AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲೆಕ್ಟ್ರಿಕ್ ಕಾರು ಬ್ಯಾಟರಿ ದೀರ್ಘ ಬಾಳಿಕೆ ಬರಬೇಕಾ? ಇಲ್ಲಿದೆ ಏಳು ಟಿಪ್ಸ್

Electric Vehicle Maintenance: Extend Battery Life & Save Money on Your EV: ಆಧುನಿಕ ಎಲೆಕ್ಟ್ರಿಕ್ ವಾಹನದಿಂದ ಗರಿಷ್ಠ ಲಾಭ ಪಡೆಯಲು ಪರಿಣಾಮಕಾರಿ ಬ್ಯಾಟರಿ ನಿರ್ವಹಣೆ ಮತ್ತು ವೆಚ್ಚ ನಿಯಂತ್ರಣ ಕಲಿಯಿರಿ. ಸರಿಯಾದ ಚಾರ್ಜಿಂಗ್, ವ್ಯಾಪಕ ವಿಮೆ, ಮತ್ತು ಸೂಕ್ತ ವಾಹನ ಆರೈಕೆಯಿಂದ ನಿಮ್ಮ ಇವಿ ಬ್ಯಾಟರಿ ಬಾಳಿಕೆ ಹೆಚ್ಚಿಸಿ, ಕಾರ್ಯಾಚರಣಾ ವೆಚ್ಚವನ್ನು ಕಡಿಮೆ ಮಾಡಿ. ಸಾಫ್ಟ್‌ವೇರ್ ಅಪ್‌ಡೇಟ್‌ಗಳು ಮತ್ತು ದಕ್ಷ ಚಾಲನಾ ಅಭ್ಯಾಸಗಳು ನಿಮ್ಮ ಇವಿ ಮಾಲೀಕತ್ವವನ್ನು ಇನ್ನಷ್ಟು ಲಾಭದಾಯಕವಾಗಿಸುತ್ತದೆ.

ಎಲೆಕ್ಟ್ರಿಕ್ ಕಾರು ಬ್ಯಾಟರಿ ದೀರ್ಘ ಬಾಳಿಕೆ ಬರಬೇಕಾ? ಇಲ್ಲಿದೆ ಏಳು ಟಿಪ್ಸ್
ಇವಿ ಚಾರ್ಜಿಂಗ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jan 28, 2026 | 11:10 PM

Share

ಆಧುನಿಕ ಎಲೆಕ್ಟ್ರಿಕ್ ವಾಹನ (EV) ನಿಮ್ಮ ದೈನಂದಿನ ಪ್ರಯಾಣ ವೆಚ್ಚ ಕಡಿಮೆ ಮಾಡುವುದಲ್ಲದೆ ಒಳ್ಳೆಯ ಡ್ರೈವಿಂಗ್ ಅನುಭವ ನೀಡುತ್ತದೆ. ನೀವು ಇವಿಯಿಂದ ಗರಿಷ್ಠ ಲಾಭ ಪಡೆಯಬೇಕೆಂದರೆ, ಅದರ ಬ್ಯಾಟರಿಯ ಪರಿಣಾಮಕಾರಿ ನಿರ್ವಹಣೆಯನ್ನು ಕಲಿಯಬೇಕು. ಹಾಗೂ ಒಟ್ಟಾರೆ ವಾಹನ ಚಾಲನೆ ವೆಚ್ಚದ ಮೇಲೆ ನಿಯಂತ್ರಣ ಸಾಧಿಸಬೇಕು. ನಿಮ್ಮ ಕಾರಿನ ಬಾಳಿಕೆ ಹೆಚ್ಚಿಸುವ ಮತ್ತು ನಿಮ್ಮ ಬ್ಯಾಂಕ್ ಬ್ಯಾಲನ್ಸ್ ಆರೋಗ್ಯಯುತವಾಗಿಸುವ ಕೆಲ ಟಿಕ್ಸ್ ಅನ್ನು ನೀವು ತಿಳಿದಿರುವುದು ಉತ್ತಮ.

