ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಈಗ ಎಂಟು ವರ್ಷ ಪೂರ್ತಿಯಾಗಿದೆ. ಮೋದಿ ಸರ್ಕಾರದ ವಿದೇಶಾಂಗ ನೀತಿ ಹೇಗಿದೆ? ನೆಹರು ಸರ್ಕಾರದ ವಿದೇಶಾಂಗ ನೀತಿಗೂ-ಮೋದಿ ಸರ್ಕಾರದ ವಿದೇಶಾಂಗ ನೀತಿಗೂ ಇರುವ ವ್ಯತ್ಯಾಸವೇನು? ವಿದೇಶಾಂಗ ನೀತಿಯನ್ನು ಭಾರತದ ಆರ್ಥಿಕಾಭಿವೃದ್ದಿ, ಭದ್ರತೆಯ ಹಿತಾಸಕ್ತಿ ರಕ್ಷಣೆಗೆ ಮೋದಿ ಬಳಸಿದ್ದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ. ಇತ್ತೀಚಿನ ದಿನಗಳಲ್ಲಿ ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಮೋದಿ, ಮೋದಿ ಘೋಷಣೆ ಮೊಳಗುತ್ತಿದೆ. ಈ ಹಿಂದೆ ಭಾರತದ ಪ್ರಧಾನಿ ವಿದೇಶಕ್ಕೆ ಭೇಟಿ ಕೊಟ್ಟಾಗ ಹೀಗೆ ನಮ್ಮ ದೇಶದ ಪ್ರಧಾನಿಯ ಹೆಸರಿನ ಘೋಷಣೆ ಮೊಳಗಿದ್ದು ತೀರಾ ಕಡಿಮೆ. ವಿದೇಶಗಳಲ್ಲಿರುವ ಭಾರತೀಯರ ಘನತೆ, ಗೌರವ ಹೆಚ್ಚಾಗುವಂತೆ ಮೋದಿ ಮಾಡಿದ್ದಾರೆ. ಮೋದಿ ಬಗ್ಗೆ ಅನಿವಾಸಿ ಭಾರತೀಯರಿಗೆ ಹೊಸ ಭರವಸೆ, ವಿಶ್ವಾಸ ಮೂಡಿದೆ. ಇದರಿಂದಾಗಿ ವಿದೇಶಗಳಲ್ಲೂ ಮೋದಿ, ಮೋದಿ ಘೋಷಣೆ ಮೊಳಗುತ್ತಿದೆ. ಇದು ವಿದೇಶಗಳಲ್ಲಿ ಮೋದಿ ಮಾಡಿದ ಚಮತ್ಕಾರ. ವಿದೇಶಗಳಲ್ಲೂ ಮೋದಿಯ ಜನಪ್ರಿಯತೆಗೆ ಸಾಕ್ಷಿ.
ಭಾರತದ ವಿದೇಶಾಂಗ ನೀತಿಯ ಸ್ವರೂಪ, ಜಾರಿ, ಗುರಿ ಸಾಧನೆಯ ಹಾದಿಯಲ್ಲಿ ಕಳೆದ 8 ವರ್ಷಗಳಲ್ಲಿ ಬಾರಿ ಬದಲಾವಣೆ ಆಗಿದೆ. ಭಾರತಕ್ಕೆ ಈಗ ಪ್ರಧಾನಿ ನರೇಂದ್ರ ಮೋದಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖ್ಯ ರಾಯಭಾರಿ ಆಗಿದ್ದಾರೆ. ಜಾಗತಿಕ ಚದುರಂಗದಾಟದಲ್ಲಿ ಭಾರತ ಈಗ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಇದನ್ನು ಸಾಧ್ಯವಾಗಿಸಿದವರು ಪ್ರಧಾನಿ ನರೇಂದ್ರ ಮೋದಿ. ವಿದೇಶಾಂಗ ನೀತಿಗೆ ಭಾರತದಲ್ಲಿ ಇದುವರೆಗೂ ಯಾವುದೇ ಪ್ರಧಾನಿಯೂ ನೀಡದಷ್ಟು ಮಹತ್ವವನ್ನು ಮೋದಿ ನೀಡಿದ್ದಾರೆ. ಎಲ್ಲ ಪ್ರಮಖ ದೇಶಗಳೊಂದಿಗೂ ಭಾರತ ಇಂದು ಉತ್ತಮ ಭಾಂಧವ್ಯ ಹೊಂದಿದೆ. ಪ್ರಮುಖ ಮೈತ್ರಿಕೂಟಗಳಲ್ಲಿ ಭಾರತದ್ದೇ ಪ್ರಧಾನ ಪಾತ್ರ. ಇದೆಲ್ಲವೂ ಕಳೆದ 8 ವರ್ಷಗಳಲ್ಲಿ ಪ್ರಧಾನಿ ಮೋದಿ ಇರಿಸಿದ ಜಾಣ ನಡೆಯಿಂದ ಸಾಧ್ಯವಾಗಿದೆ.
