ಹೊಸ ಟ್ಯಾಕ್ಸ್ ರೆಜಿಮ್ನಲ್ಲಿ ಇನ್ನಷ್ಟು ಡಿಡಕ್ಷನ್ ಕೊಟ್ಟು, ಹಳೆಯ ಟ್ಯಾಕ್ಸ್ ಸಿಸ್ಟಂ ನಿಲ್ಲಿಸಲಾಗುತ್ತಾ?
Budget 2026 income tax expectations: ಫೆಬ್ರುವರಿ 1ರಂದು ಮಂಡನೆಯಾಗುವ ಬಜೆಟ್ನಲ್ಲಿ ಹಲವು ನಿರೀಕ್ಷೆಗಳಿವೆ. ಆದಾಯ ತೆರಿಗೆಯಲ್ಲಿ ಕಳೆದ ಬಜೆಟ್ನಲ್ಲಿ ಗಣನೀಯ ಇಳಿಕೆ ಮಾಡಲಾಗಿದೆ. ಈ ಬಾರಿ ಮತ್ತಷ್ಟು ಟ್ಯಾಕ್ಸ್ ಇಳಿಸುವ ನಿರೀಕ್ಷೆ ಇಲ್ಲ. ಆದರೆ, ಹಳೆಯ ಟ್ಯಾಕ್ಸ್ ರೆಜಿಮ್ ಮುಂದುವರಿಯುತ್ತದಾ ಇಲ್ಲವಾ ಎನ್ನುವ ಪ್ರಶ್ನೆ ಇದೆ. ಅದಕ್ಕೆ ಬಜೆಟ್ನಲ್ಲಿ ಉತ್ತರ ಸಿಗುತ್ತಾ ಎಂದು ಕಾದು ನೋಡಬೇಕು.

ನವದೆಹಲಿ, ಜನವರಿ 28: ಕೇಂದ್ರ ಬಜೆಟ್ (Union Budget) ಮಂಡನೆಗೆ ದಿನಗಣನೆ ನಡೆದಿದೆ. ಬಜೆಟ್ ಅಧಿವೇಶನ ಶುರುವಾಗಿದೆ. ಹಲ್ವಾ ಕಾರ್ಯಕ್ರಮ ಮುಕ್ತಾಯವಾಗಿ ಬಜೆಟ್ ರೂಪಿಸುತ್ತಿರುವವರೆಲ್ಲರೂ ಹೊರಪ್ರಪಂಚದಿಂದ ಮರೆಯಾಗಿದ್ದಾರೆ. ಫೆಬ್ರುವರಿ 1ರಂದು ಮಂಡನೆಯಾಗುವ ಬಜೆಟ್ನಲ್ಲಿ ಏನಿರುತ್ತೆ, ಏನಿರಲ್ಲ, ಯಾರಿಗೆ ಹೆಚ್ಚು ಭಾಗ್ಯ, ಇತ್ಯಾದಿ ನಿರೀಕ್ಷೆ, ಅಪೇಕ್ಷೆಗಳು ಬಹಳ ಇವೆ. ಪ್ರತೀ ಬಜೆಟ್ನಲ್ಲಿ ಜನಸಾಮಾನ್ಯರು ಅತಿಹೆಚ್ಚು ಗಮನಿಸುವುದು ಆದಾಯ ತೆರಿಗೆ ಅಂಶಗಳನ್ನು. ಈ ಬಾರಿಯ ಬಜೆಟ್ನಲ್ಲಿ ಇನ್ಕಮ್ ಟ್ಯಾಕ್ಸ್ ವಿಚಾರವನ್ನು ನಿರ್ಮಲಾ ಸೀತಾರಾಮನ್ ತರುತ್ತಾರಾ ಎನ್ನುವುದು ಪ್ರಶ್ನೆ.
ಕಳೆದ ವರ್ಷದ ಬಜೆಟ್ನಲ್ಲಿ (2025ರದ್ದು) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇನ್ಕಮ್ ಟ್ಯಾಕ್ಸ್ ವಿಚಾರದಲ್ಲಿ ಭರಪೂರ ಕೊಡುಗೆಗಳನ್ನು ಜನಸಾಮಾನ್ಯರಿಗೆ ಕೊಟ್ಟಿದ್ದರು. ಸ್ಲ್ಯಾಬ್ ದರಗಳು ಬದಲಾದವು, ಸರಳಗೊಂಡವು. 12 ಲಕ್ಷ ರೂ ಆದಾಯ ಇದ್ದವರಿಗೆ ಟ್ಯಾಕ್ಸ್ ಮನ್ನಾ ಮಾಡಲಾಯಿತು. 75,000 ರೂ ಸ್ಟ್ಯಾಂಡರ್ಡ್ ಡಿಡಕ್ಷನ್ ಒಳಗೊಂಡರೆ 12,75,000 ರೂ ವಾರ್ಷಿಕ ಆದಾಯ ಇರುವವರು ಇನ್ಕಮ್ ಟ್ಯಾಕ್ಸ್ ಬಾಧ್ಯತೆಯನ್ನೇ ಹೊಂದಿರುವುದಿಲ್ಲ.
