ದೇಶಾದ್ಯಂತ ದಸರಾ ಮತ್ತು ದೀಪಾವಳಿ ಸಂಭ್ರಮಕ್ಕಾಗಿ ಖರೀದಿ ಭರಾಟೆ ಜೋರಾಗಿದ್ದು, ಹೊಸ ವಾಹನಗಳ ಮಾರಾಟದಲ್ಲೂ ಸಾಕಷ್ಟು ಹೆಚ್ಚಳವಾಗಿದೆ. ಕಳೆದ ತಿಂಗಳು ಅಕ್ಟೋಬರ್ ಅವಧಿಯಲ್ಲಿನ ವಾಹನಗಳ ಮಾರಾಟ ಪ್ರಮಾಣವು ಭಾರೀ ಪ್ರಮಾಣದಲ್ಲಿ ಬೆಳವಣಿಗೆ ಸಾಧಿಸಿದ್ದು, ಪ್ಯಾಸೆಂಜರ್ ಕಾರುಗಳು ಮತ್ತು ತ್ರಿ ಚಕ್ರ ವಾಹನಗಳ ವಿಭಾಗದಲ್ಲಿ ಹೆಚ್ಚಿನ ಬೇಡಿಕೆ ದಾಖಲಾಗಿದೆ.
ದೇಶದ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ(ಸ್ಯಾಮ್) ಪ್ರಕಟಿಸಿರುವ ವರದಿಯಲ್ಲಿ ಪ್ಯಾಸೆಂಜರ್ ಕಾರುಗಳ ಮಾರಾಟವು ಈ ವರ್ಷದ ಅಕ್ಟೋಬರ್ ನಲ್ಲಿ ಕಳೆದ ವರ್ಷದ ಅಕ್ಟೋಬರ್ ಅವಧಿಯಲ್ಲಿನ ಮಾರಾಟಕ್ಕಿಂತ ಶೇ. 15.9 ರಷ್ಟು ಬೆಳವಣಿಗೆ ಸಾಧಿಸಿದ್ದು, ಬರೋಬ್ಬರಿ 3,89,714 ಯುನಿಟ್ ಕಾರುಗಳು ಮಾರಾಟಗೊಂಡಿವೆ. ಇದು ಕಳೆದ ವರ್ಷ ಅಕ್ಟೋಬರ್ ಅವಧಿಯಲ್ಲಿ ಮಾರಾಟವಾಗಿದ್ದ 3,36,330 ಯುನಿಟ್ ಗಿಂತಲೂ ಹೆಚ್ಚಿನ ಬೆಳವಣೆಗೆಯಾಗಿದ್ದು, ಹಬ್ಬದ ಸಂದರ್ಭದಲ್ಲಿ ಹೊಸ ಕಾರುಗಳ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ.
ಇದನ್ನೂ ಓದಿ: ಮಹೀಂದ್ರಾ ನಿರ್ಮಾಣದ ಈ ಕಾರಿನ ಮೇಲೆ ರೂ. 3.50 ಲಕ್ಷ ಡಿಸ್ಕೌಂಟ್
ಕಾರುಗಳ ಮಾರಾಟದ ನಂತರ ತ್ರಿ ಚಕ್ರ ವಾಣಿಜ್ಯ ವಾಹನಗಳ ಮಾರಾಟ ಪ್ರಮಾಣ ಕೂಡಾ ಸಾಕಷ್ಟು ಹೆಚ್ಚಳವಾಗಿದ್ದು, ಕಳೆದ ತಿಂಗಳು ಒಟ್ಟು 76,940 ಯುನಿಟ್ ವಾಹನಗಳು ಮಾರಾಟಗೊಂಡಿವೆ. ಇದು ಕಳೆದ ವರ್ಷದ ಅಕ್ಟೋಬರ್ ಅವಧಿಯಲ್ಲಿನ ತ್ರಿ ಚಕ್ರ ವಾಹನ ಮಾರಾಟಕ್ಕಿಂತಲೂ ಶೇ. 42.1 ರಷ್ಟು ಬೆಳವಣಿಗೆ ಸಾಧಿಸಿದ್ದು, ಕಳೆದ ವರ್ಷದ ಅಕ್ಟೋಬರ್ ನಲ್ಲಿ ಕೇವಲ 54,154 ಯುನಿಟ್ ತ್ರಿ ಚಕ್ರ ವಾಹನಗಳು ಮಾತ್ರ ಮಾರಾಟಗೊಂಡಿದ್ದವು.
