ಹವಾಮಾನ ವೈಪರೀತ್ಯಕ್ಕೆ ಶ್ರೀಮಂತ ದೇಶಗಳೇ ಹೊಣೆ: ಯೂರೋಪ್ ನೀತಿಗಳ ವಿರುದ್ಧ ಗುಡುಗಿದ ಪಿಯೂಷ್ ಗೋಯಲ್

ಬರ್ಲಿನ್‌ನಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್, ವಿದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ವಿರುದ್ಧ ವಾಗ್ದಾಳಿ ನಡೆಸಿದರು. ಚೀನಾ ಮಾದರಿ ಮತ್ತು ಭಾರತದ ಪ್ರಜಾಪ್ರಭುತ್ವದ ನಡುವಿನ ವ್ಯತ್ಯಾಸವನ್ನು ಒತ್ತಿಹೇಳಿದ ಅವರು, ಭಾರತೀಯ ಪ್ರತಿಭೆಗಳು ತಾಯ್ನಾಡಿಗೆ ಮರಳಲು ಕರೆ ನೀಡಿದರು. 'ಬರ್ಲಿನ್ ಗ್ಲೋಬಲ್ ಡೈಲಾಗ್'ನಲ್ಲಿ ಯುರೋಪ್‌ನ ಹವಾಮಾನ ನೀತಿ ಮತ್ತು ಕಾರ್ಬನ್ ಹೊರಸೂಸುವಿಕೆಗಳ ಇಬ್ಬಂದಿತನವನ್ನು ಬಲವಾಗಿ ಪ್ರಶ್ನಿಸಿದರು, ಭಾರತದ ಕಡಿಮೆ ಕೊಡುಗೆಯನ್ನು ಸಮರ್ಥಿಸಿಕೊಂಡರು.

ಹವಾಮಾನ ವೈಪರೀತ್ಯಕ್ಕೆ ಶ್ರೀಮಂತ ದೇಶಗಳೇ ಹೊಣೆ: ಯೂರೋಪ್ ನೀತಿಗಳ ವಿರುದ್ಧ ಗುಡುಗಿದ ಪಿಯೂಷ್ ಗೋಯಲ್
ಪಿಯೂಷ್

Updated on: Oct 24, 2026 | 2:39 PM

ಬರ್ಲಿನ್ , ಅಕ್ಟೋಬರ್ 24: ಜರ್ಮನಿಯ ಬರ್ಲಿನ್‌ನಲ್ಲಿ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ವಿದೇಶದಲ್ಲಿರುವ ಭಾರತೀಯ ಪ್ರತಿಭೆಗಳನ್ನು ತಾಯ್ನಾಡಿಗೆ ಮರಳಿ ಸೆಳೆಯುವ ಸರ್ಕಾರದ ಕಾರ್ಯಕ್ರಮಗಳ ಕುರಿತು ಮಾತನಾಡುತ್ತಾ ಪ್ರತಿಪಕ್ಷ ಹಾಗೂ ಸಿಜೆಪಿ (CJP) ನಾಯಕ ಅಭಿಜೀತ್ ದಿಪ್ಕೆಯನ್ನು ತರಾಟೆಗೆ ತೆಗೆದುಕೊಂಡರು. ಅಕ್ಟೋಬರ್ 22 ರಿಂದ 27 ರವರೆಗೆ ಜರ್ಮನಿ ಮತ್ತು ನೆದರ್‌ಲ್ಯಾಂಡ್ಸ್‌ಗೆ ಅಧಿಕೃತ ಪ್ರವಾಸ ಕೈಗೊಂಡಿರುವ ಗೋಯಲ್, ಸುಮಾರು 100 ಭಾರತೀಯ ನವೋದ್ಯಮಗಳು ಹಾಗೂ ಉದ್ಯಮಿಗಳ ನಿಯೋಗದ ನೇತೃತ್ವ ವಹಿಸಿದ್ದಾರೆ.

ಚೀನಾದ ಮಾದರಿ ಮತ್ತು ಸರ್ವಾಧಿಕಾರ: ವಿದೇಶಗಳಲ್ಲಿರುವ ಚೀನೀ ಮೂಲದ ವಿಜ್ಞಾನಿಗಳು ಮತ್ತು ಸಂಶೋಧಕರನ್ನು ಮರಳಿ ದೇಶಕ್ಕೆ ಕರೆತರಲು ಚೀನಾ ಸರ್ಕಾರ ನಡೆಸುವ ಬೃಹತ್ ಪ್ರಾಯೋಜಿತ ಯೋಜನೆಗಳನ್ನು ವಿದ್ಯಾರ್ಥಿಗಳು ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ಗೋಯಲ್, “ಇದು ಉತ್ತಮ ಉಪಕ್ರಮವೇ ಸರಿ. ಆದರೆ ಇಲ್ಲಿ ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವದ ನಡುವಿನ ವ್ಯತ್ಯಾಸ ಎದುರಾಗುತ್ತದೆ” ಎಂದರು.

