ಭಾರತದಲ್ಲಿ ಹೊಸ ಕಾರು ಮಾದರಿಗಳೊಂದಿಗೆ ಗ್ರಾಹಕರಿಂದ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಫ್ರೆಂಚ್ ಕಾರು ಉತ್ಪಾದನಾ ಕಂಪನಿ ಸಿಟ್ರನ್(Citroen) ಇದೀಗ ತನ್ನ ಮೊದಲ ಇವಿ ಕಾರು ಮಾದರಿ ಇಸಿ3(eC3) ಕಾರು ಬಿಡುಗಡೆ ಮಾಡಿದೆ. ಹೊಸ ಎಲೆಕ್ಟ್ರಿಕ್ ಕಾರು(Electric Car) ಮಾದರಿಯ ಲೈವ್ ಮತ್ತು ಫೀಲ್ ಎನ್ನುವ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 11.50 ಲಕ್ಷ ಆರಂಭಿಕ ಬೆಲೆ ಹೊಂದಿದೆ. ಹೊಸ ಇವಿ ಕಾರು ಮಾದರಿಯ ಬಿಡುಗಡೆಯೊಂದಿಗೆ ಸಿಟ್ರನ್ ಕಂಪನಿಯು ರೂ. 25 ಸಾವಿರ ಮುಂಗಡದೊಂದಿಗೆ ಬುಕಿಂಗ್ ಆರಂಭಿಸಿದ್ದು, ಹೊಸ ಕಾರು ಮಾದರಿಯು ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಆಧರಿಸಿ ದೇಶದ ಪ್ರಮುಖ 25 ನಗರಗಳಲ್ಲಿ ಖರೀದಿಗೆ ಲಭ್ಯವಿರಲಿದೆ.
ಹೊಸ ಕಾರಿನಲ್ಲಿ ಲೈವ್ ವೆರಿಯೆಂಟ್ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 11.50 ಲಕ್ಷ ಆರಂಭಿಕ ಬೆಲೆ ಹೊಂದಿದ್ದರೆ ಫೀಲ್ ವೆರಿಯೆಂಟ್ ರೂ. 12.13 ಲಕ್ಷ ಬೆಲೆ ಹೊಂದಿದೆ. ಇದರಲ್ಲಿ ಗ್ರಾಹಕರು ಸಿಂಗಲ್ ಟೋನ್ ಅಥವಾ ಡ್ಯುಯಲ್ ಟೋನ್ ಬಣ್ಣಗಳನ್ನು ಆಯ್ಕೆ ಮಾಡಬಹುದಾಗಿದ್ದು, ಡ್ಯುಯಲ್ ಟೋನ್ ಮಾದರಿಗಳನ್ನ ಖರೀದಿಸುವ ಗ್ರಾಹಕರು ಹೆಚ್ಚುವರಿಯಾಗಿ ರೂ. 25 ಸಾವಿರ ಪಾವತಿಸಬೇಕಾಗುತ್ತದೆ.
ಹೊಸ ಇಸಿ3 ಎಲೆಕ್ಟ್ರಿಕ್ ಕಾರಿನಲ್ಲಿ ಸಿಟ್ರನ್ ಕಂಪನಿಯು 29.2kWh ಬ್ಯಾಟರಿ ಪ್ಯಾಕ್ ಜೊತೆಗೆ ಆಕ್ಸೆಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಇದರಲ್ಲಿರುವ ಬ್ಯಾಟರಿ ಪ್ಯಾಕ್ ಪ್ರತಿ ಚಾರ್ಜ್ ಗೆ ಗರಿಷ್ಠ 320 ಕಿ.ಮೀ ಮೈಲೇಜ್ ಹಿಂದಿರುಗಿಸುವುಗಾಗಿ ಎಆರ್ ಎಐ ಸಂಸ್ಥೆ ಪ್ರಮಾಣೀಕರಿಸಿದೆ.
ಇದರೊಂದಿಗೆ ಹೊಸ ಕಾರು ಮಾದರಿಯು 56.2 ಹಾರ್ಸ್ ಪವರ್ ಮತ್ತು 143 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಉತ್ತಮ ಪರ್ಫಾಮೆನ್ಸ್ ಹೊಂದಿದ್ದು, ಇದು ಪ್ರತಿ ಗಂಟೆಗೆ 107 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ. ಹಾಗೆಯೇ ಹೊಸ ಕಾರು ಫಾಸ್ಟ್ ಚಾರ್ಜಿಂಗ್ ಸರ್ಪೊಟ್ ಹೊಂದಿದ್ದು, ಹೋಂ ಚಾರ್ಜ್ ಮೂಲಕ ಪೂರ್ತಿ ಚಾರ್ಜ್ ಆಗಲು ಗರಿಷ್ಠ 10.50 ಗಂಟೆ ತೆಗೆದುಕೊಳ್ಳುತ್ತದೆ.
ಹೊಸ ಇಸಿ3 ಕಾರಿನಲ್ಲಿ ಸಿಟ್ರನ್ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಸೌಲಭ್ಯಗಳನ್ನ ಜೋಡಣೆ ಮಾಡಿದ್ದು, ಇದರಲ್ಲಿ ಟಾಪ್ ಎಂಡ್ ಮಾದರಿಗೆ ಅನ್ವಯಿಸುವಂತೆ 10.2 ಇಂಚಿನ ಟಚ್ ಸ್ಕ್ರೀನ್, ವೈರ್ ಲೆಸ್ ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ, ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಸೌಲಭ್ಯವನ್ನ ನೀಡಲಾಗಿದ್ದು, ಸುರಕ್ಷತೆಗಾಗಿ ಡ್ಯುಯಲ್ ಏರ್ ಬ್ಯಾಗ್, ಎಬಿಎಸ್, ಇಬಿಡಿ ಸೇರಿದಂತೆ ಹಲವು ಸೌಲಭ್ಯಗಳನ್ನ ನೀಡಿದೆ.
Published On - 12:57 pm, Tue, 28 February 23