9/11 ದಾಳಿಗೂ ಮುನ್ನವೇ ಭಾರತದ ಮೇಲೂ ಕಣ್ಣಿಟ್ಟಿದ್ದ ಲಾಡೆನ್: ಸಿಐಎ ರಹಸ್ಯ ಕಡತಗಳಿಂದ ಆಘಾತಕಾರಿ ಸತ್ಯ ಬಹಿರಂಗ

ಸಿಐಎ ರಹಸ್ಯ ಕಡತಗಳು ಒಸಾಮಾ ಬಿನ್ ಲಾಡೆನ್ 9/11 ದಾಳಿಗೂ ಮುನ್ನ ಭಾರತದ ಮೇಲೆ ಕಣ್ಣಿಟ್ಟಿದ್ದನ್ನು ಬಹಿರಂಗಪಡಿಸಿವೆ. 1998ರ ವರದಿಯಂತೆ ಭಾರತವೂ ಸೇರಿದಂತೆ ಹಲವು ದೇಶಗಳ ಮೇಲೆ ದಾಳಿ ನಡೆಸಲು ಲಾಡೆನ್ ಯೋಜನೆ ಹಾಕಿದ್ದ. ಅಲ್-ಖೈದಾ ಜಾಗತಿಕ ಜಾಲ ಹೊಂದಿತ್ತು. ಈ ದಾಖಲೆಗಳು ಲಾಡೆನ್ ಮತ್ತು ಭಾರತದ ಮೇಲೆ ಅಲ್-ಖೈದಾದ ಸಂಭಾವ್ಯ ದಾಳಿಯ ಭಯಾನಕ ಸತ್ಯವನ್ನು ಅನಾವರಣಗೊಳಿಸುತ್ತವೆ.

9/11 ದಾಳಿಗೂ ಮುನ್ನವೇ ಭಾರತದ ಮೇಲೂ ಕಣ್ಣಿಟ್ಟಿದ್ದ ಲಾಡೆನ್: ಸಿಐಎ ರಹಸ್ಯ ಕಡತಗಳಿಂದ ಆಘಾತಕಾರಿ ಸತ್ಯ ಬಹಿರಂಗ
ಒಸಾಮಾ
Image Credit source: WWW.orfonline.com

Updated on: Sep 13, 2026 | 9:34 AM

ವಾಷಿಂಗ್ಟನ್, ಸೆಪ್ಟೆಂಬರ್ 13: ಜಗತ್ತನ್ನೇ ನಡುಗಿಸಿದ್ದ ಸೆಪ್ಟೆಂಬರ್ 11ರ ಅಮೆರಿಕ ಉಗ್ರ ದಾಳಿ ಗೆ 25 ವರ್ಷ. ಅಮೆರಿಕದ ಪ್ರಮುಖ ಗುಪ್ತಚರ ಸಂಸ್ಥೆ ‘ಸಿಐಎ’ (CIA) ಅತ್ಯಂತ ಸೂಕ್ಷ್ಮ ಹಾಗೂ ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸಿದೆ. 9/11 ದಾಳಿಗೂ ಮುನ್ನವೇ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ದಾಳಿ ನಡೆಸಲು ಯೋಜಿಸಿದ್ದ ಪ್ರಮುಖ ದೇಶಗಳ ಪಟ್ಟಿಯಲ್ಲಿ ಭಾರತವೂ ಸೇರಿತ್ತು ಎಂಬ ಆಘಾತಕಾರಿ ಮಾಹಿತಿ ಈ ದಾಖಲೆಗಳಿಂದ ಬೆಳಕಿಗೆ ಬಂದಿದೆ.