ವ್ಯಂಗ್ಯದ ಮಾತು: “ಚೀನಾದಲ್ಲಿ ಸರ್ಕಾರದ ಹಣ ದುರುಪಯೋಗವಾದರೆ ಜನರು ಕಣ್ಮರೆಯಾಗುವ ಭಯದಲ್ಲಿರುತ್ತಾರೆ. ಆದರೆ ಭಾರತ ಪ್ರಜಾಪ್ರಭುತ್ವ ದೇಶ. ಇಲ್ಲಿ ಯಾರಾದರೂ ಅಂತಹ ಯೋಜನೆಯನ್ನು ದುರುಪಯೋಗಪಡಿಸಿಕೊಂಡರೆ, ಜವಾಬ್ದಾರನಾಗಿ ನಾನೇ ಕಣ್ಮರೆಯಾಗಬೇಕಾಗುತ್ತದೆ” ಎಂದು ಹಾಸ್ಯದ ಧಾಟಿಯಲ್ಲಿ ನುಡಿದರು.

ಅಭಿಜೀತ್ ದಿಪ್ಕೆ ಉಲ್ಲೇಖ: “ನಾವು ಚೀನಾದಂತೆ ವಿದ್ಯಾರ್ಥಿಗಳಿಗೆ ಹಣಕಾಸು ಒದಗಿಸುವ ಬೃಹತ್ ಯೋಜನೆ ತಂದರೆ, ಅಭಿಜೀತ್ ದಿಪ್ಕೆಯಂತಹ ವ್ಯಕ್ತಿಗಳು ಎದ್ದುನಿಂತು ‘ವಿದ್ಯಾರ್ಥಿವೇತನ ನೀಡುವುದು ಸರ್ಕಾರದ ಕೆಲಸ, ಹಾಗಾದರೆ ನಾವು ಸ್ವಂತವಾಗಿ ಏಕೆ ಕಲಿಯಬೇಕು?’ ಎಂದು ತಲೆಕೆಡಿಸಲು ಶುರುಮಾಡುತ್ತಾರೆ. ಆದ್ದರಿಂದ ಪ್ರಜಾಪ್ರಭುತ್ವದ ಮಿತಿಯಲ್ಲೇ ನಾವು ನೀತಿಗಳನ್ನು ರೂಪಿಸಬೇಕಾಗುತ್ತದೆ” ಎಂದರು.

“ತಾಯ್ನಾಡಿಗೆ ನಿಮ್ಮ ಕೊಡುಗೆ ನೀಡಿ”: ವಿದ್ಯಾರ್ಥಿಗಳಿಗೆ ಕರೆ
ವಿದೇಶದಲ್ಲಿ ಕಲಿಯುತ್ತಿರುವ ಭಾರತೀಯ ಪ್ರತಿಭೆಗಳು ದೇಶಕ್ಕೆ ಮರಳಲು ಸೂಕ್ತ ಐಡಿಯಾಗಳನ್ನು ಹಂಚಿಕೊಳ್ಳುವಂತೆ ಸಚಿವರು ಮನವಿ ಮಾಡಿದರು. ನಾವು ನಮ್ಮ ದೇಶದ ಪ್ರತಿಭೆಗಳನ್ನು ಮರಳಿ ಭಾರತಕ್ಕೆ ಕರೆತರಲು ಬಯಸುತ್ತೇವೆ. ನಿಮ್ಮನ್ನು ವಾಪಸ್ ಕರೆತರುವುದು ಹೇಗೆ ಎಂಬುದರ ಬಗ್ಗೆ ನಮಗೆ ಹೊಸ ಯೋಚನೆಗಳನ್ನು ತಿಳಿಸಿ.ಇದು ಕೇವಲ ಹಣಕಾಸಿನ ವಿಚಾರ ಮಾತ್ರವಲ್ಲ. ಕೊನೆಗೂ ಇದು ನಿಮ್ಮ ತಾಯ್ನಾಡು. ಬದುಕಿನಲ್ಲಿ ಸ್ವಲ್ಪ ಸಮಯವಾದರೂ ಮಾತೃಭೂಮಿಗೆ ಸೇವೆ ಸಲ್ಲಿಸಲು ಮೀಸಲಿಡಿ ಎಂದು ಕರೆ ನೀಡಿದರು.

