ದೇಶಿಯ ಮಾರುಕಟ್ಟೆಯಲ್ಲಿ ಮಧ್ಯಮ ವರ್ಗದವರ ಕಾರು ಖರೀದಿಯ ಕನಸನ್ನು ನನಸು ಮಾಡುವಲ್ಲಿ ಯಶಸ್ವಿಯಾಗಿರುವ ಮಾರುತಿ ಸುಜುಕಿ(Maruti Suzuki) ಕಂಪನಿಯು ತನ್ನ ಪ್ರಮುಖ ಉತ್ಪನ್ನಗಳೊಂದಿಗೆ ಹಲವಾರು ದಾಖಲೆಗಳನ್ನು ನಿರ್ಮಿಸಿದೆ. ಇದೀಗ ಕಂಪನಿಯು ಕಾರು ಉತ್ಪಾದನೆ ಆರಂಭಿಸಿದ 40 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 25 ಮಿಲಿಯನ್(2.50 ಕೋಟಿ) ಕಾರುಗಳನ್ನು ಉತ್ಪಾದಿಸಿ ಹೊಸ ಮೈಲಿಗಲ್ಲು ಸಾಧಿಸಿದೆ.
ಭಾರತದಲ್ಲಿ ಮೊದಲ ಬಾರಿಗೆ 1983ರಲ್ಲಿ ಕಾರು ಉತ್ಪಾದನೆ ಆರಂಭಿಸಿದ ಮಾರುತಿ ಸುಜುಕಿ ಕಂಪನಿಯು ಇದೀಗ 2.50 ಕೋಟಿ ಕಾರು ಉತ್ಪಾದನಾ ಗುರಿತಲುಪಿದ್ದು, ಎಂ800 ಕಾರಿನಿಂದ ಆರಂಭವಾದ ಕಾರು ಉತ್ಪಾದನೆಯು ಇದೀಗ ಹೊಸ ಗ್ರ್ಯಾಂಡ್ ವಿಟಾರಾ ಎಸ್ ಯುವಿ ಗೆ ಬಂದು ತಲುಪಿದೆ. ಕಳೆದ 40 ವರ್ಷಗಳ ಅವಧಿಯಲ್ಲಿ ಹಲವಾರು ಕಾರು ಮಾದರಿಗಳನ್ನು ಪರಿಚಯಿಸಿರುವ ಮಾರುತಿ ಸುಜುಕಿಯು ಬಜೆಟ್ ಬೆಲೆಯೊಂದಿಗೆ ಅತಿ ಕಡಿಮೆ ನಿರ್ವಹಣಾ ವೆಚ್ಚ, ಹೆಚ್ಚು ಇಂಧನ ದಕ್ಷತೆಯ ಕಾರು ಮಾದರಿಗಳ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.
1983ರಲ್ಲಿ ಕಾರು ಉತ್ಪಾದನೆ ಆರಂಭಿಸಿದ್ದ ಸಂದರ್ಭದಲ್ಲಿ ಪ್ರತಿ ತಿಂಗಳ ಕಾರು ಮಾರಾಟವು 1 ಸಾವಿರಕ್ಕಿಂತಲೂ ಕಡಿಮೆ ಯುನಿಟ್ ಕಾರುಗಳನ್ನು ಮಾರಾಟ ಮಾಡುತ್ತಿತ್ತು. ಆದರೆ ಕಾರುಗಳ ಉತ್ಪಾದನೆಯಲ್ಲಿನ ಕಂಪನಿಯ ತಂತ್ರಗಾರಿಕೆ, ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ಕಾರು ಉತ್ಪನ್ನಗಳೊಂದಿಗೆ ಇದೀಗ ಕಂಪನಿಯು ಇದೀಗ ಪ್ರತಿ ತಿಂಗಳು ಸರಾಸರಿಯಾಗಿ 1.50 ಲಕ್ಷ ಯುನಿಟ್ ಮಾರಾಟ ಮಾಡುತ್ತಿದೆ.
