Repo Rate Hikes: ಹೊಸ ವಾಹನಗಳ ಖರೀದಿ ಇದೀಗ ಮತ್ತಷ್ಟು ದುಬಾರಿ ಕಣ್ರೀ..

ಭಾರತದಲ್ಲಿ ಕೋವಿಡ್ ಪರಿಣಾಮ ಇಳಿಕೆಯಾಗಿದ್ದ ಹೊಸ ವಾಹನಗಳ ಮಾರಾಟ ಇದೀಗ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ವಾಹನಗಳ ಖರೀದಿ ಯೋಜನೆಯಲ್ಲಿದ್ದ ಗ್ರಾಹಕರಿಗೆ ಆರ್ ಬಿಐ ತನ್ನ ರೆಪೋ ದರ ಹೆಚ್ಚಿಸಿ ಶಾಕ್ ನೀಡಿದೆ.

Repo Rate Hikes: ಹೊಸ ವಾಹನಗಳ ಖರೀದಿ ಇದೀಗ ಮತ್ತಷ್ಟು ದುಬಾರಿ ಕಣ್ರೀ..
ಆರ್‌ಬಿಐ ರೆಪೋ ದರದಲ್ಲಿ ಹೆಚ್ಚಳ ಹಿನ್ನಲೆಯಲ್ಲಿ ವಾಹನ ಸಾಲ ದುಬಾರಿ ಸಾಧ್ಯತೆ

Updated on: Dec 07, 2022 | 6:22 PM

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ತನ್ನ ರೆಪೋ ದರ(Repo Rates) ಪರಿಷ್ಕರಣೆ ಮಾಡಿದ್ದು, ಆರ್‌ಬಿಐ ರೆಪೋ ದರದಲ್ಲಿ 35 ಮೂಲಾಂಕ ಏರಿಕೆ ಮಾಡಲಾಗಿದೆ. ಪ್ರಸ್ತುತ ದರ ಶೇಕಡಾ 6.25ಕ್ಕೆ ತಲುಪಿದ್ದು, ರೆಪೋ ದರ ಹೆಚ್ಚಳ ಬೆನ್ನಲ್ಲೇ ಬ್ಯಾಂಕ್‌ಗಳು ಸಹ ತಮ್ಮ ಗೃಹ ಮತ್ತು ವಾಹನ ಸಾಲಗಳ(Vehicle Loans) ಬಡ್ಡಿದರವನ್ನು ಏರಿಕೆ ಮಾಡುವ ಸಾಧ್ಯತೆಯಿವೆ. ಪ್ರಸ್ತಕ ಹಣಕಾಸು ವರ್ಷದಲ್ಲಿ ಆರ್‌ಬಿಐ ಇದುವರೆ ಸುಮಾರು ಐದು ಬಾರಿ ತನ್ನ ರೆಪೋ ದರಗಳನ್ನು ಏರಿಕೆ ಮಾಡಿದ್ದು, ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಹೊಸ ಕ್ರಮಕೈಗೊಂಡಿದೆ.

ರೆಪೋ ದರಗಳ ಪರಿಷ್ಕರಣೆ ಮಾಡಿದಾಗ ಸಾಮಾನ್ಯವಾಗಿ ಬ್ಯಾಂಕ್‌ಗಳ ಸಾಲಗಳ ಮೇಲೆ ಪ್ರಭಾವ ಬೀರುತ್ತದೆ. ಇದರೊಂದಿಗೆ ಬ್ಯಾಂಕ್‌ಗಳು ಗೃಹ ಸಾಲ ಮತ್ತು ವಾಹನಗಳ ಬಡ್ಡಿದರ ಹೆಚ್ಚಳ ಜೊತೆಗೆ ಎಫ್ ಡಿ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡುತ್ತವೆ. ಹೀಗಾಗಿ ಗೃಹ ಸಾಲದ ಜೊತೆಗೆ ವಾಹನಗಳ ಬಡ್ಡಿದರ ಅಧಿಕವಾಗಲಿದ್ದು, ಬಡ್ಡಿದರ ಹೆಚ್ಚಳವು ಹೊಸ ವಾಹನಗಳ ಮಾರಾಟದ ಮೇಲೆ ಪರಿಣಾಮ ಬೀರಲಿದೆ.

ಈಗಾಗಲೇ ಹೆಚ್ಚುತ್ತಿರುವ ಬಿಡಿಭಾಗಗಳ ಪರಿಣಾಮ ಬೆಲೆ ಏರಿಕೆಯಿಂದ ತತ್ತರಿಸಿರುವ ಆಟೋಉದ್ಯಮಕ್ಕೆ ಇದೀಗ ವಾಹನಗಳ ಸಾಲಗಳ ಬಡ್ಡಿದರ ಹೆಚ್ಚಳವು ಗ್ರಾಹಕರ ಖರೀದಿ ಆಸಕ್ತಿಯನ್ನು ಕುಗ್ಗಿಸಲಿದ್ದು, ಇದು ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಮಟ್ಟದ ಪರಿಣಾಮ ಬೀರಬಹುದಾಗಿದೆ. ಬಿಡಿಭಾಗಗಳ ಉತ್ಪಾದನಾ ವೆಚ್ಚ ಹಿನ್ನಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು ಮೂರರಿಂದ ನಾಲ್ಕು ಬಾರಿ ದರಹೆಚ್ಚಳ ಪಡೆದುಕೊಂಡಿದ್ದು, ಇದೀಗ ಮತ್ತೆ ವಾಹನ ದರ ದುಬಾರಿಯಾಗುತ್ತಿರುವುದು ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಲಿದೆ.

ಈ ವರ್ಷದ ಹಣಕಾಸು ವರ್ಷದಲ್ಲಿ ಮೊದಲ ಬಾರಿ ಮೇ ತಿಂಗಳಲ್ಲಿ 40 ಬಿಪಿಎಸ್, ಆ ಬಳಿಕ ಜೂನ್, ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ತಲಾ 50 ಮೂಲಾಂಕ ದರವನ್ನು ಹೆಚ್ಚಳ ಮಾಡಲಾಗಿತ್ತು. ಇದೀಗ ಆರ್‌ಬಿಐನ ಎಂಪಿಸಿ ಸಭೆಯ ಬಳಿಕ ಕೇಂದ್ರ ಬ್ಯಾಂಕ್ ಮತ್ತೆ 35 ಬಿಪಿಎಸ್‌ ಬಡ್ಡಿದರ ಏರಿಕೆ ಮಾಡಿದ್ದು, ಹೊಸ ವಾಹನಗಳ ಖರೀದಿ ಸಾಲದ ಹೊರೆಯು ಅಧಿಕವಾಗಲಿದೆ.

Published On - 6:22 pm, Wed, 7 December 22