Jeep Grand Cherokee: 2022ರ ಜೀಪ್ ಗ್ರ್ಯಾಂಡ್ ಚರೋಕಿ ಭಾರತದಲ್ಲಿ ಬಿಡುಗಡೆ

|

Updated on: Nov 18, 2022 | 1:57 PM

ಜೀಪ್ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಜೀಪ್ ಗ್ರ್ಯಾಂಡ್ ಚರೋಕಿ ಎಸ್ ಯುವಿ ಬಿಡುಗಡೆ ಮಾಡಿದ್ದು, ಹೊಸ ಕಾರು ಹಲವಾರು ಹೊಸ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

Jeep Grand Cherokee: 2022ರ ಜೀಪ್ ಗ್ರ್ಯಾಂಡ್ ಚರೋಕಿ ಭಾರತದಲ್ಲಿ ಬಿಡುಗಡೆ
2022 Jeep Grand Cherokee Launched In India
Follow us on

ಮಧ್ಯಮ ಕ್ರಮಾಂಕದ ಐಷಾರಾಮಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಜೀಪ್ ಇಂಡಿಯಾ(Jeep India) ಕಂಪನಿಯು ತನ್ನ ಹೊಸ ಗ್ರ್ಯಾಂಡ್ ಚರೋಕಿ(Grand Cherokee) ಎಸ್ ಯುವಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 77.50 ಲಕ್ಷ ಬೆಲೆ ಹೊಂದಿದೆ. ಹೊಸ ಕಾರು ಮಾದರಿಯು ಮೊದಲ ಬಾರಿಗೆ ಭಾರತದಲ್ಲಿ ಸಿಕೆಡಿ ಆಮದು ನೀತಿ ಅಡಿಯಲ್ಲಿ ಮಾರಾಟಗೊಳ್ಳುತ್ತಿದ್ದು, ಹೊಸ ಕಾರು ಆಫ್ ರೋಡ್ ಐಷಾರಾಮಿ ಕಾರುಗಳನ್ನು ಖರೀದಿಸುವ ಗ್ರಾಹಕರನ್ನು ಸೆಳೆಯಲಿದೆ.

ಸಿಕೆಡಿ ಆಮದು ನೀತಿಯಲ್ಲಿ ಹೊಸ ಕಾರಿನ ಪ್ರಮುಖ ಬಿಡಿಭಾಗಗಳನ್ನು ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳುವ ಜೀಪ್ ಕಂಪನಿಯು ಪುಣೆ ಬಳಿಯಿರುವ ರಂಜನ್ಗಾಂವ್ ಕಾರು ಉತ್ಪಾದನಾ ಘಟಕದಲ್ಲಿ ಮರುಜೋಡಣೆ ಮಾಡಿ ಮಾರಾಟಗೊಳಿಸಲಿದೆ. ಸಿಕೆಡಿ ಆಮದು ನೀತಿಯಿಂದಾಗಿ ಹೊಸ ಕಾರಿನ ಬೆಲೆಯು ಈ ಹಿಂದಿನ ಮಾದರಿಗಿಂತಲೂ ಕಡಿಮೆ ಬೆಲೆ ಹೊಂದಿದ್ದು, ಹೊಸ ಕಾರು ಐದನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಎಂಜಿನ್ ಮತ್ತು ಪರ್ಫಾಮೆನ್ಸ್

ಹೊಸ ಗ್ರ್ಯಾಂಡ್ ಚರೋಕಿ ಕಾರಿನಲ್ಲಿ ಜೀಪ್ ಕಂಪನಿಯು ಪರ್ಫಾಮೆನ್ಸ್ ಪ್ರಿಯರಿಗಾಗಿ ಬಲಶಾಲಿ 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿದೆ. ಇದರಲ್ಲಿ ಕಂಪನಿಯು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೋಡಣೆ ಮಾಡಲಾಗಿದ್ದು, ಇದು 268 ಹಾರ್ಸ್ ಪವರ್ ಮತ್ತು 400 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಈ ಹಿಂದಿನ ಆವೃತ್ತಿಯಲ್ಲಿ ಪೆಟ್ರೋಲ್ ಜೊತೆಗೆ ಡೀಸೆಲ್ ಎಂಜಿನ್ ನೀಡುತ್ತಿದ್ದ ಜೀಪ್ ಕಂಪನಿಯು ಇದೀಗ ಕೇವಲ ಪೆಟ್ರೋಲ್ ವರ್ಷನ್ ಮಾತ್ರ ಬಿಡುಗಡೆ ಮಾಡಿದ್ದು, ಹೊಸ ಮಾದರಿಯಲ್ಲಿ ಆಟೋ, ಸ್ಪೋರ್ಟ್, ಸ್ಯಾಂಡ್/ಮಡ್ ಮತ್ತು ಸ್ನೋ ಡ್ರೈವಿಂಗ್ ಮೋಡ್ ನೀಡಿದೆ.

