AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಟಿನ್ ಅಮರತ್ವದ ಕನಸು ನನಸಾಗಲಿದೆಯೇ?: ವಯಸ್ಸಾಗುವುದನ್ನು ತಡೆಯಲು ಜೀನ್ ಥೆರಪಿ

ಮಾನವನ ಜೀವಿತಾವಧಿಯನ್ನು 194 ವರ್ಷಗಳವರೆಗೆ ವಿಸ್ತರಿಸುವ ರಷ್ಯಾದ 'ಸ್ಕೋಲ್ಕೊವೊ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ'ಯ ಸಂಶೋಧನೆ ಜಾಗತಿಕ ಕುತೂಹಲ ಮೂಡಿಸಿದೆ. ಜೀನ್ ಥೆರಪಿ, 3D ಬಯೋಪ್ರಿಂಟಿಂಗ್ ಮೂಲಕ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಗುರಿ ಹೊಂದಿದೆ. ಪುಟಿನ್ ಅವರ 'ಅಮರತ್ವ'ದ ಕನಸು ನನಸಾಗಲಿದೆಯೇ ಎಂಬ ಚರ್ಚೆಯ ನಡುವೆ, ರಷ್ಯಾ 26 ಬಿಲಿಯನ್ ಡಾಲರ್ ಯೋಜನೆಯನ್ನು ಘೋಷಿಸಿದೆ.

ಪುಟಿನ್ ಅಮರತ್ವದ ಕನಸು ನನಸಾಗಲಿದೆಯೇ?: ವಯಸ್ಸಾಗುವುದನ್ನು ತಡೆಯಲು ಜೀನ್ ಥೆರಪಿ
ಪುಟಿನ್
ನಯನಾ ರಾಜೀವ್
|

Updated on: Aug 02, 2026 | 12:57 PM

Share

ಮಾಸ್ಕೋ, ಆಗಸ್ಟ್​ 02: ಮನುಷ್ಯರು ಎಂದಾದರೂ ಅಮರರಾಗಲು ಅಥವಾ ತಮ್ಮ ಜೀವಿತಾವಧಿಯನ್ನು ದ್ವಿಗುಣಗೊಳಿಸಲು ಸಾಧ್ಯವೇ? ಈ ಜಾಗತಿಕ ಪ್ರಶ್ನೆಗೆ ರಷ್ಯಾದ ಪ್ರಸಿದ್ಧ ‘ಸ್ಕೋಲ್ಕೊವೊ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ’ಯ ವಿಜ್ಞಾನಿಗಳು ಧನಾತ್ಮಕ ಉತ್ತರ ಕಂಡುಕೊಂಡಿದ್ದಾರೆ. ಗಣಿತದ ಮಾದರಿಗಳು ಮತ್ತು ಡಿಎನ್‌ಎ ತಂತ್ರಜ್ಞಾನವನ್ನು ಆಧರಿಸಿ ನಡೆಸಿರುವ ನೂತನ ಸಂಶೋಧನೆಯ ಪ್ರಕಾರ, ಮಾನವನ ಜೀವಿತಾವಧಿಯನ್ನು ಕನಿಷ್ಠ 194 ವರ್ಷಗಳವರೆಗೆ ವಿಸ್ತರಿಸಲು ಸಾಧ್ಯ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ಈ ಸಂಶೋಧನಾ ವರದಿಯು ಪ್ರಸಿದ್ಧ ‘NPG ಏಜಿಂಗ್’ ವೈಜ್ಞಾನಿಕ ಜರ್ನಲ್‌ನಲ್ಲಿ ಪ್ರಕಟಗೊಂಡ ಬೆನ್ನಲ್ಲೇ ಜಾಗತಿಕ ಮಟ್ಟದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಸಂಶೋಧನೆ ಹೇಳುವುದೇನು? ಜೀವಕೋಶಗಳ ವಯಸ್ಸಾಗುವಿಕೆಗೆ ತಡೆ ಮನುಷ್ಯನಿಗೆ ವಯಸ್ಸಾಗುತ್ತಿದ್ದಂತೆ ಡಿಎನ್‌ಎಯಲ್ಲಿ (DNA) ದೈಹಿಕ ರೂಪಾಂತರಗಳು ಉಂಟಾಗಿ, ಕೋಶಗಳು ಹಾನಿಗೊಳಗಾಗುತ್ತವೆ. ಈ ಕೋಶಗಳನ್ನು ಸರಿಪಡಿಸುವ ಹಾಗೂ ಮಾರಕ ರೋಗಗಳನ್ನು ತಡೆಯುವ ಜೀನ್ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಿದರೆ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಬಹುದು ಎಂಬುದು ಅವರ ವಾದ,