ಇದನ್ನೂ ಓದಿ: ಪ್ರತಿ ಚಾರ್ಜ್ ಗೆ 500 ಕಿ.ಮೀ ಗಿಂತಲೂ ಹೆಚ್ಚು ಮೈಲೇಜ್ ನೀಡುತ್ತೆ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಈ ಇವಿ ಕಾರು
ಗುರುಗ್ರಾಮ್ ನಲ್ಲಿ ಮೊದಲ ಕಾರು ಉತ್ಪಾದನಾ ಘಟಕ ಆರಂಭಿಸಿದ ನಂತರ ಕಂಪನಿಯು ಇದೀಗ ಮೂರು ವಾಹನ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಗುರುಗ್ರಾಮ್ ಮತ್ತು ಮನೆಸಾರ್ ಉತ್ಪಾದನಾ ಎರಡು ಘಟಕಗಳಿಂದ ವಾರ್ಷಿಕವಾಗಿ 15 ಲಕ್ಷ ಕಾರುಗಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಕಾರು ಉತ್ಪಾದನೆಯ ಆರಂಭದ ಸಂದರ್ಭದಲ್ಲಿ ಎಂ800 ಪರಿಚಯಿಸಿದ್ದ ಮಾರುತಿ ಸುಜುಕಿ ಕಂಪನಿಯು ಹಂತ-ಹಂತವಾಗಿ ಹಲವಾರು ಕಾರು ಮಾದರಿಗಳನ್ನು ಪರಿಚಯಿಸಿತು. ಸದ್ಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ 16 ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಕಾರು ಮಾರಾಟಕ್ಕಾಗಿ ಎರಡು ಮಾದರಿಯ ಮಾರಾಟ ಮಳಿಗೆಗಳನ್ನು ಹೊಂದಿದೆ.
ಆರಂಭದಲ್ಲಿ ಎಲ್ಲಾ ಮಾದರಿಯ ಕಾರುಗಳನ್ನು ಒಂದೇ ಪ್ಲ್ಯಾಟ್ ಫಾರ್ಮ್ ಅಡಿ ಮಾರಾಟ ಮಾಡುತ್ತಿದ್ದ ಮಾರುತಿ ಸುಜುಕಿ ಕಂಪನಿಯು 2015ರಲ್ಲಿ ಮೊದಲ ಬಾರಿಗೆ ಬಜೆಟ್ ಕಾರು ಮಾದರಿಗಳಿಗಾಗಿ ಅರೆನಾ ಮಾರಾಟ ಮಳಿಗೆಯನ್ನು ಮತ್ತು ಪ್ರೀಮಿಯಂ ಕಾರು ಮಾದರಿಗಳಾಗಿ ನೆಕ್ಸಾ ಮಾರಾಟ ಮಳಿಗೆಗಳನ್ನು ಆರಂಭಿಸಿತು. ದೇಶಾದ್ಯಂತ ಸದ್ಯ 3500 ಮಾರಾಟ ಮಳಿಗೆಗಳನ್ನು ಹೊಂದಿರುವ ಮಾರುತಿ ಸುಜುಕಿಯು ದೇಶದಲ್ಲಿ ಅತಿ ದೊಡ್ದ ಗ್ರಾಹಕರ ಸೇವಾ ಜಾಲ ಹೊಂದಿದೆ.
ಅರೆನಾ ಕಾರು ಮಾರಾಟ ಮಳಿಗೆಯಲ್ಲಿ ಆಲ್ಟೊ, ಆಲ್ಟೊ ಕೆ10, ಎಸ್-ಪ್ರೆಸ್ಸೊ, ಸೆಲೆರಿಯೊ, ಸ್ವಿಫ್ಟ್, ವ್ಯಾಗನ್ ಆರ್, ಇಕೋ, ಎರ್ಟಿಗಾ, ಬ್ರೆಝಾ, ಡಿಜೈರ್ ಕಾರುಗಳನ್ನು ಮಾರಾಟ ಮಾಡುತ್ತಿದ್ದರೆ ನೆಕ್ಸಾ ಮಾರಾಟ ಮಳಿಗೆಯಲ್ಲಿ ಬಲೆನೊ, ಇಗ್ನಿಸ್, ಸಿಯಾಜ್, ಎಕ್ಸ್ಎಲ್6 ಮತ್ತು ಗ್ರ್ಯಾಂಡ್ ವಿಟಾರಾ ಕಾರುಗಳನ್ನು ಮಾರಾಟ ಮಾಡುತ್ತಿದೆ.