ವಿಶ್ವದ ಹಲವು ಪ್ರಮುಖ ದೇಶಗಳೊಂದಿಗೆ ಸಂಬಂಧ ಸುಧಾರಣೆ, ಈ ಮೂಲಕ ಭಾರತದ ಆರ್ಥಿಕಾಭಿವೃದ್ಧಿ ಆಗಬೇಕು ಹಾಗೂ ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಗಳ ರಕ್ಷಣೆಯಾಗಬೇಕು ಎನ್ನುವುದು ಮೋದಿ ಸರ್ಕಾರದ ವಿದೇಶಾಂಗ ನೀತಿಯ ಸ್ವರೂಪವಾಗಿದೆ. ಈ ಉದ್ದೇಶವನ್ನು ಪ್ರಧಾನಿ ಮೋದಿ ಕಳೆದ 8 ವರ್ಷದಲ್ಲಿ ಚಾಣಾಕ್ಷತನದಿಂದ ಈಡೇರಿಸುತ್ತಿದ್ದಾರೆ. ಮೋದಿಯೇ ಈಗ ಅಂತಾರಾಷ್ಟ್ರೀಯ ರಾಜಕೀಯದ ಚಾಣಕ್ಯರಾಗಿ ಹೊರಹೊಮ್ಮಿದ್ದಾರೆ. 2014ರಲ್ಲಿ ನರೇಂದ್ರ ಮೋದಿ ದೇಶದ ಪ್ರಧಾನಿಯಾದಾಗ, ಅವರಿಗೆ ವಿದೇಶಾಂಗ ನೀತಿಯ ಬಗ್ಗೆ ಯಾವುದೇ ಅನುಭವ ಇರಲಿಲ್ಲ. ಅವರು ರಾಜ್ಯವೊಂದರ ಮುಖ್ಯಮಂತ್ರಿಯಾಗಿದ್ದವರು. ರಾಷ್ಟ್ರ ರಾಜಕಾರಣದ ಅನುಭವಿಯೂ ಅಲ್ಲ. ಆದರೆ ಈಗ ಅಂತಾರಾಷ್ಟ್ರೀಯ ರಾಜಕೀಯದ ಒಳಮರ್ಮಗಳನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ಚಾಣಾಕ್ಯ ತಂತ್ರಗಳನ್ನು ಆಳವಡಿಸಿಕೊಂಡು ವಿದೇಶಾಂಗ ನೀತಿ ಜಾರಿಗೊಳಿಸಿದ್ದಾರೆ. ಭಾರತದ ವಿದೇಶಾಂಗ ವ್ಯವಹಾರಗಳನ್ನು ನೋಡಿಕೊಳ್ಳಲು, ಹಲವು ದೇಶಗಳೊಂದಿಗೆ ಭಾರತದ ಭಾಂಧವ್ಯ ಸುಧಾರಿಸುವಂತೆ ಮಾಡಲು ಭಾರತಕ್ಕೆ ಒಬ್ಬರು ವಿದೇಶಾಂಗ ಇಲಾಖೆಯ ಸಚಿವರೂ ಇದ್ದಾರೆ. ಆದರೆ ಅವರಿಗಿಂತಲೂ ಪ್ರಧಾನಿ ಮೋದಿಯೇ ಹೆಚ್ಚಿನ ವಿದೇಶ ಪ್ರವಾಸ ಮಾಡಿದ್ದಾರೆ. ವಿದೇಶಾಂಗ ಮಂತ್ರಿಗಿಂತ ಹೆಚ್ಚಾಗಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿಯೂ ಮೋದಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಸಣ್ಣ ದೇಶಗಳಿಂದ ಹಿಡಿದು ಪ್ರಬಲ ರಾಷ್ಟ್ರಗಳ ನಾಯಕರವರೆಗೂ ಮೋದಿ ವೈಯಕ್ತಿಕ ಭಾಂಧವ್ಯ ಬೆಳೆಸಿಕೊಂಡಿದ್ದಾರೆ.
