ಇಸ್ಲಾಮಾಬಾದ್: ಪಾಕಿಸ್ತಾನವು ಒಂದು ಬಿಕ್ಕಟ್ಟಿನಿಂದ (Pakistan Economic Crisis) ಮತ್ತೊಂದು ಬಿಕ್ಕಟ್ಟಿಗೆ ಸಿಲುಕುತ್ತಿದೆ. ಸತತ ಸಂಕಷ್ಟದಿಂದ ಹೈರಾಣಾಗಿರುವ ಜನಸಾಮಾನ್ಯರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ (International Monetary Fund – IMF) ನೆರವು ಸಿಗದಿರುವುದು ಪಾಕಿಸ್ತಾನೀಯರ ಬದುಕಿನ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಕಳೆದ ಹಲವು ತಿಂಗಳುಗಳಿಂದ ಪಾಕಿಸ್ತಾನ ಸರ್ಕಾರ ದಿವಾಳಿ ಅಂಚಿಗೆ ಬಂದು ನಿಂತಿದೆ. ಶ್ರೀಲಂಕಾ ಮತ್ತು ವೆನೆಜುವೆಲಾ ಮಾದರಿಯಲ್ಲಿ ಪಾಕಿಸ್ತಾನದಲ್ಲಿಯೂ ನಿತ್ಯದ ಬದುಕು ಅಸಹನೀಯ ಎನಿಸಿದೆ. ಹಣದುಬ್ಬರ ಪ್ರಮಾಣವು ಶೇ 48ಕ್ಕೆ ಬಂದಿದೆ. ದೇಶದ ವಿದೇಶಿ ವಿನಿಮಯ ಮೀಸಲು ಪ್ರಮಾಣವು ಒಂದು ತಿಂಗಳು ಆಮದು ನಿರ್ವಹಿಸಲು ಬೇಕಾಗುಷ್ಟೂ ಇಲ್ಲ. ಕಳೆದ ವರ್ಷದ ಮಾರಣಾಂತಿಕ ಪ್ರವಾಹದಿಂದ ಹಾಳಾಗಿರುವ ರಸ್ತೆ, ಸೇತುವೆ, ಮನೆಗಳ ಮರುನಿರ್ಮಾಣವೂ ಸಾಧ್ಯವಾಗಿಲ್ಲ. ಹವಾಮಾನ ವೈಪರಿತ್ಯದ ಜೊತೆಗೆ ಆರ್ಥಿಕ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಮಾಡಿದ ತಪ್ಪುಗಳು ಹಾಗೂ ರಾಜಕೀಯ ಬಿಕ್ಕಟ್ಟು ಜೊತೆಗೂಡಿದರೆ ಜನರ ಬದುಕು ಹೇಗೆ ಅಡಕತ್ತರಿಗೆ ಸಿಲುಕಬಹುದು ಎನ್ನುವುದಕ್ಕೆ ಪಾಕಿಸ್ತಾನವು ಒಂದು ಜೀವಂತ ಉದಾಹರಣೆಯಾಗಿ ನಮ್ಮೆದುರು ಇದೆ.
ಇದೇ ವರ್ಷದ ಉತ್ತರಾರ್ಧದಲ್ಲಿ ಮಹಾಚುನಾವಣೆ ನಡೆಯಬೇಕಿದೆ. ಇದೇ ಕಾರಣಕ್ಕೆ ಆಡಳಿತಾರೂಢ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರ ಯಾವುದೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಮತ್ತೊಂದೆಡೆ ಮಾಜಿ ಪ್ರಧಾನಿ ಇಮ್ರಾನ್ ಬೀದಿಗಳಲ್ಲಿ ನಡೆಸುತ್ತಿರುವ ಹೋರಾಟದ ತೀವ್ರತೆಯನ್ನೂ ಕಡಿಮೆ ಮಾಡುತ್ತಿಲ್ಲ. ಈ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನ ಜೊತೆಗೆ ಭದ್ರತಾ ವೈಫಲ್ಯವೂ ದೇಶವನ್ನು ಕಾಡುತ್ತಿದೆ. ಪೇಷಾವರದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 100ಕ್ಕೂ ಹೆಚ್ಚು ಜನರು ಮೃತಪಟ್ಟರು. ಪಾಕಿಸ್ತಾನ ಸರ್ಕಾರವು ಅಫ್ಘಾನಿಸ್ತಾನದ ತಾಲಿಬಾನ್ ಸಂಘಟನೆ ನಿರ್ವಹಣೆಯಲ್ಲಿ ಮಾಡುವ ಒಂದು ಸಣ್ಣ ತಪ್ಪೂ ಸಹ ಎಷ್ಟು ಜನರ ಜೀವ ತೆಗೆಯಲಿದೆಯೋ ಗೊತ್ತಿಲ್ಲ.
