ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿ ನಲುಗುತ್ತಿರುವ ಪಾಕಿಸ್ತಾನವನ್ನು ಇದೀಗ ವಿದ್ಯುತ್ ಬಿಕ್ಕಟ್ಟು (Pakistan Power Crisis) ಕಂಗಾಲು ಮಾಡಿದೆ. ರಾಜಧಾನಿ ಇಸ್ಲಾಮಾಬಾದ್ (Islamabad), ವಾಣಿಜ್ಯ ನಗರಿ ಕರಾಚಿ (Karachi), ಸಾಂಸ್ಕೃತಿಕ ನಗರಿ ಲಾಹೋರ್ (Lahore) ಸೇರಿದಂತೆ ಪಾಕಿಸ್ತಾನದ ಬಹುತೇಕ ಎಲ್ಲ ನಗರಗಳೂ ಕತ್ತಲಲ್ಲಿ ಮುಳುಗಿವೆ. ಗ್ರಾಮಾಂತರ ಪ್ರದೇಶಗಳ ಪರಿಸ್ಥಿತಿಯನ್ನಂತೂ ಕೇಳುವಂತೆಯೇ ಇಲ್ಲ. ರಾಷ್ಟ್ರೀಯ ಗ್ರಿಡ್ನಲ್ಲಿ ವಿದ್ಯುತ್ ಪ್ರವಹಿಸುವ ಪ್ರಮಾಣವು ಕುಸಿದ ಹಿನ್ನೆಲೆಯಲ್ಲಿ ಗ್ರಿಡ್ ವೈಫಲ್ಯ ಸಂಭವಿಸಿದೆ. ಮತ್ತೆ ಪವರ್ ಗ್ರಿಡ್ ಅನ್ನು ಚಾರ್ಜ್ ಮಾಡಲು ಎಂಜಿನಿಯರ್ಗಳು ಅವಿರತವಾಗಿ ಶ್ರಮಿಸಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ.
ಪಾಕಿಸ್ತಾನದ ಪ್ರಮುಖ ಮಾಧ್ಯಮ ‘ಜಿಯೊ ನ್ಯೂಸ್’ಗೆ ರಾಷ್ಟ್ರದ ವಿದ್ಯುತ್ ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿರುವ ಇಂಧನ ಸಚಿವ ಖುರಮ್ ದಸ್ತಗೀರ್, ದೇಶದ ವಿವಿಧೆಡೆಯಿರುವ ವಿದ್ಯುತ್ ಉತ್ಪಾದನಾ ಘಟಕಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇಂದು ಬೆಳಿಗ್ಗೆ 7:30ಕ್ಕೆ ವಿದ್ಯುತ್ ಗ್ರಿಡ್ ಚಾರ್ಜ್ ಮಾಡಿದಾಗ ವಿದ್ಯುತ್ ಪ್ರವಹಿಸುವ ತರಂಗಾಂತರಗಳಲ್ಲಿ (ಫ್ರೀಕ್ವೆನ್ಸಿ) ವ್ಯತ್ಯಯ ಉಂಟಾಯಿತು. ಒಂದಾದ ನಂತರ ಮತ್ತೊಂದು ಘಟಕಗಳು ಕುಸಿದವು. ದೇಶದ ದಕ್ಷಿಣ ಭಾಗದಲ್ಲಿ ಪರಿಸ್ಥಿತಿ ಹೆಚ್ಚು ವಿಷಮಿಸಿದೆ. ಆದರೂ, ಇದೇನೋ ದೊಡ್ಡ ಸಮಸ್ಯೆಯಲ್ಲ ಎಂದು ಹೇಳಿದರು.
