Ram Mandir
ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿದ್ದ ಮತ್ತು ಅಕ್ರಮವಾಗಿ ನಿರ್ಮಿಸಲಾಗಿತ್ತು ಎನ್ನಲಾಗಿರುವ ಬಾಬರಿ ಮಸೀದಿಯನ್ನು 90ರ ದಶಕದ ಆರಂಭದಲ್ಲಿ ಕರಸೇವಕರು ನೆಲಸಮಗೊಳಿಸಿದರು. ಘಟನೆಯು ದೇಶದಾದ್ಯಂತ ಉದ್ವಿಗ್ನತೆ ಸೃಷ್ಟಿಸಿದ್ದಲ್ಲದೆ ತೀವ್ರತರದ ರಾಜಕೀಯ ಸಂಚಲನವನ್ನೂ ಸೃಷ್ಟಿಸಿತು. ಅದಾದ ಬಳಿಕ ಪ್ರಕರಣ ಕೋರ್ಟ್ ಮೆಟ್ಟಿಲೇರಿತು. ಅಂತಿಮವಾಗಿ ಸುಪ್ರೀಂ ಕೋರ್ಟ್ 2019ರ ನವೆಂಬರ್ 9ರಂದು ವಿವಾದಿತ ಭೂಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅನುವು ಮಾಡಕೊಟ್ಟು ಆದೇಶ ನೀಡಿತು. ಅದಕ್ಕಾಗಿ ಟ್ರಸ್ಟೊಂದನ್ನು ಸ್ಥಾಪಿಸುವಂತೆಯೂ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು. ಅಯೋಧ್ಯೆಯ ಮತ್ತೊಂದು ಜಾಗದಲ್ಲಿ ಮಸೀದಿ ನಿರ್ಮಾಣಕ್ಕೂ ಅನುವು ಮಾಡಿಕೊಡಲಾಯಿತು. ತದನಂತರ ಅಸ್ತಿತ್ವಕ್ಕೆ ಬಂದ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ರಾಮ ಮಂದಿರ ನಿರ್ಮಾಣದ ಹೊಣೆ ಹೊತ್ತುಕೊಂಡಿತು. 2020 ರ ಆಗಸ್ಟ್ 5 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಂದಿರ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ನಡೆಯಿತು. ರಾಮಾಯಣದ ಪ್ರಕಾರ, ಭಗವಾನ್ ಮಹಾವಿಷ್ಣುವಿನ ಅವತಾರವಾದ ಶ್ರೀರಾಮನ ಜನ್ಮಸ್ಥಳವಾಗಿರುವ ಅಯೋಧ್ಯೆ ಕೋಟ್ಯಂತರ ಹಿಂದೂಗಳ ಭಕ್ತಿಯ ತಾಣವಾಗಿದೆ. ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆಯ ಬಳಿಕ ಮಂದಿರವು ಭಕ್ತರ ಪ್ರವೇಶಕ್ಕೆ ಮುಕ್ತವಾಗುತ್ತಿದೆ.