Union Budget 2026: ಹಲ್ವಾ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ಭಾಗಿ; ಬಜೆಟ್ಗೆ ಮುಂಚೆ ನಡೆಯುವ ಇದರ ವಿಶೇಷತೆ ಏನು?
Union Budget 2026, Halwa ceremony: ಫೆಬ್ರುವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಅದಕ್ಕೆ ಮುಂಚೆ ಹಲ್ವಾ ಕಾರ್ಯಕ್ರಮ ಇಂದು ನಡೆದಿದೆ. ಈ ಕಾರ್ಯಕ್ರಮದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಗಿಯಾಗಿ ಹಲ್ವಾ ತಯಾರಿಕೆಯಲ್ಲಿ ತೊಡಗಿ, ನಂತರ ಸಿಹಿ ಹಂಚಿದರು. ಬಜೆಟ್ನ ಅಂತಿಮ ಹಂತದ ಸಿದ್ಧತೆಯನ್ನು ಆರಂಭಿಸುವ ಮುನ್ನ ಹಲ್ವಾ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.

ನವದೆಹಲಿ, ಜನವರಿ 27: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಇಂದು (ಜ. 27) ಮಂಗಳವಾರ ಹಲ್ವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ದೆಹಲಿಯ ನಾರ್ತ್ ಬ್ಲಾಕ್ನಲ್ಲಿರುವ ಬಜೆಟ್ ಪ್ರೆಸ್ ಕಟ್ಟಡದಲ್ಲಿ ಈ ಕಾರ್ಯಕ್ರಮ ನಡೆಯಿತು. ಬಜೆಟ್ (Union Budget 2026) ಸಿದ್ಧತೆಯ ಅಂತಿಮ ಹಂತದ ಕ್ರಿಯೆ ಈ ಹಲ್ವಾ ಕಾರ್ಯಕ್ರಮದ ಮೂಲಕ ಆಗುತ್ತದೆ. ಬಜೆಟ್ ತಯಾರಿಕೆಯಲ್ಲಿ ತೊಡಗಿರುವ ಹಣಕಾಸು ಸಚಿವಾಲಯದ ಅಡಿಯ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳು ಹಾಗು ಹಿರಿಯ ಅಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದರು. ಫೆಬ್ರುವರಿ 1ರಂದು ಬಜೆಟ್ ಮಂಡನೆಯಾಗಲಿದೆ.
ಯಾಕಿದು ಹಲ್ವಾ ಕಾರ್ಯಕ್ರಮ?
ಹಲ್ವಾ ಕಾರ್ಯಕ್ರಮ ಬಜೆಟ್ ಸಿದ್ಧತೆಯ ಒಂದು ಸಣ್ಣ ಭಾಗ. ಪ್ರತೀ ಬಾರಿಯ ಬಜೆಟ್ಗೆ ಮುಂಚೆ ಇದು ನಡೆಯುತ್ತದೆ. ಬಜೆಟ್ ತಯಾರಿಕೆಯಲ್ಲಿ ತೊಡಗಿರುವವರೆಲ್ಲರೂ ಖುಷಿಯಲ್ಲಿ ಸಿಹಿ ತಿನ್ನುವ ಸಂದರ್ಭವಿದು.
