Vehicle Scrapping: ಹಳೆಯ ವಾಹನಗಳಿಗೆ ಗುಡ್ ಬೈ ಹೇಳಲು ಬೆಂಗಳೂರಿನಲ್ಲಿ ವೆಹಿಕಲ್ ಸ್ಕ್ರ್ಯಾಪಿಂಗ್ ಕೇಂದ್ರ ಆರಂಭ

ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಪಾಲನೆ ಮಾಡಲು ಸಾಧ್ಯವಿರದ ಹಳೆಯ ವಾಹನಗಳನ್ನು ತೊಡೆದುಹಾಕಲು ಹಾಕಲು ವೆಹಿಕಲ್ ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ತರಲಾಗುತ್ತಿದೆ.

Vehicle Scrapping: ಹಳೆಯ ವಾಹನಗಳಿಗೆ ಗುಡ್ ಬೈ ಹೇಳಲು ಬೆಂಗಳೂರಿನಲ್ಲಿ ವೆಹಿಕಲ್ ಸ್ಕ್ರ್ಯಾಪಿಂಗ್ ಕೇಂದ್ರ ಆರಂಭ
ವೆಹಿಕಲ್ ಸ್ಕ್ರ್ಯಾಪಿಂಗ್ ಕೇಂದ್ರ
Follow us
|

Updated on: Oct 03, 2023 | 8:41 PM

ದೇಶಾದ್ಯಂತ ಹೆಚ್ಚುತ್ತಿರುವ ಮಾಲಿನ್ಯವನ್ನು ತಗ್ಗಿಸುವ ಉದ್ದೇಶದಿಂದ ನಿಯಮಗಳನ್ನು ಪಾಲನೆ ಮಾಡಲು ಸಾಧ್ಯವಿರದ ಹಳೆಯ ವಾಹನಗಳನ್ನು ತೊಡೆದುಹಾಕಲು ಹಾಕಲು ಕೇಂದ್ರ ಸರ್ಕಾರವು ವೆಹಿಕಲ್ ಸ್ಕ್ರ್ಯಾಪಿಂಗ್ ನೀತಿ(Vehicle Scrapping Policy) ಪರಿಚಯಿಸಿದೆ. ಕಡ್ಡಾಯವಾಗಿ ಜಾರಿಗೆ ತರುತ್ತಿರುವ ವೆಹಿಕಲ್ ಸ್ಕ್ರ್ಯಾಪೇಜ್ ಪಾಲಿಸಿಯು ಹಳೆಯ ಮತ್ತು ಸಂಚಾರಕ್ಕೆ ಯೋಗ್ಯವಲ್ಲದ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ನೆರವಾಗಲಿದ್ದು, ಹಳೆಯ ವಾಹನಗಳ ಸ್ಥಾನಕ್ಕೆ ಆಧುನಿಕ ಮತ್ತು ಹೆಚ್ಚಿನ ಇಂಧನ ದಕ್ಷತೆಯನ್ನು ಹೊಂದಿರುವ ವಾಹನಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಲಿದೆ.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿಯನ್ನು ಹಂತ-ಹಂತವಾಗಿ ಜಾರಿ ಮಾಡಲಾಗುತ್ತಿದ್ದು, ಇದಕ್ಕಾಗಿ ದೇಶದ ಪ್ರಮುಖ ನಗರಗಳಲ್ಲಿ ವೆಹಿಕಲ್ ಸ್ಕ್ರ್ಯಾಪಿಂಗ್ ಕೇಂದ್ರಗಳಿಗೆ ಚಾಲನೆ ನೀಡಲಾಗುತ್ತಿದೆ. ದೇಶಾದ್ಯಂತ ಈಗಾಗಲೇ 60 ಕ್ಕೂ ಹೆಚ್ಚು ವೆಹಿಕಲ್ ಸ್ಕ್ರ್ಯಾಪಿಂಗ್ ಕೇಂದ್ರಗಳ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದ್ದು, ಇದೀಗ ನಮ್ಮ ಬೆಂಗಳೂರಿನಲ್ಲೂ ಮೊದಲ ವೆಹಿಕಲ್ ಸ್ಕ್ರ್ಯಾಪಿಂಗ್ ಕೇಂದ್ರವನ್ನು ತೆರೆಯಲಾಗುತ್ತಿದೆ.