ಪಾಕಿಸ್ತಾನದ ಜನಸಾಮಾನ್ಯರ ಪರಿಸ್ಥಿತಿ ಹೇಗಿದೆ ಎಂಬ ಪ್ರಶ್ನೆಗೆ ಉತ್ತರ ಸಿಗಲು ‘ಬ್ಲೂಮ್‌ಬರ್ಗ್ ನ್ಯೂಸ್’ನ ಈ ವರದಿ ಓದಬೇಕು. ನಗರ ಮತ್ತು ಹಳ್ಳಿಗಳಲ್ಲಿ ಜನಸಾಮಾನ್ಯರನ್ನು ಮಾತನಾಡಿಸಿರುವ ಬ್ಲೂಮ್‌ಬರ್ಗ್ ವರದಿಗಾರರು ಅಲ್ಲಿನ ವಾಸ್ತವ ಬದುಕಿಗೆ ಕನ್ನಡಿ ಹಿಡಿದಿದ್ದಾರೆ.
ಕರಾಚಿಯಲ್ಲಿ ಸೀಫುಡ್ ರೆಸ್ಟೊರೆಂಟ್ ನಡೆಸುವ ರಶೀದ್ ಇದೀಗ ವ್ಯಾಪಾರವಿಲ್ಲದೆ ಕಂಗಾಲಾಗಿದ್ದಾರೆ. ದಿನಬಳಕೆಯ ಅತ್ಯಗತ್ಯ ವಸ್ತುಗಳಾದ ಬ್ರೆಡ್ (ರೊಟ್ಟೆ-ಚಪಾತಿ) ಮತ್ತು ಮಾಂಸದ ದರ ವಿಪರೀತ ಹೆಚ್ಚಾಗಿರುವುದರಿಂದ ಜನಸಾಮಾನ್ಯರು ಹೊಟೆಲ್‌ಗಳತ್ತ ಸುಳಿಯುತ್ತಿಲ್ಲ. ‘ನನ್ನ ರೆಸ್ಟೊರೆಂಟ್‌ಗೆ ಈಗ ಮೊದಲಿನಂತೆ ಜನರು ಬರುತ್ತಿಲ್ಲ. ಕೇವಲ ವ್ಯಾಪಾರಿಗಳು, ಶ್ರೀಮಂತರು ಮಾತ್ರ ಬರುತ್ತಿದ್ದಾರೆ. ಅವರಿಗೆ ಯಾವುದೇ ಬಿಸಿಮುಟ್ಟಿದಂತೆ ಕಾಣಿಸುತ್ತಿಲ್ಲ. ಅವರು ಎಂದಿನಂತೆ ಇಲ್ಲಿಗೆ ಬಂದು ಸೀಫುಡ್ ಸವಿಯುತ್ತಿದ್ದಾರೆ’ ಎನ್ನುತ್ತಾರೆ ರೆಸ್ಟೊರೆಂಟ್‌ನ ಕೆಲಸಗಾರ ಮೊಹಮದ್ ರಶೀದ್.
