‘ದಿನವಿಡೀ ಪ್ರಾರ್ಥನೆ, ಮಹಿಳೆಯರಿಗೆ ಶೇಕ್​ಹ್ಯಾಂಡ್​ ಕೊಡಲೂ ನಿರಾಕರಣೆ’; ಧಾರ್ಮಿಕ ಉಗ್ರಗಾಮಿಯಾಗಿದ್ದ ಫ್ಲೈದುಬೈ ದಾಳಿಕೋರ ಪೈಲಟ್

ದುಬೈನಿಂದ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ಕ್ಯಾಪ್ಟನ್ ಮೇಲೆ ಭೀಕರ ಚಾಕು ದಾಳಿ ನಡೆಸಿ, 174ಕ್ಕೂ ಹೆಚ್ಚು ಪ್ರಯಾಣಿಕರಿದ್ದ ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದ ಓಮನ್ ಮೂಲದ ಕೋ-ಪೈಲಟ್ ಕುರಿತು ಆಘಾತಕಾರಿ ವಿವರಗಳು ಹೊರಬಿದ್ದಿವೆ. ಇಸ್ರೇಲಿ ಭದ್ರತಾ ಸಂಸ್ಥೆಗಳು ಮತ್ತು ಮಾಧ್ಯಮ ವರದಿಗಳ ಪ್ರಕಾರ, ಶಂಕಿತ ದಾಳಿಕೋರ ಕೋ-ಪೈಲಟ್‌‌ ‘ಧಾರ್ಮಿಕ ಮೂಲಭೂತವಾದಿ’ ಆಗಿದ್ದು, ಆತನ ತೀವ್ರಗಾಮಿ ನಡವಳಿಕೆಗಳ ಕುರಿತು ಹಲವು ಮಹತ್ವದ ಸಂಗತಿಗಳು ತನಿಖೆಯಲ್ಲಿ ಬೆಳಕಿಗೆ ಬಂದಿವೆ.

‘ದಿನವಿಡೀ ಪ್ರಾರ್ಥನೆ, ಮಹಿಳೆಯರಿಗೆ ಶೇಕ್​ಹ್ಯಾಂಡ್​ ಕೊಡಲೂ ನಿರಾಕರಣೆ’; ಧಾರ್ಮಿಕ ಉಗ್ರಗಾಮಿಯಾಗಿದ್ದ ಫ್ಲೈದುಬೈ ದಾಳಿಕೋರ ಪೈಲಟ್
ಫ್ಲೈದುಬೈ ವಿಮಾನ
Image Credit source: AP

Updated on: Oct 01, 2026 | 3:22 PM

ಟೆಲ್ ಅವೀವ್, ಅಕ್ಟೋಬರ್ 1: ಇಸ್ರೇಲ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನವನ್ನು ಆಕಾಶದಲ್ಲೇ ಪತನಗೊಳಿಸಲು ಯತ್ನಿಸಿದ್ದ ಓಮನ್ ಮೂಲದ ಕೋ-ಪೈಲಟ್ ಒಬ್ಬ ‘ಧಾರ್ಮಿಕ ಮೂಲಭೂತವಾದಿ’ ಆಗಿದ್ದ ಎಂದು ಆತನ ಜೊತೆ ಕಾರ್ಯನಿರ್ವಹಿಸುತ್ತಿದ್ದ ಸಹ-ಪೈಲಟ್ ಒಬ್ಬರು ಬಹಿರಂಗಪಡಿಸಿದ್ದಾರೆ. ಇಸ್ರೇಲ್‌ನ ನ್ಯೂಸ್ ಚಾನೆಲ್‌ನೊಂದಿಗೆ ಮಾತನಾಡಿದ ಮತ್ತೊಬ್ಬ ಪೈಲಟ್, ಓಮನ್ ಮೂಲದ ಪೈಲಟ್ ಕೇವಲ 8 ತಿಂಗಳ ಹಿಂದೆಯಷ್ಟೇ ಫ್ಲೈದುಬೈ ಸಂಸ್ಥೆಗೆ ಸೇರ್ಪಡೆಗೊಂಡಿದ್ದ. “ಆತ ದಿನವಿಡೀ ಅತಿಯಾಗಿ ಪ್ರಾರ್ಥನೆ ಮಾಡುತ್ತಿದ್ದ. ಮಹಿಳಾ ಸಿಬ್ಬಂದಿ ಅಥವಾ ಮಹಿಳೆಯರಿಗೆ ಶೇಕ್​ಹ್ಯಾಂಡ್ ನೀಡಲು ಸಂಪೂರ್ಣವಾಗಿ ನಿರಾಕರಿಸುತ್ತಿದ್ದ” ಎಂದು ತಿಳಿಸಿದ್ದಾರೆ.