1998ರ ಅಧ್ಯಕ್ಷೀಯ ರಹಸ್ಯ ವರದಿ: ಆಗಸ್ಟ್ 28, 1998 ರಂದು ಅಮೆರಿಕ ಅಧ್ಯಕ್ಷರಿಗೆ ಸಲ್ಲಿಸಲಾಗಿದ್ದ “ಬಿನ್ ಲಾಡೆನ್ ಭಯೋತ್ಪಾದಕ ಜಾಲ ಇನ್ನೂ ಬೆದರಿಕೆ” ಎಂಬ ಶೀರ್ಷಿಕೆಯ ಗುಪ್ತಚರ ವರದಿಯಲ್ಲಿ ಭಾರತದ ಉಲ್ಲೇಖವಿದೆ. ಭಾರತದ ಜತೆಗೆ ಪಾಕಿಸ್ತಾನ, ಸೌದಿ ಅರೇಬಿಯಾ, ಈಜಿಪ್ಟ್, ಕುವೈತ್, ಯೆಮೆನ್ ಹಾಗೂ ಉಗಾಂಡಾಗಳ ಮೇಲೂ ದಾಳಿಗೆ ಲಾಡೆನ್ ಸ್ಕೆಚ್ ಹಾಕಿದ್ದ.

ನಿರ್ದಿಷ್ಟ ಗುರಿಯ ಉಲ್ಲೇಖವಿಲ್ಲ: ಭಾರತವನ್ನು ಗುರಿಯಾಗಿಸುವ ಇಂಗಿತ ವ್ಯಕ್ತವಾಗಿದ್ದರೂ, ಭಾರತದ ಯಾವ ನಗರ ಅಥವಾ ನಿರ್ದಿಷ್ಟ ಸ್ಥಳಗಳನ್ನು ಯಾವಾಗ ಟಾರ್ಗೆಟ್ ಮಾಡಲಾಗಿತ್ತು ಎಂಬ ಕಾರ್ಯಾಚರಣೆಯ ವಿವರಗಳನ್ನು ವರದಿಯಲ್ಲಿ ಬಹಿರಂಗಪಡಿಸಲಾಗಿಲ್ಲ.

60 ದೇಶಗಳಲ್ಲಿ ಹರಡಿದ್ದ ಜಾಲ: ಅಮೆರಿಕ, ಯುರೋಪ್ ಮತ್ತು ಪೂರ್ವ ಏಷ್ಯಾದಲ್ಲಿ ಲಾಡೆನ್ ಬಲವಾದ ನೆಟ್‌ವರ್ಕ್ ಹೊಂದಿದ್ದ. ವಿಶ್ವದ ಬರೋಬ್ಬರಿ 60 ದೇಶಗಳಲ್ಲಿ ತನ್ನ ಸಹಚರರು ಹಾಗೂ ಉಗ್ರ ಸಂಘಟನೆಗಳ ಮೂಲಕ ಏಕಕಾಲದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಸಾಮರ್ಥ್ಯ ಅಲ್ ಖೈದಾಗೆ ಇತ್ತು ಎಂದು ಸಿಐಎ ವಿಶ್ಲೇಷಿಸಿತ್ತು.

ಮತ್ತಷ್ಟು ಓದಿ:
ಪಾಕಿಸ್ತಾನ ಸೇನೆ ಗುರಿಯಾಗಿಸಿ ದಾಳಿ ನಡೆಸಲು ಸಂಚು ಆರೋಪ: ಬೆಂಗಳೂರಿನಲ್ಲಿ ಭದ್ರತಾ ಸಿಬ್ಬಂದಿ ಬಂಧನ

