Upcoming cars in March: ಮಾರ್ಚ್ ನಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಕಾರುಗಳಿವು!
ದೇಶಿಯ ಕಾರು ಮಾರುಕಟ್ಟೆಯಲ್ಲಿ ಹೊಸ ತಲೆಮಾರಿನ ಕಾರುಗಳ ಅಬ್ಬರ ಹೆಚ್ಚುತ್ತಿದ್ದು, ಮುಂದಿನ ತಿಂಗಳು ಮಾರ್ಚ್ ನಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳು ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗುತ್ತಿವೆ. ಬಿಡುಗಡೆಯಾಗಲಿರುವ ಹೊಸ ಕಾರುಗಳಲ್ಲಿ ಸಾಮಾನ್ಯ ಕಾರುಗಳ ಜೊತೆಗೆ ಸಿಎನ್ ಜಿ ಮತ್ತು ಎಲೆಕ್ಟ್ರಿಕ್ ಕಾರುಗಳು ಸಹ ಬಿಡುಗಡೆಯಾಗುತ್ತಿವೆ.
ಹೊಸ ಕಾರುಗಳ (New Cars) ಮಾರಾಟ ಪ್ರಮಾಣ ತಿಂಗಳಿನಿಂದ ತಿಂಗಳಿಗೆ ಹೆಚ್ಚುತ್ತಿದ್ದು, ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಮಾದರಿಯ ಕಾರುಗಳು ಬಿಡುಗಡೆಗೆ ಸಿದ್ದಗೊಳ್ಳುತ್ತಿದೆ. ಬಿಡುಗಡೆಯಾಗಲಿರುವ ಹೊಸ ಕಾರುಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲದೆ ಸಿಎನ್ ಜಿ ಮತ್ತು ಎಲೆಕ್ಟ್ರಿಕ್ ಕಾರುಗಳು ಸಹ ಬಿಡುಗಡೆಯಾಗುತ್ತಿದ್ದು, ಹೊಸ ಕಾರುಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಬಿವೈಡಿ ಸೀಲ್ ಇವಿ
ಬಿವೈಡಿ ಕಂಪನಿಯು ಭಾರತದಲ್ಲಿ ಶೀಘ್ರದಲ್ಲಿಯೇ ಮತ್ತೆರಡು ಹೊಸ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ. ಹೊಸ ಇವಿ ಕಾರುಗಳಲ್ಲಿ ಸೀಲ್ ಎಲೆಕ್ಟ್ರಿಕ್ ಸೆಡಾನ್ ಆವೃತ್ತಿಯು ಮಾರ್ಚ್ 5ರಂದು ಬಿಡುಗಡೆಯಾಗಲಿದೆ. ಇದು 61.4kWh ಮತ್ತು 82.5kWh ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಗರಿಷ್ಠ 700 ಕಿ.ಮೀ ಮೈಲೇಜ್ ನೀಡಲಿದ್ದು, ಐಷಾರಾಮಿ ಫೀಚರ್ಸ್ ಗಳೊಂದಿಗೆ ಎಕ್ಸ್ ಶೋರೂಂ ಪ್ರಕಾರ ರೂ. 45 ಲಕ್ಷದಿಂದ ರೂ. 50 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ.
ಇದನ್ನೂ ಓದಿ: 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಹೊಂದಿರುವ ಫೇಮಸ್ ಎಸ್‌ಯುವಿ ಕಾರುಗಳಿವು!
ಮಾರುತಿ ಸುಜುಕಿ ಹೊಸ ಸ್ವಿಫ್ಟ್
ಮಾರ್ಚ್ ನಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳಲ್ಲಿ ಮಾರುತಿ ಸುಜುಕಿ ಹೊಸ ತಲೆಮಾರಿನ ಸ್ವಿಫ್ಟ್ ಕಾರು ಕೂಡಾ ಪ್ರಮುಖವಾಗಿದೆ. ಹೊಸ ಸ್ವಿಫ್ಟ್ ಕಾರಿನಲ್ಲಿ ಜೆಡ್ ಸೀರಿಸ್ ನಲ್ಲಿರುವ 1.2 ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಇದು ಪ್ಯೂರ್ ಪೆಟ್ರೋಲ್ ಮತ್ತು ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ. ಜೊತೆಗೆ ಹೊಸ ಸ್ವಿಫ್ಟ್ ಕಾರಿನ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳಲ್ಲೂ ಭಾರೀ ಬದಲಾವಣೆಗಳನ್ನು ತರಲಾಗಿದ್ದು, ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ತುಸು ದುಬಾರಿಯಾಗಿಲಿದೆ.