1. ನಿಮ್ಮ ಚಾರ್ಜಿಂಗ್ ಸಮರ್ಪಕವಾಗಿರುವಂತೆ ನೋಡಿಕೊಳ್ಳಿ

ಇವಿ ಬ್ಯಾಟರಿಯನ್ನು ಅತಿಯಾದ ಉಷ್ಣ ವಾತಾವರಣದಲ್ಲಿ ಇರದಂತೆ ನೋಡಿಕೊಳ್ಳಿ. ಇದರಿಂದ ಬ್ಯಾಟರಿ ಬಾಳಿಕೆ ಹೆಚ್ಚುತ್ತದೆ. ನಿಧಾನ ಹಾಗೂ ಸುರಕ್ಷಿತ ಚಾರ್ಜಿಂಗ್ ವಿಧಾನ ಅಳವಡಿಸಿ. ಬ್ಯಾಟರಿ ಚಾರ್ಜಿಂಗ್ ಶೇ. 20ರಿಂದ ಶೇ. 80ರಷ್ಟು ಇರಲಿ. ಹಾಗಿದ್ದಾಗ ಬ್ಯಾಟರಿಯ ಆರೋಗ್ಯ ಉತ್ತಮವಾಗಿರುತ್ತದೆ.

ಫಾಸ್ಟ್ ಚಾರ್ಜಿಂಗ್ ಸ್ಟೇಷನ್​ಗೆ ಹೋಗಿ ಚಾರ್ಜಿಂಗ್ ಮಾಡಿದರೆ ಸಮಯ ಉಳಿಯಬಹುದು. ಆದರೆ, ಇದರಿಂದ ಅತಿಯಾದ ಬಿಸಿಯಾಗಿ ಬ್ಯಾಟರಿ ಸೆಲ್​ಗಳು ಕ್ರಮೇಣವಾಗಿ ಕುಂದಬಹುದು. ನಿಮ್ಮ ಮನೆ ಇರುವ ಪ್ರದೇಶದಲ್ಲಿ ಪೀಕ್ ಅಲ್ಲದ ಸಮಯದಲ್ಲಿ ಬಳಸುವ ವಿದ್ಯುತ್​ಗೆ ಕಡಿಮೆ ದರ ಇದೆಯಾ ಗಮನಿಸಿ. ಅಂಥ ಸಮಯದಲ್ಲಿ ಇವಿ ಬ್ಯಾಟರಿ ಚಾರ್ಜಿಂಗ್ ಮಾಡಬಹುದು.

2. ಹಣಕಾಸು ಸುರಕ್ಷತೆಗಳು

ವ್ಯಾಪಕ ಕವರೇಜ್ ನೀಡುವ ಪಾಲಿಸಿ ನಿಮಗೆ ಅಗತ್ಯ. ಈ ಹಿನ್ನೆಲೆಯಲ್ಲಿ ವಿವಿಧ ಕಾರು ಇನ್ಷೂರೆನ್ಸ್​ಗಳನ್ನು ಪರಿಶೀಲಿಸುವುದು ಬಹಳ ಪ್ರಮುಖ ಹೆಜ್ಜೆ. ಸ್ಟ್ಯಾಂಡರ್ಡ್ ಪಾಲಿಸಿಗಳು ನಿರ್ದಿಷ್ಟ ಎಲೆಕ್ಟ್ರಿಕ್ ಕಾಂಪೊನೆಂಟ್​ಗಳಿಗೆ ಕವರೇಜ್ ನೀಡದೇ ಇರಬಹುದು. ಆದ್ದರಿಂದ ಕಾರ್ ಇನ್ಷೂರೆನ್ಸ್ ಪಾಲಿಸಿ ಖರೀದಿಸುವಾಗ ಬ್ಯಾಟರಿ ರೀಪ್ಲೇಸ್ಮೆಂಟ್ ಕವರೇಜ್ ಇದೆಯಾ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಎಲೆಕ್ಟ್ರಿಕ್ ವಾಹನಗಳು ಅಪಘಾತಗೊಂಡಾಗ ಅವನ್ನು ರಿಪೇರಿ ಮಾಡುವುದು ಬಹಳ ದುಬಾರಿ ಎನಿಸಬಹುದು. ನಿಮ್ಮ ಜೇಬಿಂದ ಹೆಚ್ಚು ವೆಚ್ಚವಾಗದಂತೆ ಪ್ಲಾನ್ ಮಾಡುವುದು ಬಹಳ ಮುಖ್ಯ. ವಾಹನದ ಚಾರ್ಜಿಂಗ್ ಮುಗಿದು ನಿಂತು ಹೋದಾಗ, ಅದರ ಅಸಿಸ್ಟೆನ್ಸ್ ವೆಚ್ಚವನ್ನು ನಿಮ್ಮ ಇನ್ಷೂರೆನ್ಸ್ ಭರಿಸುತ್ತದೆಯಾ ಎಂಬುದನ್ನೂ ಗಮನಿಸಿ.

