ತಾಲಿಬಾನ್ ಎಂಬ ಮೂಲಭೂತವಾದಿ ಸಂಘಟನೆ ಅಫ್ಘಾನಿಸ್ತಾನವನ್ನು ಕೈವಶಮಾಡಿಕೊಂಡ ಬೆನ್ನಲ್ಲೇ ಅಲ್ಲಿನ ಮಹಿಳೆ ಮತ್ತು ಮಕ್ಕಳ ಸ್ಥಿತಿ ದಿನೇದಿನೇ ಕರಾಳವಾಗುತ್ತಿದೆ. ತಾಲಿಬಾನಿಗಳು ಸಭ್ಯ ರೀತಿಯಲ್ಲಿ ಮಹಿಳೆಯರಿಗೆ ಹಕ್ಕುಗಳನ್ನು ನೀಡುತ್ತೇವೆಂದು ಆಶ್ವಾಸನೆ ನೀಡಿದರೂ ಹಲ್ಲೆ ನಡೆಸಿದ ಸುದ್ದಿಗಳು ಹೆಚ್ಚುತ್ತಿವೆ. ವಿಶ್ವಸಂಸ್ಥೆಯ ಪ್ರಕಾರ ಜಗತ್ತಿನಾದ್ಯಂತ ಪ್ರತಿ ಗಂಟೆಗೆ 6 ಮಹಿಳೆಯರು ಕೊಲೆಗೀಡಾಗುತ್ತಿದ್ದಾರೆ. 2019-2020ರ ಸಾಲಿನಲ್ಲಿ ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿಯೊಂದರಲ್ಲಿ ಯಾವ ದೇಶದ ಮಹಿಳೆಯರು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿ ಜೀವಿಸುತ್ತಿದ್ದಾರೆ ಎಂದು ವಿವರಿಸಲಾಗಿದೆ. ಅಂದಹಾಗೆ ಈವರದಿಯ 2019-2020ರಲ್ಲಿ ಅಫ್ಘಾನಿಸ್ತಾನ ಮಹಿಳೆಯರು ವಾಸಿಸಲು ಅತ್ಯಂತ ಅಪಾಯಕಾರಿ ದೇಶಗಳ ಪೈಕಿ 2ನೇ ಸ್ಥಾನದಲ್ಲಿತ್ತು. ವಿಶ್ವಸಂಸ್ಥೆಯ ವರದಿಯನ್ನು (Womens Peace And Security Index 2019/2020) ಆಧಾರವಾಗಿಟ್ಟುಕೊಂಡು ವರ್ಡ್ ಅಟ್ಲಾಸ್ ಜಾಲತಾಣ ಸಿದ್ಧಪಡಿಸಿದ ಬರಹದ ಕನ್ನಡಾನುವಾದ ಇಲ್ಲಿದೆ.
2019-20ನೆ ಸಾಲಿನ ವಿಶ್ವಸಂಸ್ಥೆಯ ವರದಿಯ ಪ್ರಕಾರ ಯೆಮೆನ್ ಮಹಿಳೆಯರು ವಾಸಿಸಲು ಅತ್ಯಂತ ಅಪಾಯಕಾರಿ ದೇಶ. ಕಾನೂನಿನಿಂದ ಹಿಡಿದು ಸಮಾಜದ ವಿವಿಧ ಆಯಾಮದಲ್ಲಿ ಮಹಿಳೆಯರು ಯೆಮೆನ್ನಲ್ಲಿ ಶೋಷಣೆಗೊಳಗಾಗುತ್ತಿದ್ದಾರೆ.ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕವಾಗಿ ಮಹಿಳೆಗೆ ಇಲ್ಲಿ ಯಾವುದೇ ಹಕ್ಕು ಮತ್ತು ಸ್ಥಾನಮಾನಗಳಿಲ್ಲ. ಹಣದ ಆಸೆಗಾಗಿ ಬಾಲಕಿಯರ ಮಾರಾಟ ಇಲ್ಲಿ ಸರ್ವೇಸಾಮಾನ್ಯ. ಪತ್ನಿ ಗಂಡನ ಅನುಮತಿಯಿಲ್ಲದೇ ಮನೆಯಿಂದ ಆಚೆ ಕಾಲಿಡುವಂತಿಲ್ಲ. ಜತೆಗೆ ಗಂಡ ತನಗೆ ಬೇಕೆಂದಾಗ ಆಕೆಯ ಅನುಮತಿಯ ಅಗತ್ಯವೂ ಇಲ್ಲದೆ ಲೈಂಗಿಕವಾಗಿ ಬಳಸಿಕೊಳ್ಳಬಹುದು- ಇಂತಹ ಹಲವು ಕೆಟ್ಟ ಪದ್ಧತಿಗಳು ಯೆಮೆನ್ನಲ್ಲಿ ಇನ್ನೂ ಜೀವಂತವಾಗಿವೆ.
