Bajaj CNG Bike: ಭರ್ಜರಿ ಮೈಲೇಜ್ ಪ್ರೇರಿತ ಬಜಾಜ್ ಫ್ರೀಡಂ 125 ಸಿಎನ್ಜಿ ಬೈಕ್ ವಿಶೇಷತೆಗಳಿವು!
ಬಜಾಜ್ ಆಟೋ ಕಂಪನಿಯು ತನ್ನ ಬಹುನೀರಿಕ್ಷಿತ ಫ್ರೀಡಂ 125 ಸಿಎನ್ಜಿ ಬೈಕ್ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಆಕರ್ಷಕ ಬೆಲೆಯೊಂದಿಗೆ ಭರ್ಜರಿ ಮೈಲೇಜ್ ಖಾತ್ರಿಪಡಿಸುತ್ತದೆ.
ದೇಶಿಯ ಅಗ್ರಗಣ್ಯ ಬೈಕ್ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಬಜಾಜ್ ಆಟೋ ತನ್ನ ಬಹುನೀರಿಕ್ಷಿತ ಫ್ರೀಡಂ 125 ಸಿಎನ್ಜಿ (Freedom 125 CNG ) ಬೈಕ್ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಪ್ರಮುಖ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿರಲಿದೆ. ಎಕ್ಸ್ ಶೋರೂಂ ಪ್ರಕಾರ ಹೊಸ ಬೈಕಿನ ಡ್ರಮ್ ವೆರಿಯೆಂಟ್ ರೂ. 95 ಸಾವಿರ ಹೊಂದಿದ್ದರೆ ಡ್ರಮ್ ಎಲ್ಇಡಿ ವೆರಿಯೆಂಟ್ ರೂ. 1.05 ಲಕ್ಷ ಮತ್ತು ಡಿಸ್ಕ್ ಎಲ್ಇಡಿ ವೆರಿಯೆಂಟ್ ರೂ. 1.10 ಲಕ್ಷ ಬೆಲೆ ಹೊಂದಿದೆ.
ಪೆಟ್ರೋಲ್ ಮತ್ತು ಸಿಎನ್ಜಿ ಎರಡೂ ಮಾದರಿಯಲ್ಲೂ ಚಾಲನೆಗೊಳ್ಳುವ ಹೊಸ ಬೈಕ್ ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿದ್ದು, 125ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಜೋಡಣೆ ಮಾಡಲಾಗಿದೆ. ಇದು 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 9.37 ಹಾರ್ಸ್ ಪವರ್, 9.7 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಪ್ರತಿ ಕೆಜಿ ಸಿಎನ್ಜಿಗೆ ಬರೋಬ್ಬರಿ 102 ಕಿ.ಮೀ ಮೈಲೇಜ್ ನೀಡುತ್ತೆ. ಹಾಗೆಯೇ ಹೊಸ ಬೈಕಿನಲ್ಲಿ ಪೆಟ್ರೋಲ್ ಟ್ಯಾಂಕ್ ಸಹ ಜೋಡಣೆ ಮಾಡಲಾಗಿದ್ದು, ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚಿನ ದೂರವನ್ನು ಕ್ರಮಿಸಬಹುದಾಗಿದೆ. ಹಾಗೆಯೇ ಪೆಟ್ರೋಲ್ ಮತ್ತು ಸಿಎನ್ ಜಿ ಎರಡೂ ಮಾದರಿಯಲ್ಲಿ ಒಂದು ಬಾರಿಗೆ ಒಟ್ಟು 330 ಕಿ.ಮೀ ಕ್ರಮಿಸಬಹುದಾಗಿದೆ.
