Upcoming Toyota SUVs: ಭಾರತದಲ್ಲಿ ಐದು ಹೊಸ ಎಸ್ ಯುವಿ ಬಿಡುಗಡೆ ಮಾಡಲಿದೆ ಟೊಯೊಟಾ
ಟೊಯೊಟಾ ಕಂಪನಿಯು ಜಾಗತಿಕ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಪ್ರಮುಖ ಎಸ್ ಯುವಿ ಆವೃತ್ತಿಗಳನ್ನು ಭಾರತದಲ್ಲೂ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.
ವಿಶ್ವದ ಅತಿ ದೊಡ್ಡ ಕಾರು ಉತ್ಪಾದನಾ ಕಂಪನಿಯಾಗಿ ಹೊರಹೊಮ್ಮಿರುವ ಟೊಯೊಟಾ(Toyota) ಕಂಪನಿ ಭಾರತದಲ್ಲೂ ವಿವಿಧ ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಪ್ರೀಮಿಯಂ ಕಾರು ಮಾದರಿಗಳೊಂದಿಗೆ ಉತ್ತಮ ಬೇಡಿಕೆ ಹೊಂದಿರುವ ಟೊಯೊಟಾ ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.
ಭಾರತದಲ್ಲಿ ಇತ್ತೀಚೆಗೆ ಎಸ್ ಯುವಿ ಆವೃತ್ತಿಗಳಿಗೆ ಹೆಚ್ಚುತ್ತಿರುವ ಬೇಡಿಕೆ ಆಧರಿಸಿ ಟೊಯೊಟಾ ಕಂಪನಿಯು ಜಾಗತಿಕ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಹಲವು ಎಸ್ ಯುವಿ ಕಾರುಗಳನ್ನು ಪರಿಚಯಿಸುವ ಯೋಜನೆ ರೂಪಿಸಿದ್ದು, ಟೊಯೊಟಾ ಹೊಸ ಎಸ್ ಯುವಿ ಕಾರುಗಳಲ್ಲಿ ಐಷಾರಾಮಿ ಆವೃತ್ತಿಗಳು ಮಾತ್ರವಲ್ಲದೆ ಮಧ್ಯಮ ಕ್ರಮಾಂಕದ ಕಾರುಗಳು ಸಹ ಬಿಡುಗಡೆಯಾಗಲಿವೆ.
ಟೊಯೊಟಾ ಹೊಸ ಎಸ್ ಯುವಿ ಕಾರುಗಳು ಈಗಾಗಲೇ ಮುಂಚೂಣಿ ಕಾರು ಮಾರುಕಟ್ಟೆಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದೀಗ ಗ್ರಾಹಕರ ಆದ್ಯತೆಯ ಮೇರೆಗೆ ಭಾರತಕ್ಕೂ ಲಗ್ಗೆಯಿಡಲು ಸಜ್ಜಾಗುತ್ತಿವೆ. ಟೊಯೊಟಾ ಹೊಸ ಕಾರುಗಳಲ್ಲಿ ಮಾರುತಿ ಸುಜುಕಿ ಜೊತೆಗಿನ ರೀಬ್ಯಾಡ್ಜ್ ಆವೃತ್ತಿಗಳು ಸಹ ಸೇರ್ಪಡೆಯಾಗಿದ್ದು, ಇವು ಪೆಟ್ರೋಲ್ ಮತ್ತು ಹೈಬ್ರಿಡ್ ಎಂಜಿನ್ ಆಯ್ಕೆಗಳನ್ನು ಹೊಂದಿರಲಿವೆ.
ಇದನ್ನೂ ಓದಿ: ಅಚ್ಚರಿ ಬೆಲೆಗೆ ಬಿಡುಗಡೆಗೊಂಡಿದೆ ಸಿಟ್ರನ್ ಸಿ3 ಏರ್‌ಕ್ರಾಸ್ ಎಸ್‌ಯುವಿ
ಟೊಯೊಟಾ ಬಹುನೀರಿಕ್ಷಿತ ಎಸ್ ಯುವಿ ಕಾರುಗಳಲ್ಲಿ ಮೊದಲ ಆವೃತ್ತಿಯೆಂದರೆ ಅದು ಅರ್ಬನ್ ಕ್ರೂಸರ್ ಟೈಸರ್. ಇದು ಇತ್ತೀಚೆಗೆ ಬಿಡುಗಡೆಯಾಗಿರುವ ಮಾರುತಿ ಸುಜುಕಿ ಫ್ರಾಂಕ್ಸ್ ಕಾರಿನ ರೀಬ್ಯಾಡ್ಜ್ ಆವೃತ್ತಿಯಾಗಿರಲಿದ್ದು, ಇದು ಮೂಲ ಫ್ರಾಂಕ್ಸ್ ಕಾರಿಗಿಂತಲೂ ಹೆಚ್ಚುವರಿ ಫೀಚರ್ಸ್ ಮತ್ತು ಆಕರ್ಷಕ ವಾರಂಟಿ ಸೌಲಭ್ಯಗಳೊಂದಿಗೆ ಖರೀದಿಗೆ ಲಭ್ಯವಾಗಲಿದೆ.