ಹಾಗೆಯೇ ದ್ವಿಚಕ್ರ ವಾಹನಗಳ ಮಾರಾಟ ಪ್ರಮಾಣ ಕೂಡಾ ಸಾಕಷ್ಟು ಹೆಚ್ಚಳವಾಗಿದ್ದು, ಕಳೆದ ತಿಂಗಳು ಅಕ್ಟೋಬರ್ ನಲ್ಲಿ 18,95,799 ಯುನಿಟ್ ಮಾರಾಟಗೊಂಡಿವೆ. ಇದು ಕಳೆದ ವರ್ಷದ ಅಕ್ಟೋಬರ್ ಅವಧಿಯಲ್ಲಿ ಮಾರಾಟಗೊಂಡಿದ್ದ 15,78,383 ಯುನಿಟ್ ಗಿಂತಲೂ ಶೇ. 20.1 ರಷ್ಟು ಬೆಳವಣಿಗೆ ದಾಖಲಾಗಿದ್ದು, ಈ ಮೂಲಕ ಒಟ್ಟಾರೆ ಹೊಸ ವಾಹನಗಳ ಮಾರಾಟವು ಸಾಕಷ್ಟು ಹೆಚ್ಚಳವಾಗಿದೆ.
ಕಳೆದ ತಿಂಗಳು ಅಕ್ಟೋಬರ್ ನಲ್ಲಿ ಎಲ್ಲಾ ಮಾದರಿಯ ವಾಹನಗಳು ಸೇರಿ ಬರೋಬ್ಬರಿ 23,14,197 ಯುನಿಟ್ ಮಾರಾಟಗೊಂಡಿದ್ದು, ಇದು ಕಳೆದ ವರ್ಷದ ಅಕ್ಟೋಬರ್ ಅವಧಿಯಲ್ಲಿ 19,23,721 ಯುನಿಟ್ ವಾಹನಗಳು ಮಾರಾಟಗೊಂಡಿದ್ದವು. ಈ ಮೂಲಕ ಹೊಸ ವಾಹನಗಳ ಮಾರಾಟದಲ್ಲಿ ನಿರಂತರ ಬೆಳವಣಿಗೆ ದಾಖಲಾಗುತ್ತಿದ್ದು, ದಸರಾ ಸಂಭ್ರಮದಲ್ಲಿ ಮತ್ತಷ್ಟು ಹೆಚ್ಚಿನ ಬೇಡಿಕೆ ದಾಖಲಾಗುವ ನೀರಿಕ್ಷೆಗಳಿವೆ.
ಇದನ್ನೂ ಓದಿ: ಪ್ರತಿ ಲೀಟರ್ ಗೆ 40 ಕಿ.ಮೀ ಮೈಲೇಜ್ ನೀಡುವ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಟೆಸ್ಟಿಂಗ್ ಶುರು
ಇನ್ನು ಕೇಂದ್ರ ಸರ್ಕಾರವು ಇತ್ತೀಚೆಗೆ ಜಾರಿಗೆ ತರುತ್ತಿರುವ ಹೊಸ ನಿಯಮಗಳ ಪರಿಣಾಮ ಹಳೆಯ ವಾಹನಗಳ ಬಳಕೆಗೆ ಮುಕ್ತಿ ನೀಡಲಾಗುತ್ತಿದ್ದು, ಹಳೆಯ ವಾಹನಗಳನ್ನು ಸ್ಕ್ರ್ಯಾರ್ಪಿಂಗ್ ಪಾಲಿಸಿ ಅಡಿ ಗುಜುರಿಗೆ ಹಾಕಲಾಗುತ್ತಿದೆ. ಹೊಸ ನಿಯಮದಡಿ ಬಳಕೆಗೆ ಯೋಗ್ಯವಲ್ಲದ ವಾಹನಗಳನ್ನು ಮಾಲೀಕರು ಹೊಸ ವಾಹನಗಳೊಂದಿಗೆ ಬದಲಿಸುತ್ತಿರುವುದು ವಾಹನ ಉತ್ಪಾದನಾ ಕಂಪನಿಗಳಿಗೆ ಹೆಚ್ಚಿನ ಬೇಡಿಕೆ ದಾಖಲಾಗುತ್ತಿದ್ದು, ಇದು ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಮಟ್ಟದ ಹೊಸ ವಾಹನಗಳಿಗೆ ಬೇಡಿಕೆ ದಾಖಲಾಗುವುದರ ಜೊತೆಗೆ ಹಳೆಯ ವಾಹನಗಳ ಸಂಖ್ಯೆ ಗಣನೀಯವಾಗಿ ತಗ್ಗಲಿದೆ.