ಇದನ್ನೂ ಓದಿ: ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ; ದೆಹಲಿ ಪೊಲೀಸರಿಂದ ವಿಡಿಯೋ ಬಿಡುಗಡೆ

ಯೂರೋಪ್‌ನ ಇಬ್ಬಂದಿತನಕ್ಕೆ ಬರ್ಲಿನ್‌ನಲ್ಲಿ ತಪರಾಕಿ
ಇದಕ್ಕೂ ಮುನ್ನ ನಡೆದ ‘ಬರ್ಲಿನ್ ಗ್ಲೋಬಲ್ ಡೈಲಾಗ್ 2026’ ಶೃಂಗಸಭೆಯಲ್ಲಿ ಯೂರೋಪಿಯನ್ ಒಕ್ಕೂಟದ ಹವಾಮಾನ ನೀತಿಯನ್ನು ಗೋಯಲ್ ತೀವ್ರವಾಗಿ ಪ್ರಶ್ನಿಸಿದರು:

ಮಾಲಿನ್ಯಕ್ಕೆ ಯಾರು ಕಾರಣ?: ಓಝೋನ್ ಪದರ ಹಾಳಾಗಲು ಮೊದಲು ಯಾರು ಹೊಣೆ? ವಾತಾವರಣಕ್ಕೆ ಇಷ್ಟೊಂದು ಇಂಗಾಲವನ್ನು ಕಳುಹಿಸಿದ್ದು ಯಾರು? ಅಭಿವೃದ್ಧಿ ಹೊಂದಿದ ಶ್ರೀಮಂತ ದೇಶಗಳು ತಮ್ಮ ಬೆಳವಣಿಗೆಗಾಗಿ ಬೇಕಾಬಿಟ್ಟಿ ಕಲ್ಲಿದ್ದಲು ಸುಟ್ಟು ಇಂದು ಇತರರಿಗೆ ಬೋಧನೆ ಮಾಡುತ್ತಿವೆ ಎಂದು ನೇರವಾಗಿ ಚಾಟಿ ಬೀಸಿದರು.

ಅಂಕಿಅಂಶಗಳ ಸಮರ್ಥನೆ: ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಭಾರತ ಶೇ. 17 ರಷ್ಟಿದ್ದರೂ, ಜಾಗತಿಕ ಇಂಗಾಲ ಹೊರಸೂಸುವಿಕೆಯಲ್ಲಿ ನಮ್ಮ ಪಾಲು ಕೇವಲ ಶೇ. 3ಕ್ಕಿಂತ ಕಡಿಮೆ. ಆದರೆ ಯೂರೋಪ್ ಜನಸಂಖ್ಯೆ ಕೇವಲ ಶೇ. 3-4 ರಷ್ಟಿದ್ದರೂ ಅದರ ಮಾಲಿನ್ಯದ ಪಾಲು ಅಪಾರವಾಗಿದೆ. ಯೂರೋಪ್ ಕಾರ್ಬನ್ ಬಾರ್ಡರ್ ಅಡ್ಜಸ್ಟ್ಮೆಂಟ್ ಮೆಕ್ಯಾನಿಸಂ (CBAM) ಹೆಸರಿನಲ್ಲಿ ಭಾರತೀಯ ಉಕ್ಕಿನ ಆಮದಿನ ಮೇಲೆ ಶೇ. 50 ರಷ್ಟು ಸುಂಕ ವಿಧಿಸಿರುವುದನ್ನು ಟೀಕಿಸಿದ ಅವರು, “ನೀವು ಇಂತಹ ನಿಯಮಗಳಿಂದ ನೀವೇ ಸಂಕಷ್ಟಕ್ಕೆ ಸಿಲುಕಲಿದ್ದೀರಿ, ಇದರಿಂದ ನಿಮ್ಮ ದೇಶದಲ್ಲೇ ಜೀವನ ವೆಚ್ಚ ಮತ್ತಷ್ಟು ದುಬಾರಿಯಾಗಲಿದೆ” ಎಂದು ಎಚ್ಚರಿಸಿದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 2:36 pm, Sat, 24 October 26

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us