ಕ್ರೆಟಾ ಎನ್-ಲೈನ್
ಹ್ಯುಂಡೈ ಇಂಡಿಯಾ ಕಂಪನಿಯು ಪರ್ಫಾಮೆನ್ಸ್ ಪ್ರಿಯರಿಗಾಗಿ ಕ್ರೆಟಾ ಎನ್ ಲೈನ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಇದು ಮಾರ್ಚ್ 11ರಂದು ಬಿಡುಗಡೆಯಾಗಬಹುದಾಗಿದೆ. ಹೊಸ ಆವೃತ್ತಿಯು ವಿಶೇಷವಾಗಿ ಪರ್ಫಾಮೆನ್ಸ್ ಪ್ರಿಯರಿಗಾಗಿ ನಿರ್ಮಾಣಗೊಂಡಿದ್ದು, ಇದರಲ್ಲಿ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಸಹ ನೀಡಲಾಗಿದೆ. ಇದರಿಂದ ಹೊಸ ಕ್ರೆಟಾ ಎನ್ ಲೈನ್ ಕಾರು ಸಾಮಾನ್ಯ ವೆರಿಯೆಂಟ್ ಗಿಂತಲೂ ರೂ. 1.50 ಲಕ್ಷದಷ್ಟು ದುಬಾರಿ ಎನ್ನಿಸಲಿದೆ.
ಟಾಟಾ ಆಲ್ಟ್ರೊಜ್ ರೇಸರ್
ಆಲ್ಟ್ರೊಜ್ ಕಾರಿನಲ್ಲಿ ಈ ಹಿಂದೆ ಟರ್ಬೊ ಎಡಿಷನ್ ಪರಿಚಯಿಸಿದ್ದ ಟಾಟಾ ಕಂಪನಿ ಇದೀಗ ಇನ್ನು ಹೆಚ್ಚಿನ ಮಟ್ಟದ ಪರ್ಫಾಮೆನ್ಸ್ ಮತ್ತು ಸ್ಪೋರ್ಟಿ ಫಿರ್ಚಸ್ ಹೊಂದಿರುವ ರೇಸರ್ ಎಡಿಷನ್ ಅಭಿವೃದ್ದಿಪಡಿಸಿದೆ. ಹೊಸ ಆವೃತ್ತಿಯು ಸಾಮಾನ್ಯ ಕಾರು ಮಾದರಿಗಿಂತಲೂ ಹೆಚ್ಚು ಪವರ್ ಫುಲ್ ಎಂಜಿನ್ ಮತ್ತು ಸ್ಪೋರ್ಟಿ ಫೀಚರ್ಸ್ ಗಳೊಂದಿಗೆ ಮಾರ್ಚ್ ಅಂತ್ಯಕ್ಕೆ ಬಿಡುಗಡೆಯಾಗಲಿದ್ದು, ಇದರಲ್ಲಿರುವ ಬಣ್ಣದ ಆಯ್ಕೆ ಆಕರ್ಷಕವಾಗಿದೆ. ಜೊತೆಗೆ ಬೆಲೆಯಲ್ಲೂ ಇದು ಸಾಮಾನ್ಯ ಮಾದರಿಗಿಂತಲೂ ತುಸು ದುಬಾರಿಯಾಗಿರಲಿದೆ.
ಇದನ್ನೂ ಓದಿ: ಕಡಿಮೆ ಬೆಲೆಗೆ 6 ಏರ್‌ಬ್ಯಾಗ್ ಗಳ ಸುರಕ್ಷತೆ ಹೊಂದಿರುವ ಕಾರುಗಳು!
ಮಹೀಂದ್ರಾ ಎಕ್ಸ್ ಯುವಿ300 ಫೇಸ್‌ಲಿಫ್ಟ್
ಮಹೀಂದ್ರಾ ಕಂಪನಿಯು ಮಾರ್ಚ್ ಮಧ್ಯಂತರದಲ್ಲಿ ಎಕ್ಸ್ ಯುವಿ300 ಫೇಸ್‌ಲಿಫ್ಟ್ ಬಿಡುಗಡೆ ಮಾಡುತ್ತಿದ್ದು, ಹೊಸ ಆವೃತ್ತಿಯು ಪ್ರತಿಸ್ಪರ್ಧಿ ಟಾಟಾ ನೆಕ್ಸಾನ್ ಗೆ ಪೈಪೋಟಿಯಾಗಿ ಮಹತ್ವದ ಬದಲಾವಣೆ ಪಡೆದುಕೊಳ್ಳುತ್ತಿದೆ. ಮಹೀಂದ್ರಾ ಕಂಪನಿಯ ಮಹತ್ವದ ಯೋಜನೆಯಾದ ಬಾರ್ನ್ ಎಲೆಕ್ಟ್ರಿಕ್ ಪ್ರೇರಣೆ ಹೊಂದಿರುವ ಹೊಸ ಕಾರು ಈ ಹಿಂದಿನಂತೆಯೇ 1.2 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿರಲಿದೆ. ಜೊತೆಗೆ ಹೊಸ ಕಾರಿನ ಒಳಭಾಗದಲ್ಲಿ ಹಲವಾರು ಬದಲಾವಣೆಗಳಾಗಿದ್ದು, ಹೆಚ್ಚಿನ ಮಟ್ಟದ ಫೀಚರ್ಸ್ ನೀಡಲಾಗುತ್ತಿದೆ.
Published On - 7:53 pm, Mon, 26 February 24