ನವದೆಹಲಿ: ಭಾರತದ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬಳಿಕ ಅತಿ ಹೆಚ್ಚು ಪಾಲು ಹೊಂದಿರುವ ಕಂಪನಿಗಳೆಂದರೆ ಕೊರಿಯಾದ ಹ್ಯುಂಡೇ ಮತ್ತು ಕಿಯಾ. ಅದರಲ್ಲೂ ಕಿಯಾ ಕಾರುಗಳು ಟ್ರೆಂಡಿಂಗ್ನಲ್ಲಿದ್ದು, ಮಧ್ಯಮಸ್ತರದ ಕಾರು ಕ್ಷೇತ್ರದಲ್ಲಿ ನಾಗಾಲೋಟ ಮಾಡುತ್ತಿದೆ. ಆದರೆ, ಕೇಂದ್ರ ವಾಣಿಜ್ಯ ಮತ್ತು ಉದ್ಯಮಗಳ ಸಚಿವ ಪಿಯೂಶ್ ಗೋಯಲ್ ಈ ಕೊರಿಯನ್ ಕಂಪನಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎರಡು ದೇಶಗಳ ನಡುವೆ ಇರುವ ಮುಕ್ತ ವ್ಯಾಪಾರ ಒಪ್ಪಂದವನ್ನು (Free Trade Agreements) ಕೊರಿಯನ್ ಕಂಪನಿಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ. ತತ್ಪರಿಣಾಮವಾಗಿ ಸೌತ್ ಕೊರಿಯಾ ಜೊತೆ ಭಾರತದ ದ್ವಿಪಕ್ಷೀಯ ವ್ಯಾಪಾರ ಅಂತರ (Trade Deficit) ಕೋಟ್ಯಂತರ ಡಾಲರ್ಗಳಷ್ಟಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಏಷ್ಯಾ ಆರ್ಥಿಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಚಿವ ಪಿಯೂಶ್ ಗೋಯಲ್, ಕಿಯಾ ಮತ್ತು ಹ್ಯುಂಡೈನಂತಹ ಕೊರಿಯನ್ ಕಂಪನಿಗಳು ಯಥೇಚ್ಛವಾಗಿ ಆಮದು ಮಾಡಿಕೊಳ್ಳಲು ಈ ಎಫ್ಟಿಎ ಅನುವು ಮಾಡಿಕೊಟ್ಟಿದೆ ಎಂದರು.
ಕೊರಿಯಾ ಮತ್ತು ಜಪಾನ್ ದೇಶದೊಂದಿಗೆ ನಮಗಿರುವ ಮುಕ್ತ ವ್ಯಾಪಾರ ಒಪ್ಪಂದದ ಲಾಭವನ್ನು ಪಡೆಯುತ್ತಿರುವ ಕೊರಿಯನ್ ವಾಹನ ಕಂಪನಿಗಳು ಯಥೇಚ್ಛವಾಗಿ ಆಮದು ಮಾಡಿಕೊಳ್ಳುತ್ತಿವೆ. 50 ಬಿಲಿಯನ್ ಅಥವಾ 100 ಬಿಲಿಯನ್ ಡಾಲರ್ನ ಸಣ್ಣ ಹೂಡಿಕೆಯೇ ಭಾರತಕ್ಕೆ ಕೊರಿಯಾ ಮತ್ತಿತರ ದೇಶಗಳೊಂದಿಗೆ ಕೋಟ್ಯಂತರ ಡಾಲರ್ನಷ್ಟು ವ್ಯಾಪಾರ ಅಂತರ ಸೃಷ್ಟಿಯಾಗುವಂತೆ ಮಾಡಿದೆ ಎಂದರು.
ಕೊರಿಯಾಗೆ ಭಾರತದ ರಫ್ತು ಯಾಕೆ ಸಾಧ್ಯವಿಲ್ಲ?