ಕೃತಕವಾಗಿ ಮಾನವ ಅಂಗಗಳನ್ನು ತಯಾರಿಸುವ ‘3ಡಿ ಬಯೋಪ್ರಿಂಟಿಂಗ್’ ಮತ್ತು ಪ್ರಾಣಿಗಳ (ವಿಶೇಷವಾಗಿ ತಳೀಯವಾಗಿ ಬದಲಾಯಿಸಲಾದ ಹಂದಿಗಳ) ಅಂಗಗಳನ್ನು ಮನುಷ್ಯರಿಗೆ ಕಸಿ ಮಾಡುವ ‘ಕ್ಸೆನೋಟ್ರಾನ್ಸ್‌ಪ್ಲಾಂಟೇಶನ್’ ತಂತ್ರಜ್ಞಾನಗಳ ಮೂಲಕ ಮುಪ್ಪನ್ನು ಸಂಪೂರ್ಣವಾಗಿ ಜಯಿಸಬಹುದು ಎಂದು ವಿಜ್ಞಾನಿಗಳು ತೀರ್ಮಾನಿಸಿದ್ದಾರೆ.

ಕಳೆದ ವರ್ಷ ಚೀನಾದಲ್ಲಿ ನಡೆದ ಮಿಲಿಟರಿ ಮೆರವಣಿಗೆಯ ವೇಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮತ್ತು ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ನಡುವೆ ನಡೆದ ಮಾತುಕತೆ ಮೈಕ್ರೋಫೋನ್‌ನಲ್ಲಿ ಸೆರೆಯಾಗಿತ್ತು. ಅದರಲ್ಲಿ ಪುಟಿನ್, ಮಾನವ ಅಂಗಾಂಗಗಳನ್ನು ನಿರಂತರವಾಗಿ ಕಸಿ ಮಾಡುತ್ತಿದ್ದರೆ, ಮನುಷ್ಯ ತನಗೆ ಬೇಕಾದಷ್ಟು ಕಾಲ ಬದುಕಬಹುದು ಎಂದು ಹೇಳಿದ್ದರು.

ಈ ಹೇಳಿಕೆಯ ಬೆನ್ನಲ್ಲೇ ರಷ್ಯಾ ಸರ್ಕಾರವು ವಯಸ್ಸಾಗುವಿಕೆಯನ್ನು ತಡೆಯಲು 26 ಬಿಲಿಯನ್ ಡಾಲತ್ ವೆಚ್ಚದ ಯೋಜನೆಯನ್ನು ಘೋಷಿಸಿದೆ. 2030 ರ ವೇಳೆಗೆ ಲಕ್ಷಾಂತರ ಜನರ ಜೀವ ಉಳಿಸುವುದು ಹಾಗೂ ರಷ್ಯನ್ನರ ಜೀವಿತಾವಧಿಯನ್ನು ಹೆಚ್ಚಿಸುವುದು ಇದರ ಅಧಿಕೃತ ಗುರಿಯಾಗಿದೆ.

ರಷ್ಯಾದಲ್ಲಿ ಪುರುಷರ ಸರಾಸರಿ ಜೀವಿತಾವಧಿ ಕೇವಲ 68 ವರ್ಷಗಳು (ಅಮೆರಿಕ ಮತ್ತು ಯುರೋಪ್‌ಗೆ ಹೋಲಿಸಿದರೆ ಅತ್ಯಂತ ಕಡಿಮೆ). ಹೀಗಾಗಿ ದೇಶದ ಕುಸಿಯುತ್ತಿರುವ ಜನಸಂಖ್ಯೆ ಮತ್ತು ಆರೋಗ್ಯ ಮಟ್ಟವನ್ನು ಸುಧಾರಿಸಲು ರಷ್ಯಾ ಈ ಯೋಜನೆ ಕೈಗೆತ್ತಿಕೊಂಡಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆಯಾದರೂ, 73 ವರ್ಷ ದಾಟಿರುವ ವ್ಲಾಡಿಮಿರ್ ಪುಟಿನ್ ತಮ್ಮದೇ ಜೀವಿತಾವಧಿಯನ್ನು ಹೆಚ್ಚಿಸಿಕೊಳ್ಳಲು ಹಾಗೂ ‘ಅಮರತ್ವ’ ಸಾಧಿಸಲು ಈ ಸಂಶೋಧನೆಗಳಿಗೆ ಅನುದಾನ ನೀಡುತ್ತಿದ್ದಾರೆ ಎಂದು ಅನೇಕ ಜಾಗತಿಕ ರಾಜಕೀಯ ವಿಶ್ಲೇಷಕರು ಪ್ರತಿಪಾದಿಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us