
ವಾಷಿಂಗ್ಟನ್, ನವೆಂಬರ್ 21: ನ್ಯೂಯಾರ್ಕ್ ನಗರದ ಮೇಯರ್ ಆಗಿ ಆಯ್ಕೆಯಾಗಿರುವ ಭಾರತ ಮೂಲದ ಜೊಹ್ರಾನ್ ಮಮ್ದಾನಿ(Zohran Mamdani), ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಹಲವು ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ, ನ್ಯೂಯಾರ್ಕ್ ನಿವಾಸಿಗಳಿಗೆ ಪ್ರಯೋಜನವಾಗುವ ಯಾವುದೇ ಕಾರ್ಯದಲ್ಲಿ ಅಮೆರಿಕದ ನಾಯಕನೊಂದಿಗೆ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಮಮ್ದಾನಿ ಇಂದು ಶ್ವೇತಭವನದಲ್ಲಿ ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಮ್ದಾನಿ, ನಗರದಲ್ಲಿರುವ ಸಮಸ್ಯೆಗಳನ್ನು ಟ್ರಂಪ್ ಅವರ ಬಳಿ ಹಂಚಿಕೊಳ್ಳುವುದಾಗಿ ಹೇಳಿದರು. ಈ ನಗರವನ್ನು ಹೆಚ್ಚು ಕೈಗೆಟುಕುವಂತೆ ಮಾಡುವಲ್ಲಿ ನಾನು ಯಾವುದೇ ಅವಕಾಶವನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ನ್ಯೂಯಾರ್ಕ್ ನಗರದ ಕಮ್ಯುನಿಸ್ಟ್ ಮೇಯರ್ ಝೊಹ್ರಾನ್ ಮಮ್ದಾನಿ ನನ್ನನ್ನು ಭೇಟಿಯಾಗಲು ಬಯಸಿರುವುದಾಗಿ ಕೇಳಿಕೊಂಡರು. ಅದಕ್ಕೆ ನಾವು ಸಮ್ಮತಿಸಿದ್ದು ಈ ಭೇಟಿ ನ. 21ರಂದು ಶ್ವೇತಭವನದಲ್ಲಿ ನಡೆಯಲಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಿ’ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮ `ಟ್ರುಥ್ ಸೋಷಿಯಲ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ ಮಮ್ದಾನಿ ಡೆಮಾಕ್ರಟಿಕ್ ಅಭ್ಯರ್ಥಿಯಾಗಿದ್ದರೆ, ರಿಪಬ್ಲಿಕನ್ ಅಭ್ಯರ್ಥಿಯಾಗಿ ಕರ್ಟಿಸ್ ಸ್ಲಿವಾ, ಸ್ವತಂತ್ರ ಅಭ್ಯರ್ಥಿಯಾಗಿ ಆಂಡ್ರ್ಯೂ ಕ್ಯುಮೊ ಕಣದಲ್ಲಿದ್ದರು. ಮಮ್ದಾನಿಯ ಗೆಲುವು ನ್ಯೂಯಾರ್ಕ್ ನಗರಕ್ಕೆ ಸಂಪೂರ್ಣ ಆರ್ಥಿಕ ಮತ್ತು ಸಾಮಾಜಿಕ ವಿಪತ್ತು ಆಗಲಿದೆ ಎಂದು ಪ್ರಚಾರದ ಸಂದರ್ಭ ಟ್ರಂಪ್ ಎಚ್ಚರಿಕೆ ನೀಡಿದ್ದರು.
ಮತ್ತಷ್ಟು ಓದಿ:ಮೇಯರ್ ಜೊಹ್ರಾನ್ ಕಟು ಭಾಷಣ, ನನ್ನ ಸಹಿಯೂ ಬೇಕು, ಸ್ವಲ್ಪ ವಿಧೇಯತೆಯಿಂದ ವರ್ತಿಸಿ ಎಂದ ಟ್ರಂಪ್
ನ್ಯೂಯಾರ್ಕ್ ನ ನೂತನ ಮೇಯರ್ ಆಗಿ ಆಯ್ಕೆಯಾಗಿರುವ ಜೊಹ್ರಾನ್ ಮಮ್ದಾನಿ ವಿರುದ್ಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ ಎರಿಕ್ ಟ್ರಂಪ್ ತೀವ್ರ ವಾಗ್ದಾಳಿ ನಡೆಸಿದ್ದರು. ಮಮ್ದಾನಿ ಭಾರತೀಯರನ್ನು ದ್ವೇಷಿಸುತ್ತಾರೆ ಎಂದು ಆರೋಪಿಸಿದ್ದು, ಅವರನ್ನು ಕಮ್ಯುನಿಸ್ಟ್ ಎಂದು ಕರೆದಿದ್ದಾರೆ.
ಮಮ್ದಾನಿ ಯಹೂದಿ ಜನರನ್ನು ದ್ವೇಷಿಸುತ್ತಿದ್ದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಬಂಧಿಸಲು ಬಯಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ನ್ಯೂಯಾರ್ಕ್ ನಗರದ ವಿರುದ್ಧ ಸ್ಪರ್ಧಿಸುವ ಸ್ಥಳ ಜಗತ್ತಿನಲ್ಲಿ ಯಾವುದು ಇಲ್ಲ. ನೀವು, ಸಮಾಜವಾದಿ, ಕಮ್ಯುನಿಸ್ಟ್. ಆದಾಗ್ಯೂ, ನೆತನ್ಯಾಹು ಅವರನ್ನು ಬಂಧಿಸಲು ಬಯಸುವ, ಯಹೂದಿಗಳನ್ನು ದ್ವೇಷಿಸುವ, ಭಾರತೀಯರನ್ನು ದ್ವೇಷಿಸುವ, ಕಾನೂನು ಜಾರಿ ಸಂಸ್ಥೆಗಳಿಗೆ ಹಣೆಪಟ್ಟಿ ಕಟ್ಟಲು ಬಯಸುವ ವ್ಯಕ್ತಿ. ಅದರಿಂದ ಎಷ್ಟು ಬೆಲೆ ತೆರಬೇಕಾಗುತ್ತದೆ ಎಂದು ನಿಮಗೆ ಗೊತ್ತಿದೆ. ಇದು ತುಂಬಾ ದುಃಖಕರವಾಗಿದೆ ಎಂದು ಎರಿಕ್ ಟ್ರಂಪ್ ಹೇಳಿದ್ದರು.
ಜೊಹ್ರಾನ್ ಮಮ್ದಾನಿ, ಈ ತಿಂಗಳ ಆರಂಭದಲ್ಲಿ ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದರು. ಇವರು ನಗರದ ಮೊದಲ ಮುಸ್ಲಿಂ ಮೇಯರ್ ಹಾಗೂ ಕಿರಿಯ ಮೇಯರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