ಚೀನಾ-ಪಾಕಿಸ್ತಾನದ ಮೂಲಕ ಇರಾನ್‌ಗೆ 400 ರಾಕೆಟ್ ಲಾಂಚರ್ ರವಾನೆ ಶಂಕೆ: ಅಮೆರಿಕ ಅಧ್ಯಕ್ಷ ಟ್ರಂಪ್ ಆತಂಕ

ಚೀನಾ ಪಾಕಿಸ್ತಾನದ ಮೂಲಕ ಇರಾನ್‌ಗೆ 400 ರಾಕೆಟ್ ಲಾಂಚರ್‌ಗಳನ್ನು ಪೂರೈಸಿದೆ ಎಂಬ ವರದಿಗಳು ಜಾಗತಿಕ ಸಂಚಲನ ಸೃಷ್ಟಿಸಿವೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಆತಂಕ ವ್ಯಕ್ತಪಡಿಸಿದ್ದು, ಇದು ನಿಜವಾದರೆ ನನಗೆ ನಿರಾಶೆಯಾಗಲಿದೆ ಎಂದಿದ್ದಾರೆ. ಇರಾನ್-ಅಮೆರಿಕ ಉದ್ವಿಗ್ನತೆ ಹೆಚ್ಚಿರುವಾಗ ಈ ವರದಿಗಳು ಪ್ರಾದೇಶಿಕ ಯುದ್ಧದ ಭೀತಿ ಮೂಡಿಸಿವೆ. ಯಾವುದೇ ಅಧಿಕೃತ ದೃಢೀಕರಣ ಲಭ್ಯವಿಲ್ಲ

ಚೀನಾ-ಪಾಕಿಸ್ತಾನದ ಮೂಲಕ ಇರಾನ್‌ಗೆ 400 ರಾಕೆಟ್ ಲಾಂಚರ್ ರವಾನೆ ಶಂಕೆ: ಅಮೆರಿಕ ಅಧ್ಯಕ್ಷ ಟ್ರಂಪ್ ಆತಂಕ
ಡೊನಾಲ್ಡ್​ ಟ್ರಂಪ್

Updated on: Jul 30, 2026 | 10:07 AM

ವಾಷಿಂಗ್ಟನ್, ಜುಲೈ 30: ಮಧ್ಯಪ್ರಾಚ್ಯದಲ್ಲಿ ಇರಾನ್(Iran) ಮತ್ತು ಅಮೆರಿಕ ನಡುವೆ ಭೌಗೋಳಿಕ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ, ಚೀನಾವು ಪಾಕಿಸ್ತಾನದ ಮಾರ್ಗವಾಗಿ ಇರಾನ್‌ಗೆ 400 ರಾಕೆಟ್ ಲಾಂಚರ್‌ಗಳನ್ನು ಪೂರೈಸಿದೆ ಎಂಬ ವರದಿಗಳು ಜಾಗತಿಕ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿವೆ.ವರದಿಗಳು ದೃಢಪಟ್ಟರೆ, ಅಮೆರಿಕ-ಇರಾನ್ ಸಂಘರ್ಷದಲ್ಲಿ ಚೀನಾದ ನೇರ ಹಸ್ತಕ್ಷೇಪ ಬಯಲಾಗಲಿದ್ದು, ಇದು ಪ್ರಾದೇಶಿಕ ಯುದ್ಧವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಆತಂಕ ಮೂಡಿಸಿದೆ.

ಶ್ವೇತಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಸುದ್ದಿಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.”ಈ ಸುದ್ದಿ ನಿಜವಾಗಿದ್ದರೆ ಅದು ನನಗೆ ಆಶ್ಚರ್ಯ ತರಲಿದೆ. ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಇಂತಹ ಯಾವುದೇ ಸಂಘರ್ಷದಲ್ಲಿ ಭಾಗಿಯಾಗುವುದಿಲ್ಲ ಎಂದು ನನಗೆ ಬಲವಾದ ಭರವಸೆ ನೀಡಿದ್ದರು. ಅವರು ಈ ಕೆಲಸ ಮಾಡಿದ್ದರೆ ನನಗೆ ತೀವ್ರ ನಿರಾಶೆಯಾಗಲಿದೆ” ಎಂದು ಟ್ರಂಪ್ ಹೇಳಿದರು.

