ಪ್ರತಿ ಚಾರ್ಜ್ ಗೆ 500 ಕಿ.ಮೀ ಗಿಂತಲೂ ಹೆಚ್ಚು ಮೈಲೇಜ್ ನೀಡುತ್ತೆ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಈ ಇವಿ ಕಾರು
ನಮ್ಮ ಬೆಂಗಳೂರಿನಲ್ಲಿ ಹೊಸ ಇವಿ ಕಾರು ಉತ್ಪಾದನೆ ಆರಂಭಿಸಿರುವ ಪ್ರವೇಗ್ ಕಂಪನಿಯು ಶೀಘ್ರದಲ್ಲಿಯೇ ತನ್ನ ಬಹುನೀರಿಕ್ಷಿತ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಭರ್ಜರಿ ಮೈಲೇಜ್ ಹೊಂದಿರುವ ಸ್ಪೋರ್ಟಿ ಇವಿ ಕಾರುಗಳನ್ನು ಬಿಡುಗಡೆ ಮಾಡಲಿದೆ.
ಎಲೆಕ್ಟ್ರಿಕ್ ಕಾರುಗಳ(Electric Cars) ಮಾರಾಟವು ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಇವಿ ಕಾರುಗಳು ರಸ್ತೆಗಿಳಿಯುವ ಸಿದ್ದತೆಯಲ್ಲಿವೆ. ಸ್ಟಾರ್ಟ್ಅಪ್ ಕಂಪನಿಯಾಗಿರುವ ನಮ್ಮ ಬೆಂಗಳೂರಿನ ಪ್ರವೇಗ್(Pravaig) ಕಂಪನಿಯು ಕೂಡಾ ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಮಾದರಿಗಳನ್ನು ಅಭಿವೃದ್ದಿಪಡಿಸುತ್ತಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ತನ್ನ ಮೊದಲ ಇವಿ ಕಾರು ಮಾದರಿಯನ್ನು ಬಿಡುಗಡೆ ಮಾಡುವ ಸುಳಿವು ನೀಡಿದೆ.
2021ರಲ್ಲಿ ಮೊದಲ ಬಾರಿಗೆ ತನ್ನ ಹೊಸ ಎಕ್ಸ್ಟಿಷನ್ ಎಂಕೆ1(Extinction MK1) ಎಲೆಕ್ಟ್ರಿಕ್ ಸೆಡಾನ್ ಮಾದರಿಯನ್ನು ಅನಾವರಣಗೊಳಿಸಿದ್ದ ಪ್ರವೇಗ್ ಕಂಪನಿಯು ಇದೀಗ ಹೊಸದಾಗಿ ಮತ್ತೊಂದು ಮತ್ತೊಂದು ಕಾನ್ಸೆಪ್ಟ್ ಎಸ್ ಯುವಿ ಸಿದ್ದಪಡಿಸುತ್ತಿದೆ. ಕಾನ್ಸೆಪ್ಟ್ ಎಸ್ ಯುವಿಯು ಕಟಿಂಗ್ ಎಡ್ಜ್ ವಿನ್ಯಾಸದೊಂದಿಗೆ ಟೀಸರ್ ಬಿಡುಗಡೆಗೊಂಡಿದ್ದು, ಟೀಸರ್ ನಲ್ಲಿ ಹೊಸ ಕಾರಿನ ಹೊರಭಾಗದ ಡಿಸೈನ್ ಹೊರತಾಗಿ ಯಾವುದೇ ತಾಂತ್ರಿಕ ಮಾಹಿತಿಗಳನ್ನು ಹಂಚಿಕೊಂಡಿಲ್ಲ.
ಬ್ಯಾಟರಿ ಮತ್ತು ಮೈಲೇಜ್
ಈ ಹಿಂದೆ ಅನಾವರಣಗೊಳಿಸಿದ್ದ ಎಕ್ಸ್ಟಿಷನ್ ಎಂಕೆ1 ಇವಿ ಸೆಡಾನ್ ಮಾದರಿಯಲ್ಲಿಯೇ ಹೊಸ ಎಸ್ ಯುವಿ ಇವಿ ಕಾರು ಕೂಡಾ ಅತ್ಯುತ್ತಮ ಬ್ಯಾಟರಿ ಪ್ಯಾಕ್ ಹೊಂದಿರಲಿದ್ದು, ಹೊಸ ಎಸ್ ಯುವಿಯು ಪ್ರತಿ ಚಾರ್ಜ್ ಗೆ 500 ಕಿ.ಮೀ ಅಧಿಕ ಮೈಲೇಜ್ ನೀಡುವುದಾಗಿ ಖಾತ್ರಿಪಡಿಸಿದೆ. ಜೊತೆಗೆ ಹೊಸ ಕಾರು ಸುಮಾರು 402 ಬಿಎಚ್ ಪಿ ಉತ್ಪಾದನೆಯೊಂದಿಗೆ ಪ್ರತಿ ಗಂಟೆಗೆ 200 ಕಿ.ಮೀ ಟಾಪ್ ಸ್ಪೀಡ್ ಹೊಂದಿರಲಿದೆ.
ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯುವ ಹೊಸ ಇವಿ ಎಸ್ ಯುವಿ ಕಾರು ಕೇವಲ 5.4 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿಮೀ ವೇಗವನ್ನು ಪಡೆದುಕೊಳ್ಳಲಿದ್ದು, ಹೊಸ ಕಾರಿನ ಡಿಸೈನ್ ಫ್ಯೂಚರಿಸ್ಟಿಕ್ ಆಗಿರಲಿವೆ.
ಇನ್ನೂ ಓದಿ: ನವೆಂಬರ್ 11ರಂದು ಬಿಡುಗಡೆಯಾಗಲಿದೆ ಹೊಸ ಜೀಪ್ ಗ್ರ್ಯಾಂಡ್ ಚರೋಕಿ
ಡಿಸೈನ್ ಮತ್ತು ಫೀಚರ್ಸ್
ಟೀಸರ್ ಚಿತ್ರದಲ್ಲಿರುವಂತೆ ಪ್ರವೇಗ್ ಹೊಸ ಇವಿ ಎಸ್ ಯುವಿಯು ರೇಂಜ್ ರೋವರ್ ಮಾದರಿಗಳಂತೆ ಹೊಸ ವಿನ್ಯಾಸವನ್ನು ಹೊಂದಿದ್ದು, ಮುಂಭಾಗದ ವಿನ್ಯಾಸದ ಕುರಿತಾಗಿ ಇನ್ನು ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಸದ್ಯ ಯಲಹಂಕದಲ್ಲಿರುವ ತನ್ನ ಸಂಶೋಧನಾ ಕೇಂದ್ರದಲ್ಲಿ ಹೊಸ ಕಾರಿನ ಕಾನ್ಸೆಪ್ಟ್ ಮಾದರಿಯ ಟೆಸ್ಟಿಂಗ್ ಕೈಗೊಳ್ಳುತ್ತಿದ್ದು, ಶೀಘ್ರದಲ್ಲಿಯೇ ಅಂತಿಮ ಹಂತದ ಉತ್ಪಾದನಾ ಆವೃತ್ತಿಯನ್ನು ಅನಾವರಣಗೊಳಿಸಲಿದೆ.
ಹೊಸ ಕಾರಿನಲ್ಲಿ ಆಕರ್ಷಕವಾದ ಡ್ಯಾಶ್‌ಬೋರ್ಡ್, ಸ್ಪೋರ್ಟಿಯಾಗಿರುವ ಸ್ಟೀರಿಂಗ್ ವ್ಹೀಲ್, ಅರಾಮದಾಯಕವಾದ ಆಸನ ಸೌಲಭ್ಯ, ಎಲೆಕ್ಟ್ರಿಕ್ ಸನ್‌ರೂಫ್, ವೆಹಿಕಲ್ ಮ್ಯಾನೆಜ್‌ಮೆಂಟ್ ಸಿಸ್ಟಂ ಜೊತೆಗೆ ಅತ್ಯುತ್ತಮ ಬೂಟ್‌ಸ್ಪೆಸ್, ಬ್ಲ್ಯಾಕ್ ಔಟ್ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್ ಸೇರಿ ಹಲವು ಆಕರ್ಷಕ ತಾಂತ್ರಿಕ ಸೌಲಭ್ಯಗಳಿರಲಿವೆ.
ಇನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಇವಿ ಕಾರು ಬಿಡುಗಡೆ ಮಾಡಲಿದೆ ಓಲಾ ಎಲೆಕ್ಟ್ರಿಕ್
ಸ್ಥಳೀಯ ನಿರ್ಮಾಣದ ಬಿಡಿಭಾಗಗಳ ಬಳಕೆ
ಹೊಸ ಎಲೆಕ್ಟ್ರಿಕ್ ಎಸ್ ಯುವಿ ಅನಾವರಣಕ್ಕೂ ಮುನ್ನ ಕಂಪನಿಯು ಎಕ್ಸ್ಟಿಷನ್ ಎಂಕೆ1 ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಮಧ್ಯಮ ಕ್ರಮಾಂಕದ ಎಲೆಕ್ಟ್ರಿಕ್ ಕಾರು ಮಾದರಿಗಳಲ್ಲೇ ವಿಶೇಷ ಫೀಚರ್ಸ್‌ಗಳ ಜೊತೆಗೆ ಅತ್ಯುತ್ತಮ ಮೈಲೇಜ್‌ನೊಂದಿಗೆ ಭಾರೀ ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದೆ. ಹೊಸ ಪ್ರವೇಗ್ ಎಲೆಕ್ಟ್ರಿಕ್ ಕಾರುಗಳು ಸಂಪೂರ್ಣವಾಗಿ ಭಾರತದಲ್ಲಿಯೇ ಉತ್ಪಾದನೆ ಮಾಡಲಾದ ಬಿಡಿಭಾಗಗಳಿಂದ ನಿರ್ಮಾಣಗೊಂಡಿದ್ದು, ಹೊಸ ಕಾರಿನಲ್ಲಿ ಬಳಕೆ ಮಾಡಲಾಗಿರುವ ಬ್ಯಾಟರಿ ಸಂಪನ್ಮೂಲವು ಕೂಡಾ ಸ್ಥಳೀಯ ಕಂಪನಿಗಳ ಜೊತೆಗೂಡಿ ಅಭಿವೃದ್ದಿಗೊಳಿಸಲಾಗಿದೆ.