ಇದನ್ನೂ ಓದಿ: ಹಲ್ವಾ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ಭಾಗಿ; ಬಜೆಟ್ಗೆ ಮುಂಚೆ ನಡೆಯುವ ಇದರ ವಿಶೇಷತೆ ಏನು?
ಭಾರತದಲ್ಲಿ ಹೆಚ್ಚಿನ ಆದಾಯ ತೆರಿಗೆ ಪಾವತಿದಾರರ ವಾರ್ಷಿಕ ಆದಾಯ 12.75 ಲಕ್ಷ ರೂ ಮಿತಿಯೊಳಗೆಯೇ ಇದೆ. ಹೀಗಾಗಿ, ಕಳೆದ ಬಾರಿಯ ಬಜೆಟ್ನಿಂದ ಕೋಟ್ಯಂತರ ಜನರು ಟ್ಯಾಕ್ಸ್ ರಿಲೀಫ್ ಪಡೆದಿದ್ದರು. ಆದರೆ, ಈ ಟ್ಯಾಕ್ಸ್ ರಿಲೀಫ್ ಕೊಡಲಾಗಿದ್ದು ಹೊಸ ಟ್ಯಾಕ್ಸ್ ರೆಜೀಮ್ನಲ್ಲಿ ಮಾತ್ರ. ಹಳೆಯ ಟ್ಯಾಕ್ಸ್ ರೆಜಿಮ್ ಹಾಗೆಯೇ ಇದೆ. ಇದು ಗೊಂದಲ ತಂದಿರುವ ಸಂಗತಿ.
ಈ ಬಾರಿಯ ಬಜೆಟ್ನಲ್ಲಿ ಹಳೆಯ ಟ್ಯಾಕ್ಸ್ ರೆಜಿಮ್ ವಿಚಾರದಲ್ಲಿ ಇರುವ ಗೊಂದಲವನ್ನು ನಿವಾರಿಸುವ ಪ್ರಯತ್ನವಾಗುತ್ತಾ ಎಂಬುದು ಪ್ರಶ್ನೆಯಾಗಿದೆ. ಹೊಸ ಟ್ಯಾಕ್ಸ್ ರೆಜೀಮ್ನಲ್ಲಿ ಸಿಕ್ಕಾಪಟ್ಟೆ ಟ್ಯಾಕ್ಸ್ ರಿಲೀಫ್ ಕೊಡಲಾಗಿದ್ದರೂ, ಹಳೆಯ ಟ್ಯಾಕ್ಸ್ ರೆಜಿಮ್ನ ಆಕರ್ಷಣೆ ಉಳಿದಿರುವುದು ಅದರ ಡಿಡಕ್ಷನ್ ಅವಕಾಶ.
ಓಲ್ಡ್ ಟ್ಯಾಕ್ಸ್ ರೆಜೀಮ್ನಲ್ಲಿ ಸುಮಾರು 3 ಲಕ್ಷ ರೂವರೆಗೆ ಟ್ಯಾಕ್ಸ್ ಡಿಡಕ್ಷನ್ ಅವಕಾಶ ಇದೆ. ಜನರು ಪಿಪಿಎಫ್ ಇತ್ಯಾದಿಯಲ್ಲಿ ಹೂಡಿಕೆ ಮಾಡಿ ಅದರಿಂದ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು. ಹೊಸ ಟ್ಯಾಕ್ಸ್ ಸಿಸ್ಟಂನಲ್ಲಿ 75,000 ರೂ ಸ್ಟ್ಯಾಂಡರ್ಡ್ ಡಿಡಕ್ಷನ್ ಬಿಟ್ಟರೆ ಬೇರೆ ಡಿಡಕ್ಷನ್ ಸೌಲಭ್ಯ ಇಲ್ಲ. ಹೀಗಾಗಿ, ಈಗಲೂ ಕೂಡ ಬಹಳ ಜನರು ಹಳೆಯ ಟ್ಯಾಕ್ಸ್ ರೆಜಿಮ್ ಅನ್ನೇ ಬಳಸುತ್ತಿರುವುದುಂಟು.
ಇದನ್ನೂ ಓದಿ: ಬಜೆಟ್ನಲ್ಲಿ ಜಿಎಸ್ಟಿ ದರ ಇಳಿಕೆಗೆ ಕ್ರಮ: ಎಂಎಸ್ಎಂಇಗಳಿಂದ ನಿರೀಕ್ಷೆ
ಈ ಬಾರಿಯ ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಹಳೆಯ ಟ್ಯಾಕ್ಸ್ ಸಿಸ್ಟಂ ಅನ್ನು ನಿಲ್ಲಿಸುವ ನಿರ್ಧಾರ ಮಾಡುತ್ತಾರಾ? ಹೊಸ ಟ್ಯಾಕ್ಸ್ ಸಿಸ್ಟಂನಲ್ಲಿ ಇನ್ನಷ್ಟು ಡಿಡಕ್ಷನ್ ಆಯ್ಕೆಗಳನ್ನು ಕೊಟ್ಟು ಹಳೆಯ ರೆಜಿಮ್ ಅನ್ನು ನಿಲ್ಲಿಸಿದರೂ ಅಚ್ಚರಿ ಇರುವುದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




