Ford: ಭಾರತದಲ್ಲಿ ರೀ ಎಂಟ್ರಿಗೆ ಸಜ್ಜಾದ ಫೋರ್ಡ್ ಹೊಸ ಕಾರುಗಳು ಹೇಗಿರಲಿವೆ?
ಭಾರತದಲ್ಲಿ ಕಾರುಗಳ ಉತ್ಪಾದನೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವ ಫೋರ್ಡ್ ಕಂಪನಿ ಭಾರತಕ್ಕೆ ಮರಳಿ ಬರಲಿದೆ ಎನ್ನಲಾಗಿದ್ದು, ಫೋರ್ಡ್ ಹೊಸ ಕಾರುಗಳ ಮಾಹಿತಿ ಇಲ್ಲಿದೆ.
ಹೊಸ ಕಾರುಗಳ (New Cars) ಉತ್ಪಾದನೆ ಮುಂಚೂಣಿ ಸಾಧಿಸುತ್ತಿರುವ ಭಾರತದಲ್ಲಿ ವಿದೇಶಿ ಕಾರುಗಳ ಅಬ್ಬರ ಹೆಚ್ಚುತ್ತಿದೆ. ಕಾರು ಉತ್ಪಾದನೆ ಸದ್ಯ ಜಾಗತಿಕವಾಗಿ ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ ಹಲವು ಕಾರು ಕಂಪನಿಗಳು ಎಂಟ್ರಿ ನೀಡುತ್ತಿವೆ. ಹೊಸ ಕಾರು ಕಂಪನಿಗಳ ಆಗಮನದ ಜೊತೆ ಭಾರತವನ್ನು ತೊರೆದಿದ್ದ ಫೋರ್ಡ್ (Ford) ಕೂಡಾ ಇದೀಗ ರೀ ಎಂಟ್ರಿ ಸುಳಿವು ನೀಡಿದೆ. ಹೌದು, ಭಾರತದಲ್ಲಿ ಸದ್ಯ ಕಾರುಗಳ ಉತ್ಪಾದನೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವ ಫೋರ್ಡ್ ಕಂಪನಿ ಭಾರತಕ್ಕೆ ಮರಳಿ ಬರುತ್ತಿದೆ ಎನ್ನಲಾಗಿದೆ. ಹೊಸ ಯೋಜನೆಯೊಂದಿಗೆ ಭಾರತದಲ್ಲಿ ಮತ್ತೆ ಸಂಚಲನ ಮೂಡಿಸುವ ತವಕದಲ್ಲಿದ್ದು, ಭರ್ಜರಿ ರೀ ಎಂಟ್ರಿ ನೀಡುವ ಸಿದ್ದತೆಯಲ್ಲಿದೆ.
ಮಧ್ಯಮ ಕ್ರಮಾಂಕದ ಕಾರುಗಳ ಮೂಲಕ ಭಾರತದಲ್ಲಿ ಭಾರೀ ಬೇಡಿಕೆ ಹೊಂದಿದ್ದ ಫೋರ್ಡ್ ಕಂಪನಿ ಕಳೆದ ಕೆಲ ವರ್ಷಗಳಿಂದ ತೀವ್ರ ಪೈಪೋಟಿ ಎದುರಿಸಿತ್ತು. ತೀವ್ರ ಪೈಪೋಟಿ ಪರಿಣಾಮ ಸತತ ನಷ್ಟ ಅನುಭವಿಸಿದ್ದ ಫೋರ್ಡ್ ಕಂಪನಿ ಕಳೆದ 2021ರ ಸೆಪ್ಟೆಂಬರ್ ನಲ್ಲಿ ಅಧಿಕೃತವಾಗಿ ಭಾರತದಲ್ಲಿ ಕಾರು ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸಿತ್ತು. ಆದರೆ ಬದಲಾದ ಮಾರುಕಟ್ಟೆ ಸನ್ನಿವೇಶದಲ್ಲಿ ಇದೀಗ ಭಾರತಕ್ಕೆ ಮರಳಿಬರುತ್ತಿದೆ.
ಇದನ್ನೂ ಓದಿ: ಕಡಿಮೆ ಬೆಲೆಗೆ 6 ಏರ್‌ಬ್ಯಾಗ್ ಗಳ ಸುರಕ್ಷತೆ ಹೊಂದಿರುವ ಕಾರುಗಳು!
