ಶೇಖ್ ಹಸೀನಾರ ಕಾರ್ಯಕ್ರಮದಲ್ಲಿ ಭಾಗಿ: ಬಾಂಗ್ಲಾ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಶೇಖ್ ಹಸೀನಾ ಅವರೊಂದಿಗಿನ ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ ಕೆಲವೇ ಗಂಟೆಗಳಲ್ಲಿ ಬಾಂಗ್ಲಾ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಅವರ ಮಗುರಾ ನಿವಾಸದ ಮೇಲೆ ದಾಳಿ ನಡೆದಿದೆ. ದುಷ್ಕರ್ಮಿಗಳು ಮನೆಯ ಮೇಲೆ ಇಟ್ಟಿಗೆಗಳನ್ನು ಎಸೆದು ಪೆಟ್ರೋಲ್ ಬಾಂಬ್‌ನಂತಹ ವಸ್ತುವನ್ನು ಎಸೆದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ನೆರೆಹೊರೆಯವರು ಬೆಂಕಿ ನಂದಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಇದು ಬಾಂಗ್ಲಾದೇಶದ ಪ್ರಸ್ತುತ ರಾಜಕೀಯ ಅಶಾಂತಿಯ ಭಾಗವಾಗಿ ನಡೆದಿದೆ.

ಶೇಖ್ ಹಸೀನಾರ ಕಾರ್ಯಕ್ರಮದಲ್ಲಿ ಭಾಗಿ: ಬಾಂಗ್ಲಾ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಶಕೀಬ್

Updated on: Aug 06, 2026 | 8:03 AM

ಢಾಕಾ, ಆಗಸ್ಟ್ 06: ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಅವಾಮಿ ಲೀಗ್ ಪಕ್ಷದ ಮಾಜಿ ಸಂಸದ ಶಕೀಬ್ ಅಲ್ ಹಸನ್ ಅವರ ಮಗುರಾದಲ್ಲಿರುವ ನಿವಾಸದ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿ, ಬೆಂಕಿ ಹಚ್ಚಲು ಯತ್ನಿಸಿರುವ ಭೀಕರ ಘಟನೆ ಸಂಭವಿಸಿದೆ. ದೆಹಲಿಯ ‘ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್ ಆಫ್ ಸೌತ್ ಏಷ್ಯಾ’ ಆಯೋಜಿಸಿದ್ದ ಸಭೆಯಲ್ಲಿ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಶಕೀಬ್ ವರ್ಚುವಲ್ (ಆನ್‌ಲೈನ್) ಮೂಲಕ ಕಾಣಿಸಿಕೊಂಡ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿದೆ.

ಬುಧವಾರ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳು ಶಕೀಬ್ ಅವರ ಮನೆಯ ಕಿಟಕಿಗಳ ಮೇಲೆ ಇಟ್ಟಿಗೆಗಳನ್ನು ಎಸೆದು, ದಕ್ಷಿಣ ಭಾಗದ ಪ್ರಧಾನ ಗೇಟ್‌ನ ಮೇಲೆ ಪೆಟ್ರೋಲ್ ಬಾಂಬ್‌ನಂತಹ ವಸ್ತುವನ್ನು ಎಸೆದು ಬೆಂಕಿ ಹಚ್ಚಿದ್ದಾರೆ. ಬೆಂಕಿಯ ಜ್ವಾಲೆಗಳನ್ನು ಕಂಡ ತಕ್ಷಣ ನೆರೆಹೊರೆಯವರು ಧಾವಿಸಿ ಬೆಂಕಿಯನ್ನು ನಂದಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಘಟನೆಯ ಸಮಯದಲ್ಲಿ ಮನೆಯೊಳಗೆ ಯಾರೂ ಇರಲಿಲ್ಲ ಎಂದು ಮಗುರಾ ಸದರ್ ಪೊಲೀಸ್ ಠಾಣೆಯ ಉಸ್ತುವಾರಿ ಎಂಡಿ ಅಬ್ದುಲ್ಲಾ ಅಲ್ ಮಾಮುನ್ ತಿಳಿಸಿದ್ದಾರೆ.

ಈ ದಾಳಿಯನ್ನು ಕಟುವಾಗಿ ಖಂಡಿಸಿರುವ ‘ಅವಾಮಿ ಲೀಗ್’, ಪ್ರಜಾಪ್ರಭುತ್ವದ ಹೆಸರಿನಲ್ಲಿ ವಿರೋಧಿಗಳ ವಿರುದ್ಧ ನರಮೇಧ ನಡೆಸಲಾಗುತ್ತಿದೆ. ಶೇಖ್ ಹಸೀನಾ ಅವರೊಂದಿಗೆ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ್ದಕ್ಕಾಗಿ ವಿಶ್ವಪ್ರಸಿದ್ಧ ಕ್ರಿಕೆಟಿಗನ ಮನೆಗೆ ಪೆಟ್ರೋಲ್ ಬಾಂಬ್ ಹಾಕಲಾಗಿದೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.

ಮತ್ತಷ್ಟು ಓದಿ:‘ನನ್ನನ್ನು ಕೊಲ್ಲಬಹುದು, ಜೈಲಿಗೆ ಹಾಕಬಹುದು, ಆದರೂ ಬಾಂಗ್ಲಾದೇಶಕ್ಕೆ ಹೋಗುತ್ತೇನೆ’; ಶೇಖ್ ಹಸೀನಾ ಶಪಥ

2024ರ ಆಗಸ್ಟ್‌ನಲ್ಲಿ ಶೇಖ್ ಹಸೀನಾ ಸರ್ಕಾರ ಪತನಗೊಂಡ ನಂತರ ಶಕೀಬ್ ಅಲ್ ಹಸನ್ ಬಾಂಗ್ಲಾದೇಶದಿಂದ ಹೊರಗಿದ್ದಾರೆ. 2024 ರ ರಾಜಕೀಯ ಅಶಾಂತಿಯ ಸಮಯದಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಅವರ ವಿರುದ್ಧವೂ ಎಫ್‌ಐಆರ್ (FIR) ದಾಖಲಾಗಿದೆ. ಶಕೀಬ್ ಮಗುರಾ-1 ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಕಾನೂನು ಪ್ರಕ್ರಿಯೆಯನ್ನು ಎದುರಿಸಲು ದೇಶಕ್ಕೆ ಮರಳಲು ಸಿದ್ಧರಿದ್ದರೂ, ಅಲ್ಲಿನ ಸರ್ಕಾರ ತಮಗೆ ವೈಯಕ್ತಿಕ ಸುರಕ್ಷತೆಯ ಭರವಸೆ ನೀಡಬೇಕೆಂದು ಅವರು ಮನವಿ ಮಾಡಿದ್ದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:03 am, Thu, 6 August 26

Loading...
Unable to load recommendations.
Follow Us