ಮುಕ್ತ ವ್ಯಾಪಾರ ಒಪ್ಪಂದದ ಪ್ರಕಾರ ಎರಡು ದೇಶಗಳ ಮಧ್ಯೆ ಯಾವುದೇ ನಿಯಂತ್ರಣ ವ್ಯವಸ್ಥೆಯ ತಡೆ ಇಲ್ಲದೇ ಸರಕಿನ ಮುಕ್ತ ವಹಿವಾಟು ನಡೆಯಬೇಕು. ಹಾಗಾದರೆ ಕೊರಿಯಾ ಮಾರುಕಟ್ಟೆಗೆ ಭಾರತ ಮುಕ್ತವಾಗಿ ಉತ್ಪನ್ನಗಳನ್ನು ರಫ್ತು ಮಾಡಬಹುದಲ್ಲ ಎಂಬ ಪ್ರಶ್ನೆ ಬರಬಹುದು. ಈ ಬಗ್ಗೆ ಬೆಳಕು ಚೆಲ್ಲಿದ ಪೀಯುಶ್ ಗೋಯಲ್, ಜಪಾನ್ ಮತ್ತು ಕೊರಿಯಾದಲ್ಲಿರುವ ರಾಷ್ಟ್ರೀಯತೆಯ ಭಾವನೆಯ ಉದಾಹರಣೆ ಕೊಟ್ಟರು.
ಇದನ್ನೂ ಓದಿ: River Indie: ಬಜೆಟ್ ಬೆಲೆಯೊಂದಿಗೆ ಭರ್ಜರಿ ಮೈಲೇಜ್ ನೀಡುವ ರಿವರ್ ಇಂಡಿ ಇವಿ ಸ್ಕೂಟರ್ ಬಿಡುಗಡೆ
ನಮ್ಮ ಉತ್ಪನ್ನಗಳಿಲಗೆ ಕೊರಿಯಾದ ಮಾರುಕಟ್ಟೆಗಳು ತೆರೆದುಕೊಳ್ಳುವ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಆದರೆ, ಇದರಲ್ಲಿ ಎಷ್ಟು ಅಗಾಧ ವ್ಯತ್ಯಾಸ ಇದೆ ನೋಡಿ… ಭಾರತದಿಂದ ಕೊರಿಯಾಗೆ ಉಕ್ಕಿನ ರಫ್ತಿಗೆ ಯಾವುದೇ ತಡೆ ಇಲ್ಲ. ಜಪಾನ್ ಕೂಡ ತಡೆಯುವುದಿಲ್ಲ. ಆದರೆ, ಈ ದೇಶಗಳ ಮಾರುಕಟ್ಟೆಗಳಲ್ಲಿ ನಾವು ಒಂದು ಟನ್ ಉಕ್ಕನ್ನೂ ಮಾರಲು ಆಗುವುದಿಲ್ಲ. ಯಾಕೆಂದರೆ ಇವುಗಳಲ್ಲಿ ರಾಷ್ಟ್ರೀಯತೆಯ ಭಾವನೆ ಇದೆ. ನಮ್ಮಲ್ಲಿ ಇದರ ಕೊರತೆ ಇದೆ ಎಂದು ಕೇಂದ್ರ ವಾಣಿಜ್ಯ ಮತ್ತು ಉದ್ಯಮಗಳ ಸಚಿವರ ವಿಶ್ಲೇಷಿಸಿದರು.
ಅಂದರೆ, ಸಚಿವರ ಮಾತಿನ ಅರ್ಥವೆಂದರೆ ಕೊರಿಯಾ ಮತ್ತು ಜಪಾನ್ನಲ್ಲಿ ವಿದೇಶೀ ಉತ್ಪನ್ನಗಳಿಗಿಂತ ಅಲ್ಲಿನ ದೇಶೀಯ ಉತ್ಪನ್ನಗಳಿಗೆ ಜನರು ಹೆಚ್ಚು ಆದ್ಯತೆ ಕೊಡುತ್ತಾರೆ ಎಂಬುದು.