ಅಫ್ಘಾನಿಸ್ತಾನ
ವರದಿಯ ಪ್ರಕಾರ ಅಫ್ಘಾನಿಸ್ತಾನ ಮಹಿಳೆಯರ ಪಾಲಿಗೆ ಅತ್ಯಂತ ಅಪಾಯಕಾರಿ ಎನಿಸುವ 2ನೇ ದೇಶ. ಈಗ ತಾಲಿಬಾನಿಗಳ ಆಡಳಿತದಲ್ಲಿ ಈ ಸಂಖ್ಯೆ ಮೊದಲಿಗೇರುವ ಎಲ್ಲ ಸಾಧ್ಯತೆಗಳೂ ಇವೆ. ಈ ಹಿಂದೆ 5 ವರ್ಷ ಆಡಳಿತ ನಡೆಸಿದ್ದ ತಾಲಿಬಾನಿಗಳು ಮಹಿಳೆಯರ ಪಾಲಿಗೆ ಅಕ್ಷರಶಃ ನರಕ ತೋರಿಸಿದ್ದರು. ವಿಶ್ವಸಂಸ್ಥೆ 2015ರಲ್ಲಿ ಹೇಳಿದಂತೆ ಅಫ್ಘಾನಿಸ್ತಾನದ ಶೇಕಡಾ 90ರಷ್ಟು ಮಹಿಳೆಯರು ತಮ್ಮ ಮನೆಗಳಲ್ಲಿ ಹಿಂಸೆಗೆ ತುತ್ತಾಗುತ್ತಾರೆ. ಈಗಾಗಲೇ ಷರಿಯಾ ಕಾನೂನಿನ ಆಡಳಿತದ ಎಲ್ಲ ಲಕ್ಷಣಗಳೂ ಅಫ್ಘಾನಿಸ್ತಾನದಲ್ಲಿ ಕಾಣಿಸುತ್ತಿದ್ದು, ಮಹಿಳೆಯರು ದೇಶ ತೊರೆಯಲು ಹವಣಿಸುತ್ತಿದ್ದಾರೆ.
ಸಿರಿಯಾ
ಈಗ ನಾವು ಅಫ್ಘಾನಿಸ್ತಾನದ ಸುದ್ದಿಗಳನ್ನು ಓದುತ್ತಿದ್ದೇವೆ. ಆದರೆ ಕೆಲವು ತಿಂಗಳುಗಳ ಮೊದಲಷ್ಟೇ ಸಿರಿಯಾ ಎಂಬ ದೇಶದಲ್ಲಿ ನಡೆದ ಸಂಘರ್ಷ ಅಲ್ಲಿನ ಮಹಿಳೆಯರ ಪಾಲಿನ ಜೀವನವನ್ನು ಯಾತನಾದಾಯಕವನ್ನಾಗಿಸಿತ್ತು. ಸಿರಿಯಾ ಸಂಘರ್ಷದಲ್ಲಿ ಕಳೆದ 10 ವರ್ಷಗಳಲ್ಲಿ 5 ಲಕ್ಷ ಜನರು ಬಲಿಯಾಗಿದ್ದಾರೆ. ನೈಋತ್ಯ ಏಷ್ಯಾದ ಈ ಅರಬ್ ದೇಶ 2018ರ ರಾಯಿಟರ್ಸ್ ವರದಿಯೊಂದರ ಪ್ರಕಾರ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದಲ್ಲಿ 3ನೇ ಸ್ಥಾನದಲ್ಲಿದೆ.