ಪೆಟ್ರೋಲ್ ಮತ್ತು ಡೀಸೆಲ್ ಪಾಕಿಸ್ತಾನದ ಮತ್ತೊಂದು ಬಿಸಿಬಿಸಿ ಚರ್ಚೆಯ ವಿಷಯ. ಪಾಕಿಸ್ತಾನದಲ್ಲಿ ಸದ್ಯ ಒಂದು ಲೀಟರ್ ಡೀಸೆಲ್ 262 ಪಾಕಿಸ್ತಾನಿ ರೂಪಾಯಿಗೆ ಮಾರಾಟವಾಗುತ್ತಿದೆ. ಇದರಿಂದ ದೈನಂದಿನ ಸಂಚಾರ ನಿರ್ವಹಣೆಯೂ ಕಷ್ಟವಾಗಿದೆ. ಪಾಕಿಸ್ತಾನದ ಕರಾಚಿಯಲ್ಲಿರುವ ಪಾರ್ಕೊ ಪೆಟ್ರೋಲ್ ಪಂಪ್ ಖಾಲಿ ಹೊಡೆಯುತ್ತಿತ್ತು. ಆರ್ಥಿಕ ಬಿಟ್ಟು ಶುರುವಾಗುವ ಮೊದಲು, ಪೆಟ್ರೋಲ್ ಒಂದು ಲೀಟರ್‌ಗೆ 200 ಪಾಕಿಸ್ತಾನಿ ರೂಪಾಯಿ ಮೌಲ್ಯದ ಆಸುಪಾಸಿನಲ್ಲಿದ್ದಾಗ ಬಂಕ್ ಮ್ಯಾನೇಜರ್ ಇರ್ಫಾನ್ ಆಲಿ ಒಂದು ದಿನಕ್ಕೆ 15,000 ಲೀಟರ್ ಪೆಟ್ರೋಲ್ ಮಾರುತ್ತಿದ್ದರು. ಈಗ ಧಾರಣೆ ವಿಪರೀತ ಹೆಚ್ಚಾಗಿರುವುದರಿಂದ ಮಾರಾಟವೂ ಕುಸಿದಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ಜನರು ಕೆಲಸ ಕಳೆದುಕೊಳ್ಳುವುದು ಸಾಮಾನ್ಯ ಸಂಗತಿ ಎನಿಸಿದೆ. ‘ಹಣದುಬ್ಬರ ಇದೇ ರೀತಿ ಹೆಚ್ಚಾದರೆ ಇನ್ನಷ್ಟು ಜನರು ಕೆಲಸ ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ’ ಎನ್ನುತ್ತಾರೆ ಪೆಟ್ರೋಲ್ ಪಂಪ್ ಮ್ಯಾನೇಜರ್ ಇರ್ಫಾನ್ ಅಲಿ.
ಪಾಕಿಸ್ತಾನಿಯರು ದೈನಂದಿನ ಬದುಕು ನಿರ್ವಹಿಸಲು ಸಾಲದ ಮೊರೆ ಹೋಗುತ್ತಿದ್ದಾರೆ. ಒಂದು ಸಾಲ ತೀರಿಸಲು ಮತ್ತೊಂದು ಸಾಲ, ಸಾಲದ ಸುಳಿಯಲ್ಲಿ ಸಿಲುಕಿದ ಬದುಕು ಮತ್ತೆ ಮೇಲೇಳಲು ಸಾಧ್ಯವೇ ಇಲ್ಲದಂಥ ದುಸ್ತರ ಪರಿಸ್ಥಿತಿಗೆ ಅವರು ತಲುಪಿದ್ದಾರೆ. ಕರಾಚಿಯಲ್ಲಿ ಕಸಮುಸರೆ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿರುವ ಫರ್ಜಾನಾ ದಿನಸಿ ಖರೀದಿಗೆಂದು 5,000 ಪಾಕಿಸ್ತಾನಿ ರೂಪಾಯಿ ಸಾಲ ಪಡೆದಿದ್ದಾರೆ. ಅದನ್ನು ತೀರಿಸುವ ಸಾಮರ್ಥ್ಯ ಯಾವಾಗ ಬರುತ್ತದೆ ಎನ್ನುವುದು ಅವರಿಗೆ ತಿಳಿದಿಲ್ಲ.
