MG 4 EV: ಭಾರತದಲ್ಲೂ ಬಿಡುಗಡೆಯಾಲಿದೆ ಪ್ರತಿ ಚಾರ್ಜ್ ಗೆ 452 ಕಿ.ಮೀ ಮೈಲೇಜ್ ನೀಡುವ ಎಂಜಿ 4 ಇವಿ
ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಂಜಿ ಮೋಟಾರ್ ಕಂಪನಿಯು ಶೀಘ್ರದಲ್ಲಿಯೇ ಮತ್ತೊಂದು ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗಾಗಿ ಯೋಜನೆ ರೂಪಿಸುತ್ತಿದೆ.
ಭಾರತದಲ್ಲಿ ಜೆಡ್ಎಸ್ ಇವಿ(ZS EV) ಕಾರು ಮಾದರಿಯ ಮೂಲಕ ಹೊಸ ಸಂಚಲನ ಮೂಡಿಸಿರುವ ಎಂಜಿ ಮೋಟಾರ್(MG Motor) ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಕಾರುಗಳ(Electric Cars) ಬಿಡುಗಡೆಗೆ ಸಿದ್ದವಾಗುತ್ತಿದ್ದು, ಯುರೋಪ್ ಮಾರುಕಟ್ಟೆಗಳಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಎಂಜಿ 4 ಇವಿ ಕಾರನ್ನು ಭಾರತದಲ್ಲೂ ಬಿಡುಗಡೆ ಮಾಡಬಹುದಾಗಿದೆ. ಭಾರತದಲ್ಲಿ ಸದ್ಯ ಇವಿ ಕಾರುಗಳಿಗೆ ಭರ್ಜರಿ ಬೇಡಿಕೆ ಹರಿದುಬರುತ್ತಿದ್ದು, ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಇವಿ ಕಾರುಗಳು ಮಾರುಕಟ್ಟೆಗೆ ಪ್ರವೇಶಿಸುವ ಸಿದ್ದತೆಯಲ್ಲಿವೆ. ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ಹೊಸ ಸಂಚಲನ ಮೂಡಿಸಿರುವ ಎಂಜಿ ಮೋಟಾರ್ ಕಂಪನಿಯು ಮತ್ತೊಂದು ಇವಿ ಕಾರು ಬಿಡುಗಡೆ ಮಾಡಲಿದೆ. ಜೆಡ್ಎಸ್ ಇವಿ ಮೂಲಕ ಹೊಸ ದಾಖಲೆ ನಿರ್ಮಿಸಿರುವ ಎಂಜಿ ಕಂಪನಿಯು ಈ ಬಾರಿ ಮತ್ತೊಂದು ಬಹುಬೇಡಿಕೆಯ ಇವಿ ಕಾರು ಮಾದರಿಯನ್ನು ಸಿದ್ದಪಡಿಸುತ್ತಿದೆ.
ಜೆಡ್ಎಸ್ ಇವಿ ಕಾರು ಬಿಡುಗಡೆಯ ನಂತರ ಭಾರತದಲ್ಲಿ ಅತ್ಯುತ್ತಮ ಬೇಡಿಕೆ ದಾಖಲಿಸುತ್ತಿರುವ ಎಂಜಿ ಕಂಪನಿಯು ಈ ಬಾರಿ ಕೈಗೆಟುಕುವ ದರದಲ್ಲಿ ಹೊಸ ಇವಿ ಹ್ಯಾಚ್ ಬ್ಯಾಕ್ ಬಿಡುಗಡೆಗೆ ಮುಂದಾಗಿದ್ದು, ಯುರೋಪ್ ಮಾರುಕಟ್ಟೆಯಲ್ಲಿ ಸದ್ಯ ಬಿಡುಗಡೆಯ ಸಿದ್ದತೆಯಲ್ಲಿರುವ ಎಂಜಿ 4 ಇವಿ ಕಾರನ್ನು ಭಾರತದಲ್ಲೂ ಬಿಡುಗಡೆ ಮಾಡಬಹುದಾಗಿದೆ. ಹೊಸ ಇವಿ ಕಾರನ್ನು ಎಂಜಿ ಕಂಪನಿಯು ಮುಂದಿನ ತಿಂಗಳು ನಡೆಯಲಿರುವ 2023ರ ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಬಹುದಾಗಿದ್ದು, ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಂಡ ನಂತರ ರೋಡ್ ಟೆಸ್ಟಿಂಗ್ ಆರಂಭಿಸಲಿದೆ.
ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್
ಎಂಜಿ ಹೊಸ ಇವಿ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಜೆಡ್ಎಸ್ ಇವಿ ಕಾರಿಗಿಂತಲೂ ಕೆಳ ದರ್ಜೆಯಲ್ಲಿ ಮಾರಾಟಗೊಳ್ಳಲಿದೆ. ಇದು ತನ್ನ ವಿಭಾಗದಲ್ಲಿಯೇ ಅತಿ ಹೆಚ್ಚು ಮೈಲೇಜ್ ಖಾತ್ರಿಪಡಿಸಲಿದ್ದು, ಹೊಸ ಕಾರಿನಲ್ಲಿ 51kWh ಅಥವಾ 64kWh ಬ್ಯಾಟರಿ ಪ್ಯಾಕ್ ಆಯ್ಕೆ ನೀಡಬಹುದಾಗಿದೆ. ಇದು ಪ್ರತಿ ಚಾರ್ಜ್ ಗೆ 350 ಕಿ.ಮೀ ನಿಂದ 452 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ. ಜೊತೆಗೆ ಹೊಸ ಕಾರಿನಲ್ಲಿರುವ ಬ್ಯಾಟರಿ ಪ್ಯಾಕ್ ಡಿಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿರಲಿದ್ದು, ಅತಿ ಕಡಿಮೆ ಅವಧಿಯಲ್ಲಿ ಗರಿಷ್ಠ ಚಾರ್ಜ್ ಮಾಡಬಹುದಾಗಿದೆ.
ಕೇವಲ 35 ನಿಮಿಷಗಳಲ್ಲಿ ಸೊನ್ನೆಯಿಂದ ಶೇ.80 ಚಾರ್ಜ್ ಮಾಡಬಹುದಾಗಿದ್ದು, ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯುತ್ತದೆ. ಎಂಜಿ 4 ಇವಿ ಕಾರಿನಲ್ಲಿ ಸಿಂಗಲ್ ಮೋಟಾರ್ ಜೊತೆಗೆ ರಿಯರ್ ವ್ಹೀಲ್ ಡ್ರೈವ್ ಸಿಸ್ಟಂ ಜೋಡಿಸಲಾಗಿದೆ. ಇದು ಗರಿಷ್ಠ 203 ಹಾರ್ಸ್ ಪವರ್ ನೊಂದಿಗೆ 250 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮೂಲಕ ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ ನೀಡಲಾಗಿದೆ.
ಡಿಸೈನ್ ಮತ್ತು ಫೀಚರ್ಸ್
ಹೊಸ ಎಂಜಿ 4 ಇವಿ ಕಾರು ಹ್ಯಾಚ್ ಬ್ಯಾಕ್ ಮಾದರಿಯಾಗಿದ್ದರೂ ಕ್ರಾಸ್ ಓವರ್ ಎಸ್ ಯುವಿ ವೈಶಿಷ್ಟ್ಯತೆ ಹೊಂದಿದೆ. ಹೊಸ ಕಾರಿನಲ್ಲಿ ಎಲ್ಇಡಿ ಯುನಿಟ್ ಗಳೊಂದಿಗೆ ಕಟಿಂಗ್ ಎಡ್ಜ್ ವಿನ್ಯಾಸ ನೀಡಲಾಗಿದ್ದು, ಒಳಭಾಗದಲ್ಲೂ ಹಲವಾರು ಪ್ರೀಮಿಯಂ ಫೀಚರ್ಸ್ ಗಳಿವೆ. ಇನ್ನು ಹೊಸ ಕಾರಿನಲ್ಲಿ ಗರಿಷ್ಠ ಸುರಕ್ಷತೆಗಾಗಿ ಎಡಿಎಎಸ್ ಸೂಟ್ ಹೊಂದಿರಲಿದೆ. ಇದರೊಂದಿಗೆ ಹೊಸ ಕಾರು ರೂ. 12 ಲಕ್ಷದಿಂದ ರೂ. 20 ಲಕ್ಷ ಬೆಲೆ ಹೊಂದಿರಬಹುದಾಗಿದೆ. ಹೊಸ ಕಾರಿಗೆ ಭಾರತದಲ್ಲಿ ಸದ್ಯ ಯಾವುದೇ ಪ್ರತಿ ಸ್ಪರ್ಧಿ ಇಲ್ಲ. ಆದ್ರೆ ಬೆಲೆ ವಿಚಾರವಾಗಿ ಇದು ಟಾಟಾ ನೆಕ್ಸಾನ್ ಇವಿ ಮತ್ತು ಮಹೀಂದ್ರಾ ಹೊಸ XUV400 ಇವಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಬಹುದಾಗಿದೆ.
Published On - 4:33 pm, Fri, 9 December 22