ಇದನ್ನೂ ಓದಿ: ಬಜೆಟ್ನಲ್ಲಿ ಜಿಎಸ್ಟಿ ದರ ಇಳಿಕೆಗೆ ಕ್ರಮ: ಎಂಎಸ್ಎಂಇಗಳಿಂದ ನಿರೀಕ್ಷೆ
ದೊಡ್ಡ ಬಾಣಲೆಯಲ್ಲಿ ಹಲ್ವಾ ಸಿದ್ಧಪಡಿಸಲಾಗುತ್ತದೆ. ಹಣಕಾಸು ಸಚಿವರು ಅಥವಾ ಬಜೆಟ್ ಮಂಡಿಸುವವರು ಬಾಣಲೆಯಲ್ಲಿರುವ ಹಲ್ವಾವನ್ನು ತಿರುಗಿಸುವುದು ಸಂಪ್ರದಾಯ. ಆ ಬಳಿಕ ಎಲ್ಲರೂ ಹಲ್ವಾ ತಿಂದು ಸಂತೋಷ ಪಡುತ್ತಾರೆ. ಬಜೆಟ್ ಸಿದ್ಧತೆಯಲ್ಲಿ ಶ್ರಮ ಪಟ್ಟ ಎಲ್ಲರಿಗೂ ಸಿಹಿ ತಿನಿಸುವ ಮೂಲಕ ಸಚಿವರು ತೋರುವ ಕೃತಜ್ಞತೆಯ ಸಂದರ್ಭ ಅದಾಗಿರುತ್ತದೆ. ಭಾರತೀಯ ಸಂಪ್ರದಾಯದಲ್ಲಿ ಒಳ್ಳೆಯ ಕೆಲಸ ಆರಂಭವಾದಾಗ ಮತ್ತು ಯಶಸ್ವಿಯಾದಾಗ ಸಿಹಿ ತಿನಿಸುತ್ತಾರೆ. ಹಲ್ವಾ ಕಾರ್ಯಕ್ರಮ ಅದೇ ಸಂಪ್ರದಾಯದಲ್ಲಿ ರೂಪುಗೊಂಡಿದೆ.
ಹಲ್ವಾ ಕಾರ್ಯಕ್ರಮದ ಬಳಿಕ ಅಧಿಕಾರಿಗಳು ಲಾಕ್
ಹಲ್ವಾ ಕಾರ್ಯಕ್ರಮವು ಬಜೆಟ್ ಸಿದ್ಧತೆಯ ಅಂತಿಮ ಹಂತವಾಗಿರುತ್ತದೆ. ಇದಾದ ಬಳಿಕ ಬಜೆಟ್ ಸಿದ್ಧಪಡಿಸುವವರೆಲ್ಲರೂ ನಾರ್ತ್ ಬ್ಲಾಕ್ ಕಟ್ಟಡದಲ್ಲಿ ಸೇರುತ್ತಾರೆ. ಅಕ್ಷರಶಃ ಅವರು ಲಾಕ್ ಆಗಿರುತ್ತಾರೆ. ಹೊರಗಿನ ಸಂಪರ್ಕ ಇರುವುದಿಲ್ಲ. ಮೊಬೈಲ್ ಬಳಸುವಂತಿಲ್ಲ. ಬಜೆಟ್ ಮಂಡನೆ ಆರಂಭವಾಗುವವರೆಗೂ ಅವರಿಗೆ ಇದು ಲಾಕಿನ್ ಅವಧಿ. ಬಜೆಟ್ ಅಂಶಗಳು ಹೊರಗೆ ಸೋರಿಕೆಯಾಗಬಾರದೆಂದು ಮುಂಜಾಗ್ರತೆಯಾಗಿ ಈ ಬಿಗಿಕ್ರಮ ತೆಗೆದುಕೊಳ್ಳುತ್ತದೆ.
ಇದನ್ನೂ ಓದಿ: ಸಾಮಾನ್ಯ ಹೂಡಿಕೆದಾರರು ಈ ಬಾರಿಯ ಬಜೆಟ್ನಲ್ಲಿ ಗಮನಿಸಬೇಕಾದ ಸಂಗತಿಗಳಿವು
ನಾರ್ತ್ ಬ್ಲಾಕ್ನಲ್ಲಿ ಬಜೆಟ್ ಪ್ರೆಸ್ ಇರುವುದು. ಹಣಕಾಸು ಸಚಿವಾಲವು ಇದೇ ನಾರ್ತ್ ಬ್ಲಾಕ್ನಲ್ಲಿ ಇತ್ತು. ಈಗ ಕರ್ತವ್ಯ ಭವನಕ್ಕೆ ಅದರ ಕಚೇರಿ ವರ್ಗವಾಗಿದೆ. ಆದರೂ 2026-27ರ ಬಜೆಟ್ ಅನ್ನು ನಾರ್ತ್ ಬ್ಲಾಕ್ನಲ್ಲಿರುವ ಪ್ರೆಸ್ನಲ್ಲೇ ಮುದ್ರಿಸಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




