
ಲಂಡನ್, ನವೆಂಬರ್ 09: ಲಂಡನ್‌ನ ಪ್ರಾಥಮಿಕ ಶಾಲೆಯೊಂದು ತಿಲಕ ಧರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಆರೋಪಿಸಿ, 9 ವರ್ಷದ ಬ್ರಿಟಿಷ್ ಹಿಂದೂ ಬಾಲಕನ ಪೋಷಕರು ಯುಕೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸ್ವಾಮಿನಾರಾಯಣ ಧಾರ್ಮಿಕ ಸಂಪ್ರದಾಯವನ್ನು ಪಾಲಿಸುವ ಈ ಬಾಲಕ 2021ರಿಂದ ಪಶ್ಚಿಮ ಲಂಡನ್‌ನ ವಿಕರ್ಸ್ ಗ್ರೀನ್ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ತಿಲಕವನ್ನು ಬಾಲಕ ಹಲವು ವರ್ಷಗಳಿಂದ ಶಾಲೆಗೆ ಧರಿಸಿಕೊಂಡು ಹೋಗುತ್ತಿದ್ದರೂ ಯಾವುದೇ ಆಕ್ಷೇಪ ವ್ಯಕ್ತವಾಗಿರಲಿಲ್ಲ. ಆದರೆ, 2025ರ ಕೊನೆಯಲ್ಲಿ ಶಾಲೆಯು ಈ ಧಾರ್ಮಿಕ ಆಚರಣೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಇದರಿಂದ ವಿವಾದ ಉಂಟಾಗಿದ್ದು, ಕೊನೆಗೆ ಪೋಷಕರು ತಮ್ಮ ಮಗನನ್ನು ಶಾಲೆಯಿಂದ ಬಿಡಿಸಿ ಕಾನೂನು ಹೋರಾಟ ಆರಂಭಿಸಿದ್ದಾರೆ.
ನಮ್ಮ ಮಗ ಸಾಮಾನ್ಯ ಬಾಲಕನಾಗಿದ್ದು, ಕಲಿಯುವುದರಲ್ಲಿ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವುದರಲ್ಲಿ ಆಸಕ್ತಿ ಹೊಂದಿದ್ದ. ಆತ ಹಣೆಯ ಮೇಲೆ ಧರಿಸುತ್ತಿದ್ದ ಧಾರ್ಮಿಕ ಗುರುತಿನಿಂದ ಯಾರಿಗೂ ತೊಂದರೆಯಾಗುತ್ತಿರಲಿಲ್ಲ ಅಥವಾ ಉತ್ತಮ ವಿದ್ಯಾರ್ಥಿಯಾಗಲು ಯಾವುದೇ ಅಡ್ಡಿಯಾಗುತ್ತಿರಲಿಲ್ಲ ಧಾರ್ಮಿಕ ನಂಬಿಕೆಯನ್ನು ಪಾಲಿಸಲು ಬಯಸಿದ್ದಕ್ಕಾಗಿ ಮಗ ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವುದನ್ನು ನೋಡುವುದು ಪೋಷಕರಾಗಿ ನಮಗೆ ತುಂಬಾ ನೋವು ತಂದಿದೆ ಎಂದು ಪೋಷಕರು ತಿಳಿಸಿದ್ದಾರೆ. ನಾವು ನಮ್ಮ ಮಕ್ಕಳಿಗೆ ಎಲ್ಲ ಧರ್ಮಗಳನ್ನು ಗೌರವಿಸುವಂತೆ ಕಲಿಸಿದ್ದೇವೆ. ಅದೇ ರೀತಿಯ ಗೌರವವನ್ನು ನಮ್ಮ ಧರ್ಮಕ್ಕೂ ನೀಡಬೇಕೆಂದು ನಾವು ಬಯಸುತ್ತೇವೆ. ಶಿಕ್ಷಣ ಮತ್ತು ಧಾರ್ಮಿಕ ನಂಬಿಕೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಪರಿಸ್ಥಿತಿ ಬೇರೆ ಯಾವುದೇ ಮಗುವಿಗೆ ಬರಬಾರದು ಎಂಬುದು ನಮ್ಮ ಆಶಯ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ‘ಎಲ್ಲಾ ಡಾಟ್ ಹೆಡ್ಗಳನ್ನು ದೇಶಬಿಟ್ಟು ಕಳುಹಿಸಿ’: ಅಮೆರಿಕದಲ್ಲಿ ದೀಪಾವಳಿ ಆಚರಿಸುತ್ತಿದ್ದ ಹಿಂದೂಗಳ ವಿರುದ್ಧ ಘೋಷಣೆ
