ಹೊಸ ಕಾರುಗಳಲ್ಲಿ ಇತ್ತೀಚೆಗೆ ಹಲವಾರು ಸುಧಾರಿತ ಫೀಚರ್ಸ್ ಗಳನ್ನು(Advanced Features) ನೀಡಲಾಗುತ್ತಿದ್ದು, ಇದರಲ್ಲಿ ಎಡಿಎಎಸ್(Advanced Driver Assistance Systems) ಸೌಲಭ್ಯವು ಭಾರೀ ಸದ್ದು ಮಾಡುತ್ತಿದೆ. ಐಷಾರಾಮಿ ಕಾರುಗಳಲ್ಲೂ ಇಲ್ಲದ ಹೊಸ ಫೀಚರ್ಸ್ ಇತ್ತೀಚೆಗೆ ಮಧ್ಯಮ ಕ್ರಮಾಂಕದ ಕಾರುಗಳಲ್ಲೂ ಸದ್ದು ಮಾಡುತ್ತಿದೆ. ಕಾರು ಸುರಕ್ಷತೆಯಲ್ಲಿ ತನ್ನದೇ ಆದ ಮಹತ್ವ ಪಡೆದುಕೊಳ್ಳುತ್ತಿರುವ ಈ ಫೀಚರ್ಸ್ ಕಾರ್ಯನಿರ್ವಹಣೆಯು ಅದ್ಭುತವಾಗಿದೆ.
ವಿಶ್ವಾದ್ಯಂತ ಹೆಚ್ಚುತ್ತಿರುವ ವಾಹನಗಳ ಪರಿಣಾಮ ದಿನಂಪ್ರತಿ ಸಾವಿರಾರು ಅಪಘಾತಗಳು ಸಂಭವಿಸುತ್ತಿದ್ದು ಕಠಿಣ ಸಂಚಾರಿ ನಿಯಮಗಳ ಹೊರತಾಗಿಯೂ ಅಪಘಾತಗಳಲ್ಲಿ ಸಾವಿನ ಸಂಖ್ಯೆ ವಾರ್ಷಿಕವಾಗಿ ಹೆಚ್ಚಳವಾಗುತ್ತಲೇ ಇದೆ. ಆದ್ರೆ ಇದಕ್ಕೆಲ್ಲಾ ಬ್ರೇಕ್ ಹಾಕಲು ಹೊಸ ತಂತ್ರಜ್ಞಾನವೊಂದು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಹೊಸ ತಂತ್ರಜ್ಞಾನವು ಸಂಭಾವ್ಯ ಅಪಘಾತಗಳನ್ನು ತಗ್ಗಿಸುವುದರ ಜೊತೆಗೆ ಅಮೂಲ್ಯವಾದ ಜೀವಗಳನ್ನು ರಕ್ಷಿಸಲು ನೆರವಾಗುತ್ತಿದೆ.
ಅಪಘಾತಗಳಲ್ಲಿ ಸಾವು ನೋವಿನ ಸಂಖ್ಯೆ ತಗ್ಗಿಸಲು ಸಂಚಾರಿ ನಿಯಮಗಳಲ್ಲಿ ಹಲವಾರು ಕಠಿಣ ಕ್ರಮಗಳನ್ನು ಜಾರಿ ತಂದಿದ್ದರೂ ಅದು ನಿಯಂತ್ರಣಕ್ಕೆ ಸಿಗುತ್ತಿಲ್ಲ. ಹಲವಾರು ಕಾರಣಗಳಿಂದ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇದಕ್ಕೆ ಬ್ರೇಕ್ ಹಾಕಲು ಅಡ್ವಾನ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ನೆರವಿಗೆ ಬರಲಿದೆ. ಎಡಿಎಎಸ್ ಹೆಸರಿನಲ್ಲಿ ಕರೆಯಲಾಗುವ ಹೊಸ ಸುರಕ್ಷಾ ಸೌಲಭ್ಯವು ಇತ್ತೀಚಿನ ಆಧುನಿಕ ಕಾರು ಮಾದರಿಗಳಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು ಇದು ಕಾರು ಚಾಲನೆಯಲ್ಲಿರುವಾಗ ಚಾಲಕನ ಅರಿವಿಗೆ ಬಾರದೇ ಆಗಬಹುದಾದ ಅಪಘಾತಗಳನ್ನು ತಪ್ಪಿಸಲು ನೆರವಾಗುತ್ತದೆ.