ಪಾಕಿಸ್ತಾನ
ಮಿಲಿಟರಿಯು ಆಡಳಿತದ ಮೇಲೆ ಹತೋಟಿ ಸಾಧಿಸಲು ಅವಕಾಶ ಮಾಡಿಕೊಡುವ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ನಮ್ಮ ನೆರೆಯ ದೇಶ ಪಾಕಿಸ್ತಾನದಲ್ಲಿಯೂ ಮಹಿಳೆಯರ ಮೇಲಿನ ಹಿಂಸಾಚಾರ ಕಡಿಮೆಯಿಲ್ಲ. ಪುರುಷರು ತಮ್ಮ ಧಾರ್ಮಿಕ ಮೂಲಭೂತವಾದಿ ಧೋರಣೆಯಿಂದ ಉಗ್ರ ಕೃತ್ಯಗಳತ್ತ ಆಸಕ್ತರಾದರೆ ಮಹಿಳೆಯರೇ ಶೋಷಣೆಗೆ ಒಳಗಾಗುವ ಸ್ಥಿತಿ ಇಲ್ಲಿಯದು. ಪಾಕಿಸ್ತಾನದಲ್ಲಿ ದೈಹಿಕ ದೌರ್ಜನ್ಯದಿಂದಾಗಿ ಪ್ರತಿ ವರ್ಷ ಸುಮಾರು 5 ಸಾವಿರ ಮಹಿಳೆಯರು ಮೃತಪಡುತ್ತಾರೆ. ಇಸ್ಲಾಮೇತರ ಧರ್ಮದ ಮಹಿಳೆಯರು ಅಪಹರಣಕ್ಕೊಳಗಾದ ಸುದ್ದಿಗಳು ಈಗಲೂ ಕೇಳಿಬರುತ್ತವೆ. 2017ರಲ್ಲಿ 746 ಮಹಿಳೆಯರು ಕುಟುಂಬದ ಮಾನ ರಕ್ಷಣೆಯ ಹೆಸರಲ್ಲಿ ಕೊಲೆಗೊಳಗಾಗಿದ್ದಾರೆ. ಇನ್ನೊಂದು ವಿಷಾದದ ಸಂಗತಿಯೆಂದರೆ ಇಲ್ಲಿನ ಶೇಕಡಾ 29 ರಷ್ಟು ಮಹಿಳೆಯರು ಮಾತ್ರ ಬ್ಯಾಂಕ್ ಖಾತೆ ಹೊಂದಿದ್ದಾರೆ. ಸುಮ್ಮನೆ ಹೋಲಿಸುವುದಿದ್ದರೆ ಭಾರತದ ಶೇಕಡಾ 77ರಷ್ಟು ಮಹಿಳೆಯರು ಸ್ವಂತ ಬ್ಯಾಂಕ್ ಖಾತೆ ಹೊಂದಿದ್ದಾರೆ.
ಇನ್ನೂ ಯಾವೆಲ್ಲ ದೇಶಗಳಿವೆ?
ದಕ್ಷಿಣ ಸುಡಾನ್ ವಿಶ್ವಸಂಸ್ಥೆಯ 2019-2020ನೆ ಸಾಲಿನ ವರದಿಯ ಪ್ರಕಾರ ಮಹಿಳೆಯರು ವಾಸಿಸಲು 5ನೆ ಅತ್ಯಂತ ಅಪಾಯಕಾರಿ ದೇಶ. ಇಲ್ಲಿ ನಡೆಯುತ್ತಿರುವ ನಾಗರಿಕ ಯುದ್ಧದಲ್ಲಿ ಮಹಿಳೆಯರು ಅನಾಯಾಸವಾಗಿ ಬಲಿಪಶುಗಳಾಗುತ್ತಿದ್ದಾರೆ. ಮಹಿಳೆಯರನ್ನು ಯುದ್ಧದ ಒಂದು ಅಸ್ತ್ರದಂತೆ ಬಳಸಿ ಬಿಸಾಕಲಾಗುತ್ತಿದೆ. ಇನ್ನೂ ಮುಂದುವರೆದರೆ, ಈ ವರದಿಯ ಪ್ರಕಾರ ಮಹಿಳೆಯರ ಪಾಲಿನ ಅತ್ಯಂತ ಅಪಾಯಕಾರಿ ದೇಶಗಳ ಪಟ್ಟಿಯಲ್ಲಿ ಇರಾಕ್, ಕಾಂಗೋ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಮಾಲಿ ಮತ್ತು ಆನಂತರ ಲಿಬಿಯಾ ದೇಶಗಳಿವೆ. ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ಮೂಲಭೂತವಾದಿಗಳಾದ ತಾಲಿಬಾನಿಗಳ ಕೈ ಮೇಲ್ಗಡೆಯಾಗಿರುವುದು ಈ ಎಲ್ಲ ದೇಶಗಳಲ್ಲಿ ಮಹಿಳೆಯರನ್ನು ಅಪಾಯಕ್ಕೆ ನೂಕುವ ಸಾಧ್ಯತೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಈ ವರದಿಯ ಆಧಾರ ವಿಶ್ವಸಂಸ್ಥೆಯ ವರದಿ ಓದಲು ಇಲ್ಲಿ ಕ್ಲಿಕ್ ಮಾಡಿ: https://giwps.georgetown.edu/wp-content/uploads/2019/12/WPS-Index-2019-20-Report.pdf
ಇದನ್ನೂ ಓದಿ:
ನೆಲೆಗಾಗಿ ಅಲೆದಾಟ: ಅಫ್ಘಾನ್ ನಿರಾಶ್ರಿತರ ಬಗ್ಗೆ ಅಮೆರಿಕದ ಉದಾಸೀನ ಧೋರಣೆ
ಕಂದಹಾರ್ನ ರೇಡಿಯೋ, ಟಿವಿಗಳಲ್ಲಿ ಮಹಿಳೆಯರ ಧ್ವನಿ ಕೇಳುವಂತಿಲ್ಲ; ತಾಲಿಬಾನಿಗಳ ಆದೇಶ
(Worlds Dangerous Countries for women peace and security index in Kannnada)
Published On - 8:38 am, Tue, 31 August 21