ಈ ಪ್ರಕರಣದಲ್ಲಿ ಕುಟುಂಬವು ಇಂಗ್ಲೆಂಡ್ ಮತ್ತು ವೇಲ್ಸ್‌ನ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, 25,000 ಪೌಂಡ್ (ಸುಮಾರು 30 ಲಕ್ಷ ರೂಪಾಯಿ) ಪರಿಹಾರ ಕೋರಿದೆ. ಪ್ರಕರಣದ ವಿಚಾರಣೆ ಮುಂದುವರಿದಿದ್ದು, ಎರಡೂ ಕಡೆಯ ಆರೋಪ-ಪ್ರತ್ಯಾರೋಪಗಳು ಇನ್ನೂ ನ್ಯಾಯಾಲಯದ ಪರಿಶೀಲನೆಯಲ್ಲಿವೆ. ಈ ಪ್ರಕರಣ ಕೇವಲ ಒಬ್ಬ ಬಾಲಕ ಅಥವಾ ಒಂದು ಶಾಲೆಗೆ ಸಂಬಂಧಿಸಿದ್ದಲ್ಲ. ಬ್ರಿಟನ್‌ನ ಶಿಕ್ಷಣ ವ್ಯವಸ್ಥೆಯಲ್ಲಿ ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಮಾನತೆಯ ಕುರಿತಾದ ಪ್ರಮುಖ ಪ್ರಶ್ನೆಗಳನ್ನು ಇದು ಎತ್ತುತ್ತದೆ ಎಂದು ಬಾಲಕನ ಪರ ವಕೀಲರು ಹೇಳಿದ್ದಾರೆ.
ಧಾರ್ಮಿಕ ಗುರುತಿನ ಬಗ್ಗೆ ಶಾಲೆಯು ಆಕ್ಷೇಪ ವ್ಯಕ್ತಪಡಿಸಿದ ನಂತರ, ಸಿಬ್ಬಂದಿ ಬಾಲಕನ ಧಾರ್ಮಿಕ ಆಚರಣೆಗಳ ಕುರಿತು ಪದೇಪದೇ ಪ್ರಶ್ನಿಸಿದ್ದರು. ಅಲ್ಲದೆ, ಶಾಲೆಯ ಕೆಲವು ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೂ ನಿರ್ಬಂಧ ವಿಧಿಸಿದ್ದರು ಎಂದು ಕುಟುಂಬ ಆರೋಪಿಸಿದೆ. ಆದರೆ, ತಾರತಮ್ಯದ ಆರೋಪಗಳನ್ನು ಶಾಲೆಯು ನಿರಾಕರಿಸಿದೆ. ಕುಟುಂಬದ ಧಾರ್ಮಿಕ ನಂಬಿಕೆಗಳನ್ನು ಸೂಕ್ಷ್ಮವಾಗಿ ಪರಿಗಣಿಸಿದ್ದು, ಪರ್ಯಾಯ ವ್ಯವಸ್ಥೆಗಳನ್ನೂ ನೀಡಲಾಗಿತ್ತು. ಆದರೆ, ಪೋಷಕರು ಅವುಗಳನ್ನು ಒಪ್ಪಿಕೊಳ್ಳಲಿಲ್ಲ ಎಂದು ಶಾಲೆ ಸ್ಪಷ್ಟಪಡಿಸಿದೆ. ವಿಕರ್ಸ್ ಗ್ರೀನ್ ಪ್ರಾಥಮಿಕ ಶಾಲೆಯು ತನ್ನ ಸಮುದಾಯದ ವೈವಿಧ್ಯಮಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿನ್ನೆಲೆಗಳನ್ನು ಗೌರವಿಸುವುದಾಗಿ ಹೇಳಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:24 am, Mon, 9 November 26