ಸಂಘರ್ಷದ ಹಾದಿಯಲ್ಲಿ ಬಲಿಷ್ಠ ರಾಷ್ಟ್ರಗಳು: ಇರಾನ್ ಹಠಕ್ಕೆ ಅಮೆರಿಕ ಕೆಂಡಾಮಂಡಲ, ಟ್ರಂಪ್‌ನಿಂದ ಖಡಕ್ ವಾರ್ನಿಂಗ್

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚಿದ್ದು, ಶಾಂತಿ ಮಾತುಕತೆಗಳು ವಿಫಲವಾಗಿವೆ. ಡೊನಾಲ್ಡ್ ಟ್ರಂಪ್ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದು, ಪರಮಾಣು ಕಾರ್ಯಕ್ರಮ ನಿಷ್ಕ್ರಿಯಗೊಳಿಸುವಂತೆ ಒತ್ತಾಯಿಸಿದ್ದಾರೆ. ಇರಾನ್ ಈ ಬೆದರಿಕೆಗಳಿಗೆ ಬಗ್ಗದೆ, ಪ್ರಬಲ ಪ್ರತಿಕ್ರಿಯೆಗೆ ಸಿದ್ಧವಾಗಿದೆ ಎಂದು ಹೇಳಿದೆ. ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧ ಭೀತಿ ಸೃಷ್ಟಿಯಾಗಿದೆ.

ಸಂಘರ್ಷದ ಹಾದಿಯಲ್ಲಿ ಬಲಿಷ್ಠ ರಾಷ್ಟ್ರಗಳು: ಇರಾನ್ ಹಠಕ್ಕೆ ಅಮೆರಿಕ ಕೆಂಡಾಮಂಡಲ, ಟ್ರಂಪ್‌ನಿಂದ ಖಡಕ್ ವಾರ್ನಿಂಗ್
ಡೊನಾಲ್ಡ್​ ಟ್ರಂಪ್
Image Credit source: PTI

Updated on: Apr 21, 2026 | 7:17 AM

ವಾಷಿಂಗ್ಟನ್, ಏಪ್ರಿಲ್ 21: ವಿಶ್ವದ ಎರಡು ಪ್ರಬಲ ರಾಷ್ಟ್ರಗಳಾದ ಅಮೆರಿಕ ಹಾಗೂ ಇರಾನ್(Iran) ನಡುವಿನ ಬಿಕ್ಕಟ್ಟು ಈಗ ಸ್ಫೋಟಕ ಹಂತಕ್ಕೆ ತಲುಪಿದೆ. ಇಸ್ಲಾಬಾದ್​ನಲ್ಲಿ ನಡೆಯಬೇಕಿದ್ದ ಎರಡನೇ ಸುತ್ತಿನ ಶಾಂತಿ ಮಾತುಕತೆಗಳ ಮೇಲೆ ಕಾರ್ಮೋಡ ಕವಿದಿದ್ದು, ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧ ಭೀತಿ ಎದುರಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಎಂದಿನ ಆಕ್ರಮಣಕಾರಿ ಶೈಲಿಯಲ್ಲೇ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.

ಸಂಘರ್ಷ ಕೊನೆಗೊಳಿಸಲು ನಮಗೇನು ಅವಸರವಿಲ್ಲ ಎಂದು ಹೇಳುವ ಮೂಲಕ ಅವರು ಇರಾನ್ ಮೇಲೆ ಒತ್ತಡ ಹೇರಿದ್ದಾರೆ. ಬುಧವಾರಕ್ಕೆ 14 ದಿನಗಳ ಕದನ ವಿರಾಮ ಅಂತ್ಯಗೊಳ್ಳಲಿದ್ದು, ಅದನ್ನು ವಿಸ್ತರಿಸುವ ಸಾಧ್ಯತೆ ತೀರಾ ಕಡಿಮೆ ಎಂದು ಟ್ರಂಪ್ ಬ್ಲೂಮ್‌ಬರ್ಗ್‌ಗೆ ತಿಳಿಸಿದ್ದಾರೆ.