400 ರಾಕೆಟ್ ಲಾಂಚರ್‌ಗಳನ್ನು ಕಳುಹಿಸಲಾಗಿದೆ ಎಂಬುದಕ್ಕೆ ಇನ್ನು ಯಾವುದೇ ಸ್ವತಂತ್ರ ಹಾಗೂ ಅಧಿಕೃತ ಮಿಲಿಟರಿ ಆಧಾರಗಳು ಲಭ್ಯವಾಗಿಲ್ಲ. ಚೀನಾ ಮತ್ತು ಪಾಕಿಸ್ತಾನ ಸರ್ಕಾರಗಳು ಈ ವರದಿಗಳನ್ನು ದೃಢೀಕರಿಸಿಲ್ಲ. ಮಧ್ಯಪ್ರಾಚ್ಯ ಬಿಕ್ಕಟ್ಟಿನ ಜೊತೆಗೆ, ಜಾಗತಿಕ ಮಟ್ಟದಲ್ಲಿ ಅಮೆರಿಕ ಮತ್ತು ಚೀನಾ ನಡುವೆ ನಡೆಯುತ್ತಿರುವ ಕೃತಕ ಬುದ್ಧಿಮತ್ತೆಯ (AI) ತಾಂತ್ರಿಕ ಸ್ಪರ್ಧೆಯ ಕುರಿತೂ ಟ್ರಂಪ್ ಮಾತನಾಡಿದರು.

ಮತ್ತಷ್ಟು ಓದಿ: ಮಾತುಕತೆ ವಿಫಲವಾದರೆ ಇರಾನ್ ವಿರುದ್ಧ ಮತ್ತೆ ಕಠಿಣ ಮಿಲಿಟರಿ ದಾಳಿ, ಇರಾನ್​ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ

ಎಐ ರೇಸ್‌ನಲ್ಲಿ ಅಮೆರಿಕವು ಚೀನಾಕ್ಕಿಂತ ಬಹಳಷ್ಟು ಮುಂದಿದೆ. ಎಐ ತಂತ್ರಜ್ಞಾನದಲ್ಲಿ ಯಾರು ಗೆಲ್ಲುತ್ತಾರೋ ಅವರೇ ಜಗತ್ತನ್ನು ಆಳುತ್ತಾರೆ ಎಂದು ಅವರು ಪ್ರತಿಪಾದಿಸಿದರು. “ನಮ್ಮ ವಿಜ್ಞಾನಿಗಳು ಮತ್ತು ನಾವೀನ್ಯಕಾರರು ಉನ್ನತ ಮಟ್ಟದ ಕೆಲಸ ಮಾಡುತ್ತಿದ್ದಾರೆ. ಚೀನಾ ಹಿನ್ನಡೆ ಅನುಭವಿಸಲು ಬಿಡದಂತೆ, ದೇಶದಲ್ಲಿ ಎಐ ಅಭಿವೃದ್ಧಿಗೆ ಅತಿಯಾದ ನಿಯಂತ್ರಣ ಅಥವಾ ನಿರ್ಬಂಧಗಳನ್ನು ನಾವು ವಿಧಿಸುವುದಿಲ್ಲ” ಎಂದು ಟ್ರಂಪ್ ಸ್ಪಷ್ಟಪಡಿಸಿದರು.

ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳು ಹಾಗೂ ಅಮೆರಿಕದ ಮಿಲಿಟರಿ ಪಡೆಗಳ ನಡುವೆ ನಿರಂತರ ದಾಳಿಗಳು ನಡೆಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಶಸ್ತ್ರಾಸ್ತ್ರ ಸರಬರಾಜು ವರದಿಗಳು ರಾಜತಾಂತ್ರಿಕ ಬಿಕ್ಕಟ್ಟನ್ನು ಹೆಚ್ಚಿಸಿವೆ. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಮತ್ತು ಇರಾನ್ ಜೊತೆಗಿನ ಚೀನಾದ 25 ವರ್ಷಗಳ ಕಾರ್ಯತಂತ್ರದ ಒಪ್ಪಂದವು ಈ ಮೂರು ದೇಶಗಳ ನಡುವಿನ ಮಿಲಿಟರಿ ಹಾಗೂ ಆರ್ಥಿಕ ನಂಟು ಗಟ್ಟಿಯಾಗಿರುವುದನ್ನು ತೋರಿಸುತ್ತದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Loading...
Unable to load recommendations.
Follow Us