Vehicle Scrapping Policy (1)

ಬೆಂಗಳೂರಿನ ದೇವನಹಳ್ಳಿ ಬಳಿ ಕರ್ನಾಟಕದ ಮೊದಲ ನೋಂದಾಯಿತ ವೆಹಿಕಲ್ ಸ್ಕ್ರ್ಯಾಪಿಂಗ್ ಕೇಂದ್ರವನ್ನು ತೆರೆಯಲಾಗುತ್ತಿದ್ದು, ಹೊಸ ವೆಹಿಕಲ್ ಸ್ಕ್ರ್ಯಾಪಿಂಗ್ ಕೇಂದ್ರವನ್ನು ಮಹೀಂದ್ರಾ ಎಂಎಸ್‌ಟಿಸಿ ರೀಸೈಕ್ಲಿಂಗ್ ಪ್ರೈವೇಟ್ ಲಿಮಿಟೆಡ್‌ಗೆ ರಾಜ್ಯ ಸಾರಿಗೆ ಇಲಾಖೆಯು ಅನುಮೋದನೆ ನೀಡಿದೆ. ಇದರಲ್ಲಿ ಮೊದಲ ಹಂತವಾಗಿ 15 ವರ್ಷ ಮೇಲ್ಪಟ್ಟ ಹಳೆಯದಾದ ಮತ್ತು ಫಿಟ್‌ನೆಸ್ ಪರೀಕ್ಷೆಯಲ್ಲಿ ವಿಫಲವಾಗುವ ಎಲ್ಲಾ ಸರ್ಕಾರಿ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ನಿರ್ಧರಿಸಲಾಗಿದ್ದು, ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಹಳೆಯ ಅನರ್ಹ ವಾಹನಗಳನ್ನು ಸ್ಕ್ರ್ಯಾಪ್ ಮಾಡಬಹುದಾಗಿದೆ.

ಇದನ್ನೂ ಓದಿ: ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಟಾಪ್ 5 ಹೊಸ ಕಾರುಗಳಿವು!

ಕೇಂದ್ರ ಸರ್ಕಾರವು ಏಪ್ರಿಲ್ 1, 2022ರಿಂದಲೇ ಜಾರಿಗೆ ಬರುವಂತೆ 15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನಗಳನ್ನು ವೆಹಿಕಲ್ ಸ್ಕ್ರ್ಯಾಪಿಂಗ್ ನೀತಿ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಏಪ್ರಿಲ್ 1, 2023ರಿಂದ ಜಾರಿಗೆ ಬರುವಂತೆ 15 ವರ್ಷ ಮೇಲ್ಪಟ್ಟ ಭಾರೀ ಗಾತ್ರದ ವಾಣಿಜ್ಯ ವಾಹನಗಳಿಗೆ ವೆಹಿಕಲ್ ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ತರಲಾಗಿದೆ. ಮುಂಬರುವ ಏಪ್ರಿಲ್ 1, 2024ರಿಂದ ಎಲ್ಲಾ ಮಾದರಿಯ 15 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳು ಮತ್ತು 20 ವರ್ಷ ಮೇಲ್ಪಟ್ಟ ಕಾರುಗಳಿಗೆ ವೆಹಿಕಲ್ ಸ್ಕ್ರ್ಯಾಪಿಂಗ್ ನೀತಿಯಡಿ ಪರೀಕ್ಷೆಯು ಕಡ್ಡಾಯವಾಗಲಿದೆ.

ಒಂದು ವೇಳೆ ವೆಹಿಕಲ್ ಸ್ಕ್ರ್ಯಾಪಿಂಗ್ ನೀತಿಯ ನಿಯಮಗಳನ್ನು ಅನುಗುಣವಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲವಾದಲ್ಲಿ ಕಡ್ಡಾಯವಾಗಿ ಸ್ಕ್ರ್ಯಾಪ್ ಮಾಡಲಾಗುತ್ತದೆ. ಅದಾಗ್ಯೂ 15 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳು ಮತ್ತು 20 ವರ್ಷ ಮೇಲ್ಪಟ್ಟದ ಕಾರುಗಳು ಮಾಲಿನ್ಯ ಪರೀಕ್ಷೆಯಲ್ಲಿ ಉತ್ತೀರ್ಣವಾದಲ್ಲಿ ಸ್ಕ್ರ್ಯಾಪ್ ಮಾಡದಿರಲು ನಿರ್ಧರಿಸಲಾಗಿದೆ. ಮಾಲಿನ್ಯ ಪರೀಕ್ಷೆಯಲ್ಲಿ ಉತ್ತೀರ್ಣವಾಗುವ ವಾಹನಗಳಿಗೆ ಮುಂದಿನ 5 ವರ್ಷಗಳ ತನಕ ಸಂಚಾರಕ್ಕೆ ಅನುಮತಿ ದೊರೆಯಲಿದ್ದು, ನಿಗದಿತ ಅವಧಿಯ ನಂತರ ಮತ್ತೆ ಪರೀಕ್ಷೆಗೆ ಒಳಪಡಬೇಕಾಗುತ್ತದೆ.