ವಿಶ್ವಗುರುವಾಗುವತ್ತ ಭಾರತದ ಹೆಜ್ಜೆ
ಭಾರತ ಈಗ ವಿಶ್ವಗುರುವಾಗಲು ಹೊರಟಿದೆ. ಆಮೆರಿಕವನ್ನು ಜಗತ್ತಿನ ದೊಡ್ಡಣ್ಣ ಎಂದು ಕರೆಯುವುದು ವಾಡಿಕೆ. ಜಗತ್ತಿನಲ್ಲಿ ಒಂದೆಡೆ ಆಮೆರಿಕಾ, ಮತ್ತೊಂದೆಡೆ ರಷ್ಯಾ ದೇಶ ಇದೆ. ಮತ್ತೊಂದೆಡೆ ಆರ್ಥಿಕವಾಗಿ ಪ್ರಬಲವಾಗಿರುವ ಚೀನಾ ದೇಶ ಇದೆ. ಈ ಎಲ್ಲ ದೇಶಗಳ ಮಧ್ಯೆಯೂ ಭಾರತವು ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಈಗ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ. ಈ ಮೂಲಕ ವಿಶ್ವ ಗುರು ಆಗಬೇಕು ಎಂಬ ಕನಸನ್ನು ಸಾಕಾರಗೊಳಿಸಲು ಹೊರಟಿದೆ. ಸ್ವಾಮಿ ವಿವೇಕಾನಂದರ ಚಿಂತನೆ, ಧೋರಣೆ, ಆಲೋಚನೆಗಳು ಪ್ರಧಾನಿ ಮೋದಿ ಅವರ ಮೇಲೆ ಪ್ರಭಾವ ಬೀರಿವೆ. ಸ್ವಾಮಿ ವಿವೇಕಾನಂದರಿಗೆ ಭಾರತ ವಿಶ್ವ ಗುರುವಾಗಬೇಕೆಂಬ ಆಸೆ, ಕನಸು ಇತ್ತು. ಅದನ್ನು ಈಗ ಸ್ವಾಮಿ ವಿವೇಕಾನಂದರ ಚಿಂತನೆಯಿಂದ ಪ್ರೇರಣೆಗೊಂಡ ಪ್ರಧಾನಿ ಮೋದಿ ಸಾಕಾರಗೊಳಿಸಲು ಯತ್ನಿಸುತ್ತಿದ್ದಾರೆ. ಇಡೀ ವಿಶ್ವಕ್ಕೆ ಭಾರತ ನಾಯಕತ್ವ ವಹಿಸಬೇಕು, ಭಾರತದ ನೇತೃತ್ವದಲ್ಲಿ ಜಗತ್ತು ಸಾಗಬೇಕು, ಇಡೀ ವಿಶ್ವಕ್ಕೆ ಭಾರತ ತನ್ನ ಅಭಿವೃದ್ದಿ, ಸಂಸ್ಕೃತಿ, ಧೋರಣೆ, ಚಿಂತನೆಗಳಿಂದ ಮಾರ್ಗದರ್ಶನ ಮಾಡಬೇಕೆಂಬುದನ್ನು ಮೋದಿ ಸಾಕಾರಗೊಳಿಸಲು ಪಣ ತೊಟ್ಟಿದ್ದಾರೆ.
ವಿಶ್ವಕ್ಕೆ ಅಗತ್ಯವಾದ ಎಲ್ಲವನ್ನೂ ಭಾರತದಿಂದ ಪೂರೈಸಬೇಕು ಎಂಬುದು ಮೋದಿ ಆಶಯ. ಈ ಮೂಲಕ ಇಡೀ ವಿಶ್ವಕ್ಕೆ ಭಾರತದ ಮಹತ್ವ ಎಷ್ಟು, ಏನು ಎಂಬುದನ್ನು ಮನವರಿಕೆ ಮಾಡಿಕೊಟ್ಟು ಜಾಗತಿಕ ನಾಯಕತ್ವ ವಹಿಸಲು ಭಾರತ ಈಗ ಮೋದಿ ನೇತೃತ್ವದಲ್ಲಿ ಸಜ್ಜಾಗುತ್ತಿದೆ.
ಕೊರೊನಾ ಲಸಿಕೆಯಿಂದ ಹಿಡಿದು, ಗೋಧಿಯವರೆಗೆ, ಆಟೊಮೊಬೈಲ್ಗಳಿಂದ ಉಕ್ಕು, ಕಬ್ಬಿಣ, ಸಕ್ಕರೆ, ತರಕಾರಿಯವರೆಗೂ ಎಲ್ಲವನ್ನೂ ಭಾರತವು ಜಾಗತಿಕ ಮಾರುಕಟ್ಟೆಗೆ ಪೂರೈಸುತ್ತಿದೆ. 50 ವರ್ಷಗಳ ಹಿಂದೆ ಭಾರತದಲ್ಲಿ ಆಹಾರೋತ್ಪಾದನೆ ಕಡಿಮೆ ಇತ್ತು. ದೇಶದಲ್ಲಿ ಬಡತನ ಹೆಚ್ಚಾಗಿತ್ತು. ಜನರು ಹಸಿವಿನಿಂದ ಬಳಲಬಾರದೆಂದು ಆಮೆರಿಕ ದಾನವಾಗಿ ನೀಡಿದ ಗೋಧಿಯನ್ನು ಭಾರತ ಪಡೆದು ಜನರಿಗೆ ಪೂರೈಸುತ್ತಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಭಾರತವೇ ವಿಶ್ವಕ್ಕೆ ಗೋಧಿಯನ್ನು ರಫ್ತು ಮಾಡುವ ದೇಶವಾಗಿ ಬದಲಾಗಿದೆ. ಹೀಗಾಗಿ ಈಗ ವಿಶ್ವದ ಎಲ್ಲ ದೇಶಗಳು ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತಿವೆ.
ವಿಶ್ವದಲ್ಲಿ ಕೆಲವೇ ದೇಶಗಳು ಮಾತ್ರ ಕೊರೊನಾ ಲಸಿಕೆ ಸಂಶೋಧಿಸಿ ಉತ್ಪಾದನೆ ಮಾಡಿದ್ದವು. ಅನೇಕ ಬಡ ರಾಷ್ಟ್ರಗಳಿಗೆ ಕೊರೊನಾ ಲಸಿಕೆ ದೂರದ ಮಾತಾಗಿತ್ತು. ಆದರೇ ಭಾರತವು ಬಡ ರಾಷ್ಟ್ರಗಳಿಗೆ ಉಚಿತವಾಗಿ ಕೊರೊನಾ ಲಸಿಕೆ ಪೂರೈಸಿದೆ. ಆಫ್ರಿಕಾದ ಹಲವು ದೇಶಗಳು, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ಸೇರಿದಂತೆ ಹಲವು ದೇಶಗಳಿಗೆ ಭಾರತ ಪುಕ್ಕಟೆಯಾಗಿ ಕೊರೊನಾ ಲಸಿಕೆಯನ್ನು ಪೂರೈಸಿದೆ.
