US Security: ಅಲಸ್ಕಾ ಪ್ರಾಂತ್ಯದಲ್ಲಿ ಎತ್ತರದ ಆಕಾಶಕಾಯ ಹೊಡೆದುರುಳಿಸಿದ ಅಮೆರಿಕ, ಚೀನಾ ಕೈವಾಡ ಶಂಕೆ

High-Altitude Object: ಈ ಆಕಾಶಕಾಯವು ಗೂಢಚರ್ಯೆಯ ಉದ್ದೇಶ ಹೊಂದಿತ್ತೇ? ಯಾವದೇಶದಿಂದ ಬಂದಿತ್ತು ಎಂಬ ವಿವರಗಳು ಇನ್ನೂ ಲಭ್ಯವಾಗಿಲ್ಲ.

US Security: ಅಲಸ್ಕಾ ಪ್ರಾಂತ್ಯದಲ್ಲಿ ಎತ್ತರದ ಆಕಾಶಕಾಯ ಹೊಡೆದುರುಳಿಸಿದ ಅಮೆರಿಕ, ಚೀನಾ ಕೈವಾಡ ಶಂಕೆ
ಸಾಂದರ್ಭಿಕ ಚಿತ್ರ

Updated on: Feb 11, 2023 | 10:06 AM

ವಾಷಿಂಗ್ಟನ್: ಅಲಾಸ್ಕದ (Alaska) ಆಗಸದಲ್ಲಿ ಅಮೆರಿಕದ ಯುದ್ಧವಿಮಾನಗಳು ಅಪರಿಚಿತ ಆಕಾಶಕಾಯವೊಂದನ್ನು (high-altitude object) ಹೊಡೆದುರುಳಿಸಿವೆ ಎಂದು ಅಮೆರಿಕ ಅಧ್ಯಕ್ಷರ ಕಚೇರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಈ ಆಕಾಶಕಾಯವು ಎಲ್ಲಿಂದ ಬಂದಿತ್ತು? ಅದರಲ್ಲಿ ಏನೆಲ್ಲಾ ಉಪಕರಣಗಳಿದ್ದವು? ಗೂಢಚರ್ಯೆಯ ಉದ್ದೇಶ ಹೊಂದಿತ್ತೇ? ಯಾವದೇಶದಿಂದ ಬಂದಿತ್ತು ಎಂಬ ವಿವರಗಳು ಇನ್ನೂ ಲಭ್ಯವಾಗಿಲ್ಲ. ‘ಆಕಾಶಕಾಯವನ್ನು ಹೊಡೆದುರುಳಿಸುವಂತೆ ಅಧ್ಯಕ್ಷರು ಸೇನೆಗೆ ಆದೇಶಿಸಿದರು. ಅಧ್ಯಕ್ಷರ ಆದೇಶವನ್ನು ವಾಯುಪಡೆ ಕಾರ್ಯರೂಪಕ್ಕೆ ತಂದಿತು’ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್‌ಬಿ ಹೇಳಿದರು. ಕಳೆದ ವಾರ ಅಮೆರಿಕದ ಅಂಟ್ಲಾಂಟಿಕ್ ಸಾಗರದ ಆಗಸದಲ್ಲಿ ಕಾಣಿಸಿಕೊಂಡಿದ್ದ ಚೀನಾದ ಬೃಹತ್ ಬಲೂನ್‌ಗೆ ಹೋಲಿಸಿದರೆ ಇದು ಗಾತ್ರದಲ್ಲಿ ಸಣ್ಣದಾಗಿತ್ತು. ಕಳೆದ ವಾರ ಚೀನಾದಿಂದ ತೇಲಿಬಂದಿದ್ದ ಬೃಹತ್ ಬಲೂನ್ ಒಂದನ್ನು ಅಮೆರಿಕ ವಾಯುಪಡೆಯು ಕ್ಷಿಪಣಿ ಹಾರಿಬಿಟ್ಟು ಹೊಡೆದುರುಳಿಸಿತ್ತು.