3. ಅತಿಯಾದ ಬಿಸಿಲು ತಪ್ಪಿಸಿ

ಅತಿಯಾದ ಹವಾಮಾನವು ನಿಮ್ಮ ಇವಿ ವಾಹನದ ಬ್ಯಾಟರಿ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ, ಬೇಸಿಗೆ ಬಂದಾಗ ನೆರಳಿರುವ ಜಾಗದಲ್ಲಿ ವಾಹನ ಪಾರ್ಕ್ ಮಾಡಿ. ಚಾರ್ಜಿಂಗ್ ಮಾಡುವಾಗ ನಿಮ್ಮ ಕಾರನ್ನು ಪ್ರೀಕಂಡೀಷನ್ ಮಾಡಿದರೆ ಬ್ಯಾಟರಿ ಪವರ್ ರಿಸರ್ವ್ಸ್ ತಗ್ಗುವುದಿಲ್ಲ.

ಇನ್ನು, ಶೀತ ಹವಾಮಾನದಲ್ಲಿ ರಾಸಾಯನಿಕ ಕ್ರಿಯೆ ನಿಧಾನಗೊಳ್ಳುತ್ತದೆ. ಹೀಗಾಗಿ, ಇವಿ ಕ್ಷಮತೆ ಸಹಜವಾಗಿರಬೇಕೆಂದರೆ ಹೆಚ್ಚಿನ ಬ್ಯಾಟರಿ ಶಕ್ತಿ ಬೇಕಾಗುತ್ತದೆ. ನಿಮ್ಮ ಬ್ಯಾಟರಿಯಲ್ಲಿ ಸರಿಯಾದ ಉಷ್ಣತಾ ಶ್ರೇಣಿ ಇದೆಯಾ ಎಂಬುದನ್ನು ಇಂಡಿಕೇಟರ್​ಗಳ ಮೂಲಕ ಗಮನಿಸಬಹುದು.

4. ಟಯರ್ ಮತ್ತು ಬ್ರೇಕ್ ಬಗ್ಗೆ ಎಚ್ಚರ

ಎಲೆಕ್ಟ್ರಿಕ್ ವಾಹನಗಳಲ್ಲಿ ಮೆಕ್ಯಾನಿಕಲ್ ಭಾಗಗಳು ಕಡಿಮೆ ಇರುವುದರಿಂದ ಅವುಗಳ ಮೈಂಟೆನೆನ್ಸ್ ವೆಚ್ಚ ಕಡಿಮೆಯೇ ಇರುತ್ತದೆ. ಬ್ಯಾಟರಿಗಳು ಭಾರವಾಗಿರುವುದರಿಂದ ಇತರ ಪೆಟ್ರೋಲ್ ಕಾರಿಗೆ ಹೋಲಿಸಿದರೆ ಇವಿಯ ಟಯರ್​ಗಳು ಬೇಗ ಸವೆಯಬಹುದು. ಹೀಗಾಗಿ, ಟಯರ್ ಪ್ರೆಷರ್ ಅನ್ನು ನಿಯಮಿತವಾಗಿ ಪರಿಶೀಲಿಸಿ.

ರೀಜನರೇಟಿವ್ ಬ್ರೇಕಿಂಗ್ ಸಿಸ್ಟಂಗಳು ನಿಮ್ಮ ಬ್ರೇಕ್ ಪ್ಯಾಡ್ ಸವೆಯುವುದನ್ನು ನಿಧಾನಗೊಳಿಸುತ್ತದೆ. ಆದರೆ, ಅವು ಸುರಕ್ಷಿತವಾಗಿವೆಯಾ ಎಂಬುದನ್ನು ಆಗಾಗ್ಗೆ ಪರಿಶೀಲಿಸಿ ಖಚಿತಪಡಿಸಿಕೊಳ್ಳುತ್ತಿರಬೇಕು. ಇವಿ ಟಯರ್​ಗಳು ಬೇಗ ಸವೆಯುತ್ತವೆ. ಆದ್​ದರಿಂದ ವೀಲ್ ಅಲೈನ್ಮೆಂಟ್ ಅನ್ನು ಪ್ರತೀ ಆರು ತಿಂಗಳಿಗೊಮ್ಮೆ ಪರೀಕ್ಷಿಸಬೇಕು. ಆರು ತಿಂಗಳಿಗೊಮ್ಮೆ ಟಯರ್ ಅನ್ನು ಬದಲಿಸುವುದೂ ಕೂಡ ಉತ್ತಮ. ಇದರಿಂದ ವಾಹನದ ಮೈಲೇಜ್ ಕೂಡ ಹೆಚ್ಚುತ್ತದೆ.

