ಕೊರೊನಾ ಮಹಾಮಾರಿಯ ಆರ್ಭಟಕ್ಕೆ ಜಗತ್ತಿನಾದ್ಯಂತ ಸಾಕಷ್ಟು ಸಾವು ನೋವುಗಳು ಸಂಭವಿಸಿದೆ. ಅದರಲ್ಲೂ ದೊಡ್ಡಣ್ಣ ಅಮೆರಿಕ ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ದಿನೇ ದಿನೆ ಹೆಚ್ಚುತ್ತಿರುವ ಸೋಂಕಿತರು ಮತ್ತು ಸಾವಿನ ಸಂಖ್ಯೆಯಿಂದ ಅಮೆರಿಕ ನಲುಗಿಹೋಗಿದೆ.
ಈ ಮಧ್ಯೆ ತನ್ನ ದೇಶದ ಈ ಅವಸ್ಥೆಗೆ ಚೀನಾ ನೇರ ಹೊಣೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇಪದೇ ಹೇಳುತ್ತಲೇ ಬಂದಿದ್ದಾರೆ. ಇದೀಗ ಅಮೆರಿಕದ 244ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶದ ರಾಜಧಾನಿ ವಾಶಿಂಗ್ಟನ್ನಲ್ಲಿ ಮಾಡಿದ ತಮ್ಮ ಭಾಷಣದಲ್ಲಿ ಚೀನಾದ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ.
ಈ ಹಿಂದೆ ಅಮೆರಿಕ ಬಹಳ ಅದ್ಭುತವಾಗಿ ಅಭಿವೃದ್ಧಿ ಕಾಣುತ್ತಾ ಏಳಿಗೆಯ ಪಥದಲ್ಲಿ ಸಾಗುತ್ತಿತ್ತು. ಆದರೆ, ಚೀನಾದಿಂದ ಆ ವೈರಸ್ ಬಂದಿದ್ದೇ ತಡ ಎಲ್ಲವೂ ಹಾಳಾಗಿ ಹೋಯ್ತು ಎಂದು ಚೀನಾದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಇದೀಗ ಚೀನಾಗೆ ಸೆಡ್ಡುಹೊಡೆಯುವಂತೆ ನಾವೇ ಕೊರೊನಾ ವಿರುದ್ಧ ಹೋರಾಡಲು ಬೇಕಾದ ಮಾಸ್ಕ್, ಗೌನ್ ಮತ್ತು ಇತರೆ ವೈದ್ಯಕೀಯ ಪರಿಕರಗಳನ್ನು ತಯಾರಿಸುತ್ತಿದ್ದೇವೆ ಎಂದು ಸಹ ಹೇಳಿಕೊಂಡಿದ್ದಾರೆ.
ಜೊತೆಗೆ, ಕೊರೊನಾ ಬಗ್ಗೆ ಇದ್ದ ಮಾಹಿತಿಯನ್ನು ಚೀನಾ ಎಲ್ಲೂ ಬಹಿರಂಗಪಡಿಸದೆ ಗೌಪ್ಯವಾಗಿ ಇಟ್ಟ ಕಾರಣ ಈ ಮಹಾಮಾರಿ ವಿಶ್ವದೆಲ್ಲೆಡೆ ವ್ಯಾಪಿಸಿದೆ. ಹೀಗಾಗಿ ಈ ಮಹಾಮಾರಿ ಹರುಡುವಿಕೆಗೆ ಚೀನಾ ನೇರ ಹೊಣೆ ಎಂದು ಸಹ ಹೇಳಿದ್ದಾರೆ.
Published On - 1:25 pm, Sun, 5 July 20