27 ಮಕ್ಕಳು ಸೇರಿದಂತೆ ಒಟ್ಟು 174 ಪ್ರಯಾಣಿಕರಿದ್ದ ಈ ವಿಮಾನವು 34,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ ಕೇವಲ ಎರಡೇ ನಿಮಿಷಗಳಲ್ಲಿ 17,000ಕ್ಕೂ ಹೆಚ್ಚು ಅಡಿ ಕೆಳಕ್ಕೆ ದಿಢೀರ್ ಜಾರಿತ್ತು. ಇಸ್ರೇಲ್ ಮತ್ತು ದುಬೈ ಭದ್ರತಾ ಸಂಸ್ಥೆಗಳು ಇದನ್ನು ಸಂಭಾವ್ಯ ಭಯೋತ್ಪಾದನಾ ದಾಳಿ ಎಂದು ತನಿಖೆ ನಡೆಸುತ್ತಿದ್ದು, ದಾಳಿಕೋರನನ್ನು ಸೌದಿ ಅರೇಬಿಯಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದರ ನಡುವೆ, ಇಸ್ರೇಲ್ ಜೊತೆ ಯಾವುದೇ ರಾಜತಾಂತ್ರಿಕ ಸಂಬಂಧ ಹೊಂದಿರದ ಓಮನ್ ಮೂಲದ ಪ್ರಜೆಗೆ ಇಸ್ರೇಲ್‌ಗೆ ತೆರಳುವ ವಿಮಾನ ಚಲಾಯಿಸಲು ಅನುಮತಿ ನೀಡಿದ್ದು ಹೇಗೆ ಎಂಬ ಪ್ರಮುಖ ಪ್ರಶ್ನೆಗಳೂ ಎದ್ದಿವೆ.

ಇದನ್ನೂ ಓದಿ: ‘ಜಿಹಾದಿ ಭಯೋತ್ಪಾದನಾ ದಾಳಿ’; ಫ್ಲೈದುಬೈ ವಿಮಾನ ಪತನಗೊಳಿಸಲು ಕೋ-ಪೈಲಟ್ ಯತ್ನಿಸಿದ್ದ ಎಂದ ಇಸ್ರೇಲ್ ಪ್ರಧಾನಿ ನೆತನ್ಯಾಹು

ವಿಮಾನವು ಇಸ್ರೇಲ್ ಗಡಿಯತ್ತ ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ದಾಳಿಕೋರ ಕೋ-ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಮೇಲೆ ಚಾಕುವಿನಿಂದ ದಾಳಿ ನಡೆಸಿ, ವಿಮಾನದ ನಿಯಂತ್ರಣ ವ್ಯವಸ್ಥೆಯನ್ನು ಹಾನಿಗೊಳಿಸಲು ಯತ್ನಿಸಿದನು. ಇದರಿಂದಾಗಿ ವಿಮಾನವು ಭೀಕರವಾಗಿ ಕೆಳಕ್ಕೆ ಜಾರತೊಡಗಿತು. ತೀವ್ರವಾಗಿ ಗಾಯಗೊಂಡು ರಕ್ತಸ್ರಾವವಾಗುತ್ತಿದ್ದರೂ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಧೈರ್ಯ ಕಳೆದುಕೊಳ್ಳದೆ ಕಾಕ್‌ಪಿಟ್ ಬಾಗಿಲನ್ನು ತೆರೆದು ದಾಳಿಕೋರನನ್ನು ತಡೆದು ನಿಲ್ಲಿಸಿದರು. ಇದರಿಂದಾಗಿ ಪ್ರಯಾಣಿಕರು ಒಳಗೆ ಬಂದು ದಾಳಿಕೋರನನ್ನು ಕಟ್ಟಿಹಾಕಲು ಸಾಧ್ಯವಾಯಿತು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಭಾರತದ ನಾಗರಿಕ ವಿಮಾನಯಾನ ಸಚಿವಾಲಯವು 174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಅವರ ಅಸಾಧಾರಣ ಸಾಹಸವನ್ನು ಮುಕ್ತಕಂಠದಿಂದ ಶ್ಲಾಘಿಸಿವೆ.

