ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ(Electric Cars) ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ವಿವಿಧ ಕಾರು ಕಂಪನಿಗಳು ಹೊಸ ಇವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಇದೀಗ ಹ್ಯುಂಡೈ ಇಂಡಿಯಾ(Hyundai India) ಕಂಪನಿಯು ತನ್ನ ಹೊಸ ಐಯಾನಿಕ್ 5 (ioniq 5) ಎಸ್ ಯುವಿ ಮಾದರಿಯನ್ನು ಅನಾವರಣಗೊಳಿಸಿದೆ. ಹೊಸ ಕಾರು ಮುಂದಿನ ತಿಂಗಳು ಜನವರಿಯಲ್ಲಿ ನಡೆಯಲಿರುವ 2023ರ ದೆಹಲಿ ಆಟೋ ಎಕ್ಸ್ ಪೋದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದ್ದು, ಹೊಸ ಕಾರು ಖರೀದಿಗಾಗಿ ರೂ. 1 ಲಕ್ಷ ಬುಕಿಂಗ್ ದರ ನಿಗದಿಪಡಿಸಲಾಗಿದೆ.
ಹ್ಯುಂಡೈ ಕಂಪನಿಯು ಹೊಸ ಐಯಾನಿಕ್ 5 ಕಾರು ಮಾದರಿಯನ್ನು ಭಾರತದಲ್ಲಿ ಸಿಕೆಡಿ ಆಮದು ನೀತಿಯಡಿಯಲ್ಲಿ ಮಾರಾಟಗೊಳಿಸಬಹುದಾಗಿದ್ದು, ಸಿಕೆಡಿ ಆಮದು ನೀತಿ ಅನುಸರಿಸುತ್ತಿರುವುದರಿಂದ ಹೊಸ ಕಾರು ತನ್ನದೇ ಪ್ಲ್ಯಾಟ್ ಫಾರ್ಮ್ ಹೊಂದಿರುವ ಹೊಂದಿರುವ ಕಿಯಾ ಇವಿ6 ಮಾದರಿಗಿಂತಲೂ ಕಡಿಮೆ ಬೆಲೆ ಹೊಂದಿರಲಿದೆ ಎನ್ನಲಾಗಿದೆ. ಕಿಯಾ ಕಂಪನಿಯು ಇವಿ6 ಮಾದರಿಯನ್ನು ಸದ್ಯ ಸಿಬಿಯು ನೀತಿಯಡಿಯಲ್ಲಿ ಮಾರಾಟ ಮಾಡುತ್ತಿದ್ದು, ಸಾಗರೋತ್ತರ ಕಾರು ಉತ್ಪಾದನಾ ಘಟಕಗಳಲ್ಲಿ ಸಂಪೂರ್ಣವಾಗಿ ನಿರ್ಮಾಣಗೊಳಿಸಿದ ಮಾದರಿಯಾಗಿದೆ. ಆದರೆ ಹ್ಯುಂಡೈ ಐಯಾನಿಕ್ 5 ಕಾರು ಭಾರತದಲ್ಲಿ ಬಿಡಿಭಾಗಗಳ ಮರುಜೋಡಣೆಯ ಮೂಲಕ ದುಬಾರಿ ಆಮದು ತೆರಿಗೆ ಹೊರೆಯಿಂದ ವಿನಾಯ್ತಿ ಪಡೆದುಕೊಳ್ಳಲಿದೆ.
ಹೊಸ ಐಯಾನಿಕ್ 5 ಕಾರು ಭಾರತದಲ್ಲಿ 72.6 ಕಿಲೋ ವ್ಯಾಟ್ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿರಲಿದ್ದು, ಇದು ಪ್ರತಿ ಚಾರ್ಜ್‌ಗೆ 631 ಕಿ.ಮೀ ಮೈಲೇಜ್ ನೀಡಬಹುದಾಗಿದೆ ಎನ್ನಲಾಗಿದೆ. ಜೊತೆಗೆ ಹೊಸ ಕಾರು ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯಲಿದ್ದು, ರಿಯಲ್ ವ್ಹೀಲ್ ಡ್ರೈವ್ ಟೆಕ್ನಾಲಜಿಯೊಂದಿಗೆ 217 ಹಾರ್ಸ್ ಪವರ್ ಮತ್ತು 350 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಇದರೊಂದಿಗೆ ಐಯಾನಿಕ್ 5 ಕಾರು ಸೂಪರ್ ಫಾಸ್ಟ್ 800 ವೊಲ್ಟ್ ಚಾರ್ಜಿಂಗ್ ಸರ್ಪೊಟ್ ಹೊಂದಿದ್ದು, ಸೂಪರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಕೇವಲ 18 ನಿಮಿಷಗಳಲ್ಲಿ ಸೊನ್ನೆಯಿಂದ ಶೇ. 80 ರಷ್ಟು ಚಾರ್ಜಿಂಗ್ ಮಾಡಬಹುದಾಗಿದೆ.
