ವಿದ್ಯಾರ್ಥಿಗಳ ಹೆದರಿಸಲು ಪತ್ನಿಯಿಂದ ಪತಿಗೊಂದು ಕಾಲ್: ಯೂನಿವರ್ಸಿಟಿಯಲ್ಲಿ ಗುಂಡು ಹಾರಿಸಿ ಗೂಂಡಾಗಿರಿ ಮೆರೆದ ಪಾಕ್ ಸೇನಾಧಿಕಾರಿ

ಪಾಕಿಸ್ತಾನದ ಸರ್ಹದ್ ವಿಶ್ವವಿದ್ಯಾಲಯದಲ್ಲಿ ಶುಲ್ಕ ಹೆಚ್ಚಳ ವಿರೋಧಿಸಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಸೇನಾ ಸಮವಸ್ತ್ರದಲ್ಲಿದ್ದ ಸೇನಾಧಿಕಾರಿಯೊಬ್ಬರು ಲಾಠಿ ಪ್ರಹಾರ ಮಾಡಿ, ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ವಿದ್ಯಾರ್ಥಿ ವ್ಯವಹಾರಗಳ ಮುಖ್ಯಸ್ಥೆಯಾಗಿರುವ ಪತ್ನಿಯ ಕರೆಯ ಮೇರೆಗೆ ಕ್ಯಾಂಪಸ್‌ಗೆ ಬಂದಿದ್ದ ಅಧಿಕಾರಿ ಈ ಕೃತ್ಯ ಎಸಗಿದ್ದಾರೆ. ಘಟನೆ ವೈರಲ್ ಆದ ನಂತರ ಪಾಕ್ ಸೇನೆ ಆಂತರಿಕ ತನಿಖೆಗೆ ಆದೇಶಿಸಿದೆ, ಮಿಲಿಟರಿ ಹಸ್ತಕ್ಷೇಪದ ಬಗ್ಗೆ ಕಳವಳ ವ್ಯಕ್ತವಾಗಿದೆ.

ವಿದ್ಯಾರ್ಥಿಗಳ ಹೆದರಿಸಲು ಪತ್ನಿಯಿಂದ ಪತಿಗೊಂದು ಕಾಲ್: ಯೂನಿವರ್ಸಿಟಿಯಲ್ಲಿ ಗುಂಡು ಹಾರಿಸಿ ಗೂಂಡಾಗಿರಿ ಮೆರೆದ ಪಾಕ್ ಸೇನಾಧಿಕಾರಿ
ಪಾಕಿಸ್ತಾನ

Updated on: Aug 25, 2026 | 9:00 AM

ಇಸ್ಲಾಮಾಬಾದ್, ಆಗಸ್ಟ್ 25: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಸರ್ಹಾದ್ ವಿಶ್ವವಿದ್ಯಾಲಯದ ರಾವತ್ ಕ್ಯಾಂಪಸ್‌ನಲ್ಲಿ ಪಾಕಿಸ್ತಾನ(Pakistan) ಸೇನೆಯ ಅಧಿಕಾರಿಯೊಬ್ಬರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಪ್ರತಿಭಟನೆ ನಡೆಸುತ್ತಿದ್ದ ನಿರಾಯುಧ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸಿ, ಸರ್ವಿಸ್ ರಿವಾಲ್ವರ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ವಿದ್ಯಾರ್ಥಿ ವ್ಯವಹಾರಗಳ ಮುಖ್ಯಸ್ಥೆಯಾಗಿರುವ ತಮ್ಮ ಪತ್ನಿಯ ಕರೆಯ ಮೇರೆಗೆ ಸಮವಸ್ತ್ರದಲ್ಲೇ ಕ್ಯಾಂಪಸ್‌ಗೆ ಬಂದ ಸೇನಾಧಿಕಾರಿ ಈ ಕೃತ್ಯ ಎಸಗಿದ್ದಾರೆ. ಸರ್ಹಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಾಲೇಜು ಶುಲ್ಕ ಹೆಚ್ಚಳ ಹಾಗೂ ತರಗತಿಗಳ ವೇಳಾಪಟ್ಟಿ ಬದಲಾವಣೆಯನ್ನು ವಿರೋಧಿಸಿ ವಿಭಾಗದ ಮುಖ್ಯಸ್ಥರ ಕಚೇರಿ ಎದುರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು.