ಬಿಡುಗಡೆಯಾಗಲಿರುವ ಟೊಯೊಟಾ ಹೊಸ ಕಾರುಗಳಲ್ಲಿ ಕೊರೊಲ್ಲಾ ಕ್ರಾಸ್ ಕೂಡಾ ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಇದು ಟಿಎನ್ ಜಿಎ-ಸಿ ಪ್ಲ್ಯಾಟ್ ಫಾರ್ಮ್ ಆಧರಿಸಿದ್ದು, ಇದು ಇನೋವಾ ಹೈಕ್ರಾಸ್ ಮಾದರಿಯೆಂತೆ ಎಂಜಿನ್ ಆಯ್ಕೆಯೊಂದಿಗೆ ಮಧ್ಯಮ ಕ್ರಮಾಂಕದ ಎಸ್ ಯುವಿ ಮಾರಾಟದಲ್ಲಿ ಮುಂಚೂಣಿ ಸಾಧಿಸುವ ನೀರಿಕ್ಷೆಯಲ್ಲಿದೆ. ಇದು ಟಾಟಾ ಸಫಾರಿ, ಮಹೀಂದ್ರಾ ಎಕ್ಸ್ ಯುವಿ700 ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಈ ಹೊಸ ಕಾರು ಕರ್ನಾಟಕದ ಬಿಡದಿ ಕಾರು ಉತ್ಪಾದನಾ ಘಟಕದಲ್ಲಿಯೇ ಅಭವೃದ್ದಿಗೊಳ್ಳಲಿದೆ.
ಟೊಯೊಟಾ ಕಂಪನಿ ಬಿಡುಗಡೆ ಮಾಡಲಿರುವ ಮೂರನೇ ಕಾರು ಮಾದರಿಯೆಂದರೆ ಅದು ಲ್ಯಾಂಡ್ ಹೊಪರ್. ಇದು ಆಫ್ ರೋಡ್ ವೈಶಿಷ್ಟ್ಯತೆಯೊಂದಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸುಜುಕಿ ಜಿಮ್ನಿ ಕಾರಿಗೆ ಉತ್ತಮ ಪೈಪೋಟಿ ನೀಡುತ್ತಿದ್ದು, ಇದೀಗ ಭಾರತದಲ್ಲೂ ಬಿಡುಗಡೆಯಾಗುವ ನೀರಿಕ್ಷೆಯಿದೆ. ಇದು ಕೂಡಾ 1.5 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಜಿಮ್ನಿ ಮತ್ತು ಥಾರ್ ಕಾರಿಗೆ ಉತ್ತಮ ಪೈಪೋಟಿ ನೀಡಲಿದ್ದು, 4×4 ಡ್ರೈವ್ ಸಿಸ್ಟಂ ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ: ಹಳೆಯ ವಾಹನಗಳಿಗೆ ಗುಡ್ ಬೈ ಹೇಳಲು ಬೆಂಗಳೂರಿನಲ್ಲಿ ವೆಹಿಕಲ್ ಸ್ಕ್ರ್ಯಾಪಿಂಗ್ ಕೇಂದ್ರ ಆರಂಭ
ಹೊಸ ಟೊಯೊಟಾ ಕಾರುಗಳಲ್ಲಿ ನಾಲ್ಕನೇ ಮಾದರಿಯಾಗಿ ಫಾರ್ಚೂನರ್ ಹೈಬ್ರಿಡ್ ಆವೃತ್ತಿಯು ಬಿಡುಗಡೆಯಾಗುವ ನೀರಿಕ್ಷೆಯಿದೆ. ಫುಲ್ ಸೈಜ್ ಎಸ್ ಯುವಿ ವಿಭಾಗದಲ್ಲಿ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿರುವ ಫಾರ್ಚೂನರ್ ಮಾದರಿಯು ಇದೀಗ ಪೆಟ್ರೋಲ್ ಹೈಬ್ರಿಡ್ ನೊಂದಿಗೆ ಬಿಡುಗಡೆಯಾಗುತ್ತಿದ್ದು, ಇದು ಉತ್ತಮ ಇಂಧನ ದಕ್ಷತೆಯೊಂದಿಗೆ ಮತ್ತಷ್ಟು ಗ್ರಾಹಕರನ್ನು ಸೆಳೆಯಲಿದೆ.
ಇನ್ನು ಟೊಯೊಟಾ ಕಂಪನಿ ಬಿಡುಗಡೆ ಮಾಡಲಿರುವ ಮತ್ತೊಂದು ಬಹುನೀರಿಕ್ಷಿತ ಕಾರು ಮಾದರಿಯೆಂದರೆ ಲ್ಯಾಂಡ್ ಕ್ರೂಸರ್ ಪ್ರಾಡೋ ಎಸ್ ಯುವಿ ಎನ್ನಬಹುದು. ಇದು ಐಷಾರಾಮಿ ಕಾರುಗಳ ವಿಭಾಗದಲ್ಲಿ ಗುರುತಿಸಿಕೊಂಡಿದ್ದು, ಇದು ಇತ್ತೀಚೆಗೆ ಜಾಗತಿಕ ಮಾರುಕಟ್ಟೆಗಳಲ್ಲಿ ಮರುಬಿಡುಗಡೆಯೊಂದಿಗೆ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ. ಇದೀಗ ಭಾರತದಲ್ಲೂ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಹೊಸ ಕಾರು ಹಲವಾರು ಹೊಸ ಫೀಚರ್ಸ್ ಹೊಂದಿರಲಿದೆ.