ಬಜಾಜ್ ಕಂಪನಿಯ ಮಾಹಿತಿಗಳ ಪ್ರಕಾರ ಹೊಸ ಬೈಕ್ ಅನ್ನು ಸಿಎನ್ ಜಿ ಸಹಾಯದೊಂದಿಗೆ 1 ಕಿಮೀ ದೂರವನ್ನು ರೂ. 1 ವೆಚ್ಚದಲ್ಲಿ ಮತ್ತು ಸಂಪೂರ್ಣವಾಗಿ ಪೆಟ್ರೋಲ್ ಮೂಲಕ 1 ಕಿ.ಮೀ ದೂರವನ್ನು 2.25 ರೂ ವೆಚ್ಚವಾಗಲಿದೆ ಎನ್ನಲಾಗಿದ್ದು, ಇದರಲ್ಲಿ 2 ಕೆಜಿ ಸಾಮರ್ಥ್ಯದ ಸಿಎನ್ಜಿ ಟ್ಯಾಂಕ್ ಜೋಡಣೆ ಮಾಡಲಾಗಿದೆ.
ಇದನ್ನೂ ಓದಿ: ಹೈ-ಬೀಮ್ ಹೆಡ್‌ಲೈಟ್ ಹೊಂದಿರುವ ವಾಹನ ಮಾಲೀಕರಿಂದ ಭರ್ಜರಿ ದಂಡ ವಸೂಲಿ
ಹೊಸ ಬೈಕಿನ ಆಸನದ ಕೆಳಭಾಗದಲ್ಲಿ ಸಿಎನ್ ಜಿ ಟ್ಯಾಂಕ್ ಜೋಡಣೆ ಮಾಡಲಾಗಿದ್ದು, ಚಾಸಿಸ್ ಫ್ರೆಮ್ ನಲ್ಲಿರುವ ಸಿಎನ್ ಜಿ ಟ್ಯಾಂಕರ್ ಸುರಕ್ಷಿತವಾಗಿರಲಿದೆ. ಸಿಎನ್ ಜಿ ಟ್ಯಾಂಕ್ ಆಸನ ಕೆಳಭಾಗದಲ್ಲಿರುವುದರಿಂದ ಬೈಕಿನ ಆಸನದ ಉದ್ದಳತೆಯು ಸಾಮಾನ್ಯ ಬೈಕ್ ಮಾದರಿಗಿಂತಲೂ ಹೆಚ್ಚಳವಾಗಿದ್ದು, ಇದು ದೂರದ ಪ್ರಯಾಣಕ್ಕೂ ಸಾಕಷ್ಟು ಅನುಕೂಲಕರವಾಗಲಿದೆ ಎನ್ನಬಹುದು.
ಇದರೊಂದಿಗೆ ಹೊಸ ಬೈಕಿನಲ್ಲಿ ಭರ್ಜರಿ ಮೈಲೇಜ್ ಜೊತೆಗೆ ಹಲವಾರು ಪ್ರೀಮಿಯಂ ಫೀಚರ್ಸ್ ಸಹ ನೀಡಲಾಗಿದ್ದು, ಟಾಪ್ ಎಂಡ್ ಮಾದರಿಯಲ್ಲಿ ಎಲ್ಇಡಿ ಲೈಟಿಂಗ್ಸ್, ಎಲ್ ಸಿಡಿ ಸ್ಕ್ರೀನ್ ನೊಂದಿಗೆ ಬ್ಲೂಟೂಥ್ ಕನೆಕ್ಟಿವಿಟಿ, ಎಲ್ಇಡಿ ಟೈಲ್ ಲೈಟ್ಸ್ ಮತ್ತು ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್ ಸೌಲಭ್ಯ ಹೊಂದಿದೆ. ಹಾಗೆಯೇ ಹೊಸ ಬೈಕಿನಲ್ಲಿ ಒಟ್ಟು 7 ವಿವಿಧ ಬಣ್ಣಗಳ ಆಯ್ಕೆ ನೀಡಲಾಗಿದ್ದು, ಇದು ಎಂಟ್ರಿ ಲೆವಲ್ ಬೈಕ್ ಮಾರಾಟದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಲಿದೆ ಎನ್ನಬಹುದು.
Published On - 10:25 pm, Fri, 5 July 24