ಎಡಿಎಎಸ್ ತಂತ್ರಜ್ಞಾನ ಕಾರ್ಯನಿರ್ವಹಣೆ
ಎಡಿಎಎಸ್ ಅಪ್ಲಿಕೇಶನ್‌ಗಳು ಕಾರು ಅಪಘಾತಗಳನ್ನು ಕಡಿಮೆ ಮಾಡಲು ಮತ್ತು ಜೀವಗಳನ್ನು ಉಳಿಸುವುದರ ಮೂಲಕ ಸುರಕ್ಷತೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದರೊಂದಿಗೆ ಇದು ಸುಗಮ ಸಂಚಾರಕ್ಕಾಗಿ ಚಾಲಕನಿಗೆ ಸಾಕಷ್ಟು ಸಹಾಯ ಮಾಡಲಿದ್ದು, ಈ ಹಿನ್ನಲೆಯಲ್ಲಿ ಸದ್ಯ ವಿಶ್ವಾದ್ಯಂತ ಪ್ರಮುಖ ಕಾರು ಉತ್ಪಾದನಾ ಕಂಪನಿಗಳು ಹೊಸ ಸುರಕ್ಷಾ ಸೌಲಭ್ಯವನ್ನು ತಮ್ಮ ಹೊಸ ಕಾರು ಉತ್ಪನ್ನಗಳಲ್ಲಿ ಹಂತ-ಹಂತವಾಗಿ ಜೋಡಣೆ ಮಾಡುತ್ತಿವೆ. ಭಾರತದಲ್ಲೂ ಕೂಡಾ ಹೊಸ ಎಡಿಎಎಸ್ ಸೌಲಭ್ಯ ಹೊಂದಿರುವ ಕಾರುಗಳು ನಿಧಾನವಾಗಿ ರಸ್ತೆಗಿಳಿಯುತ್ತಿದ್ದು, ಮುಂದಿನ ಕೆಲ ವರ್ಷಗಳಲ್ಲಿ ಹೊಸ ಸುರಕ್ಷಾ ಸೌಲಭ್ಯವನ್ನು ಪ್ರತಿಯೊಂದು ಹೊಸ ಕಾರು ಮಾದರಿಯಲ್ಲೂ ನೋಡಬಹುದಾಗಿದೆ.
ಕಾರು ಉದ್ಯಮದಲ್ಲಿ ಸದ್ಯ ಪ್ರಯಾಣಿಕರ ಸುರಕ್ಷತೆಯ ಮೇಲೆ ಹೆಚ್ಚಿನ ಗಮನಹರಿಸಲಾಗುತ್ತಿದ್ದು, ಇದರಲ್ಲಿ ಎಡಿಎಎಸ್ ಸೌಲಭ್ಯವು ಹೊಸ ಭರವಸೆ ಹುಟ್ಟುಹಾಕಿದೆ. ಎಡಿಎಎಸ್ ಸೌಲಭ್ಯವನ್ನು ಒಟ್ಟು ಐದು ಹಂತಗಳಲ್ಲಿ ಅಭಿವೃದ್ದಿಪಡಿಸಲಾಗಿದ್ದು, ಭಾರತದಲ್ಲಿ ಪ್ರಮುಖ ಕಾರುಗಳು ಇದೀಗ ಲೆವಲ್ 2 ಎಡಿಎಎಸ್ ಫೀಚರ್ಸ್ ಪಡೆದುಕೊಳ್ಳುತ್ತಿವೆ. ಲೆವಲ್ 2 ಎಡಿಎಎಸ್ ನಲ್ಲಿ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಪೆಡೆಸ್ಟ್ರಿಯನ್ ಡಿಟೆಕ್ಷನ್, ಸರೌಂಡ್ ವ್ಯೂ, ಪಾರ್ಕಿಂಗ್ ಅಸಿಸ್ಟ್, ಲೇನ್ ಕೀಪ್ ಅಸಿಸ್ಟ್, ಫಾರ್ವಡ್ ಕೂಲಿಷನ್ ಅಸಿಸ್ಟ್, ರಿಯರ್ ಕ್ರಾಸ್ ಟ್ರಾಫಿಕ್ ಅಸಿಸ್ಟ್ ಸೇರಿ ಹಲವು ಸೌಲಭ್ಯಗಳಿವೆ.