ವಿದ್ಯಾರ್ಥಿ ವ್ಯವಹಾರಗಳ ಮುಖ್ಯಸ್ಥೆ ಡಾ. ಐನಾ ವಿದ್ಯಾರ್ಥಿಗಳ ಮನವೊಲಿಸಲು ಯತ್ನಿಸಿದರು. ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆಯಲು ಒಪ್ಪದಿದ್ದಾಗ, ಅವರು ಸೇನಾ ಅಧಿಕಾರಿಯಾಗಿರುವ ತಮ್ಮ ಪತಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡರು. ಕರ್ನಲ್, ಬ್ರಿಗೇಡಿಯರ್ ಶ್ರೇಣಿಯ ಅಧಿಕಾರಿಯೊಬ್ಬರು ಸೇನಾ ಸಮವಸ್ತ್ರದಲ್ಲೇ ಕ್ಯಾಂಪಸ್‌ಗೆ ಆಗಮಿಸಿ, ವಿದ್ಯಾರ್ಥಿಗಳ ಮೇಲೆ ಯಾವುದೇ ಪ್ರಚೋದನೆಯಿಲ್ಲದೆ ಲಾಠಿಯಿಂದ ಹಲ್ಲೆ ನಡೆಸಿದರು. ನಂತರ ತಮ್ಮ ಸರ್ವಿಸ್ ಪಿಸ್ತೂಲ್ ಹೊರತೆಗೆದು ಗಾಳಿಯಲ್ಲಿ ಗುಂಡು ಹಾರಿಸಿ, ವಿದ್ಯಾರ್ಥಿಗಳಿಗೆ ಗುರಿಯಿಟ್ಟು ಬೆದರಿಕೆ ಹಾಕಿದರು.

ಮತ್ತಷ್ಟು ಓದಿ: ಆಪರೇಷನ್ ಸಿಂಧೂರ್ ವೇಳೆ ಧ್ವಂಸಗೊಂಡಿದ್ದ ಜೈಶ್ ಪ್ರಧಾನ ಕಚೇರಿ ರೆಡಿ, ಮತ್ತೆ ಚುರುಕಾಯ್ತು ಜೆಇಎಂ ಉಗ್ರ ಜಾಲ

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ: ಸೇನಾಧಿಕಾರಿ ಪಿಸ್ತೂಲ್ ಝಳಪಿಸಿ ವಿದ್ಯಾರ್ಥಿಗಳನ್ನು ಬೆದರಿಸುತ್ತಿರುವ ದೃಶ್ಯಗಳನ್ನು ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜಾಗತಿಕ ಮಟ್ಟದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಆಂತರಿಕ ವಿಚಾರಣೆ: ವ್ಯಾಪಕ ಖಂಡನೆಗೆ ಒಳಗಾದ ಬೆನ್ನಲ್ಲೇ ಎಚ್ಚೆತ್ತ ಪಾಕಿಸ್ತಾನ ಸೇನೆಯು ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಆಂತರಿಕ ತನಿಖೆಗೆ ಆದೇಶಿಸಿದೆ. ಪಾಕಿಸ್ತಾನದಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ನಾಗರಿಕ ಆಡಳಿತದಲ್ಲಿ ಮಿಲಿಟರಿ ಅಧಿಕಾರಿಗಳು ಮತ್ತು ಅವರ ಕುಟುಂಬಸ್ಥರು ಹಸ್ತಕ್ಷೇಪ ನಡೆಸುತ್ತಿರುವುದು ದೇಶದ ಆಂತರಿಕ ಭದ್ರತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಕುಸಿತಕ್ಕೆ ಸಾಕ್ಷಿಯಾಗಿದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us