ಅತ್ಯುತ್ತಮ ವಿನ್ಯಾಸ ಮತ್ತು ಫೀಚರ್ಸ್ ಗಳ ಮೂಲಕ 2022ರ ವರ್ಲ್ಡ್ ಕಾರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವ ಐಯಾನಿಕ್ 5 ಕಾರು ರೆಟ್ರೋ ಫ್ಯೂಚರಿಸ್ಟಿಕ್ ವಿನ್ಯಾಸ ಭಾಷೆ ಹೊಂದಿದೆ. ಹಾಗೆಯೇ ಹೊಸ ಕಾರು ಫಿಕ್ಸಲೆಟೆಡ್ ಲುಕ್ ಹೊಂದಿರುವ ಫ್ರಂಟ್ ಅಂಡ್ ರಿಯರ್ ಲೈಟ್ಸ್, 20 ಇಂಚಿನ ಏರೋ ಆಪ್ಟಿಮೈಜ್ಡ್ ಅಲಾಯ್ ವ್ಹೀಲ್ ಸೌಲಭ್ಯಗಳಿದ್ದು, ಒಳಭಾಗದಲ್ಲಿ 12.3 ಇಂಚಿನ ಟಚ್ ಸ್ಕ್ರೀನ್, ಹೆಡ್ ಅಪ್ ಡಿಸ್ ಪ್ಲೇ ಸೇರಿದಂತೆ ಹಲವಾರು ಅತ್ಯಾರ್ಷಕ ತಾಂತ್ರಿಕ ಸೌಲಭ್ಯಗಳಿವೆ. ಮತ್ತೊಂದು ವಿಶೇಷ ಅಂದ್ರೆ ಹೊಸ ಕಾರಿನಲ್ಲಿ ಹ್ಯುಂಡೈ ಕಂಪನಿಯು ರಿಸೈಕಲ್ ಪ್ಯಾಸ್ಟಿಕ್ ಮತ್ತು ಇಕೋ ಫ್ರೆಂಡ್ಲಿ ಲೆದರ್ ನಿಂದ ನಿರ್ಮಾಣ ಮಾಡಲಾದ ಫ್ಯಾಬ್ರಿಕ್ ಆಸನಗಳು, ಕ್ರ್ಯಾಶ್ ಪಾಡ್ಸ್, ಸ್ವಿಚ್ ಗಳು, ಡೋರ್ ಪಾಡ್ಸ್ ಮತ್ತು ಸ್ಟೀರಿಂಗ್ ವ್ಹೀಲ್ ಸೌಲಭ್ಯಗಳಿವೆ.
ಹ್ಯುಂಡೈ ಕಂಪನಿಯು ಹೊಸ ಐಯಾನಿಕ್ 5 ಕಾರು ಮಾದರಿಯನ್ನು ಹಲವಾರು ಸುಧಾರಿತ ಸುರಕ್ಷಾ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳೊಂದಿಗೆ ಅಭಿವೃದ್ದಿಪಡಿಸಿದ್ದು, ಲೆವೆಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯವನ್ನು ಹೊಂದಿದೆ. ಎಡಿಎಎಸ್ ಸೇಫ್ಟಿ ಸೂಟ್ ನಲ್ಲಿ ಹಲವಾರು ಸುರಕ್ಷಾ ಸೌಲಭ್ಯಗಳಿದ್ದು, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.
ಹ್ಯುಂಡೈ ಕಂಪನಿಯು ಹೊಸ ಐಯಾನಿಕ್ 5 ಕಾರು ಮಾದರಿಯನ್ನು ಆಕರ್ಷಕ ಬೆಲೆಯಲ್ಲಿ ಬಿಡುಗಡೆಗಾಗಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ಹೊಸ ಕಾರನ್ನು ಸಿಕೆಡಿ ಆಮದು ನೀತಿ ಅಡಿಯಲ್ಲಿ ಮಾರಾಟ ಮಾಡಲಿದೆ. ಇದರಿಂದ ಹೊಸ ಕಾರಿನ ಬೆಲೆಯು ತನ್ನದೇ ಪ್ಲ್ಯಾಟ್ ಫಾರ್ಮ್ ಹೊಂದಿರುವ ಕಿಯಾ ಇವಿ6 ಮಾದರಿಗಿಂತಲೂ ರೂ. 10 ಲಕ್ಷದಷ್ಟು ಕಡಿಮೆ ಬೆಲೆ ಹೊಂದಬಹುದಾಗಿದ್ದು, ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 50 ಲಕ್ಷದಿಂದ ರೂ. 55 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ.