ಪ್ರತಿ ಲೀಟರ್ ಗೆ 40 ಕಿ.ಮೀ ಮೈಲೇಜ್ ನೀಡುವ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಟೆಸ್ಟಿಂಗ್ ಶುರು
ಮಾರುತಿ ಸುಜುಕಿ ಕಂಪನಿಯು ತನ್ನ ಹೊಸ ತಲೆಮಾರಿನ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳಿಗೆ ಚಾಲನೆ ನೀಡಿದೆ.
ದೇಶದ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ (Maruti Suzuki) ಶೀಘ್ರದಲ್ಲಿಯೇ ತನ್ನ ಬಹುನೀರಿಕ್ಷಿತ ಹೊಸ ತಲೆಮಾರಿನ ಸ್ವಿಫ್ಟ್ (Swift) ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಕಾರು ಮಾದರಿಯು ಭಾರೀ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗುತ್ತಿದೆ. ಸದ್ಯ ಮೂರನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರಾಟಗೊಳ್ಳುತ್ತಿರುವ ಸ್ವಿಫ್ಟ್ ಕಾರು ಇದೀಗ ನಾಲ್ಕನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗುತ್ತಿದ್ದು, ಹೊಸ ಕಾರಿನ ಪರೀಕ್ಷಾ ಆವೃತ್ತಿಯು ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದೆ.
ಕಳೆದ ವಾರವಷ್ಟೇ ಹೊಸ ಸ್ವಿಫ್ಟ್ ಕಾರನ್ನು ಟೋಕಿಯೊ ಮೋಟಾರ್ ಶೋನಲ್ಲಿ ಪ್ರದರ್ಶನಗೊಳಿಸಿದ್ದ ಸುಜುಕಿ ಕಂಪನಿಯು ಜಾಗತಿಕ ಮಾರುಕಟ್ಟೆಗಾಗಿ ಪರಿಚಯಿಸುವ ಸುಳಿವು ನೀಡಿದ್ದು, ಇದೀಗ ಮೊದ ಬಾರಿಗೆ ಭಾರತದಲ್ಲಿ ಟೆಸ್ಟಿಂಗ್ ಪ್ರಕ್ರಿಯೆಗಳಿಗೆ ಚಾಲನೆ ನೀಡಿದೆ. ಭಾರತದಲ್ಲಿ ಮೊದಲ ಬಾರಿಗೆ 2005ರಲ್ಲಿ ಬಿಡುಗಡೆಗೊಂಡಿದ್ದ ಸ್ವಿಫ್ಟ್ ಕಾರು ಮಾದರಿಯು ಭಾರೀ ಬೇಡಿಕೆಯೊಂದಿಗೆ ಹಲವಾರು ಮಾರಾಟ ದಾಖಲೆಗಳನ್ನು ನಿರ್ಮಿಸಿದ್ದು, ಇದೀಗ ಮತ್ತಷ್ಟು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ.
ಇದನ್ನೂ ಓದಿ: ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿರುವ ಅತ್ಯುತ್ತಮ ಟಾಪ್ 5 ಸಿಎನ್ ಜಿ ಕಾರುಗಳಿವು!
ಹೊಸ ಸ್ವಿಫ್ಟ್ ಮಾದರಿಯು ಹಲವಾರು ಬದಲಾವಣೆಗಳೊಂದಿಗೆ ಸುಧಾರಿತ ತಂತ್ರಜ್ಞಾನ ಪ್ರೇರಿತ 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದ್ದು, ಇದು ಬಿಎಸ್6 2ನೇ ಹಂತದ ಮಾಲಿನ್ಯ ಹೊರಸೂಸುವಿಕೆ ಮಾನದಂಡಗಳು ಮತ್ತು ಕಾರ್ಪೊರೇಟ್ ಸರಾಸರಿ ಇಂಧನ ದಕ್ಷತೆಯ ಮಾನದಂಡಗಳನ್ನು ಪೂರೈಸಿದೆ. ಹೊಸ ಕಾರಿನಲ್ಲಿ ಮತ್ತೊಂದು ಗಮನಾರ್ಹ ಬದಲಾವಣೆ ಎಂದರೆ ಮಾರುತಿ ಸುಜುಕಿ ಈ ಬಾರಿ ಜೆಡ್ ಸೀರಿಸ್ ತ್ರಿ ಸಿಲಿಂಡರ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, ಇದು ಹೆಚ್ಚಿನ ಇಂಧನ ದಕ್ಷತೆಯೊಂದಿಗೆ ಪರ್ಫಾಮೆನ್ಸ್ ನಲ್ಲೂ ಗ್ರಾಹಕರನ್ನು ಸೆಳೆಯಲಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸ್ವಿಫ್ಟ್ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯು ಸದ್ಯ ಕೆ ಸೀರಿಸ್ ಫೋರ್ ಸಿಲಿಂಡರ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಬಳಕೆ ಮಾಡುತ್ತಿದ್ದು, ಹೊಸ ಎಂಜಿನ್ ಮಾದರಿಯು ಕೆ ಸೀರಿಸ್ ಗಿಂತಲೂ ಸಾಕಷ್ಟು ಹಗುರವಾಗಿರುವುದಲ್ಲದೇ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪಡೆದುಕೊಳ್ಳಲಿದೆ. ಈ ಮೂಲಕ ಹೊಸ ಕಾರು ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಟ 40 ಕಿ.ಮೀ ಮೈಲೇಜ್ ಹಿಂದಿರುಗಿಸುವ ನೀರಿಕ್ಷೆಯಲ್ಲಿದ್ದು, ವಿನ್ಯಾಸ ಮತ್ತು ವೈಶಿಷ್ಟ್ಯತೆಗಳಲ್ಲೂ ಸಾಕಷ್ಟು ಬದಲಾವಣೆ ಪಡೆದುಕೊಳ್ಳಲಿದೆ.
ಇದನ್ನೂ ಓದಿ: ಭಾರತದಲ್ಲಿ ಐದು ಹೊಸ ಎಸ್ ಯುವಿ ಬಿಡುಗಡೆ ಮಾಡಲಿದೆ ಟೊಯೊಟಾ
ಹೊಸ ಸ್ವಿಫ್ಟ್ ಮಾದರಿಯಲ್ಲಿ ಮರುವಿನ್ಯಾಸಗೊಳಿಸಲಾದ ಬಾನೆಟ್, ಮತ್ತಷ್ಟು ಸ್ಪೋರ್ಟಿಯಾಗಿರುವ ಹನಿಕೊಬ್ ಬಂಪರ್, ಹೊಸ ವಿನ್ಯಾಸದ ಎಲ್ಇಡಿ ಹೆಡ್ ಲ್ಯಾಂಪ್ಸ್, ಹೊಸ ಫಾಗ್ ಲ್ಯಾಂಪ್ಸ್ ಮತ್ತು ಆಕರ್ಷಕವಾದ ಸೈಡ್ ಪ್ರೊಫೈಲ್ ಪಡೆದುಕೊಂಡಿದ್ದು, ಭಾರತದಲ್ಲಿ ಇದು 2024ರ ಫೆಬ್ರವರಿ ಅಥವಾ ಮಾರ್ಚ್ ಹೊತ್ತಿಗೆ ಬಿಡುಗಡೆಯಾಗುವ ನೀರಿಕ್ಷೆಗಳಿವೆ.