ಇಸ್ಲಾಮಾಬಾದ್: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೊರೊನಾಕ್ಕೆ ತುತ್ತಾಗಿದ್ದಾರೆ. ಇಮ್ರಾನ್ ಖಾನ್ಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ ಎಂದು ಪಾಕಿಸ್ತಾನ ಆರೋಗ್ಯ ಸಚಿವ ಫೈಸಲ್ ಸುಲ್ತಾನ ತಿಳಿಸಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಆರೋಗ್ಯ ಸಚಿವರು, ಇಮ್ರಾನ್ ಖಾನ್ ಎರಡು ದಿನಗಳಿಂದ ಕ್ವಾರಂಟೈನ್ನಲ್ಲಿ ಇದ್ದಾರೆ ಎಂದು ತಿಳಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಚೀನಾದ ಕೊರೊನಾ ಲಸಿಕೆ ಸಿನೋಫಾರ್ಮ್ನ್ನು ಇಮ್ರಾನ್ ಖಾನ್ ಚುಚ್ಚಿಸಿಕೊಂಡಿದ್ದರು.
ಇದುವರೆಗೆ ಪಾಕಿಸ್ತಾನದಲ್ಲಿ 6,23,135 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. 5,79.769 ಸೋಂಕಿತರು ಈಗಾಗಲೇ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 13,799 ಸಾರ್ವಜನಿಕರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.
PM Imran Khan has tested positive for Covid-19 and is self isolating at home
— Faisal Sultan (@fslsltn) March 20, 2021
ಅಲ್ಲದೇ ಕಳೆದ 24ಗಂಟೆಗಳಲ್ಲಿ 2021ರಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 3,876 ಕೊರೊನೊ ಸೋಂಕಿತರು ಪತ್ತೆಯಾಗಿದ್ದಾರೆ. ಇದು ಸಹಜವಾಗಿ ಪಾಕಿಸ್ತಾನ ಆತಂಕ ಹೆಚ್ಚಿಸಿದೆ.
ಪಾಕಿಸ್ತಾನ ಸೂಪರ್ ಲೀಗ್ಗೂ ಕಾಡಿತ್ತು ಕೊರೊನಾ
ಕೊರೊನಾ ಸ್ವಲ್ಪ ಕಡಿಮೆಯಾಯಿತು ಎಂದು ಅಂದುಕೊಳ್ಳುವಷ್ಟರಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದೆ. ಸೋಂಕು ನಿಯಂತ್ರಿಸಬೇಕು ಎಂದು ಎಷ್ಟೋ ಪಂದ್ಯಾವಳಿಗಳನ್ನು, ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು, ಮುಂದೂಡಲಾಗಿತ್ತು. ಕೊರೊನಾದಿಂದ ಆದಷ್ಟು ದೂರವಿದ್ದೇ ನಿಧಾನವಾಗಿ ಕ್ರೀಡಾರಂಗ ಚಿಗುರುತ್ತಿದ್ದರೂ, ಪಾಕಿಸ್ತಾನ ಸೂಪರ್ ಲೀಗ್ಗೆ ಸಹ ಅಡ್ಡಗಾಲಾಗಿ ಪರಿಣಮಿಸಿತ್ತು.
ಫೆಬ್ರವರಿ 20ರಿಂದಲೇ ಆರಂಭವಾಗಿದ್ದ ಪಾಕಿಸ್ತಾನ ಸೂಪರ್ ಲೀಗ್ನ್ನು ಸದ್ಯ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಾತ್ಕಾಲಿಕವಾಗಿ ನಿಲ್ಲಿಸಿತ್ತು. ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಏಳು ಕ್ರಿಕೆಟಿಗರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಂದ್ಯಾವಳಿ ಸ್ಥಗಿತಗೊಂಡಿತ್ತು. ‘ಆಟಗಾರರ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಪಂದ್ಯಾವಳಿಯನ್ನು ನಿಲ್ಲಿಸಿದ್ದೇವೆ. ಈ ನಿರ್ಧಾರ ತಕ್ಷಣದಿಂದಲೇ ಜಾರಿಗೊಳ್ಳಲಿದೆ’ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿತ್ತು
ಮಾರ್ಚ್ 1ರಂದು ಮೊದಲ ಬಾರಿಗೆ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಭಾಗವಹಿಸಿದ್ದ ಇಸ್ಲಾಮಾಬಾದ್ ಯನೈಟೆಡ್ ತಂಡದ ಆಟಗಾರ ಫವಾದ್ ಅಹ್ಮದ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ನಂತರ ಅವರ ಜತೆ ಬೆರೆತ ಆಟಗಾರರಿಗೆ ಕೊರೊನೊ ಸೋಂಕು ಪರೀಕ್ಷೆ ನಡೆಸಲಾಗಿತ್ತು. ಇದೀಗ ಒಟ್ಟು 7 ಆಟಗಾರರಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಕಾರಣ ಪಂದ್ಯಾವಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿರ್ಧಾರ ಕೈಗೊಂಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ: ದೇಶ ಮುನ್ನಡೆಸಲು ಇಮ್ರಾನ್ ಖಾನ್ ಸರ್ಕಾರ ಅಸಮರ್ಥ: ಪಾಕಿಸ್ತಾನ ಸುಪ್ರೀಂಕೋರ್ಟ್
ಪಾಕ್ ಕೈಹಿಡಿದ ಭಾರತ: ಆತ್ಮನಿರ್ಭರ್ ಕೊರೊನಾ ಲಸಿಕೆ ಇದೀಗ ಪಾಕಿಸ್ತಾನಕ್ಕೂ ಪೂರೈಕೆ!
Published On - 4:23 pm, Sat, 20 March 21