ನೆಲದಿಂದ ಸುಮಾರು 40,000 ಅಡಿಗಳಷ್ಟು ಎತ್ತರದಲ್ಲಿ ಈ ಆಕಾಶಕಾಯವು ಹಾರಾಡುತ್ತಿತ್ತು. ಕೆನಡಾ ಗಡಿಯ ಉತ್ತರ ಅಲಾಸ್ಕ ಬಳಿ ಅದರ ಎತ್ತರ ಕಡಿಮೆಯಾಗುತ್ತಿರುವುದು ಗಮನಕ್ಕೆ ಬಂತು. ಇದನ್ನು ಗಮನಿಸಿದ ಸೇನೆ ತಕ್ಷಣ ಪ್ರತಿಕ್ರಿಯಿಸಿತು. ಇದೀಗ ಈ ಆಕಾಶಕಾಯದ ಅವಶೇಷಗಳು ಅಲಾಸ್ಕ-ಕೆನಡಾ ಗಡಿಯ ಹೆಪ್ಪುಗಟ್ಟಿದ ನೀರಿನಲ್ಲಿ ಬಿದ್ದಿವೆ. ಹೀಗಾಗಿ ಅವಶೇಷಗಳನ್ನು ಸುರಕ್ಷಿತ ರೀತಿಯಲ್ಲಿ ಸಂಗ್ರಹಿಸಲು ಅವಕಾಶ ಸಿಗಲಿದೆ ಎಂದು ಶ್ವೇತಭವನದ ವಕ್ತಾರ ಜಾನ್ ಕಿರ್‌ಬಿ ಹೇಳಿದರು.

ಇದನ್ನೂ ಓದಿ: ಅಮೆರಿಕ ಮೇಲೆ ಹಾರಾಡಿದ ಚೀನಾದ ನಿಗೂಢ ಬಲೂನ್​ಗಳು ಹೇಗೆ ಕೆಲಸ ಮಾಡುತ್ತವೆ? ಇಲ್ಲಿದೆ ವಿವರ

ಆಗಸದಲ್ಲಿ ಕಾಣಿಸಿಕೊಂಡಿದ್ದ ಈ ವಸ್ತುವಿನಿಂದ ದೇಶದ ಭದ್ರತೆಗೆ, ವೈಮಾನಿಕ ಕ್ಷೇತ್ರಕ್ಕೆ ಧಕ್ಕೆ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಅದನ್ನು ಹೊಡೆದುರುಳಿಸುವಂತೆ ಅಮೆರಿಕ ಅಧ್ಯಕ್ಷರು ಆದೇಶಿಸಿದರು. ಆದರೆ ಈ ಆಕಾಶಕಾಯದಿಂದ ಯಾವ ರೀತಿಯ ಆತಂಕ ಇತ್ತು ಎಂಬ ಬಗ್ಗೆ ಅಮೆರಿಕದ ರಕ್ಷಣಾ ಇಲಾಖೆ ಯಾವುದೇ ವಿವರ ಒದಗಿಸಿಲ್ಲ.

“ಈ ಆಕಾಶಕಾಯ ಎಲ್ಲಿಂದ ಬಂತು? ಅದರ ಉದ್ದೇಶ ಏನಾಗಿತ್ತು ಎಂಬ ಬಗ್ಗೆ ನಮಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದರೆ ಅಮೆರಿಕ ಸೇನೆಯು ಈ ಆಕಾಶಕಾಯವನ್ನು ಗಮನಿಸಲು ಮೊದಲು ವಿಮಾನವೊಂದನ್ನು ಕಳಿಸಿತ್ತು. ಆ ವಿಮಾನದ ಪೈಲಟ್ ಈ ಆಕಾಶಕಾಯದಲ್ಲಿ ಮನುಷ್ಯರು ಇಲ್ಲ ಎಂಬುದನ್ನು ದೃಢಪಡಿಸಿದ ನಂತರ ಹೊಡೆದುರುಳಿಸಲು ಆದೇಶಿಸಲಾಯಿತು” ಎಂದು ಅವರು ವಿವರಿಸಿದರು.

ಮತ್ತಷ್ಟು ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:04 am, Sat, 11 February 23

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us