ಇದರಲ್ಲಿ ಮತ್ತೊಂದು ಮುಖ್ಯವಾದ ಫೀಚರ್ಸ್ ಅಂದ್ರೆ ಅದು ಚಾಲಕನಿಗೆ ನಿದ್ರೆ ಮಂಪರು ಬಂದಲ್ಲಿ ತಕ್ಷಣವೇ ಅಲರ್ಟ್ ಮಾಡುತ್ತದೆ. ಚಾಲಕ ಚಾಲನಾ ಶೈಲಿಯನ್ನು ಆಧರಿಸಿ ವಿಶ್ರಾಂತಿ ಸೂಚಿಸುವ ಮೂಲಕ ಅಪಘಾತವನ್ನು ತಡೆಯುತ್ತದೆ.
ಭಾರತದಲ್ಲಿ ಎಡಿಎಎಸ್
ಎಡಿಎಎಸ್ ಸೌಲಭ್ಯವು ಸಂಪೂರ್ಣವಾಗಿ ರಡಾರ್ ಆಧರಿಸಿ ಕಾರ್ಯನಿರ್ವಹಿಸಲಿದ್ದು, ಭವಿಷ್ಯದ ಆಟೊನೊಮಸ್ ಕಾರುಗಳಲ್ಲೂ ಇದು ನಿರ್ಣಾಯಕ ಪಾತ್ರವಹಿಸಲಿದೆ. ಆಟೋನೊಮಸ್ ಕಾರುಗಳಲ್ಲಿ ಲೆವಲ್ 5 ಸೌಲಭ್ಯವನ್ನು ಬಳಕೆ ಮಾಡಲಾಗುತ್ತಿದ್ದು, ಸದ್ಯಕ್ಕೆ ಸಾಮಾನ್ಯ ಕಾರುಗಳಲ್ಲಿ ಲೆವಲ್ 2 ಸೌಲಭ್ಯವನ್ನು ಬಳಸಲಾಗುತ್ತಿದೆ. ಆದರೆ ಇದು ಸಾಮಾನ್ಯ ಕಾರುಗಳಲ್ಲೂ ಜೋಡಣೆಯಾಗಲು ಇನ್ನು ಕೆಲವು ವರ್ಷಗಳನ್ನು ತೆಗೆದುಕೊಳ್ಳಬಹುದಾಗಿದೆ. ವೆಚ್ಚದಾಯಕ ಸುರಕ್ಷಾ ಸೌಲಭ್ಯ ಆಗಿರುವುದರಿಂದ ಸದ್ಯ ಪ್ರೀಮಿಯಂ ಕಾರುಗಳಲ್ಲಿ ಮಾತ್ರ ಜೋಡಣೆ ಮಾಡಲಾಗುತ್ತಿದ್ದು, ಭಾರತದಲ್ಲಿ ಮೊದಲ ಬಾರಿಗೆ ಹೊಸ ಫೀಚರ್ಸ್ ಪರಿಚಯಿಸಿದ ಕೀರ್ತಿ ಎಂಜಿ ಮೋಟಾರ್ ಗೆ ಸಲ್ಲುತ್ತದೆ. ತದನಂತರ ಮಹೀಂದ್ರಾ, ಹ್ಯುಂಡೈ ಮತ್ತು ಹೋಂಡಾ ಕಂಪನಿಗಳು ಕೂಡಾ ತಮ್ಮ ಹೊಸ ಕಾರುಗಳಲ್ಲಿ ಎಡಿಎಎಸ್ ಪರಿಚಯಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಇದು ಎಂಟ್ರಿ ಲೆವಲ್ ಕಾರುಗಳಿಗೂ ಲಗ್ಗೆಯಿಡಲಿದೆ.
Published On - 6:32 pm, Thu, 8 December 22