ಗುರಿ ಸಾಧಿಸುವ ಹಾದಿಯಲ್ಲಿ ಬದಲಾವಣೆ
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಆಳವಡಿಸಿಕೊಂಡ ವಿದೇಶಾಂಗ ನೀತಿಯನ್ನೇ ಭಾರತ ಸರ್ಕಾರವು ಇಂದಿಗೂ ಅಧಿಕೃತವಾಗಿ ಮುಂದುವರಿಸಿದೆ. ವಿದೇಶಾಂಗ ನೀತಿ ಹಾಗೂ ಉದ್ದೇಶದಲ್ಲಿ ಬದಲಾವಣೆ ಆಗಿಲ್ಲ. ಆದರೇ, ಗುರಿ ಸಾಧಿಸುವ ಹಾದಿಯಲ್ಲಿ ಬದಲಾವಣೆ ಆಗಿದೆ ಎಂದು ಭಾರತದ ವಿದೇಶಾಂಗ ನೀತಿಯನ್ನು ಹತ್ತಿರದಿಂದ ಬಲ್ಲ ವಿದೇಶಾಂಗ ತಜ್ಞರು ಹೇಳುತ್ತಾರೆ. ವಿಶ್ವದ ಬಹುತೇಕ ಎಲ್ಲ ಪ್ರಮುಖ ದೇಶಗಳಿಗೂ ತಮ್ಮದೇ ಆದ ಮಿತ್ರರಾಷ್ಟ್ರಗಳು ಹಾಗೂ ವೈರಿ ರಾಷ್ಟ್ರಗಳಿವೆ. ಆಮೆರಿಕ ನೇತೃತ್ವದ ಒಂದು ಬಣ ಇದ್ದರೇ, ರಷ್ಯಾ-ಚೀನಾ ನೇತೃತ್ವದ ಮತ್ತೊಂದು ಬಣವೂ ಇದೆ. ಈ ರಾಷ್ಟ್ರಗಳು ತಮ್ಮದೇ ಮೈತ್ರಿಕೂಟಗಳನ್ನು ಮಾಡಿಕೊಂಡಿವೆ. ಆಮೆರಿಕಕ್ಕೆ ತನ್ನದೇ ಆದ ಮಿತ್ರ-ಶತ್ರು ರಾಷ್ಟ್ರಗಳು ಇವೆ. ಆದರೆ, ಭಾರತವು ಆಮೆರಿಕ ಹಾಗೂ ರಷ್ಯಾ ದೇಶಗಳೊಂದಿಗೆ ಏಕಕಾಲಕ್ಕೆ ಉತ್ತಮ ಭಾಂಧವ್ಯ ಹೊಂದಿದೆ. ಭಾರತಕ್ಕೆ ಆಮೆರಿಕ ಮಿತ್ರರಾಷ್ಟ್ರವಾಗಿದ್ದರೆ, ರಷ್ಯಾ ಕೂಡ ಅತ್ಯಾಪ್ತ ಮಿತ್ರರಾಷ್ಟ್ರವಾಗಿದೆ.
ಆಮೆರಿಕ ಜಪಾನ್ ಹಾಗೂ ಆಸ್ಟ್ರೇಲಿಯಾ ದೇಶಗಳು ಚೀನಾ ವಿರುದ್ಧ ರಚಿಸಿರುವ ಕ್ವಾಡ್ ಮೈತ್ರಿಕೂಟದಲ್ಲಿಯೂ ಭಾರತ ಪ್ರಮುಖ ಸದಸ್ಯ ರಾಷ್ಟ್ರವಾಗಿದೆ. ಅದೇ ರೀತಿ ಚೀನಾ, ರಷ್ಯಾ ಒಳಗೊಂಡ ಬ್ರಿಕ್ಸ್ನಲ್ಲೂ ಭಾರತ ಪ್ರಮುಖ ಸದಸ್ಯ ರಾಷ್ಟ್ರವಾಗಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ ವಿಶ್ವದಲ್ಲಿ ಅಮೆರಿಕ ಮತ್ತು ರಷ್ಯಾ ನೇತೃತ್ವದಲ್ಲಿ ಎರಡು ಬಣಗಳು ರೂಪುಗೊಂಡಿದ್ದವು. ಆದರೆ ಭಾರತವು ಯಾವುದೇ ಬಣಕ್ಕೆ ಸೇರದೆ ತಟಸ್ಥವಾಗಿರುವ ಆಲಿಪ್ತ ನೀತಿಯನ್ನು ನೆಹರು ರೂಪಿಸಿದ್ದರು. ಈಗಲೂ ಪ್ರಧಾನಿ ಮೋದಿ ಅದೇ ನೀತಿಯನ್ನು ಮುಂದುವರಿಸಿದ್ದಾರೆ. ಬಿಜೆಪಿ ಪಕ್ಷ ಹಾಗೂ ಸರ್ಕಾರ ನೆಹರು ಸರ್ಕಾರದ ಕೆಲ ರಾಜಕೀಯ ತೀರ್ಮಾನ, ಧೋರಣೆಗಳನ್ನು ಟೀಕಿಸುತ್ತದೆ. ಆದರೆ, ಆಲಿಪ್ತ ನೀತಿಯ ವಿಷಯದಲ್ಲಿ ಮಾತ್ರ ನೆಹರು ಧೋರಣೆಯನ್ನೇ ಮೋದಿ ಸರ್ಕಾರ ಮುಂದುವರಿಸಿದೆ. ಇದಕ್ಕೆ ಈಗ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತ ತೆಗೆದುಕೊಂಡ ನಿಲುವೇ ಸಾಕ್ಷಿಯಾಗಿದೆ. ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತವು ಯಾವುದೇ ಒಂದು ದೇಶವನ್ನು ಬೆಂಬಲಿಸಿಲ್ಲ. ಯಾವ ದೇಶದ ವಿರುದ್ಧವಾದ ನಿಲುವನ್ನೂ ತಳೆದಿಲ್ಲ. ರಷ್ಯಾ-ಉಕ್ರೇನ್ ಯುದ್ಧದಲ್ಲಿ ಆಮೆರಿಕ, ಇಂಗ್ಲೆಂಡ್, ಯೂರೋಪ್ ರಾಷ್ಟ್ರಗಳು ಉಕ್ರೇನ್ ಬೆಂಬಲಕ್ಕೆ ನಿಂತಿವೆ. ಉಕ್ರೇನ್ಗೆ ಶಸ್ತ್ರಾಸ್ತ್ರ, ಹಣಕಾಸು ನೆರವು ನೀಡುತ್ತಿವೆ. ಯೂರೋಪ್ ರಾಷ್ಟ್ರಗಳು ರಷ್ಯಾ ವಿರುದ್ಧ ನಿಲುವು ತಳೆದಿವೆ. ಆದರೇ, ಭಾರತ ನೆಹರು ಕಾಲದ ಆಲಿಪ್ತ ನೀತಿಯನ್ನು ಪಾಲಿಸಿದೆ. ಭಾರತವು ಯಾವ ಬಣಕ್ಕೂ ಸೇರದೇ, ತಟಸ್ಥವಾಗಿ ಉಳಿದಿದೆ.
ಯುದ್ಧ ಬೇಡ ಎಂದು ಭಾರತ ಹೇಳಿದರೂ ರಷ್ಯಾದ ವಿರುದ್ಧ ಭಾರತ ಮಾತನಾಡಿಲ್ಲ. ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಬೇಕು. ಶಾಂತಿ ಸ್ಥಾಪನೆ ಆಗಬೇಕೆಂದು ಪ್ರತಿಪಾದಿಸಿದ ಭಾರತದ ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆಗೆ ಮಾತುಕತೆ ನಡೆಸಿದ್ದಾರೆ.
ವಿದೇಶಾಂಗ ನೀತಿಯಲ್ಲಿ ಭಾರತವು ಸ್ವಾತಂತ್ರ್ಯ ಕಾಪಾಡಿಕೊಂಡಿದೆ. ಯಾವುದೇ ದೇಶದ ಪ್ರಭಾವಕ್ಕೊಳಗಾಗಿ ಅದರ ಆಶಯಗಳಿಗೆ ನೀತಿಯನ್ನು ರೂಪಿಸಿಲ್ಲ. ಭಾರತವು ಯಾವುದೇ ದೇಶದ ಹಂಗಿನಲ್ಲೂ ಇಲ್ಲ. ಯಾರದ್ದೇ ದಯೆ, ದಾಕ್ಷಿಣ್ಯಕ್ಕೊಳಗಾಗಿ ವಿದೇಶಾಂಗ ನೀತಿ ರೂಪಿಸಿಕೊಳ್ಳುವ ಜರೂರತ್ತು ಭಾರತಕ್ಕೆ ಇಲ್ಲ. ಹೀಗಾಗಿಯೇ ಭಾರತದ ಹಿತಾಸಕ್ತಿ ಕಾಪಾಡುವುದಕ್ಕೆ ಆದ್ಯತೆ ಕೊಟ್ಟು ವಿದೇಶಾಂಗ ನೀತಿಯನ್ನು ರೂಪಿಸಿಕೊಳ್ಳಲಾಗಿದೆ. ವಿಶ್ವದ ಪ್ರಮುಖ ದೇಶಗಳೇ ಉಕ್ರೇನ್ ಯುದ್ಧದ ವಿಷಯದಲ್ಲಿ ರಷ್ಯಾ ವಿರುದ್ಧ ನಿಂತರೂ, ಭಾರತ ಮಾತ್ರ ರಷ್ಯಾದ ವಿರುದ್ಧ ಮಾತನಾಡಿಲ್ಲ. ರಷ್ಯಾವನ್ನು ಬೇರೆ ದೇಶಗಳಂತೆ ಬಹಿಷ್ಕರಿಸಿಲ್ಲ. ಏಕೆಂದರೆ, ರಷ್ಯಾ ಭಾರತದ ಅಪದ್ಬಾಂಧವ ರಾಷ್ಟ್ರ. ಭಾರತವು ಚೀನಾ, ಪಾಕ್ ವಿರುದ್ಧ ಯುದ್ಧ ನಡೆಸಿದಾಗ ಭಾರತದ ನೆರವಿಗೆ ಬಂದಿದ್ದ ದೇಶ ರಷ್ಯಾ. ಭಾರತವು ಹಲವು ಪ್ರಮುಖ ಶಸ್ತ್ರಾಸ್ತ್ರಗಳಿಗೆ ರಷ್ಯಾವನ್ನು ಅವಲಂಬಿಸಿದೆ. ಇಂದು ರಷ್ಯಾವನ್ನು ಭಾರತ ಖಂಡಿಸುತ್ತಿಲ್ಲ. ಅಮೆರಿಕ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರೂ ಭಾರತ ಚಿಂತೆ ಮಾಡಿಲ್ಲ.
