ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಉತ್ಪಾದನಾ ವಿಭಾಗದಲ್ಲಿ ಮುಂಚೂಣಿ ಸಾಧಿಸುತ್ತಿರುವ ರಿವೋಲ್ಟ್ ಮೋಟಾರ್ಸ್ (Revolt Motors) ಕಂಪನಿಯು ಹೊಸದಾಗಿ ರಿವೋಲ್ಟ್ ಆರ್‌ವಿ1 (Revolt RV1) ಇವಿ ಬೈಕ್ ಬಿಡುಗಡೆ ಮಾಡಿದ್ದು, ಹೊಸ ಇವಿ ಬೈಕ್ ಮಾದರಿಯು ಪ್ರಮುಖ ಎರಡು ವೆರಿಯೆಂಟ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಹೊಸ ಇವಿ ಬೈಕಿನ ಆರಂಭಿಕ ಸ್ಟ್ಯಾಂಡರ್ಡ್ ವೆರಿಯೆಂಟ್ ಎಕ್ಸ್ ಶೋರೂಂ ಪ್ರಕಾರ ರೂ. 84,990 ಮತ್ತು ಟಾಪ್ ಎಂಡ್ ಮಾದರಿಯು ರೂ. 99,990 ಬೆಲೆ ಹೊಂದಿದೆ.
ಮೋಟಾರು ಸೈಕಲ್‌ಗಳು ಸದ್ಯ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದ್ದು, ಮಾರಾಟದಲ್ಲಿ ಇವು ಶೇ. 70 ರಷ್ಟು ಪಾಲುಹೊಂದಿವೆ. ಈ ವಿಶಾಲವಾದ ಮಾರುಕಟ್ಟೆಯಲ್ಲಿ ಪ್ರಯಾಣಿಕ ವಾಹನಗಳ ವಿಭಾಗವು ಅತಿದೊಡ್ಡ ಪಾಲನ್ನು ಹೊಂದಿದ್ದು, ವಾರ್ಷಿಕವಾಗಿ ಒಟ್ಟು 1.25 ಕೋಟಿ ದ್ವಿಚಕ್ರ ವಾಹನಗಳಲ್ಲಿ 80 ಲಕ್ಷಕ್ಕೂ ಹೆಚ್ಚು ಮೋಟಾರ್‌ಸೈಕಲ್‌ಗಳು ಮಾರಾಟವಾಗುತ್ತಿವೆ. ಹೀಗಾಗಿ ಹೊಸ ತಲೆಮಾರಿನ ಬೇಡಿಕೆಗಳನ್ನು ಗುರಿಯಾಗಿಸಿ ರಿವೋಲ್ಟ್ ಮೋಟಾರ್ಸ್ ಕಂಪನಿಯು ಇವಿ ಮೋಟಾರ್ ಸೈಕಲ್ ಮಾದರಿಗಳನ್ನು ಆಕರ್ಷಕ ಬೆಲೆಯೊಂದಿಗೆ ಅತ್ಯುತ್ತಮ ಮೈಲೇಜ್ ನೀಡುವ ಇವಿ ಬೈಕ್ ಗಳನ್ನು ಪರಿಚಯಿಸುತ್ತಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಈಗಾಗಲೇ ರಿವೋಲ್ಟ್ 400 ಸರಣಿ ಇವಿ ಬೈಕ್ ಮಾದರಿಗಳನ್ನು ಮಾರಾಟ ಮಾಡುತ್ತಿರುವ ರಿವೋಲ್ಟ್ ಮೋಟಾರ್ಸ್ ಕಂಪನಿಯು ಇದೀಗ ಬಜೆಟ್ ಇವಿ ಬೈಕ್ ಖರೀದಿದಾರರಿಗೆ ಅನುಕೂಲಕರವಾಗುವ ಆರ್‌ವಿ1 ಇವಿ ಬೈಕ್ ಬಿಡುಗಡೆ ಮಾಡಿದ್ದು, ಇದು ಸಾಮಾನ್ಯ ಪೆಟ್ರೋಲ್ ಮೋಟಾರ್‌ಸೈಕಲ್‌ಗಳಿಗಿಂತಲೂ ಮೂರು ಪಟ್ಟು ಕಡಿಮೆ ಮಾಲೀಕತ್ವದ ವೆಚ್ಚದೊಂದಿಗೆ ದೀರ್ಘ ಕಾಲಿನ ಬಾಳ್ವಿಕೆಯನ್ನು ಖಾತ್ರಿಪಡಿಸುತ್ತದೆ.
ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್
ಹೊಸ ರಿವೋಲ್ಟ್ ಆರ್‌ವಿ1 ಎಲೆಕ್ಟ್ರಿಕ್ ಬೈಕ್ ಮಾದರಿಯಲ್ಲಿ ರಿವೋಲ್ಟ್ ಮೋಟಾರ್ಸ್ ಕಂಪನಿಯು ಎರಡು ಮಾದರಿಯ ಬ್ಯಾಟರಿಗಳ ಆಯ್ಕೆ ನೀಡುತ್ತಿದೆ. ಹೊಸ ಬೈಕಿನ ಆರಂಭಿಕ ಮಾದರಿಯಲ್ಲಿ 2.2 ಕೆವಿಹೆಚ್ ಬ್ಯಾಟರಿಯ ಪ್ಯಾಕ್ ಜೋಡಿಸಲಾಗಿದ್ದು, ಇದು ಪ್ರತಿ ಚಾರ್ಜ್ ಗೆ ಗರಿಷ್ಠ 100 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಹಾಗೆಯೇ ಟಾಪ್ ಎಂಡ್ ಮಾದರಿಯಲ್ಲಿ 3.24 ಕೆವಿಹೆಚ್ ಬ್ಯಾಟರಿ ಪ್ಯಾಕ್ ನೀಡಲಾಗಿದ್ದು, ಇದು ಪ್ರತಿ ಚಾರ್ಜ್‌ಗೆ ಗರಿಷ್ಠ 160 ಕಿ.ಮೀ ಮೈಲೇಜ್ ಖಾತ್ರಿಪಡಿಸುತ್ತದೆ.
ಆರ್‌ವಿ1 ಇವಿ ಬೈಕಿನಲ್ಲಿ ರಿವೋಲ್ಟ್ ಮೋಟಾರ್ಸ್ ಕಂಪನಿಯು ಇನ್ ಬಿಲ್ಟ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಹೋಂ ಚಾರ್ಜ್ ರ್ ಮೂಲಕ ಇದರಲ್ಲಿ 2.2 ಕೆವಿಹೆಚ್ ಬ್ಯಾಟರಿ ಹೊಂದಿರುವ ಮಾದರಿಯು ಸೊನ್ನೆಯಿಂದ ಶೇ.80 ರಷ್ಟು ಚಾರ್ಜ್ ಆಗಲು ಗರಿಷ್ಠ 2 ಗಂಟೆ 15 ನಿಮಿಷಗಳ ಕಾಲಾವಕಾಶ ತೆಗೆದುಕೊಳ್ಳಲಿದ್ದರೆ 3.24 ಕೆವಿಹೆಚ್ ಬ್ಯಾಟರಿ ಆಯ್ಕೆ ಹೊಂದಿರುವ ಮಾದರಿಯು 3 ಗಂಟೆ, 30 ನಿಮಿಷ ಸಮಯ ತೆಗೆದುಕೊಳ್ಳುತ್ತದೆ. ಒಂದು ವೇಳೆ ಫಾಸ್ಟ್ ಚಾರ್ಜಿಂಗ್ ಮೂಲಕ ಚಾರ್ಜ್ ಮಾಡುವುದಾರರೇ ಈ ಹೊಸ ಬೈಕ್ ಮಾದರಿಯು ಕೇವಲ 1.5 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಆಗಲಿದ್ದು, ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಹೊಸ ಬೈಕಿನ ಬ್ಯಾಟರಿಯು IP67 ಮಾನದಂಡಗಳನ್ನು ಪೂರೈಸಿದೆ.
ಹಾಗೆಯೇ ಹೊಸ ರಿವೋಲ್ಟ್ ಆರ್‌ವಿ1 ಇವಿ ಬೈಕಿನಲ್ಲಿ ಚೈನ್ ಡ್ರೈವ್ ಸಿಸ್ಟಂ ನೀಡಲಾಗಿದ್ದು, ಸ್ಥಿರವಾದ ಸವಾರಿಯನ್ನು ಖಾತ್ರಿಪಡಿಸಲು ಉತ್ತಮ ಟೈರ್ ಗಳನ್ನು ಜೋಡಣೆ ಮಾಡಲಾಗಿದ್ದು, ರೀವರ್ಸ್ ಮೋಡ್ ಗಮನಸೆಳೆಯುತ್ತದೆ. ಜೊತೆಗೆ 250 ಕೆಜಿ ಪ್ಲೇ ಲೋಡ್ ಸಾಮಾರ್ಥ್ಯ ಹೊಂದಿರುವ ಹೊಸ ಬೈಕಿನಲ್ಲಿ ಎಲ್ಇಡಿ ಹೆಡ್ ಲೈಟ್, ಡ್ಯುಯಲ್ ಬ್ರೇಕ್, ವಿವಿಧ ಡ್ರೈವ್ ಮೋಡ್ ಗಳು ಮತ್ತು ಎರಡು ವೆರಿಯೆಂಟ್ ಗಳಿಗೂ ಅನ್ವಯಿಸುವಂತೆ 6 ಇಂಚಿನ ಡಿಜಿಟಲ್ ಎಲ್ ಸಿಡಿ ಡ್ಯಾಶ್ ಬೋರ್ಡ್ ನೀಡಲಾಗಿದೆ.