Vehicle Scrapping Policy (2)

ವೆಹಿಕಲ್ ಸ್ಕ್ರ್ಯಾಪಿಂಗ್ ನೀತಿ ಕಡ್ಡಾಯವಾಗಿ ಜಾರಿಯಾಗುತ್ತಿರುವ ಹಿನ್ನಲೆಯಲ್ಲಿ ನೋಂದಾಯಿತ ವೆಹಿಕಲ್ ಸ್ಕ್ರ್ಯಾಪಿಂಗ್ ಕೇಂದ್ರಗಳನ್ನು ಹೆಚ್ಚಿಸಲಾಗುತ್ತಿದ್ದು, ಮೊದಲ ಹಂತದಲ್ಲಿಯೇ ಕರ್ನಾಟಕದ ಸುಮಾರು 15 ಲಕ್ಷಕ್ಕೂ ಹೆಚ್ಚು ಸರ್ಕಾರಿ ಮತ್ತು ಖಾಸಗಿ ವಾಹನಗಳು ಸ್ಕ್ರ್ಯಾಪ್ ಆಗುವ ಸಾಧ್ಯತೆಗಳಿವೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಅಂದಾಜಿಸಿದ್ದಾರೆ.

ಇದನ್ನೂ ಓದಿ: ದೇಶದ ಮೊದಲ ಹೈಡ್ರೋಜನ್ ಇಂಧನ ಚಾಲಿತ ಬಸ್ ಸಂಚಾರಕ್ಕೆ ಚಾಲನೆ

ಈ ಮೂಲಕ ವೆಹಿಕಲ್ ಸ್ಕ್ರ್ಯಾಪಿಂಗ್ ನೀತಿಯು ಸಂಚಾರಕ್ಕೆ ಯೋಗ್ಯವಲ್ಲದ ಮತ್ತು ಹೆಚ್ಚಿನ ಮಾಲಿನ್ಯ ಹೊರಸೂಸುವ ವಾಹನಗಳನ್ನು ಕಡಿಮೆ ಮಾಡಲು ಸಹಕಾರಿಯಾಗಲಿದ್ದು, ಪರಿಸರ ಸ್ನೇಹಿ, ಸುರಕ್ಷಿತ ಮತ್ತು ತಾಂತ್ರಿಕವಾಗಿ ಮುಂದುವರಿದ ವಾಹನಗಳನ್ನು ಅಳವಡಿಸಿಕೊಳ್ಳಲು ಉತ್ತೇಜನ ನೀಡಲಿದೆ. ಹಾಗೆಯೇ ಇಂಧನ ದಕ್ಷತೆಯನ್ನು ಸುಧಾರಿಸಿ ಮತ್ತು ವಾಹನ ಮಾಲೀಕರಿಗೆ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲಿದ್ದು, ಸ್ವಯಂಪ್ರೇರಿತವಾಗಿ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ಖಾಸಗಿ ವಾಹನ ಮಾಲೀಕರಿಗೆ ಕೇಂದ್ರ ಸಾರಿಗೆ ಇಲಾಖೆಯು ಕೆಲವು ಪ್ರಯೋಜನಗಳನ್ನು ಸಹ ನೀಡುತ್ತಿದೆ.

ಜೊತೆಗೆ ವೆಹಿಕಲ್ ಸ್ಕ್ರ್ಯಾಪ್ ನೀತಿಯು ಆಟೋಮೊಬೈಲ್ ವಲಯಕ್ಕೂ ಲಾಭದಾಯಕವಾಗಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಅನೌಪಚಾರಿಕವಾಗಿ ಕಾರ್ಯನಿರ್ವಹಿಸುತ್ತಿರುವ ವಾಹನ ಸ್ಕ್ರ್ಯಾಪೇಜ್ ಉದ್ಯಮವನ್ನು ಔಪಚಾರಿಕಗೊಳಿಸುವುದರ ಜೊತೆಗೆ ಹಳೆ ವಾಹನಗಳನ್ನು ಹಂತ ಹಂತವಾಗಿ ರದ್ದುಗೊಳಿಸಿರುವುದರಿಂದ ಹೊಸ ವಾಹನಗಳಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಹಳೆಯ ವಾಹನಗಳು ಕಡಿಮೆಯಾಗುವುದರಿಂದ ಹೊಸ ವಾಹನಗಳ ಉತ್ಪಾದನೆಯು ಹೆಚ್ಚಳವಾಗಲಿದ್ದು, ಆಟೋಮೊಬೈಲ್ ಉದ್ಯಮದಲ್ಲಿ ಇದು ಹೆಚ್ಚಿನ ಮಟ್ಟದ ಉದ್ಯೋಗಗಳನ್ನು ಸೃಷ್ಟಿಸುವ ನೀರಿಕ್ಷೆಗಳಿವೆ.