ಕೊವಿಡ್ 19 ಸೋಂಕಿನ ಮೂಲದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಎಂದು ಚೀನಾವನ್ನು ಪದೇಪದೇ ಬಲವಂತ ಮಾಡಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ತಿಳಿಸಿದೆ. ಆದರೆ ವೈರಸ್ ಎಲ್ಲಿಂದ ಹೊರಹೊಮ್ಮಿತು ಎಂಬುದನ್ನು ಪತ್ತೆ ಹಚ್ಚಲು ಅಗತ್ಯವಿರುವ ಅಧ್ಯಯನವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಪ್ರಸ್ತಾವನೆಯನ್ನು ಇಡಬಹುದಷ್ಟೇ ಎಂದೂ ವಿಶ್ವಆರೋಗ್ಯ ಸಂಸ್ಥೆ ತಿಳಿಸಿದೆ. ಸದ್ಯ ಅನೇಕ ರಾಷ್ಟ್ರಗಳು ಕೊರೊನಾ ವೈರಸ್ನ ಮೂಲ ಕಂಡು ಹಿಡಿಯುವ ಸಂಬಂಧ ತನಿಖೆ ಶುರು ಮಾಡಿವೆ. ಅದರಲ್ಲೂ ಅಮೆರಿಕ ಗುಪ್ತಚರ ದಳಗಳು ಕೊರೊನಾ ವುಹಾನ್ ಲ್ಯಾಬ್ನಿಂದಲೇ ಹೊರಬಂದಿದ್ದು ಎಂದೂ ವರದಿ ನೀಡಿವೆ. ಈ ಹೊತ್ತಲ್ಲಿ ಪತ್ರಕರ್ತನೊಬ್ಬ ಕೇಳಿದ ಪ್ರಶ್ನೆಗೆ ಡಬ್ಲ್ಯೂಎಚ್ಒ ಹಿರಿಯ ಅಧಿಕಾರಿ ಮೈಕ್ ರಯಾನ್ ಹೀಗೆಂದು ಉತ್ತರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪತ್ರಕರ್ತನ ಪ್ರಶ್ನೆಗೆ ಉತ್ತರಿಸಿ ಮೈಕ್ ರಯಾನ್, ಕೊರೊನಾ ವೈರಸ್ ಮೂಲ ತಿಳಿಸುವಂತೆ ಚೀನಾವನ್ನು ಒತ್ತಾಯಿಸುವ ಅಧಿಕಾರ ನಮಗೆ ಇಲ್ಲ. ಈ ನಿಟ್ಟಿನಲ್ಲಿ ನಮ್ಮೆಲ್ಲ ಸದಸ್ಯ ರಾಷ್ಟ್ರಗಳ ಸಹಕಾರ, ಬೆಂಬಲವನ್ನು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿದ್ದಾರೆ. ಕೊರೊನಾ ವೈರಸ್ ಜಗತ್ತಿಗೆ ಕಾಲಿಟ್ಟು ಒಂದು ವರ್ಷದ ಮೇಲಾಯಿತು. ಆದರೆ ಅದು ಎಲ್ಲಿಂದ ಶುರುವಾಗಿದ್ದು ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಮೊದಲು ಚೀನಾದ ವೆಟ್ ಮಾರ್ಕೆಟ್ನಲ್ಲಿ ಹುಟ್ಟಿತು ಎಂದು ಹೇಳಲಾಯಿತಾದರೂ, ನಂತರ ವುಹಾನ್ನ ಲ್ಯಾಬ್ನಿಂದ ಸೋರಿಕೆಯಾಗಿದ್ದು ಎಂದು ವರದಿಯಾಯಿತು.
ಕೊರೊನಾ ಮೂಲದ ಬಗ್ಗೆ ಹಲವು ರೀತಿಯ ವರದಿಗಳು ಹೊರಬೀಳುತ್ತಿವೆ. ಸೋಂಕಿನ ಮೂಲದ ಪತ್ತೆ ಕಾರ್ಯಕ್ಕಾಗಿ ಈ ವರ್ಷದ ಪ್ರಾರಂಭದಲ್ಲಿ ಡಬ್ಲ್ಯೂಎಚ್ಒ ತಜ್ಞರ ತಂಡ ಚೀನಾಕ್ಕೆ ಭೇಟಿ ಕೊಟ್ಟಿತ್ತು. ಆದರೆ ನಿರೀಕ್ಷಿಸಿದಷ್ಟು ಮಾಹಿತಿ ಹೊರಬಿದ್ದಿರಲಿಲ್ಲ. ಚೀನಾದ ಪಾರದರ್ಶಕತೆಯ ಬಗ್ಗೆ ಈಗಲೂ ಹಲವು ರಾಷ್ಟ್ರಗಳು ಅನುಮಾನ ಪಡುತ್ತಿವೆ. ಈ ಮಧ್ಯೆ ಯುಎಸ್, ಯುಕೆ, ಭಾರತ ಸೇರಿ ಹಲವು ದೇಶಗಳು ಈಗ ಮತ್ತೆ ಕೊವಿಡ್ 19 ಸೋಂಕಿನ ಜಾಡು ಹಿಡಿದು ಹೊರಟಿವೆ.
ಇದನ್ನೂ ಓದಿ: ಕೊವಿಡ್ ಮೂರನೇ ಅಲೆ ನಂತರ ಏನಾಗುತ್ತದೆ ಎಂದು ಹೇಳುವುದು ಅಸಾಧ್ಯ; ಡಿಜಿಟಲ್ ಕಲಿಕೆ ಮುಂದುವರಿಯಲಿದೆ: ಪಿಣರಾಯಿ ವಿಜಯನ್
(We can not force china to give more information about covid 19 origin said WHO)
Published On - 1:05 pm, Tue, 8 June 21