5. ಆಪರೇಟಿಂಗ್ ವೆಚ್ಚ ಪರಿಶೀಲಿಸಿ

ಇನ್ಷೂರೆನ್ಸ್ ಪಡೆಯುವಾಗ ಕಾಂಪ್ರಹೆನ್ಸಿವ್ ಪಾಲಿಸಿ ಒಳ್ಳೆಯ ಆಯ್ಕೆಯಾಗಬಹುದು. ಮನೆಯಲ್ಲೇ ಇವಿಗೆ ಚಾರ್ಜಿಂಗ್ ಮಾಡಿದರೆ ಹಣ ಉಳಿಸಬಹುದು. ಪೆಟ್ರೋಲ್ ಮತ್ತು ಡೀಸಲ್ ಕಾರುಗಳಿಗೆ ಹೋಲಿಸಿದರೆ ಇವಿ ಪ್ರಯಾಣ ವೆಚ್ಚ ಕಡಿಮೆ ಆಗಬಹುದು.

ಪಬ್ಲಿಕ್ ಚಾರ್ಜಿಂಗ್​ಗೆ ಸಬ್​ಸ್ಕ್ರಿಪ್ಷನ್ ಸರ್ವಿಸ್ ಇರುತ್ತದೆ. ಅದಕ್ಕೆ ಕಡಿಮೆ ದರದ ಆಫರ್ ಇರಬಹುದು. ನಿತ್ಯದ ಬಳಕೆದಾರರಿಗೆ ಇದು ಸಮಂಜಸ ಎನಿಸಬಹುದು. ಎಲೆಕ್ಟ್ರಿಕ್ ಮೋಟಾರುಗಳು ಸಾಮಾನ್ಯವಾಗಿ ವಿಶ್ವಾಸಾರ್ಹವಾಗಿರುತ್ತವೆ. ಆಯಿಲ್ ಚೇಂಜ್, ಸ್ಪಾರ್ಕ್ ಪ್ಲಗ್ ಬದಲಿಸುವ ಅಗತ್ಯ ಇರುವುದಿಲ್ಲ. ಟೈಮಿಂಗ್ ಬೆಲ್ಟ್ ಅಡ್ಜಸ್ಟ್ಮೆಂಟ್ ಕೂಡ ಬೇಕಾಗಿರುವುದಿಲ್ಲ.

6. ಸಾಫ್ಟ್​ವೇರ್ ಮತ್ತು ಫರ್ಮ್​ವೇರ್ ಅಪ್​ಡೇಟ್ ಮಾಡಿ

ಕಾರು ತಯಾರಕರು ಕಾರಿನ ಕ್ಷಮತೆ ಸುಧಾರಿಸಲು ಆಗಾಗ್ಗೆ ಓವರ್-ದಿ-ಏರ್ ಅಪ್​ಡೇಟ್​ಗಳನ್ನು (ಸಾಫ್ಟ್​ವೇರ್) ಬಿಡುಗಡೆ ಮಾಡುತ್ತಿರುತ್ತಾರೆ. ಇವುಗಳನ್ನು ಸಾಧ್ಯವಾದಷ್ಟೂ ಬೇಗ ಇನ್ಸ್​ಟಾಲ್ ಮಾಡಿಕೊಂಡರೆ ವಾಹನದ ಕ್ಷಮತೆ ಹೆಚ್ಚುತ್ತದೆ. ಎಲೆಕ್ಟ್ರಿಕ್ ಕಾರ್ ಸಿಸ್ಟಂನ ಸುರಕ್ಷತೆಯನ್ನು ಹೆಚ್ಚಿಸಲು ಈ ಅಪ್​ಡೇಟ್ಗಳು ನೆರವಾಗುತ್ತವೆ. ಸಣ್ಣ ಪುಟ್ಟ ದೋಷಗಳಿದ್ದರೆ ಅದನ್ನು ನಿವಾರಿಸಲೂ ಈ ಅಪ್​ಡೇಟ್ ಅನ್ನು ಬಿಡುಗಡೆ ಮಾಡಲಾಗುತ್ತಿರುತ್ತದೆ.

ನಿಮ್ಮ ಸಿಸ್ಟಂ ಅನ್ನು ಅಪ್​ಟುಡೇಟ್ ಆಗಿಟ್ಟುಕೊಳ್ಳುವುದರಿಂದ ಇತ್ತೀಚಿನ ನ್ಯಾವಿಗೇಶನ್ ಡಾಟಾ ನಿಮಗೆ ದೊರಕುತ್ತದೆ. ಸ್ಥಳೀಯವಾಗಿ ಚಾರ್ಜಿಂಗ್ ಸ್ಟೇಷನ್ ಇದೆಯಾ ಎನ್ನುವ ಮಾಹಿತಿ ಸಿಗಲು ಸಹಕಾರಿಯಾಗುತ್ತದೆ.

