ಹ್ಯುಂಡೈ (Hyundai) ಕಂಪನಿಯ ಹೊಸ ಎಕ್ಸ್‌ಟರ್ ಕಾರು ವಿನೂತನ ಫೀಚರ್ಸ್ ಮತ್ತು ಆಕರ್ಷಕ ಬೆಲೆಯೊಂದಿಗೆ ದಾಖಲೆ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಬಿಡುಗಡೆಯಾದ ಮೊದಲ ವರ್ಷದ ಸಂಭ್ರಮದೊಂದಿಗೆ ಬರೋಬ್ಬರಿ 1 ಲಕ್ಷ ಯುನಿಟ್ ಮಾರಾಟ ದಾಖಲೆ ತನ್ನದಾಗಿಸಿಕೊಂಡಿದೆ. ಮೈಕ್ರೊ ಎಸ್ ಯುವಿ ವೈಶಿಷ್ಟ್ಯತೆ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದು ಸಣ್ಣ ಗಾತ್ರದ ಕಾರುಗಳ ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿದೆ.
ಮೈಕ್ರೊ ಎಸ್ ಯುವಿ ಕಾರುಗಳ ವಿಭಾಗದಲ್ಲಿ ಟಾಟಾ ಪಂಚ್ ಕಾರಿಗೆ ಪೈಪೋಟಿಯಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಎಕ್ಸ್‌ಟರ್ ಕಾರು ಹಲವಾರು ಫೀಚರ್ಸ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದ್ದು, ಪೆಟ್ರೋಲ್ ಮತ್ತು ಸಿಎನ್ ಜಿ ಆಯ್ಕೆಯೊಂದಿಗೆ ಗ್ರಾಹಕರ ವಿವಿಧ ಬೇಡಿಕೆಗಳನ್ನು ಪೂರೈಸುತ್ತಿದೆ. ಎಕ್ಸ್‌ಟರ್ ಕಾರು ಸದ್ಯ ಪ್ರಮುಖ ಐದು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಆರಂಭಿಕ ವೆರಿಯೆಂಟ್ ಎಕ್ಸ್ ಶೋರೂಂ ಪ್ರಕಾರ ರೂ. 6.13 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ವೆರಿಯೆಂಟ್ ರೂ. 10.43 ಲಕ್ಷ ಬೆಲೆ ಹೊಂದಿದೆ.
ಎಕ್ಸ್‌ಟರ್ ಕಾರು ಗ್ರ್ಯಾಂಡ್ ಐ10 ನಿಯೋಸ್ ಮತ್ತು ಔರಾ ಕಾರು ಮಾದರಿಗಳೊಂದಿಗೆ ಹಲವಾರು ತಾಂತ್ರಿಕ ಸೌಲಭ್ಯಗಳನ್ನ ಹಂಚಿಕೊಂಡಿದ್ದು, ಇದು ಬಾಕ್ಸಿ ಡಿಸೈನ್ ನೊಂದಿಗೆ 3,815 ಎಂಎಂ ಉದ್ದಳತೆ, 1,710 ಎಂಎಂ ಅಗಲ ಮತ್ತು 1,631 ಎಂಎಂ ಎತ್ತರ ಪಡೆದುಕೊಂಡಿದೆ. ಇದರೊಂದಿಗೆ ಹೊಸ ಕಾರಿನಲ್ಲಿ 1.2 ಲೀಟರ್ ಎನ್ಎ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ 83 ಹಾರ್ಸ್ ಪವರ್ ಮತ್ತು 114 ಎನ್ಎಂ ಉತ್ಪಾದಿಸುತ್ತದೆ.
ಇದನ್ನೂ ಓದಿ: ಕೇವಲ ರೂ. 15 ಸಾವಿರಕ್ಕೆ ಸಿಎನ್‌ಜಿ ಆವೃತ್ತಿಯಾಗಲಿವೆ ನಿಮ್ಮ ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನಗಳು..
ಈ ಮೂಲಕ ಅತ್ಯುತ್ತಮ ಪರ್ಫಾಮೆನ್ಸ್ ನೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 19.4 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ. ಅದೇ ರೀತಿಯಾಗಿ ಫ್ಯಾಕ್ಟರಿ ಫಿಟೆಡ್ ಸಿಎನ್ ಜಿ ಕಿಟ್ ಹೊಂದಿರುವ ಎಕ್ಸ್ ಟರ್ ಕಾರು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 69 ಹಾರ್ಸ್ ಪವರ್ ಮತ್ತು 95.2 ಎನ್ಎಂ ಟಾರ್ಕ್ ಉತ್ಪಾದಿಸಿ ಪ್ರತಿ ಕೆಜೆ ಸಿಎನ್ ಜಿಗೆ 27.10 ಮೈಲೇಜ್ ನೀಡುತ್ತದೆ. ಜೊತೆಗೆ ಹೊಸ ಎಕ್ಸ್ ಟರ್ ಕಾರು ಸುರಕ್ಷತೆಯಲ್ಲೂ ಗಮನಸೆಳೆಯುತ್ತಿದ್ದು, ಆರಂಭಿಕ ಮಾದರಿಗೂ ಅನ್ವಯಿಸುವಂತೆ ಆರು ಏರ್ ಬ್ಯಾಗ್ ಗಳ ಜೊತೆಗೆ ಇಎಸ್ ಸಿ, ಹಿಲ್ ಅಸಿಸ್ಟ್ ಕಂಟ್ರೋಲ್, ಎಬಿಎಸ್ ಜೊತೆಗೆ ಇಬಿಡಿ, ರಿಯರ್ ಪಾರ್ಕಿಂಗ್ ಕ್ಯಾಮೆರಾ ಜೊತೆ ಸೆನ್ಸಾರ್, ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಮತ್ತು ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಸೇರಿ ಹಲವು ಸೌಲಭ್ಯಗಳಿವೆ.
ಇದನ್ನೂ ಓದಿ: ಭರ್ಜರಿ ಮೈಲೇಜ್ ಪ್ರೇರಿತ ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್ ವಿಶೇಷತೆಗಳಿವು!
ಜೊತೆಗೆ ಎಕ್ಸ್‌ಟರ್ ಕಾರಿನಲ್ಲಿ ಐಷಾರಾಮಿ ಲುಕ್ ಹೊಂದಿರುವ ನೈಟ್ ಎಡಿಷನ್ ಬಿಡುಗಡೆ ಮಾಡಿದ್ದು, ಇದರ ಆರಂಭಿಕ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 8.38 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 10.43 ಲಕ್ಷ ಬೆಲೆ ಹೊಂದಿದೆ. ಎಕ್ಸ್‌ಟರ್ ನೈಟ್ ಎಡಿಷನ್ ಎಸ್ಎಕ್ಸ್ ಮತ್ತು ಎಸ್ಎಕ್ಸ್(ಒ) ವೆರಿಯೆಂಟ್ ಗಳನ್ನು ಆಧರಿಸಿ ಬಿಡುಗಡೆ ಮಾಡಲಾಗಿದ್ದು, ವಿಶೇಷ ಆವೃತ್ತಿಯಲ್ಲಿ ಆಲ್ ಬ್ಲ್ಯಾಕ್ ಥೀಮ್ ಜೊತೆಗೆ ರೆಡ್ ಹೈಲೆಟ್ಸ್ ಗಳನ್ನು ಪಡೆದುಕೊಂಡಿದೆ.