ನಿಜವಾಯ್ತು ಟ್ರಂಪ್ ಬೆದರಿಕೆ; ಭಾರತದ ಮೇಲೆ ಶೇ. 25ರಷ್ಟು ಹೆಚ್ಚುವರಿ ಸುಂಕ ವಿಧಿಸಿದ ಅಮೆರಿಕಾ!
ನಿನ್ನೆ (ಮಂಗಳವಾರ) ಭಾರತದ ಮೇಲೆ ಹರಿಹಾಯ್ದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವ ಭಾರತದ ಮೇಲೆ ಹೆಚ್ಚುವರಿ ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದರು. ಆದರೆ, ಎಷ್ಟು ಪ್ರಮಾಣದ ಸುಂಕ ವಿಧಿಸುತ್ತಾರೆಂಬುದರ ಬಗ್ಗೆ ಸುಳಿವು ನೀಡಿರಲಿಲ್ಲ. ಇದೀಗ ಹೇಳಿದಂತೆಯೇ ಮಾಡಿರುವ ಟ್ರಂಪ್ ಭಾರತದ ಮೇಲೆ ಬರೋಬ್ಬರಿ ಶೇ. 25ರಷ್ಟು ಹೆಚ್ಚುವರಿ ಸುಂಕ ವಿಧಿಸಿದ್ದಾರೆ. ಈ ಮೂಲಕ ಒಟ್ಟು ವ್ಯಾಪಾರ ಸುಂಕದ ಪ್ರಮಾಣ ಶೇ. 50ರಷ್ಟಾಗಿದೆ!

ನವದೆಹಲಿ, ಆಗಸ್ಟ್ 6: ರಷ್ಯಾದಿಂದ ತೈಲ ಖರೀದಿಸಿದ್ದೇವೆ ಎಂಬ ಕಾರಣಕ್ಕೆ ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನಿನ್ನೆ (ಮಂಗಳವಾರ) ಮುಂದಿನ 24 ಗಂಟೆಯೊಳಗೆ ಭಾರತದ ಮೇಲಿನ ಸುಂಕವನ್ನು ಗಣನೀಯವಾಗಿ ಹೆಚ್ಚಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಕೊನೆಗೂ ಹೇಳಿದಂತೆಯೇ ಮಾಡಿರುವ ಟ್ರಂಪ್ ಇಂದು ಭಾರತದ ಮೇಲೆ ಹೆಚ್ಚುವರಿಯಾಗಿ ಶೇ.25ರಷ್ಟು ಸುಂಕ (US Tariff) ವಿಧಿಸಿದ್ದಾರೆ. ಈ ಮೂಲಕ ಭಾರತದ ಮೇಲೆ ಅಮೆರಿಕ ಹೇರಿರುವ ವ್ಯಾಪಾರ ಸುಂಕ ಶೇ. 50ರಷ್ಟಾಗಿದೆ!
ಆಗಸ್ಟ್ 27ರಿಂದ ಜಾರಿಗೆ ಬರಲಿರುವ ಈ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಜುಲೈ 30ರಂದು ಟ್ರಂಪ್ ಆಗಸ್ಟ್ 1ರಿಂದ ಭಾರತೀಯ ಆಮದುಗಳ ಮೇಲೆ ಶೇ.25ರಷ್ಟು ಸುಂಕ ವಿಧಿಸಲಾಗುವುದು ಮತ್ತು ಹೆಚ್ಚುವರಿ ಅನಿರ್ದಿಷ್ಟ ದಂಡ ವಿಧಿಸಲಾಗುವುದು ಎಂದು ಘೋಷಿಸಿದ್ದರು. ಅದಾದ ಬಳಿಕ ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವ ಭಾರತದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭಾರತಕ್ಕೆ ಎಚ್ಚರಿಕೆ ನೀಡಿದ್ದರು. ಅದರಂತೆ ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಹೆಚ್ಚುವರಿ 25% ವ್ಯಾಪಾರ ಸುಂಕವನ್ನು ಘೋಷಿಸಿದ್ದಾರೆ.
