ಅಯೋಧ್ಯೆಯ ರಾಮ ಮಂದಿರದಲ್ಲಿ ನಮಾಜ್ ಮಾಡಲು ಯತ್ನಿಸಿದ ವ್ಯಕ್ತಿ ಯಾರು?
ಅಯೋಧ್ಯೆಯ ರಾಮ ಮಂದಿರ ಸಂಕೀರ್ಣದೊಳಗೆ ನಮಾಜ್ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಅವರನ್ನು ಕಾಶ್ಮೀರದ ಶೋಪಿಯಾನ್ ನಿವಾಸಿ ಅಬ್ದುಲ್ ಅಹಮದ್ ಶೇಖ್ ಎಂದು ಗುರುತಿಸಲಾಗಿದೆ. ಭದ್ರತಾ ಸಿಬ್ಬಂದಿ ಅವರನ್ನು ರಾಮ ಮಂದಿರ ಸಂಕೀರ್ಣದಲ್ಲಿ ವಶಕ್ಕೆ ಪಡೆದರು. ಕಾಶ್ಮೀರದಲ್ಲಿ ಕೂಡ ತನಿಖೆ ನಡೆಯುತ್ತಿದ್ದು, ಭದ್ರತಾ ಸಿಬ್ಬಂದಿ ಅಬ್ದುಲ್ ಅವರ ಮನೆಗೆ ಭೇಟಿ ನೀಡಿದ್ದಾರೆ.

ಅಯೋಧ್ಯೆ, ಜನವರಿ 10: ಅಯೋಧ್ಯೆಯ ರಾಮ ಮಂದಿರದಲ್ಲಿ (Ram Mandir) ನಮಾಜ್ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. 55 ವರ್ಷದ ವ್ಯಕ್ತಿಯನ್ನು ಅಬ್ದುಲ್ ಅಹ್ಮದ್ ಶೇಖ್ ಎಂದು ಗುರುತಿಸಲಾಗಿದೆ. ಅವರು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ನಿವಾಸಿ. ಆ ವ್ಯಕ್ತಿ ಶುಕ್ರವಾರ ರಾಮ ಮಂದಿರಕ್ಕೆ ಪ್ರವೇಶಿಸಿದ್ದಾರೆ ಎನ್ನಲಾಗಿದೆ. ಆವರಣವನ್ನು ಪ್ರವೇಶಿಸಿದ ನಂತರ, ಸೀತಾ ರಸೋಯಿ ಬಳಿ ಕುಳಿತು ನಮಾಜ್ ಮಾಡಲು ಸಿದ್ಧರಾದಾಗ ಅದನ್ನು ಕಂಡ ಭದ್ರತಾ ಪಡೆಯ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಆ ವ್ಯಕ್ತಿಯನ್ನು ನಂತರ ವಿಚಾರಣೆಗಾಗಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಕೆಲವು ಮೂಲಗಳ ಪ್ರಕಾರ, ಆ ವ್ಯಕ್ತಿಯನ್ನು ವಶಕ್ಕೆ ಪಡೆದಾಗ ಮುಸ್ಲಿಂ ಪರ ಘೋಷಣೆಗಳನ್ನು ಕೂಗಿದ್ದಾರೆ. ಆದರೆ, ಈ ಹೇಳಿಕೆಯನ್ನು ಇನ್ನೂ ಅಧಿಕೃತವಾಗಿ ದೃಢಪಡಿಸಲಾಗಿಲ್ಲ. ಈ ಘಟನೆಯ ನಂತರ ಗುಪ್ತಚರ ಸಂಸ್ಥೆಗಳು, ಸ್ಥಳೀಯ ಪೊಲೀಸರು ಮತ್ತು ಹಿರಿಯ ಆಡಳಿತ ಅಧಿಕಾರಿಗಳಿಗೆ ತಕ್ಷಣವೇ ಎಚ್ಚರಿಕೆ ನೀಡಲಾಯಿತು. ಅವರನ್ನು ವಶಕ್ಕೆ ಪಡೆದ ನಂತರ, ಪೊಲೀಸರು ಅವರ ವಿಚಾರಣೆ ಮಾಡಲು ಪ್ರಾರಂಭಿಸಿದ್ದಾರೆ. ಅವರ ಕೃತ್ಯದ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ಸಂಪೂರ್ಣ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ವಿಜಯಪುರ: 56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!
ಆರಂಭಿಕ ತನಿಖೆಯಲ್ಲಿ, ಅವರು ರಾಮ ಮಂದಿರದ ಸುತ್ತ ಗೋಡಂಬಿ ಮತ್ತು ಒಣದ್ರಾಕ್ಷಿ ಮುಂತಾದ ವಸ್ತುಗಳನ್ನು ಮಾರುತ್ತಿರುವುದು ಕಂಡುಬಂದಿದೆ. ಆ ವ್ಯಕ್ತಿ, ತಾನು ಅಜ್ಮೀರ್‌ಗೆ ಹೋಗುತ್ತಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾರೆಂ ಎನ್ನಲಾಗಿದೆ. ಈ ಘಟನೆಯ ನಂತರ, ಭದ್ರತಾ ಅಧಿಕಾರಿಗಳು ಮತ್ತು ಗುಪ್ತಚರ ಸಂಸ್ಥೆಗಳು ದೇವಾಲಯದಲ್ಲಿನ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಲು ಪ್ರಾರಂಭಿಸಿವೆ. ಅಧಿಕಾರಿಗಳು ಇಲ್ಲಿಯವರೆಗೆ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಇದನ್ನೂ ಓದಿ: ಅಯೋಧ್ಯೆಯ ರಾಮ ಮಂದಿರದ ಸುತ್ತ ಆಲ್ಕೋಹಾಲ್, ಮಾಂಸಾಹಾರ ಸೇವನೆ ನಿಷೇಧ
ದೇವಾಲಯದ ಆವರಣದಲ್ಲಿ ನಮಾಜ್ ಮಾಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದ ನಂತರ, ಗುಪ್ತಚರ ಸಂಸ್ಥೆಗಳಿಗೆ ಮಾಹಿತಿ ನೀಡಲಾಯಿತು. ಅವರು ಕಾಶ್ಮೀರದಲ್ಲಿ ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಭದ್ರತಾ ಸಿಬ್ಬಂದಿ ಶೋಪಿಯಾನ್‌ನಲ್ಲಿರುವ ಅಬ್ದುಲ್ ಅವರ ಮನೆಗೆ ತೆರಳಿ ಅವರ ಕುಟುಂಬದೊಂದಿಗೆ ಮಾತನಾಡಿದರು. ಆ ವ್ಯಕ್ತಿಯ ಮಗ ಇಮ್ರಾನ್, ತನ್ನ ತಂದೆ ಅಯೋಧ್ಯೆಗೆ ಏಕೆ ಹೋದರು ಅಥವಾ ಅಲ್ಲಿ ಏನಾಯಿತು ಎಂಬುದರ ಕುರಿತು ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಅವರ ತಂದೆ ಸುಮಾರು 5 ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದರು. ಅವರು ಮಾನಸಿಕ ಅಸ್ವಸ್ಥರಾಗಿದ್ದು, ಪ್ರಸ್ತುತ ಶ್ರೀನಗರದ ಮನೋವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