ಡಿಸೈನ್ ಮತ್ತು ಫೀಚರ್ಸ್

ಹೊಸ ಕಾರು ಈ ಬಾರಿ ಹಲವಾರು ಹೊಸ ಫೀಚರ್ಸ್ ಗಳೊಂದಿಗೆ ವಿನ್ಯಾಸದಲ್ಲೂ ಸಾಕಷ್ಟು ಸುಧಾರಣೆ ಕಂಡಿದೆ. ಹೊಸ ಕಾರಿನಲ್ಲಿ ಕಂಪನಿಯು ಸೆವೆನ್ ಸ್ಲಾಟ್ ಗ್ರಿಲ್, ಸ್ಲಿಮ್ ಹೆಡ್ ಲೈಟ್ಸ್ ಜೊತೆಗೆ ಎಲ್ಇಡಿ ಡಿಆರ್ ಎಲ್ಎಸ್ ಹೊಂದಿದ್ದು, ಡಿ ಪಿಲ್ಲರ್ ಗೆ ಹೊಂದಿಕೊಂಡಂತಿರುವ ರೂಫ್ ಎಫೆಕ್ಟ್ ಮತ್ತು ಎಲ್ಇಡಿ ಟೈಲ್ ಲೈಟ್ ಗಳು ಸ್ಪೋರ್ಟಿ ಲುಕ್ ಹೆಚ್ಚಿಸಲಿವೆ.

ಇದನ್ನೂ ಓದಿ: ಈ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿವೆ ಈ ಮೂರು ಬಹುನೀರಿಕ್ಷಿತ ಕಾರುಗಳು!

ಕಾರಿನ ಒಳಭಾಗದಲ್ಲೂ ಹಲವಾರು ಬದಲಾವಣೆಗಳನ್ನು ಮಾಡಲಾಗಿದ್ದು, ವಿಸ್ತರಿತ ಮೂರನೇ ಸಾಲಿನ ಆಸನದೊಂದಿಗೆ ಆರಾಮದಾಯಕ ಕ್ಯಾಬಿನ್ ಹೊಂದಿದೆ. ಇದರಲ್ಲಿ ಹೊಸದಾಗಿ 10.1 ಇಂಚಿನ ಸೆಂಟರ್ ಟಚ್ ಸ್ಕ್ರೀನ್, ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ಮುಂಭಾಗದ ಸಹ ಪ್ರಯಾಣಿಕರಿಗೆ ಪ್ರತ್ಯೇಕ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ, 10 ಇಂಚಿನ ಹೆಡ್-ಅಪ್ ಡಿಸ್ ಪ್ಲೇ, ವೆಂಟಿಲೆಟೆಡ್ ಸೀಟುಗಳು, ಪವರ್ಡ್ ಟೈಲ್ ಗೇಟ್ ಹಾಗೂ ಲೆವಲ್ 2 ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯ ಹೊಂದಿದೆ.

ಲೆವಲ್ 2 ಡ್ರೈವರ್ ಅಸಿಸ್ಟ್ ಸಿಸ್ಟಂ ಹೊಸ ಕಾರಿಗೆ ಹೆಚ್ಚಿನ ಭದ್ರತೆ ಒದಗಿಸಲಿದ್ದು, ಇದರಲ್ಲಿ ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸಿಸ್ಟಂ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಕ್ಟಿವ್ ಲೇನ್ ಮ್ಯಾನೇಜ್ ಮೆಂಟ್ ಸೌಲಭ್ಯಗಳಿವೆ. ಹಾಗೆಯೇ ಹೊಸ ಕಾರಿನಲ್ಲಿ 30ಕ್ಕೂ ಹೆಚ್ಚು ಕಾರ್ ಕನೆಕ್ಟ್ ಸೌಲಭ್ಯಗಳೊಂದಿಗೆ ಅಲೆಕ್ಸಾ ಇಂಟ್ರಾಕ್ಷನ್ ಮತ್ತು ವೆಹಿಕಲ್ ಮ್ಯಾನೇಜ್ ಮೆಂಟ್ ಸೌಲಭ್ಯಗಳಿವೆ. ಈ ಮೂಲಕ ಹೊಸ ಕಾರು ಐಷಾರಾಮಿ ಜೊತೆ ಆಫ್ ರೋಡ್ ವೈಶಿಷ್ಟ್ಯತೆ ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ ಎನ್ನಬಹುದು.

Published On - 1:46 pm, Fri, 18 November 22