ವಾರ್ಸಾಕ್ ಮತ್ತು ತಾರ್ಬೆಲಾ ಪ್ರಾಂತ್ಯಗಳಲ್ಲಿ ಒಂದೆರೆಡು ಗ್ರಿಡ್ ಘಟಕಗಳನ್ನು ಚಾರ್ಜ್ ಮಾಡಲು ಇಲಾಖೆಯು ಪ್ರಯತ್ನಿಸುತ್ತಿದೆ. ಪೆಶಾವರ್ ಎಲೆಕ್ಟ್ರಿಕ್ ಸಪ್ಲೈ ಕಂಪನಿ (PESCO) ಮತ್ತು ಇಸ್ಲಾಮಾಬಾದ್ ಎಲೆಕ್ಟ್ರಿಕ್ ಸಪ್ಲೈ ಕಂಪನಿಗಳು (IESCO) ಈಗಾಗಲೇ ಕೆಲವೆಡೆ ಗ್ರಿಡ್ಗಳನ್ನು ಮತ್ತೆ ಆರಂಭಿಸಿವೆ ಎಂದು ಇಂಧನ ಇಲಾಖೆ ವಿವರಿಸಿದೆ.
ಕರಾಚಿಗೆ ವಿದ್ಯುತ್ ಪೂರೈಕೆ ಮತ್ತೆ ಆರಂಭವಾಗಲು ಇನ್ನೂ ಕೆಲ ಸಮಯ ಬೇಕಾಗಬಹುದು. ಸಾಮಾನ್ಯ ದಿನಗಳಲ್ಲಿ ಕರಾಚಿ ನಗರಕ್ಕೆ 1,100 ಮೆಗಾವಾಟ್ ವಿದ್ಯುತ್ ಪೂರೈಕೆಯಾಗುತ್ತದೆ. ಪ್ರಸ್ತುತ ಕರಾಚಿ ನಗರದಲ್ಲಿ ಎಷ್ಟು ಬೇಗ ವಿದ್ಯುತ್ ಪೂರೈಕೆ ಸಹಜ ಸ್ಥಿತಿಗೆ ಬರುತ್ತದೆ ಎನ್ನುವುದಕ್ಕಿಂತಲೂ ಇಡೀ ದೇಶದಲ್ಲಿ ವಿದ್ಯುತ್ ಸಂಪರ್ಕ ಮರುಸ್ಥಾಪನೆಯಾಗಬೇಕು. ಇದು ಸರ್ಕಾರದ ಆದ್ಯತೆಯಾಗಿದೆ ಎಂದು ಇಂಧನ ಇಲಾಖೆ ಹೇಳಿದೆ.
ಪಾಕಿಸ್ತಾನದ ಕೋಟ್ಯಂತರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇತ್ತೀಚೆಗಷ್ಟೇ ಪಾಕ್ ಪ್ರಧಾನಿ ಶೆಹ್ಬಾಜ್ ಷರೀಫ್ ಕೇಂದ್ರ ಮತ್ತು ಎಲ್ಲ ಪ್ರಾಂತೀಯ ಸರ್ಕಾರಗಳಿಗೆ ವಿದ್ಯುತ್ ಬಳಕೆ ಕಡಿಮೆ ಮಾಡುವಂತೆ ಸೂಚಿಸಿದ್ದರು. ರಾತ್ರಿ 10:30ರ ನಂತರ ದೇಶದಲ್ಲಿ ವಿದ್ಯುತ್ ಬಳಕೆ ಸಂಪೂರ್ಣವಾಗಿ ನಿಲ್ಲಬೇಕು. ರಾತ್ರಿ 8:30ಕ್ಕೆ ವ್ಯಾಪಾರ-ವ್ಯವಹಾರಗಳು ಕೊನೆಯಾಗಬೇಕು ಎಂದು ಆದೇಶಿಸಿದ್ದರು. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದ ಪಾಕಿಸ್ತಾನದ ಉದ್ಯಮಗಳು ಈ ಆದೇಶದ ನಂತರ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದವು.