ಯುದ್ಧದ ನಂತರವೂ ಭಾರತವು ರಷ್ಯಾದೊಂದಿಗೆ ವ್ಯಾಪಾರ-ವಾಣಿಜ್ಯ, ರಾಜತಾಂತ್ರಿಕ ಸಂಬಂಧ ಮುಂದುವರಿಸಿತ್ತು. ಆಮೆರಿಕ ಅಥವಾ ಇಂಗ್ಲೆಂಡ್ ರಷ್ಯಾವನ್ನು ಬಹಿಷ್ಕರಿಸಿ ಎಲ್ಲ ಸಂಬಂಧ ಕಡಿದುಕೊಂಡರೂ ಭಾರತ ಮಾತ್ರ ರಷ್ಯಾದೊಂದಿಗೆ ಭಾಂಧವ್ಯ ಮುಂದುವರಿಸಿದೆ. ಪಾಶ್ಚಾತ್ಯ ದೇಶಗಳ ವಿರೋಧದ ಮಧ್ಯೆಯೂ ರಷ್ಯಾದಿಂದ ಕಚ್ಚಾತೈಲ ಅಮದು ಮಾಡಿಕೊಳ್ಳುವುದನ್ನು ಭಾರತ ಮುಂದುವರಿಸಿದೆ.
ರಷ್ಯಾ-ಉಕ್ರೇನ್ ಯುದ್ಧದ ವಿಷಯದಲ್ಲಿ ಭಾರತ ತಳೆದ ನಿಲುವನ್ನು ಭಾರತದ ವೈರಿ ರಾಷ್ಟ್ರ ಪಾಕಿಸ್ತಾನದ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಕೂಡ ಹೊಗಳಿದ್ದರು. ಭಾರತ ಈಗ ಯಾವುದೇ ದೇಶದ ಮುಲಾಜಿನಲ್ಲಿ ಇಲ್ಲ. ಯೂರೋಪ್ ರಾಷ್ಟ್ರಗಳಿಗೆ ಭಾರತವನ್ನು ಬಹಿಷ್ಕರಿಸುವ ಶಕ್ತಿ ಇಲ್ಲ. ಕ್ವಾಡ್ನಲ್ಲಿದ್ದರೂ, ಭಾರತವು ರಷ್ಯಾದೊಂದಿಗೆ ಭಾಂಧವ್ಯ ಮುಂದುವರಿಸಿದೆ ಎಂದು ಭಾರತವನ್ನು ಹೊಗಳಿದ್ದರು.
ಭಾರತವು ಈಗ ಆಮೆರಿಕಾ, ಯೂರೋಪ್ ಒತ್ತಡಗಳಿಗೂ ಬಗ್ಗುವ ದೇಶವಾಗಿ ಉಳಿದಿಲ್ಲ. ಆಮೆರಿಕಾ ಹಾಗೂ ಇರಾನ್ ದೇಶಗಳ ನಡುವಣ ಸಂಬಂಧ ಚೆನ್ನಾಗಿಲ್ಲ. ಇರಾನ್ನಿಂದ ಕಚ್ಚಾತೈಲ ಅಮದು ಮಾಡಿಕೊಳ್ಳುವ ದೇಶಗಳ ಮೇಲೆ ಆಮೆರಿಕ ಆರ್ಥಿಕ ನಿರ್ಬಂಧಗಳನ್ನು ವಿಧಿಸುತ್ತಿದೆ. ಆದರೆ ಭಾರತವು ಇದನ್ನೂ ನಾಜೂಕಾಗಿ ನಿರ್ವಹಿಸುತ್ತಿದೆ. ಭಾರತವು ಈಗಲೂ ಇರಾನ್ನಿಂದ ತೈಲ ಅಮದು ಮಾಡಿಕೊಳ್ಳುತ್ತಿದೆ. ಇದೇ ರೀತಿ ಇಸ್ರೇಲ್ ಜೊತೆಗೂ ಆಮೆರಿಕಾದ ಭಾಂಧವ್ಯ ಚೆನ್ನಾಗಿಲ್ಲ. ಆದರೆ, ಇಸ್ರೇಲ್ ಜೊತೆಗೂ ಭಾರತ ಉತ್ತಮ ಭಾಂಧವ್ಯ ಹೊಂದಿದೆ. ಇಸ್ರೇಲ್‌ನ ಶಸ್ತ್ರಾಸ್ತ್ರ ರಫ್ತಿನಲ್ಲಿ ಶೇ 40 ರಷ್ಟನ್ನು ಭಾರತ ಅಮದು ಮಾಡಿಕೊಳ್ಳುತ್ತಿದೆ. ವಿರೋಧಾಭಾಸದ ಹಿತಾಸಕ್ತಿಗಳನ್ನು ಭಾರತಕ್ಕೆ ಅನುಕೂಲಕಾರಿಯಾಗುವಂತೆ ಮೋದಿ ನೋಡಿಕೊಂಡಿದ್ದಾರೆ.
ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡಲು ವಿದೇಶಾಂಗ ನೀತಿಯನ್ನು ಅಸ್ತ್ರವಾಗಿ ಮೋದಿ ನೋಡುತ್ತಾರೆ. ಸೌದಿ ಅರೇಬಿಯಾ, ಇಸ್ರೇಲ್, ಯುಎಇ, ಇರಾನ್ ಜೊತೆಗೆ ಉತ್ತಮ ಭಾಂಧವ್ಯ ಕಾಪಾಡುವುದು ಈಗಿನ ಜಾಗತಿಕ ಸ್ಥಿತಿಯಲ್ಲಿ ಕಷ್ಟ. ಆದರೇ ಸಂಕೀರ್ಣವಾದ ಸಂಬಂಧವನ್ನು ಸಾಧಿಸುವ ಮೂಲಕ ಮೋದಿ, ಜಿಯೋ ಪಾಲಿಟಿಕ್ಸ್ನ ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ. ಇದರಿಂದ ಸೌದಿ ಅರೇಬಿಯಾ, ಯುಎಇ ಭಾರತದಲ್ಲಿ ಬಿಲಿಯನ್ ಡಾಲರ್ ಗಟ್ಟಲೇ ಹೂಡಿಕೆ ಮಾಡಿವೆ.
ಇಂಡೋ-ಫೆಸಿಫಿಕ್ ವಲಯದಲ್ಲಿ ಚೀನಾದ ವಿರುದ್ಧ ಪ್ರಬಲ ಭದ್ರತೆಯ ಅಗತ್ಯದ ಕಾರಣಕ್ಕಾಗಿ ಭಾರತವು ಕ್ವಾಡ್ಗೆ ಸೇರ್ಪಡೆಯಾಗಿದೆ. ಕ್ವಾಡ್ನಲ್ಲಿ ಆಮೆರಿಕ, ಜಪಾನ್, ಆಸ್ಟ್ರೇಲಿಯಾ ದೇಶಗಳು ಸದಸ್ಯ ರಾಷ್ಟ್ರಗಳಾಗಿವೆ. ಅದೇ ಸಮಯದಲ್ಲಿ ಭಾರತವು ಚೀನಾ, ರಷ್ಯಾದ ಜೊತೆಗೆ ಬ್ರಿಕ್ಸ್ನಲ್ಲಿ ಸದಸ್ಯ ರಾಷ್ಟ್ರವಾಗಿದೆ. ಜಗತ್ತಿನಲ್ಲಿ ಭಾರತ ಈಗ ಹಲವು ಕಾರಣಗಳಿಂದ ಶಕ್ತಿಶಾಲಿ ದೇಶವಾಗಿ ಹೊರಹೊಮ್ಮಿದೆ. ಭಾರತವನ್ನು ಕಡೆಗಣಿಸುವ ಸ್ಥಿತಿಯಲ್ಲಿ ಯಾವುದೇ ದೇಶವೂ ಇಲ್ಲ. ಭಾರತದ ಜನಸಂಖ್ಯೆ, ಆಹಾರೋತ್ಪಾದನೆ, ಆರ್ಥಿಕ ಶಕ್ತಿ, ವೈಜ್ಞಾನಿಕ ಜಗತ್ತಿನ ಪ್ರಗತಿಯ ಕಾರಣಗಳಿಗಾಗಿ ಜಗತ್ತಿನ ಎಲ್ಲ ದೇಶಗಳಿಗೂ ಭಾರತದ ಸ್ನೇಹ ಬೇಕೇ ಬೇಕು. ಮುಸ್ಲಿಂ ವರ್ಲ್ಡ್, ಯೂರೋಪ್, ಆಮೆರಿಕಾ, ಆಫ್ರಿಕಾ, ಅರಬ್ ರಾಷ್ಟ್ರಗಳು ಭಾರತದೊಂದಿಗೆ ಉತ್ತಮ ಭಾಂಧವ್ಯ ಹೊಂದಲು ಹಾಗೂ ಮುಂದುವರಿಸಿಕೊಂಡು ಹೋಗಲು ಬಯಸುತ್ತಿವೆ. ಆದರೆ, ಭಾರತದ ವೈರಿ ರಾಷ್ಟ್ರ ಪಾಕಿಸ್ತಾನಕ್ಕೆ ಚೀನಾ ಬಿಟ್ಟರೇ, ಬೇರೇ ದೇಶಗಳ ಬೆಂಬಲ ಇಲ್ಲ. ಪಾಕಿಸ್ತಾನ ಇಂದಿಗೂ ಭಯೋತ್ಪಾದಕ ರಾಷ್ಟ್ರವಾಗಿದೆ. ಎಫ್ಎಟಿಎಫ್ ಗ್ರೇ ಪಟ್ಟಿಯಲ್ಲೇ ಪಾಕಿಸ್ತಾನ ಮುಂದುವರಿದಿದೆ.