ಜಾಗತಿಕ ಮಾರುಕಟ್ಟೆಯಲ್ಲಿ ಸದ್ಯ ಹಲವಾರು ಜನಪ್ರಿಯ ಕಾರುಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಫೋರ್ಡ್ ಕಂಪನಿ ಭಾರತದಲ್ಲಿ ಮಾತ್ರ ಕಳಪೆ ಮಾರಾಟ ಹೊಂದಿತ್ತು. ಭಾರತದಲ್ಲಿ ಎಂಡೀವರ್ ಹೊರತುಪಡಿಸಿ ಉಳಿದ ಕಾರುಗಳ ಬೇಡಿಕೆಯಲ್ಲಿ ತೀವ್ರ ಕುಸಿತ ಅನುಭವಿಸಿತ್ತು. ಹೀಗಾಗಿ ಫೋರ್ಡ್ ಇದೀಗ ಹೊಸ ಯೋಜನೆ ಅಡಿ ಎಂಡೀವರ್ ಮಾದರಿಯನ್ನು ಮರುಬಿಡುಗಡೆ ಮಾಡಬಹುದಾಗಿದೆ.
ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಈ ಹಿಂದೆ ಕೇವಲ ಶೇ. 1.70 ರಷ್ಟು ಮಾರಾಟ ಪಾಲು ಹೊಂದಿದ್ದ ಫೋರ್ಡ್ ಕಂಪನಿ ಹಲವಾರು ಮಾರುಕಟ್ಟೆ ಸುಧಾರಣಾ ಕ್ರಮಗಳನ್ನು ಕೈಗೊಂಡಿತ್ತು. ಆದರೂ ಗ್ರಾಹಕರ ಬೇಡಿಕೆಯಲ್ಲಿ ಸತತ ಹಿನ್ನಡೆ ಅನುಭವಿಸಿದ್ದ ಫೋರ್ಡ್ 2021ರಲ್ಲಿ ಅಧಿಕೃತವಾಗಿ ಕಾರು ಮಾರಾಟವನ್ನು ಸ್ಥಗಿತ ಮಾಡಿತ್ತು. ಭಾರತದಲ್ಲಿ ಒಟ್ಟು ಎರಡು ಉತ್ಪಾದನಾ ಘಟಕಗಳನ್ನು ಹೊಂದಿದ್ದ ಫೋರ್ಡ್, ಗುಜರಾತ್‌ನಲ್ಲಿರುವ ಸನಂದಾ ಘಟಕವನ್ನು ಈಗಾಗಲೇ ಟಾಟಾ ಮೋಟಾರ್ಸ್ ಕಂಪನಿಗೆ ಮಾರಾಟ ಮಾಡಿದೆ. ಮತ್ತೊಂದು ಕಾರು ಉತ್ಪಾದನಾ ಘಟಕವು ಚೆನ್ನೈನಲ್ಲಿದ್ದು, ಇದರಲ್ಲಿ ಸದ್ಯ ಸಿಮಿತ ಸಂಖ್ಯೆಯ ರಫ್ತು ಕಾರು ಮಾದರಿಗಳನ್ನು ಮಾತ್ರ ಉತ್ಪಾದನೆ ಕೈಗೊಳ್ಳಲಾಗುತ್ತಿದೆ.
ಇದನ್ನೂ ಓದಿ: ಮಾರ್ಚ್ ನಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಕಾರುಗಳಿವು!
ಆದರೆ ಹೊಸ ವರದಿಗಳ ಪ್ರಕಾರ ಫೋರ್ಡ್ ಕಂಪನಿಯು ಎಂಡೀವರ್ ಎಸ್ ಯುವಿಯನ್ನು ಹೊಸ ರೂಪದಲ್ಲಿ ಸಿಬಿಯು ಯುನಿಟ್ ಆಗಿ ಮಾರಾಟ ಮಾಡಬಹುದಾಗಿದೆ. ಹೊಸ ಎಂಡೀವರ್ ಮಾದರಿಯು ಈ ಹಿಂದಿನ ಟರ್ಬೊ ಡೀಸೆಲ್ ಎಂಜಿನ್ ಬದಲಾಗಿ ಸ್ಟ್ರಾಂಗ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಮರಳಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಇದರೊಂದಿಗೆ ಫೋರ್ಡ್ ಕಂಪನಿಯು ಉತ್ತಮ ಆದಾಯದ ನೀರಿಕ್ಷೆಯಲ್ಲಿದ್ದು, ಇದಕ್ಕಾಗಿ ವಿವಿಧ ಹಂತದ ಮಾರುಕಟ್ಟೆ ಅಧ್ಯಯನ ನಡೆಸುತ್ತಿದೆ. ಈ ಕುರಿತಾಗಿ ಫೋರ್ಡ್ ಕಂಪನಿಯೇ ಮುಂಬರುವ ದಿನಗಳಲ್ಲಿ ಅಧಿಕೃತ ಮಾಹಿತಿ ಹಂಚಿಕೊಳ್ಳಲಿದ್ದು, ಫೋರ್ಡ್ ಅಭಿಮಾನಿಗಳಿಗೆ ಸರ್ಪೈಸ್ ನೀಡಲಿದೆ