ಕಳೆದ ಮೂರು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಪಾಕಿಸ್ತಾನದಲ್ಲಿ ಈ ಪ್ರಮಾಣದ ವಿದ್ಯುತ್ ವ್ಯತ್ಯಯ ವರದಿಯಾಗಿದೆ. ಕಳೆದ ಅಕ್ಟೋಬರ್ 2022ರಲ್ಲಿ ಹೈದರಾಬಾದ್, ಸುಕ್ಕುರ್, ಕರಾಚಿ, ಮುಲ್ತಾನ್, ಕ್ವೆಟ್ಟಾ ಮತ್ತು ಫೈಜಲಾಬಾದ್ ನಗರಗಳಲ್ಲಿ ವಿದ್ಯುತ್ ವ್ಯತ್ಯಯ ಕಾಣಿಸಿಕೊಂಡಿತ್ತು. ಸುಮಾರು 8,000 ಮೆಗಾವಾಟ್ ಸಾಮರ್ಥ್ಯದ ಪೂರೈಕೆ ವ್ಯವಸ್ಥೆ ಕುಸಿದುಬಿದ್ದಿತ್ತು. ವಿದ್ಯುತ್ ಮಾರ್ಗಗಳಲ್ಲಿ ಕಾಣಿಸಿಕೊಂಡ ತೊಂದರೆಯಿಂದಾಗಿ ಈ ಸಮಸ್ಯೆ ಎದುರಾಗಿತ್ತು. ಅದಕ್ಕೂ ಮೊದಲು ಪಾಕ್ ಸರ್ಕಾರವು ಇಂಧನ ವೆಚ್ಚ ಉಳಿಸಲೆಂದು ವಿದ್ಯುತ್ ಉಳಿತಾಯಕ್ಕೆ ಸಲಹೆ ಮಾಡಿತ್ತು.
ಕ್ವೆಟ್ಟಾ ನಗರಕ್ಕೆ ವಿದ್ಯುತ್ ಸರಬರಾಜು ಮಾಡುವ ಕ್ವೆಟ್ಟಾ ಎಲೆಕ್ಟ್ರಿಕ್ ಸಪ್ಲೈ ಕಂಪನಿ (QESCO) ಬಲೂಚಿಸ್ತಾನ ಪ್ರಾಂತ್ಯದ 22 ಜಿಲ್ಲೆಗಳು ಅಂಧಕಾರದಲ್ಲಿ ಮುಳುಗಿರುವುದನ್ನು ದೃಢಪಡಿಸಿದೆ. ಇಸ್ಲಾಮಾಬಾದ್ನ 117 ಗ್ರಿಡ್ ಘಟಕಗಳಿಗೂ ವಿದ್ಯುತ್ ಸರಬರಾಜು ಆಗುತ್ತಿಲ್ಲ ಎಂದು ಹೇಳಿದೆ. ಇಂಧನ ಸಚಿವಾಲಯವು ಈ ಕುರಿತು ಅಧಿಕೃತ ಮಾಹಿತಿ ಪ್ರಕಟಿಸುವ ಮೊದಲೇ ಕ್ವೆಟ್ಟಾ ವಿದ್ಯುತ್ ಕಂಪನಿಯು ಹೇಳಿಕೆಯೊಂದನ್ನು ಹೊರಡಿಸಿತ್ತು.
ಪಾಕಿಸ್ತಾನವು ಪ್ರಸ್ತುತ ಅತಿದೊಡ್ಡ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಇಂಧನ ಮತ್ತು ಆಹಾರ ಕೊರತೆಯಿಂದ ದೇಶ ಕಂಗಾಲಾಗಿದೆ. 2022ರಲ್ಲಿ ಸಂಭವಿಸಿದ ಪ್ರವಾಹಗಳಿಂದಾಗಿ ಬೆಳೆದುನಿಂತಿದ್ದ ಬೆಳೆ ಹಾಳಾಗಿತ್ತು. ರಾಜಕೀಯ ಅಸ್ಥಿರತೆ ಮತ್ತು ಅಧಿಕಾರ ಮೇಲಾಟಗಳು ಪಾಕಿಸ್ತಾನದ ಕಷ್ಟವನ್ನು ಮತ್ತಷ್ಟು ಹೆಚ್ಚಿಸಿವೆ.
ಇದನ್ನೂ ಓದಿ: Pakistan Crisis: ಪಾಕಿಸ್ತಾನದಲ್ಲಿ ಏಕಾಏಕಿ ಗೋಧಿ ಬೆಲೆಏರಿಕೆ; ವ್ಯಾಪಾರಿಗಳ ಆಟದಿಂದ ಸಂಕಷ್ಟಕ್ಕೆ ಸಿಲುಕಿದ ಸಾಮಾನ್ಯ ಜನ
ಮತ್ತಷ್ಟು ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