ಪ್ರಧಾನಿ ನರೇಂದ್ರ ಮೋದಿ ತಮ್ಮ ವಿದೇಶಾಂಗ ನೀತಿಯಲ್ಲಿ ಮಂಗೋಲಿಯಾದಂಥ ಸಣ್ಣ ದೇಶಗಳಿಗೂ ಪ್ರಾಮುಖ್ಯತೆ ಸಿಕ್ಕಿದೆ. ನಾವು ಸ್ನೇಹಿತರನ್ನು ಬದಲಿಸಬಹುದು, ನೆರೆಹೊರೆಯವರನ್ನು ಬದಲಾಯಿಸಲು ಸಾಧ್ಯವಿಲ್ಲ. ಅವರ ಜೊತೆಯೇ ಬದುಕಬೇಕು, ಅವರ ಜೊತೆಯೇ ಸಾಯಬೇಕು ಎಂಬ ವಾಜಪೇಯಿ ಹೇಳಿಕೆಯನ್ನು ಮೋದಿ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ ನೆರೆಹೊರೆಯವರಿಗೆ ಮೊದಲ ಆದ್ಯತೆ ಎಂಬುದು ಮೋದಿ ಸರ್ಕಾರದ ವಿದೇಶಾಂಗ ನೀತಿಯ ಮಂತ್ರ. ದೇಶದ ವಿದೇಶಾಂಗ ನೀತಿಯನ್ನು ಆರ್ಥಿಕ ಹಿತಾಸಕ್ತಿಯ ಜೊತೆಗೆ ಸಮ್ಮಿಳನಗೊಳಿಸಿದ್ದಾರೆ. ವಿದೇಶಗಳಲ್ಲಿರುವ ಅನಿವಾಸಿ ಭಾರತೀಯರನ್ನು ಆ ದೇಶಗಳ ಮೇಲೆ ಹತೋಟಿ ಸಾಧಿಸಲು ಬೋಲ್ಡ್ ಆಗಿ ಬಳಸಿಕೊಂಡಿದ್ದಾರೆ. ಇದಕ್ಕೆ ಆಮೆರಿಕವೇ ಉದಾಹರಣೆ.
ಸರ್ಜಿಕಲ್ ಸ್ಟ್ರೈಕ್, ಬಾಲಕೋಟ್ ಏರ್ ಸ್ಟ್ರೈಕ್ ಮೂಲಕ ಹಳೆಯ ನೀತಿಗಳು, ವೋಟ್ ಬ್ಯಾಂಕ್‌ಗೆ ಅಂಟಿಕೊಂಡು ಭಾರತ ಸುಮ್ಮನೆ ಕೂರಲ್ಲ ಎಂಬ ಕಠಿಣ ಸಂದೇಶವನ್ನು ಪಾಕಿಸ್ತಾನಕ್ಕೆ ಮೋದಿ ರವಾನಿಸಿದ್ದಾರೆ. ಭಾರತದ ಭದ್ರತೆಗೋಸ್ಕರ ಆಮೆರಿಕಾವನ್ನು ಎದುರು ಹಾಕಿಕೊಳ್ಳಲು ಕೂಡ ಭಾರತ ಸಿದ್ದವಾಗಿದೆ. ಹೀಗಾಗಿಯೇ ಆಮೆರಿಕಾದ ವಿರೋಧಕ್ಕೂ ಕ್ಯಾರೇ ಅನ್ನದೇ ಭಾರತವು ರಷ್ಯಾದಿಂದ ಎಸ್-400 ಟ್ರಿಂಫ್ ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಖರೀದಿಸಿದೆ. ಆಮೆರಿಕಾದ ವಿರೋಧದ ಮಧ್ಯೆಯೂ ಇರಾನ್ನಿಂದ ಕಚ್ಚಾತೈಲ ಖರೀದಿಯನ್ನು ಭಾರತ ಮುಂದುವರಿಸಿದೆ. ಇರಾನ್ಗೆ ಭಾರತವು ತನ್ನ ರೂಪಾಯಿಯ ಕರೆನ್ಸಿಯಲ್ಲಿ ಹಣವನ್ನು ಪಾವತಿಸಿದೆ. ಈಗ ರಷ್ಯಾದಿಂದಲೂ ಆಮೆರಿಕಾದ ವಿರೋಧದ ಮಧ್ಯೆಯೂ ಕಚ್ಚಾತೈಲ ಖರೀದಿಸುತ್ತಿದೆ. ಭಾರತದ ರೂಪಾಯಿ-ರೂಬೆಲ್ಸ್ ನಲ್ಲಿ ಹಣ ಪಾವತಿಸುತ್ತಿದೆ. ತಿಂಗಳಿನಿಂದ ತಿಂಗಳಿಗೆ ರಷ್ಯಾದಿಂದ ಭಾರತ ಖರೀದಿಸುವ ಕಚ್ಚಾತೈಲದ ಪ್ರಮಾಣ ಹೆಚ್ಚಾಗುತ್ತಿದೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:15 pm, Mon, 30 May 22