಯಾಂಗ್ನ ಮನ್ಸುಡೆ ಆರ್ಟ್ ಥಿಯೇಟರ್ನಲ್ಲಿ ನಡೆದ ಸಮಾರಂಭದ ಹಲವು ಫೋಟೋಗಳು ವೈರಲ್ ಆಗಿವೆ. ಹಾಗೇ, ಈ ಸಮಾರಂಭದಲ್ಲಿ ಭಾಗವಹಿಸಿದವರು ಯಾರೂ ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕ ಅಂತರವಂತೂ ಇರಲೇ ಇಲ್ಲ ಎಂಬುದು ಫೋಟೋದಲ್ಲಿ ಸ್ಪಷ್ಟವಾಗಿದೆ.
ಕಿಮ್ ಜಾಂಗ್ ಉನ್ ಪತ್ನಿಗೆ ರಿ ಸೋಲ್ ಜುಗೆ 32ವರ್ಷ ಆಗಿರಬಹುದು. ಇವರ ಹೆಸರು, ಫೋಟೋ ಮೊದಲ ಬಾರಿಗೆ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿಯಲ್ಲಿ (ಕೊರಿಯನ್ ನ್ಯೂಸ್ ಏಜೆನ್ಸಿ) ಪ್ರಕಟವಾಗಿದ್ದು 2012ರಲ್ಲಿ. ಅಂದರೆ ಪತಿ ಕಿಮ್ ಜಾಂಗ್ ಉನ್ ಅಧಿಕಾರ ವಹಿಸಿಕೊಂಡು ಸುಮಾರು ಒಂದೂವರೆ ವರ್ಷದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳಲ್ಲಿ ರಿ ಹೆಸರು, ಫೋಟೋ ಬಂದಿತ್ತು. ಅಲ್ಲಿಂದ ಇಲ್ಲಿಯವರೆಗೆ ನ್ಯೂಸ್ ಏಜೆನ್ಸಿಯಲ್ಲಿ ಸುಮಾರು 200 ಬಾರಿ ಅಷ್ಟೇ ಉಲ್ಲೇಖ ಆಗಿರಬಹುದು. ರಿ ಮೊದಲಿನಿಂದಲೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅಪರೂಪವಾದರೂ ಕಳೆದ ಒಂದೂವರೆ ವರ್ಷದಿಂದ ಅಂತೂ ಒಮ್ಮೆಯೂ ಹೊರಗೆ ಬಂದಿರಲಿಲ್ಲ. ಇದು ಅಲ್ಲಿನ ರಾಜಕೀಯ ವಲಯ, ಸಾಮಾನ್ಯ ಜನರು, ಮಾಧ್ಯಮಗಳು ಹಲವು ಪ್ರಶ್ನೆ ಎತ್ತುವಂತೆ ಮಾಡಿತ್ತು.
ಇದನ್ನೂ ಓದಿ: Greta Thunberg Toolkit Case: ವಕೀಲೆ ನಿಕಿತಾ ಜೇಕಬ್ಗೆ ಬಾಂಬೆ ಹೈಕೋರ್ಟ್ ಜಾಮೀನು
ರಿ ಸೋಲ್ ಜು ಗರ್ಭಿಣಿ, ಕೊರೊನಾ ಸೋಂಕಿನ ಭಯವೂ ಇರುವುದರಿಂದ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂಬ ಮಾತು ಕೇಳಿಬಂದಿತ್ತು. ಅಷ್ಟೇ ಅಲ್ಲ, ಕೊರೊನಾ ವೈರಸ್ ತಗುಲಿರಬಹುದು, ಚಿಕಿತ್ಸೆ ಪಡೆಯುತ್ತಿರಬಹುದು ಇದೇ ಭಯಕ್ಕೆ ಹೊರಗೆಲ್ಲೂ ಬರುತ್ತಿಲ್ಲ ಎಂದೂ ಹೇಳಲಾಗಿತ್ತು. ಇನ್ನು ಕೆಲವರು, ರಿ ಸೋಲ್ ಜು ಮಕ್ಕಳ ಆರೈಕೆಯಲ್ಲಿ ತೊಡಗಿದ್ದಾರೆ. ಕೊರೊನಾ ಭಯದಿಂದಾಗಿ ಅವರು ಮಕ್ಕಳೊಂದಿಗೆ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೀಗೆ ಅನೇಕ ರೀತಿಯ ಊಹಾಪೋಹಗಳು ಎದ್ದಿದ್ದವು. ಮಾಜಿ ಗಾಯಕಿಯೂ ಆಗಿರುವ ರಿ ಸೋಲ್ ಜು ಈ ಒಂದು ವರ್ಷ ಯಾಕಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿಲ್ಲ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ ಈಗ ಸಂಗೀತ ಸಮಾರಂಭದಲ್ಲಿ ಪತಿಯೊಂದಿಗೆ ಭಾಗವಹಿಸಿ ಹಲವು ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ಹಿಂದೊಮ್ಮೆ ಕಿಮ್ ಜಾಂಗ್ ಉನ್ ಕೂಡ ಏಕಾಏಕಿ ಕಣ್ಮರೆಯಾಗಿದ್ದರು. ಆಗಂತೂ ಅವರು ಸತ್ತೇ ಹೋಗಿದ್ದಾರೆ ಎಂದೇ ಸುದ್ದಿಯಾಗಿತ್ತು. ಅದಾದ ಮೇಲೆ ಮತ್ತೆ ಪ್ರತ್ಯಕ್ಷವಾಗಿ ಹುಟ್ಟಿದ್ದ ಊಹಾಪೋಹಕ್ಕೆ ಫುಲ್ಸ್ಟಾಪ್ ಇಟ್ಟಿದ್ದರು.
Published On - 3:33 pm, Wed, 17 February 21