ದಾಳಿಕೋರ ಪೈಲಟ್ ಉಗ್ರ ತೀವ್ರಗಾಮಿ ಸಿದ್ಧಾಂತಗಳಿಗೆ ಒಳಪಟ್ಟಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆತ ವಿಮಾನಯಾನ ಸಂಸ್ಥೆಯ ಮಹಿಳಾ ಉದ್ಯೋಗಿಗಳು ಅಥವಾ ಮಹಿಳಾ ಸಿಬ್ಬಂದಿಯೊಂದಿಗೆ ಹಸ್ತಲಾಘವ ಮಾಡಲು ಮತ್ತು ಮಾತನಾಡಲು ಸಂಪೂರ್ಣವಾಗಿ ನಿರಾಕರಿಸುತ್ತಿದ್ದ. ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಟ್ಜ್ ಪ್ರಕಾರ, ಈ ದಾಳಿಯು ಪಕ್ಕಾ ‘ಜಿಹಾದಿ ಭಯೋತ್ಪಾದನಾ ದಾಳಿ’ಯಾಗಿದ್ದು, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಕೊಲ್ಲುವ ಉದ್ದೇಶದಿಂದಲೇ ಆತ ಈ ಯೋಜಿತ ಸಂಚು ರೂಪಿಸಿದ್ದ.

ಇದನ್ನೂ ಓದಿ: ಫ್ಲೈದುಬೈ ಹೈಡ್ರಾಮಾ; ಇರಿತಕ್ಕೊಳಗಾದರೂ 180 ಪ್ರಯಾಣಿಕರ ಪ್ರಾಣ ಉಳಿಸಿದ ಹೀರೋ ಭಾರತೀಯ ಪೈಲಟ್

ಕಾಕ್‌ಪಿಟ್‌ನಲ್ಲಿ ಕೋ-ಪೈಲಟ್ ಚಾಕುವಿನಿಂದ ದಾಳಿ ನಡೆಸಿದಾಗ ಭಾರತೀಯ ಮೂಲದ ಕ್ಯಾಪ್ಟನ್ ಜೀವದ ಹಿತ ಲೆಕ್ಕಿಸದೆ ಆತನ ವಿರುದ್ಧ ಹೋರಾಡಿದರು. ಬಾಗಿಲು ತೆರೆದಾಗ ರಕ್ತದ ಮಡುವಿನ ದೃಶ್ಯ ಕಂಡು ಧೈರ್ಯದಿಂದ ಕಾಕ್‌ಪಿಟ್‌ಗೆ ನುಗ್ಗಿದ ಇಸ್ರೇಲಿ ಪ್ರಯಾಣಿಕರು ಮತ್ತು ವಿಮಾನದಲ್ಲಿದ್ದ ‘ರಿಲೀಫ್ ಪೈಲಟ್’ ದಾಳಿಕೋರನನ್ನು ಕಟ್ಟಿಹಾಕಲು ನೆರವಾದರು.

ವಿಮಾನದಲ್ಲಿದ್ದ ಇನ್ನೊಬ್ಬ ಭಾರತೀಯ ಪೈಲಟ್ ವಿಮಾನವನ್ನು ಹತೋಟಿಗೆ ತಂದಾಗ ಅವರಿಗೆ ಆ ಕೋ-ಪೈಲಟ್ ಚಾಕುವಿನಿಂದ ಇರಿದರು. ಇರಿತಕ್ಕೊಳಗಾದರೂ ಕ್ಯಾಬಿನ್ ಡೋರ್ ತೆಗೆದು, ಪ್ರಯಾಣಿಕರು ಒಳಗೆ ಬರಲು ಅನುಕೂಲ ಮಾಡಿಕೊಟ್ಟ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಎಲ್ಲ ಪ್ರಯಾಣಿಕರ ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಸೌದಿ ಅರೇಬಿಯಾದ ತಬುಕ್ ವಿಮಾನ ನಿಲುವಾಣದಲ್ಲಿ ಸುರಕ್ಷಿತವಾಗಿ ಇಳಿಸಿದರು. ಗಾಯಗೊಂಡ ಕ್ಯಾಪ್ಟನ್ ಮಚ್ಛಾರ್ ಸೌದಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸೌದಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

 

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us