ವಿದ್ಯುತ್ ಮತ್ತು ಗ್ಯಾಸ್ ಸಿಲಿಂಡರ್ ಬೆಲೆಗಳು ಹೆಚ್ಚಾಗಿವೆ. ಇತ್ತೀಚೆಗೆ ಮಾಡಿಸಿಕೊಂಡ ಶಸ್ತ್ರಚಿಕಿತ್ಸೆಯು ಅವರ ಉಳಿತಾಯವನ್ನೂ ಸ್ವಚ್ಛ ಮಾಡಿದೆ. ಮನೆಯಲ್ಲಿ ಊಟಕ್ಕೆ ತತ್ವಾರ ಎನ್ನುವ ಪರಿಸ್ಥಿತಿ ಮನಗಂಡ ಅವರ 16 ವರ್ಷದ ಮಗ ಶಾಲೆಗೆ ಹೋಗುವುದು ನಿಲ್ಲಿಸಿ, ರೆಸ್ಟೊರೆಂಟ್ ಒಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದಾನೆ. ‘ಬದುಕು ತುಂಬಾ ಕಷ್ಟವಾಗಿದೆ. ಏನು ಮಾಡೋದು, ಹೇಗಾದ್ರೂ ಬದುಕಬೇಕಲ್ಲ. ಮನೆ ಖರ್ಚು ನಿಭಾಯಿಸೋಕೆ ನನ್ನ ಒಡವೆಗಳನ್ನೂ ಮಾರಿಬಿಟ್ಟೆ’ ಎಂದು ಅವರು ಕಣ್ಣೀರಾದರು.
ಪಾಕಿಸ್ತಾನದ ಗ್ರಾಮೀಣ ಪ್ರದೇಶಗಳಲ್ಲಿ ರೈತರು ಅತಿಹೆಚ್ಚು ನಷ್ಟ ಅನುಭವಿಸುತ್ತಿದ್ದಾರೆ. ‘ನೀರೆತ್ತಲು ಪಂಪ್ ಬೇಕು. ಆದರೆ ಕರೆಂಟ್ ಇಲ್ಲ. ಜನರೇಟರ್ ಓಡಿಸಿ ನೀರೆತ್ತೋಣ ಎಂದರೆ ಡೀಸೆಲ್ ಕೂಡ ಸರಿಯಾಗಿ ಸಿಗುತ್ತಿಲ್ಲ, ಸಿಕ್ಕರೆ ಬೆಲೆ ಕೈಗೆಟುಕದಷ್ಟು ಎತ್ತರ. ಇಂಥ ಪರಿಸ್ಥಿತಿಯಲ್ಲಿ ನಾವು ಏನು ಮಾಡಲು ಸಾಧ್ಯ’ ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರೈತ ಮೊಹಮದ್ ರಶೀದ್ ಪ್ರಶ್ನಿಸಿದರು. ಅವರಿಗೆ 20 ಎಕರೆ ಭೂಮಿಯಿದೆ. ಅಲ್ಲಿ ಅವರು ಗೋಧಿ, ಕಬ್ಬು, ಬೇಳೆಕಾಳುಗಳು ಮತ್ತು ಮೇವು ಬೆಳೆಯುತ್ತಾರೆ.
‘ದೇಶಕ್ಕೆ ಆಹಾರ ಕೊಡಬೇಕಾದವರು ನಾವು. ಆದರೆ ಈಗ ನಾವೇ ಊಟಕ್ಕೆ ಪರದಾಡುತ್ತಿದ್ದೇವೆ. ಊಟಕ್ಕೇ ತತ್ವಾರ ಎಂದರೆ ಬಟ್ಟೆ, ಶಿಕ್ಷಣ, ವಿದ್ಯುತ್ ಕತೆ ಬಗ್ಗೆ ಹೇಳಲು ಮತ್ತೇನಿದೆ’ ಎಂದು ಅವರು ಮಾರ್ಮಿಕವಾಗಿ ಪ್ರಶ್ನಿಸಿದರು. ಅವರ ಈ ಪ್ರಶ್ನೆ ಪಾಕಿಸ್ತಾನದ ಕೋಟ್ಯಂತರ ಜನಸಾಮಾನ್ಯರ ಪ್ರಶ್ನೆಯೂ ಹೌದು.
ಮತ್ತಷ್ಟು ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