ಅಮೆರಿಕ ಅಧ್ಯಕ್ಷರಿಗೆ ನಿರಂತರ ಎಚ್ಚರಿಕೆ: 1998 ರಿಂದ 2001 ರವರೆಗೆ ಅಂದಿನ ಅಧ್ಯಕ್ಷರಾದ ಬಿಲ್ ಕ್ಲಿಂಟನ್ ಮತ್ತು ನಂತರ ಅಧಿಕಾರಕ್ಕೆ ಬಂದ ಜಾರ್ಜ್ ಡಬ್ಲ್ಯು ಬುಷ್ ಅವರಿಗೆ ಸಂಭವನೀಯ ದಾಳಿಗಳ ಬಗ್ಗೆ ಸಿಐಎ ನಿರಂತರವಾಗಿ ಗುಪ್ತಚರ ಎಚ್ಚರಿಕೆಗಳನ್ನು ನೀಡುತ್ತಲೇ ಇತ್ತು ಎಂಬುದನ್ನು ಈ 70ಕ್ಕೂ ಹೆಚ್ಚು ದಾಖಲೆಗಳು ಸಾಬೀತುಪಡಿಸಿವೆ.

ಏನಿದು 9/11 ದಾಳಿ?: ಸೆಪ್ಟೆಂಬರ್ 11, 2001 ರಂದು 19 ಜನ ಅಲ್ ಖೈದಾ ಉಗ್ರರು ಅಮೆರಿಕದ 4 ವಿಮಾನಗಳನ್ನು ಅಪಹರಿಸಿದ್ದರು. ಇದರಲ್ಲಿ ಎರಡು ವಿಮಾನಗಳು ನ್ಯೂಯಾರ್ಕ್‌ನ ವಿಶ್ವ ವ್ಯಾಪಾರ ಕೇಂದ್ರದ (WTC) ಅವಳಿ ಗೋಪುರಗಳಿಗೆ ಅಪ್ಪಳಿಸಿ ಸುಮಾರು 3 ಸಾವಿರ ಜನರ ಸಾವಿಗೆ ಕಾರಣವಾದವು. ಮೂರನೇ ವಿಮಾನ ಪೆಂಟಗನ್‌ಗೆ ಡಿಕ್ಕಿ ಹೊಡೆದರೆ, ನಾಲ್ಕನೇ ವಿಮಾನ ಪೆನ್ಸಿಲ್ವೇನಿಯಾದ ಬಯಲಿನಲ್ಲಿ ಪತನಗೊಂಡಿತ್ತು.

ಭಾರತ ಮತ್ತು ಅಲ್ ಖೈದಾ ನಂಟು: 1990ರ ದಶಕದ ಉತ್ತರಾರ್ಧದಲ್ಲೇ ಅಲ್ ಖೈದಾ ಕಾಶ್ಮೀರ ಕಣಿವೆಯಲ್ಲಿದ್ದ ಪಾಕಿಸ್ತಾನಿ ಮೂಲದ ಉಗ್ರ ಸಂಘಟನೆಗಳಾದ ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ಜತೆ ನಿಕಟ ಸಂಪರ್ಕ ಹೊಂದಿತ್ತು. ಭಾರತದ ಮೇಲೆ ನೇರ ದಾಳಿಗೆ ಲಾಡೆನ್ ಹೊಂಚು ಹಾಕುತ್ತಿದ್ದದ್ದು ಈ ದಾಖಲೆಗಳಿಂದ ಸ್ಪಷ್ಟವಾಗಿದೆ.

9/11 ದಾಳಿಯ 25ನೇ ವರ್ಷದ ನೆನಪಿನಲ್ಲಿ ಸಾರ್ವಜನಿಕರಿಗೆ ಮುಕ್ತಗೊಳಿಸಲಾದ ಈ 100ಕ್ಕೂ ಹೆಚ್ಚು ಪುಟಗಳ ದಾಖಲೆಗಳು, ಆ ಕಾಲಘಟ್ಟದಲ್ಲಿ ಅಮೆರಿಕ ಹಾಗೂ ಜಾಗತಿಕ ಭದ್ರತಾ ಪಡೆಗಳು ಎದುರಿಸುತ್ತಿದ್ದ ಗುಪ್ತಚರ ಸವಾಲುಗಳನ್ನು ಜಗತ್ತಿನೆದುರು ತೆರೆದಿಟ್ಟಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us