7. ಅತ್ಯುತ್ತಮ ಕ್ಷಮತೆಗೆ ಡ್ರೈವ್ ಮಾಡಿ

ರೀಜನರೇಟಿವ್ ಬ್ರೇಕಿಂಗ್ ಫೀಚರ್ ಅನ್ನು ಬಳಸುವುದರಿಂದ ನೀವು ಗಾಡಿ ನಿಧಾನಗೊಳಿಸಿದಾಗ ಬ್ಯಾಟರಿ ಶಕ್ತಿ ಹೆಚ್ಚು ನಷ್ಟವಾಗದಂತೆ ನಿಯಂತ್ರಿಸಬಹುದು. ಇದರಿಂದ ನಿಮ್ಮ ಡ್ರೈವಿಂಗ್ ರೇಂಜ್ ಹೆಚ್ಚಾಗುತ್ತದೆ. ಒಂದೇ ಪೆಡಲ್​ನಲ್ಲಿ ಡ್ರೈವಿಂಗ್​ನಲ್ಲಿ ಪಳಗಲು ಒಂದಷ್ಟು ಕಾಲ ಮತ್ತು ಅಭ್ಯಾಸ ಬೇಕಾಗುತ್ತದೆ. ಇದು ಸಾಧ್ಯವಾದರೆ ಹೆವಿ ಟ್ರಾಫಿಕ್​ನಲ್ಲಿ ಹೆಚ್ಚು ಬ್ರೇಕ್ ಪೆಡಲ್ ಬಳಸುವ ಅಗತ್ಯವನ್ನು ತಪ್ಪಿಸಬಹುದು.

ಈ ಸ್ಮಾರ್ಟ್ ಫೀಚರ್ ಅನ್ನು ಸತತವಾಗಿ ಬಳಸುವುದರಿಂದ ನಿಮ್ಮ ಎಲೆಕ್ಟ್ರಿಕ್ ವಾಹನದ ಜೀವಿತಾವಧಿಯನ್ನು ಹೆಚ್ಚಿಸಬಹುದು. ನಿಮ್ಮ ಗಾಡಿಗೆ ರೀಸೇಲ್ ಮೌಲ್ಯವೂ ಉತ್ತಮವಾಗಿರುತ್ತದೆ. ಒಂದೇ ಸಲ ಆಕ್ಸಿಲರೇಟರ್ ಪೆಡಲ್ ಅನ್ನು ತಳಕ್ಕೆ ಒತ್ತುವ ಬದಲು ನಿಧಾನವಾಗಿ ಒತ್ತಿದಾಗ ಬ್ಯಾಟರಿ ಉಳಿಸಬಹುದು. ಎಲೆಕ್ಟ್ರಿಕ್ ಮೋಟಾರ್ ಮೇಲಿನ ಒತ್ತಡವನ್ನೂ ಕಡಿಮೆ ಮಾಡಬಹುದು.

ಈ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಬ್ಯಾಟರಿ ಸಮಸ್ಯೆ ಇಲ್ಲದೆ, ಅನಿರೀಕ್ಷಿತ ವೆಚ್ಚ ಇಲ್ಲದೆ ಎಲೆಕ್ಟ್ರಿಕ್ ಕಾರಿನ ಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ. ಸರಿಯಾದ ರೀತಿಯಲ್ಲಿ ಡ್ರೈವಿಂಗ್ ಮಾಡುವುದು, ಮತ್ತು ಸರಿಯಾದ ವಿಧಾನದಲ್ಲಿ ಚಾರ್ಜಿಂಗ್ ಮಾಡುವುದು, ಈ ಕಾರ್ಯಗಳಿಂದ ಎಲೆಕ್ಟ್ರಿಕ್ ವಾಹನದ ಮೈಂಟೆನೆನ್ಸ್ ಬಹಳ ಉತ್ತಮವಾಗಿರುತ್ತದೆ.

ಈ ಸ್ಮಾರ್ಟ್ ಟಿಪ್ಸ್ ಅನ್ನು ಮರೆಯದೇ ಪಾಲಿಸುವುದರಿಂದ ಹಣ ಉಳಿಸಬಹುದರ ಜೊತೆಗೆ, ಪರಿಸರ ಸ್ನೇಹಿ ವಾತಾವರಣವನ್ನು ಖಚಿತಪಡಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:51 pm, Wed, 28 January 26