US President Donald Trump imposes an additional 25% tariff on India over Russian oil purchases
On July 30, Trump had announced 25% tariffs on India. pic.twitter.com/NHUc9oh0JY
— ANI (@ANI) August 6, 2025
ಟ್ರಂಪ್ ಅವರ ಈ ಆದೇಶವು ಭಾರತೀಯ ಸರಕುಗಳ ಆಮದಿನ ಮೇಲಿನ ಒಟ್ಟು ಸುಂಕವನ್ನು ಶೇ. 50ಕ್ಕೆ ಹೆಚ್ಚಿಸಿದೆ. ಇದು ಚೀನಾದ ಮೇಲಿನ ಸುಂಕಕ್ಕಿಂತ ಶೇ. 20ರಷ್ಟು ಹೆಚ್ಚು ಮತ್ತು ಪಾಕಿಸ್ತಾನದ ಮೇಲಿನ ಸುಂಕಕ್ಕಿಂತ ಶೇ. 21ರಷ್ಟು ಹೆಚ್ಚು. ಇಂದು ಸಹಿ ಹಾಕಲಾದ ಕಾರ್ಯಕಾರಿ ಆದೇಶದಲ್ಲಿ ಟ್ರಂಪ್ ಈ ರೀತಿ ಬರೆದಿದ್ದಾರೆ. “ಭಾರತ ಸರ್ಕಾರವು ಪ್ರಸ್ತುತ ನೇರವಾಗಿ ಅಥವಾ ಪರೋಕ್ಷವಾಗಿ ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ನಾನು ಕಂಡುಕೊಂಡಿದ್ದೇನೆ. ಹೀಗಾಗಿ ಹೆಚ್ಚುವರಿಯಾಗಿ ಭಾರತದಿಂದ ವಸ್ತುಗಳ ಆಮದಿನ ಸುಂಕವನ್ನು ವಿಧಿಸುವುದು ಅಗತ್ಯವೆಂದು ನಾನು ನಿರ್ಧರಿಸಿದ್ದೇನೆ” ಎಂದು ಬರೆದಿದ್ದಾರೆ.
ಇದನ್ನೂ ಓದಿ: ಸುಮ್ಮನೆ ನಮ್ಮನ್ನು ಟಾರ್ಗೆಟ್ ಮಾಡಬೇಡಿ; ಟ್ರಂಪ್ ಸುಂಕ ಬೆದರಿಕೆಗೆ ಭಾರತ ತಿರುಗೇಟು
“ಭಾರತ ಎಲ್ಲರಿಗಿಂತ ಹೆಚ್ಚಿನ ಸುಂಕವನ್ನು ಹೊಂದಿದೆ. ನಾವು ಸುಂಕವನ್ನು ಶೇ. 25ಕ್ಕೆ ನಿರ್ಧರಿಸಿದ್ದೆವು. ಆದರೆ ಮುಂದಿನ 24 ಗಂಟೆಗಳಲ್ಲಿ ನಾನು ಭಾರತದ ಮೇಲಿನ ಸುಂಕವನ್ನು ಗಣನೀಯವಾಗಿ ಹೆಚ್ಚಿಸಲಿದ್ದೇನೆ. ಏಕೆಂದರೆ ಭಾರತ ರಷ್ಯಾದ ತೈಲವನ್ನು ಖರೀದಿಸುತ್ತಿದೆ. ಈ ಮೂಲಕ ಅವರು ಉಕ್ರೇನ್ ವಿರುದ್ಧದ ರಷ್ಯಾದ ಯುದ್ಧಕ್ಕೆ ಪರೋಕ್ಷವಾಗಿ ಹಣ ನೀಡುತ್ತಿದ್ದಾರೆ” ಎಂದು ಟ್ರಂಪ್ ಮಂಗಳವಾರ ಹೇಳಿಕೆ ನೀಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:43 pm, Wed, 6 August 25