ಇನ್ನು ಬ್ರಿಟನ್, ಕೆನಡಾದಂತಹ ಇತರ ಕೆಲ ದೇಶಗಳ ಜೊತೆಗಿನ ಮುಕ್ತ ವ್ಯಾಪಾರ ಒಪ್ಪಂದಗಳಿಂದ ಭಾರತಕ್ಕೆ ಲಾಭ ಆಗುವುದರ ಬಗ್ಗೆಯೂ ಸಚಿವರ ಈ ವೇಳೆ ಬೆಳಕು ಚೆಲ್ಲಿದರು. ಸ್ವಿಟ್ಜರ್ಲ್ಯಾಂಡ್ ಮತ್ತಿತರ ಸೋದರ ದೇಶಗಳು ಯಾವುದೇ ಒಪ್ಪಂದ ಶುರು ಮಾಡಿಲ್ಲ. ಈ ದೇಶಗಳಿಂದ ಡೈರಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದರಿಂದ ಸ್ಥಳೀಯ ಬೆಲೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳುವುದು ಸೇರಿದಂತೆ ಒಪ್ಪಂದಕ್ಕೆ ಒಂದು ವಿಸ್ತೃತ ಚೌಕಟ್ಟು ರೂಪಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: India-China: ಚೀನಾದ ಕಳಪೆ ವಸ್ತುಗಳಿಂದ ಭಾರತಕ್ಕೆ ಅನ್ಯಾಯ; ಅರ್ಸಿಇಪಿಗೆ ಸಹಿ ಹಾಕದಿದ್ದುದು ಸರಿ: ಕೇಂದ್ರ ಸಚಿವ
ಐರೋಪ್ಯ ಮಾರುಕಟ್ಟೆಯ ಸಂಕೀರ್ಣತೆಯ ಬಗ್ಗೆ ಅವರು ಹೇಳಿದರು. ಯೂರೋಪ್ನಲ್ಲಿ 27 ದೇಶಗಳಿದ್ದು, ಅವುಗಳ ನಿಯಮಾವಳಿಗಳು ಕ್ಲಿಷ್ಟಕರವಾಗಿವೆ. ಅವುಗಳೊಂದಿಗೆ ವ್ಯವಹಾರ ರೂಪಿಸಲು ಹೆಚ್ಚು ಸಮಯ ಹಿಡಿಯುತ್ತದೆ ಎಂದು ಅಭಿಪ್ರಾಯಪಟ್ಟರು. ಹಾಗೆಯೇ, ಮುಕ್ತ ವ್ಯಾಪಾರ ನೀತಿಯ ಪ್ರಬಲ ಬೆಂಬಲಿಗ ಎನ್ನಲಾಗುವ ಅಮೆರಿಕದಲ್ಲಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಅಲ್ಲಿನ ಸದನದ ಬೆಂಬಲವೇ ಇಲ್ಲ. ನಾವು ಬೇರೆ ಮಾರ್ಗಗಳನ್ನು ಅವಲೋಕಿಸಿದ್ದೇವೆ ಎಂದು ಕೇಂದ್ರ ಸಚಿವರು ಹೇಳಿಲದರು.
ಇದೇ ವೇಳೆ, ಪಿಯೂಶ್ ಗೋಯಲ್ ಅವರು ಕೇಂದ್ರದ ಮಹತ್ವಾಕಾಂಕ್ಷಿ ಪಿಎಲ್ಐ ಯೋಜನೆಯ ಮಿತಿ ಬಗ್ಗೆ ಮಾತನಾಡಿದರು. ಉತ್ಪಾದನೆ ಆಧಾರಿತ ಕೊಡುಗೆ ಯೋಜನೆ (ಪಿಎಲ್ಐ) ನಮ್ಮ ತಯಾರಿಕಾ ವಲಯಕ್ಕೆ ಒಂದಷ್ಟು ಮಟ್ಟದವರೆಗೂ ಪುಷ್ಟಿ ನೀಡಬಹುದು ಅಷ್ಟೇ. ಆದರೆ, ಇವು ಗ್ರಾಹಕರಿಗೆ ಒಳ್ಳೆಯ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸಿ ಸ್ವಾವಲಂಬಿಗಳಾಗುವುದು ಅಗತ್ಯ ಇದೆ ಎಂದು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವ ಪೀಯುಶ್ ಗೋಯಲ್ ಹೇಳಿದರು.
Published On - 5:53 pm, Sun, 26 February 23