Ather Energy: ಇವಿ ಸ್ಕೂಟರ್ ವಿತರಣೆಯಲ್ಲಿ ಹೊಸ ದಾಖಲೆ ನಿರ್ಮಿಸಿದ ಎಥರ್ ಎನರ್ಜಿ

ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಥರ್ ಎನರ್ಜಿ ಕಂಪನಿಯು ದುಬಾರಿ ಬೆಲೆ ನಡುವೆಯೂ ಗ್ರಾಹಕರಿಂದ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

Ather Energy: ಇವಿ ಸ್ಕೂಟರ್ ವಿತರಣೆಯಲ್ಲಿ ಹೊಸ ದಾಖಲೆ ನಿರ್ಮಿಸಿದ ಎಥರ್ ಎನರ್ಜಿ
Ather 450X

Updated on: Oct 24, 2022 | 7:56 PM

ದುಬಾರಿ ಇಂಧನ ದರಗಳು ಮತ್ತು ಮಾಲಿನ್ಯದ ಪರಿಣಾಮ ಹೊಸ ವಾಹನಗಳ ಖರೀದಿದಾರರು ಇವಿ ವಾಹನಗಳತ್ತ ಆಕರ್ಷಿತರಾಗುತ್ತಿದ್ದು, ಪ್ರೀಮಿಯಂ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಥರ್ ಎನರ್ಜಿ ಕಂಪನಿಯು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ದೀಪಾವಳಿ ವಿಶೇಷತೆಗಾಗಿ ಕಂಪನಿಯು ಇತ್ತೀಚೆಗೆ ಒಂದೇ ದಿನದಲ್ಲಿ ಅತಿ ಹೆಚ್ಚು ಇವಿ ಸ್ಕೂಟರ್ ವಿತರಣೆ ದಾಖಲೆ ನಿರ್ಮಿಸಿದ್ದು, ದೇಶಾದ್ಯಂತ ತನ್ನ ಪ್ರಮುಖ ಡೀಲರ್ಸ್ ಗಳಲ್ಲಿ 250 ಯುನಿಟ್ ವಿತರಿಸಿದೆ.

ದಕ್ಷಿಣ ಭಾರತದಲ್ಲಿ ದೀಪಾವಳಿ ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ಆಚರಣೆಯಲ್ಲಿರುವ ಧಾಂತೇರಾಸ್ ವಿಶೇಷತೆಗಾಗಿ ಅಕ್ಟೋಬರ್ 23ರಂದು 250 ಯುನಿಟ್ ಇವಿ ಸ್ಕೂಟರ್ ವಿತರಣೆ ಮಾಡಿರುವ ಬಗ್ಗೆ ಸಿಇಒ ತರುಣ್ ಮೇಹ್ತಾ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಹೊಸ ಇವಿ ಸ್ಕೂಟರ್ ಖರೀದಿದಾರರಿಗೆ ಕಂಪನಿಯ ಪರವಾಗಿ ಶುಭಕೋರಿದ್ದಾರೆ.

ಎಥರ್ ಎನರ್ಜಿ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ 450ಎಕ್ಸ್ ಮತ್ತು 450 ಪ್ಲಸ್ ನವೀಕೃತ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ದುಬಾರಿ ಬೆಲೆಯ ನಡುವೆಯೂ ಕಂಪನಿಯು ಕಳೆದ ಕೆಲ ತಿಂಗಳಿನಿಂದ ದಾಖಲೆ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದೆ.

ಬೆಲೆ (ಎಕ್ಸ್ ಶೋರೂಂ ಪ್ರಕಾರ)

450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಗಳು ನಮ್ಮ ಬೆಂಗಳೂರಿನಲ್ಲಿ ಸದ್ಯ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಮಾದರಿಗೆ ರೂ. 1,34,147 ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 1,55,657 ಬೆಲೆ ಹೊಂದಿದೆ.

Ather 450X

ಇದನ್ನು ಓದಿ: ಅಚ್ಚರಿ ಬೆಲೆಯಲ್ಲಿ ಬಿಡುಗಡೆಯಾದ ಓಲಾ ಎಸ್1 ಏರ್ ಇವಿ ಸ್ಕೂಟರ್!

ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್

ನವೀಕೃತ 450ಎಕ್ಸ್ ಇವಿ ಸ್ಕೂಟರ್‌‌ನಲ್ಲಿ ಎಥರ್ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ 3.7kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, 6.2kW ಮೋಟಾರ್ ಮೂಲಕ ಹೊಸ ಸ್ಕೂಟರ್ ಇದೀಗ ARAI ಸಂಸ್ಥೆಯು ಪ್ರಮಾಣೀಕರಿಸಿದಂತೆ ಪ್ರತಿ ಚಾರ್ಜ್‌ಗೆ ಗರಿಷ್ಠ 146 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. 450ಎಕ್ಸ್ ಇವಿ ಸ್ಕೂಟರ್‌ ನಲ್ಲಿ ಪ್ರಮುಖ ನಾಲ್ಕು ರೈಡ್ ಮೋಡ್‌ಗಳಿದ್ದು, ಇಕೋ ಮೋಡ್‌ನಲ್ಲಿ ಕನಿಷ್ಠ 105 ಕಿ.ಮೀ ರಿಯಲ್ ವರ್ಲ್ಡ್ ಮೈಲೇಜ್ ಪಡೆದುಕೊಳ್ಳಬಹುದಾಗಿದೆ.

ಹೊಸ ಇವಿ ಸ್ಕೂಟರ್ ಮಾದರಿಗಳಲ್ಲಿ ಹಲವು ಸುಧಾರಿತ ತಾಂತ್ರಿಕ ಸೌಲಭ್ಯಗಳನ್ನು ಇದೀಗ ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗಿದ್ದು, ಹೊಸ ಫೀಚರ್ಸ್‌ಗಳ ಹೊರತಾಗಿಯೂ ಸುಧಾರಿತ ತಂತ್ರಜ್ಞಾನ ಪ್ರೇರಿತ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳಲ್ಲಿ ಕಂಪನಿಯು ಈ ಹಿಂದಿನ ಮಾದರಿಯಲ್ಲಿನ ಹಲವು ಫೀಚರ್ಸ್‌ಗಳನ್ನು ಮುಂದುವರಿಸಿದೆ.

ಇದನ್ನು ಓದಿ: ಪ್ರತಿ ಚಾರ್ಜ್ ಗೆ 590 ಕಿ.ಮೀ ಮೈಲೇಜ್ ಹೊಂದಿರುವ ಹೊಸ ಮರ್ಸಿಡಿಸ್ ಇಕ್ಯೂಇ ಅನಾವರಣ

ಹೊಸ ಫೀಚರ್ಸ್‌ಗಳನ್ನು ಓವರ್-ದ-ಏರ್ ಅಪ್‌ಡೇಟ್ ಮೂಲಕ ಒಂದೊಂದಾಗಿ ಅನ್‌ಲಾಕ್ ಮಾಡಲಾಗುತ್ತಿದ್ದು, ಕನೆಕ್ಟೆಡ್ ಸೌಲಭ್ಯಗಳನ್ನು ಮತ್ತಷ್ಟು ಸುಧಾರಣೆಗೊಳಿಸಲು ಇನ್ ಬೀಲ್ಟ್ ಸ್ಟೋರೆಜ್ ನಲ್ಲಿ ಹೆಚ್ಚುವರಿಯಾಗಿ 2 ಜಿಬಿ ರ‍್ಯಾಮ್ ಜೋಡಣೆ ಮಾಡಲಾಗಿದೆ.

ಹಾಗೆಯೇ ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಆಕ್ಸಿಲೇಷನ್, ಕಾರ್ನರ್ ರೈಡ್ ಮತ್ತು ಬ್ರೇಕಿಂಗ್ ಫರ್ಪಾಮೆನ್ಸ್ ಸಾಕಷ್ಟು ಸುಧಾರಣೆಗೊಳಿಸಲಾಗಿದ್ದು, ಕಂಪನಿಯು ಈ ವರ್ಷಾಂತ್ಯಕ್ಕೆ ಮತ್ತಷ್ಟು ನಗರಗಳಲ್ಲಿ ಮಾರಾಟ ಸೌಲಭ್ಯ ತೆರೆಯುವ ನೀರಿಕ್ಷೆಯಲ್ಲಿದೆ. ಕರ್ನಾಟಕದಲ್ಲಿ ಸದ್ಯ 6 ಶೋರೂಂ ಹೊಂದಿರುವ ಎಥರ್ ಕಂಪನಿಯು, ಬೆಂಗಳೂರು, ಮೈಸೂರು, ಹುಬ್ಬಳ್ಳಿ ಮತ್ತು ಬೆಳಗಾವಿ ನಂತರ ಮತ್ತಷ್ಟು ಹೊಸ ನಗರಗಳಲ್ಲಿ ಮಾರಾಟ ಸೌಲಭ್ಯವನ್ನು ವಿಸ್ತಿರಿಸುವ ಯೋಜನೆಯಲ್ಲಿದೆ.

Published On - 7:48 pm, Mon, 24 October 22