ಇದನ್ನೂ ಓದಿ: ನ.25 ರಂದು ಅನಾವರಣಗೊಳ್ಳಲಿದೆ ಭರ್ಜರಿ ಮೈಲೇಜ್ ನೀಡುವ ಟೊಯೊಟಾ ಇನೋವಾ ಹೈಕ್ರಾಸ್
ಡೀಸೆಲ್ ಕಾರುಗಳಿಗೆ ಗುಡ್ ಬೈ
ಕಳೆದ ಎರಡು ದಶಕಗಳ ಅವಧಿಯಲ್ಲಿ ಭಾರೀ ಪ್ರಮಾಣದ ಡೀಸೆಲ್ ಎಂಜಿನ್ ಚಾಲಿಕ ಕಾರುಗಳನ್ನು ಮಾರಾಟ ಮಾಡಿದ್ದ ಮಾರುತಿ ಸುಜುಕಿಯು 2020ರಿಂದ ಸಂಪೂರ್ಣವಾಗಿ ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಿದೆ. ಮಾಲಿನ್ಯ ತಗ್ಗಿಸಲು ಕೇಂದ್ರ ಸರ್ಕಾರವು ಜಾರಿಗೆ ತಂದ ಹೊಸ ಎಮಿಷನ್ ಪ್ರಕಾರ ಡೀಸೆಲ್ ಕಾರುಗಳ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವ ಮಾರುತಿ ಸುಜುಕಿ ಕಂಪನಿಯು ಸದ್ಯ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ ಪೆಟ್ರೋಲ್ ಕಾರುಗಳ ಜೊತೆಗೆ ಪರಿಸರ ಸ್ನೇಹಿಯಾಗಿರುವ ಸಿಎನ್ ಜಿ ಕಾರುಗಳ ಮಾರಾಟದ ಹೆಚ್ಚಿನ ಒತ್ತು ನೀಡುತ್ತಿದೆ.
ಹೈಬ್ರಿಡ್ ಕಾರುಗಳ ಚಿತ್ತ
ಡೀಸೆಲ್ ಕಾರುಗಳ ಸ್ಥಗಿತ ನಂತರ ಹೆಚ್ಚು ಇಂಧನ ದಕ್ಷಣೆ ಹೊಂದಿರುವ ಕಾರುಗಳ ಅಭಿವೃದ್ದಿಯತ್ತ ಹೆಚ್ಚಿನ ಒತ್ತು ನೀಡುತ್ತಿರುವ ಮಾರುತಿ ಸುಜುಕಿ ಕಂಪನಿಯು ಇದೀಗ ಸ್ಮಾರ್ಟ್ ಹೈಬ್ರಿಡ್ ಕಾರುಗಳ ಜೊತೆಗೆ ಹೆಚ್ಚು ಇಂಧನ ದಕ್ಷತೆ ಹೊಂದಿರುವ ಸ್ಟ್ರಾಂಗ್ ಹೈಬ್ರಿಡ್ ವೈಶಿಷ್ಟ್ಯತೆ ಹೊಂದಿರುವ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಇತ್ತೀಚೆಗೆ ಕಂಪನಿಯು ಗ್ರ್ಯಾಂಡ್ ವಿಟಾರಾ ಬಿಡುಗಡೆಯೊಂದಿಗೆ ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.
Published On - 4:02 pm, Thu, 3 November 22