ಪ್ರಯಾಣಿಕರ ಕಾರು ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿ(Maruti Suzuki) ಕಂಪನಿಯು ಈ ಬಾರಿ ಸಣ್ಣ ಗಾತ್ರದ ಕಾರುಗಳಿಂತ ಹೆಚ್ಚು ಎಸ್ ಯುವಿ ಮಾದರಿಗಳ ಮೇಲೆ ಹೆಚ್ಚಿನ ಒತ್ತು ನೀಡುತ್ತಿದ್ದು, ಆಫ್ ರೋಡ್ ಪ್ರಿಯರ ಬಹುನೀರಿಕ್ಷಿತ ಜಿಮ್ನಿ(Jimny) ಬಿಡುಗಡೆಗೆ ಸಿದ್ದವಾಗುತ್ತಿದೆ. ಭಾರತದಲ್ಲಿ ಸದ್ಯ ಮಾರಾಟಗೊಳ್ಳುತ್ತಿರುವ ಹೊಸ ಕಾರುಗಳಲ್ಲಿ ಆಫ್ ರೋಡ್ ವರ್ಷನ್ ಗಳು ಕೂಡಾ ಗಮನಸೆಳೆಯುತ್ತಿದ್ದು, ಆಫ್ ರೋಡ್ ಪ್ರಿಯರಿಗಾಗಿ ವಿವಿಧ ಕಾರು ಕಂಪನಿಗಳು ತಮ್ಮ ಹೊಸ ಮಾದರಿಗಳನ್ನು ರಸ್ತೆಗಿಳಿಸುತ್ತಿವೆ. ಹೀಗಾಗಿ ಹೊಸ ಕಾರು ಮಾದರಿಯು ಮಾರುಕಟ್ಟೆಯಲ್ಲಿ ಪ್ರಮುಖ ಎಸ್ ಯುವಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದ್ದು, ಇದು ಲೈಫ್ ಸ್ಟೈಲ್ ಮಾದರಿಯಾಗಿಯೂ ಗುರುತಿಸಿಕೊಳ್ಳಲಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಸದ್ಯ ಭಾರೀ ಜನಪ್ರಿಯತೆ ಹೊಂದಿರುವ ಜಿಮ್ನಿ ಎಸ್ ಯುವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ಮಾರುತಿ ಸುಜುಕಿ ಕಂಪನಿಯು ನಿರಂತರವಾಗಿ ರೋಡ್ ಟೆಸ್ಟಿಂಗ್ ನಡೆಸುತ್ತಿದ್ದು, ಹೊಸ ಕಾರು 2023 ವೇಳೆಗೆ ಅಧಿಕೃತವಾಗಿ ರಸ್ತೆಗಿಳಿಯಲಿದೆ. ಹೊಸ ಕಾರು ಮಾದರಿಯು ವಿಶೇಷವಾಗಿ ಆಫ್ ರೋಡ್ ಡ್ರೈವ್ ವೈಶಿಷ್ಟ್ಯತೆಗಾಗಿ ನಿರ್ಮಾಣಗೊಂಡಿದ್ದು, ಇದು 2023ರ ಜನವರಿಯಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳಬಹುದಾಗಿದೆ.
ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಂಡನಂತರವಷ್ಟೇ ಹೊಸ ಜಿಮ್ನಿ ಕಾರು ಅಧಿಕೃತವಾಗಿ ಬಿಡುಗಡೆಯಾಗಬಹುದಾಗಿದ್ದು, ಇದಕ್ಕಾಗಿ ಹಲವಾರು ರೋಡ್ ಟೆಸ್ಟಿಂಗ್ ನಡೆಸಲಾಗುತ್ತಿದೆ. ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿ ಹೊಸ ತಲೆಮಾರಿನ ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಇದು 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ ಜೊತೆಗೆ ಹೊಸ ಕಾರಿನಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ನೀಡಲಾಗುತ್ತಿದೆ. ಇದರೊಂದಿಗೆ ಇದು ಪರ್ಫಾಮೆನ್ಸ್ ಜೊತೆಗೆ ಹೆಚ್ಚಿನ ಇಂಧನ ದಕ್ಷತೆ ಹೊಂದಿರಲಿದೆ.