ಒಂದು ವೇಳೆ ಇರಾನ್ ಮಾತುಕತೆಗೆ ಬರದಿದ್ದರೆ ಮಿಲಿಟರಿ ಶಕ್ತಿ ಬಳಕೆಯೂ ಸೇರಿದಂತೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದು ಟ್ರಂಪ್ ಅವರ ಖಡಕ್ ಸಂದೇಶ. ವಿಶೇಷವೆಂದರೆ, ಕೇವಲ ತಾತ್ಕಾಲಿಕ ಕದನ ವಿರಾಮ ತಮ್ಮ ಗುರಿಯಲ್ಲ, ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ಕಿತ್ತುಹಾಕುವುದೇ ತಮ್ಮ ಉದ್ದೇಶ ಎಂದು ಅವರು ನ್ಯೂಯಾರ್ಕ್ ಪೋಸ್ಟ್‌ಗೆ ನೀಡಿದ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ಓದಿ: ಅಮೆರಿಕದಿಂದಾಗಿ ಮತ್ತೆ ಹಾರ್ಮುಜ್ ಜಲಸಂಧಿ ಮುಚ್ಚಿದ ಇರಾನ್

ವಾಷಿಂಗ್ಟನ್‌ನ ಈ ಬೆದರಿಕೆ ತಂತ್ರಗಳಿಗೆ ಇರಾನ್ ಬಗ್ಗುವಂತೆ ಕಾಣುತ್ತಿಲ್ಲ. ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಖಲೀಬಾಫ್ ಅವರು ಅಮೆರಿಕದ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. ನಮ್ಮನ್ನು ಶರಣಾಗುವಂತೆ ಮಾಡಲು ಅಮೆರಿಕ ಪ್ರಯತ್ನಿಸುತ್ತಿದೆ. ಆದರೆ ಒತ್ತಡ ಮತ್ತು ಬೆದರಿಕೆಯ ನೆರಳಿನಲ್ಲಿ ನಾವು ಯಾವುದೇ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ಅವರು ಗುಡುಗಿದ್ದಾರೆ. ಅಗತ್ಯವಿದ್ದರೆ ಹೊಸ ಯುದ್ಧತಂತ್ರಗಳೊಂದಿಗೆ ಪ್ರತಿಕ್ರಿಯಿಸಲು ಸಿದ್ಧ ಎಂದು ಇರಾನ್ ಎಚ್ಚರಿಸಿದೆ.

ಏಪ್ರಿಲ್ 11 ಮತ್ತು 12 ರಂದು ಇಸ್ಲಾಮಾಬಾದ್‌ನಲ್ಲಿ ನಡೆದ ಮೊದಲ ಸುತ್ತಿನ ಮಾತುಕತೆಗಳು ಯಾವುದೇ ಫಲ ನೀಡದೆ ಅಂತ್ಯಗೊಂಡಿದ್ದವು. ಈಗ ಎರಡನೇ ಸುತ್ತಿಗೆ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನೇತೃತ್ವದ ನಿಯೋಗವನ್ನು ಕಳುಹಿಸಲು ಟ್ರಂಪ್ ಸಿದ್ಧತೆ ನಡೆಸುತ್ತಿದ್ದಾರೆ. ಇತ್ತ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ, ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

ಒಪ್ಪಂದಕ್ಕೆ ಬರುವವರೆಗೆ ಇರಾನ್ ಬಂದರುಗಳ ಮೇಲಿನ ನಿರ್ಬಂಧ ಮುಂದುವರೆಯಲಿದೆ, ಬುಧವಾರದ ಗಡುವು ಮುಗಿದ ನಂತರ ಪರಿಸ್ಥಿತಿ ಯಾವ ದಿಕ್ಕಿಗೆ ತಿರುಗಲಿದೆ ಎಂಬುದು ನಿಗೂಢ, ಇರಾನ್‌ನ ಪರಮಾಣು ಸ್ಥಾವರಗಳನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುವುದು ಟ್ರಂಪ್‌ರ ಪ್ರಮುಖ ಅಜೆಂಡಾ. ಒಟ್ಟಾರೆಯಾಗಿ, ಇಸ್ಲಾಮಾಬಾದ್‌ನ ಶಾಂತಿ ಮಾತುಕತೆಗಳು ಈಗ ಜಾಗತಿಕ ಮಟ್ಟದ ಹಗ್ಗಜಗ್ಗಾಟವಾಗಿ ಮಾರ್ಪಟ್ಟಿವೆ. ಟ್ರಂಪ್‌ರ ಕಠಿಣ ನಿಲುವು ಮತ್ತು ಇರಾನ್‌ನ ಪ್ರತಿರೋಧದ ನಡುವೆ ಶಾಂತಿ ಮರೀಚಿಕೆಯಾಗುತ್ತಿದೆಯೇ ಎಂಬ ಆತಂಕ ಜಗತ್ತನ್ನು ಕಾಡುತ್ತಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us