ಸದ್ಯ ವಿದೇಶಿ ಮಾರುಕಟ್ಟೆಗಳಲ್ಲಿ ಜಿಮ್ನಿ ಕಾರು ಮಾದರಿಯು ವಿವಿಧ ಎಂಜಿನ್ ಆಯ್ಕೆಗಳೊಂದಿಗೆ 3 ಡೋರ್ ವರ್ಷನ್ ನಲ್ಲಿ ಮಾರಾಟಗೊಳ್ಳುತ್ತಿದೆ. ಆದರೆ ಮಾರುತಿ ಸುಜುಕಿ ಕಂಪನಿಯು ಹೊಸ ಕಾರನ್ನು ದೇಶಿಯ ಮಾರುಕಟ್ಟೆಗಾಗಿ ತುಸು ಬದಲಾವಣೆಗೊಳಿಸುತ್ತಿದೆ. ಭಾರತದಲ್ಲಿ 3 ಡೋರ್ ಬದಲಾಗಿ 5 ಡೋರ್ ವರ್ಷನ್ ಮಾರಾಟ ಮಾಡಲು ನಿರ್ಧರಿಸಿದ್ದು, ಜಿಮ್ನಿ ಹೆಸರನ್ನು ಕೂಡಾ ಬದಲಾವಣೆ ಮಾಡಬಹುದಾಗಿದೆ. ಭಾರತದಲ್ಲಿ ಸುಮಾರು 34 ವರ್ಷಗಳ ಕಾಲ ಜನಪ್ರಿಯವಾಗಿದ್ದ ಜಿಪ್ಸಿ ಹೆಸರನ್ನೇ ಹೊಸ ಕಾರಿನಲ್ಲಿ ಮುಂದುವರಿಸಬಹುದಾಗಿದೆ. ಈ ಹಿಂದಿನ ಜಿಪ್ಸಿ ಕಾರನ್ನು ಕಾರಣಾಂತರಗಳಿಂದ ಸ್ಥಗಿತ ಮಾಡಿದ್ದ ಕಂಪನಿಯು ಇದೀಗ ಹೊಸ ಜಿಮ್ನಿಯೊಂದಿಗೆ ಮುಂದುವರಿಸುವ ಸಾಧ್ಯತೆಗಳಿವೆ.
ಇನ್ನು ಭಾರತದಲ್ಲಿ ಬಿಡುಗಡೆ ಹೊಸ ಜಿಮ್ನಿ ಕಾರು ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಆಧರಿಸಿದ್ದು, ಇದು 3 ಲಿಂಕ್ ಆಕ್ಸಲ್ ಸಸ್ಪೆಂಷನ್ ನೊಂದಿಗೆ 4X4 ಸೌಲಭ್ಯ ಹೊಂದಿರಲಿದೆ. ಜೊತೆಗೆ ಆಫ್ ರೋಡ್ ಕೌಶಲ್ಯಕ್ಕೆ ಬೇಕಿರುವ ಹಲವು ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಲಿದ್ದು, ಇದು ಥಾರ್ ಮತ್ತು ಗೂರ್ಖಾ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ. ಇದರೊಂದಿಗೆ ಹೊಸ ಕಾರನ್ನು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಆಕರ್ಷಕ ಬೆಲೆಗೆ ಬಿಡುಗಡೆ ಮಾಡಲು ಯೋಜಿಸಲಾಗುತ್ತಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 12 ಲಕ್ಷದಿಂದ ರೂ. 15 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಲಿದೆ.
Published On - 8:55 pm, Tue, 20 December 22