ಆಕರ್ಷಕ ಬೆಲೆಯೊಂದಿಗೆ 150 ಕಿ.ಮೀ ಮೈಲೇಜ್ ನೀಡುವ ಸಿಂಪಲ್ ಡಾಟ್ ಒನ್ ಇವಿ ಸ್ಕೂಟರ್ ಬಿಡುಗಡೆ

|

Updated on: Dec 17, 2023 | 5:16 PM

ಸಿಂಪರ್ ಎನರ್ಜಿ ಕಂಪನಿಯು ದೇಶಿಯ ಮಾರುಕಟ್ಟೆಗಾಗಿ ತನ್ನ ಎರಡನೇ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಾದ ಡಾಟ್ ಒನ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಇವಿ ಸ್ಕೂಟರ್ ಮಾದರಿಯು ಕಡಿಮೆ ಬೆಲೆಯೊಂದಿಗೆ ಭರ್ಜರಿ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದೆ.

ಆಕರ್ಷಕ ಬೆಲೆಯೊಂದಿಗೆ 150 ಕಿ.ಮೀ ಮೈಲೇಜ್ ನೀಡುವ ಸಿಂಪಲ್ ಡಾಟ್ ಒನ್ ಇವಿ ಸ್ಕೂಟರ್ ಬಿಡುಗಡೆ
ಸಿಂಪಲ್ ಡಾಟ್ ಒನ್ ಇವಿ ಸ್ಕೂಟರ್
Follow us on

ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಸಿಂಪಲ್ ಎನರ್ಜಿ (Simple Energy) ಕಂಪನಿಯು ಹೊಸ ಡಾಟ್ ಒನ್ (Dot One) ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದು, ಬೆಂಗಳೂರು ಎಕ್ಸ್ ಶೋರೂಂ ಪ್ರಕಾರ ಹೊಸ ಇವಿ ಸ್ಕೂಟರ್ ರೂ. 99,999 ಬೆಲೆ ಹೊಂದಿದೆ.

ಸಿಂಪಲ್ ಒನ್ ಇವಿ ಸ್ಕೂಟರ್ ನಂತರ ಇದೀಗ ಡಾಟ್ ಒನ್ ಇವಿ ಸ್ಕೂಟರ್ ಬಿಡುಗಡೆ ಮಾಡಿರುವ ಸಿಂಪಲ್ ಎನರ್ಜಿ ಕಂಪನಿಯು ಆರಂಭದಲ್ಲಿ ಬೆಂಗಳೂರಿನಲ್ಲಿ ಮಾತ್ರ ಮಾರಾಟ ಮಾಡಲು ನಿರ್ಧರಿಸಿದ್ದು, ಮುಂಬರುವ ಕೆಲ ತಿಂಗಳ ನಂತರ ದೇಶದ ವಿವಿಧ ನಗರಗಳಿಗೆ ಮಾರಾಟ ಜಾಲ ವಿಸ್ತರಿಸುವ ಯೋಜನೆ ರೂಪಿಸಿದೆ.

ಡಾಟ್ ಒನ್ ಇವಿ ಸ್ಕೂಟರ್ ಬಿಡುಗಡೆಯೊಂದಿಗೆ ಹೊಸ ಆಫರ್ ನೀಡಿರುವ ಸಿಂಪಲ್ ಎನರ್ಜಿ ಕಂಪನಿಯು ಸಿಂಪಲ್ ಒನ್ ಇವಿ ಸ್ಕೂಟರ್ ಖರೀದಿಗಾಗಿ ಈಗಾಗಲೇ ಬುಕಿಂಗ್ ಮಾಡಿ ಕಾಯುತ್ತಿರುವ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಹೊಸ ಡಾಟ್ ಒನ್ ಇವಿ ಸ್ಕೂಟರ್ ವಿತರಿಸುವ ಭರವಸೆ ನೀಡಿದೆ. ಸಿಂಪಲ್ ಒನ್ ಇವಿ ಸ್ಕೂಟರ್ ಬದಲಾಗಿ ಡಾಟ್ ಒನ್ ಸ್ಕೂಟರ್ ಖರೀದಿಸುವ ಗ್ರಾಹಕರಿಗಾಗಿ ಮಾತ್ರ ಅನ್ವಯಿಸುವಂತೆ ರೂ. 99,999 ಬೆಲೆ ನಿಗದಿಪಡಿಸಿದ್ದು, ಹೊಸದಾಗಿ ಡಾಟ್ ಒನ್ ಇವಿ ಸ್ಕೂಟರ್ ಬುಕಿಂಗ್ ಮಾಡುವ ಗ್ರಾಹಕರಿಗೆ ಬೆಲೆ ಹೆಚ್ಚಳವಾಗಲಿದೆ. ಹೊಸದಾಗಿ ಬುಕಿಂಗ್ ಮಾಡುವ ಗ್ರಾಹಕರಿಗೆ ಡಾಟ್ ಒನ್ ಬೆಲೆಯನ್ನು ಮುಂದಿನ ತಿಂಗಳು ಜನವರಿ ಕೊನೆಯಲ್ಲಿ ಘೋಷಣೆ ಮಾಡಲಿದ್ದು, ಇದು ಓಲಾ ಮತ್ತು ಎಥರ್ ಇವಿ ಸ್ಕೂಟರ್ ಗಳ ಉತ್ತಮ ಪೈಪೋಟಿಯಾಗಲಿದೆ.

ಇದನ್ನೂ ಓದಿ: 255 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದ ಸ್ಕೂಟರ್ ಮಾಲೀಕ ಕೊನೆಗೂ ಸಿಕ್ಕಿಬಿದ್ದಾಗ!

ಹೊಸ ಡಾಟ್ ಒನ್ ಇವಿ ಸ್ಕೂಟರ್ ಮಾದರಿಯು ಈ ಹಿಂದಿನ ಸಿಂಪಲ್ ಒನ್ ಇವಿ ಸ್ಕೂಟರ್ ಪ್ಲ್ಯಾಟ್ ಫಾರ್ಮ್ ಆಧರಿಸಿ ನಿರ್ಮಾಣವಾಗಿದ್ದರೂ ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಗ್ರಾಹಕರ ಗಮನಸೆಳೆಯಲಿದ್ದು, ಇದರಲ್ಲಿ 3.7 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಮತ್ತು 8.5 kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಲಾಗಿದೆ. ಈ ಮೂಲಕ ಇದು ಪ್ರತಿ ಚಾರ್ಜ್ ಗೆ 151 ಕಿ.ಮೀ ಮೈಲೇಜ್ ನೊಂದಿಗೆ 72 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ 2.7 ಸೆಕೆಂಡುಗಳಲ್ಲಿ ಸೊನ್ನೆಯಿಂದ 40 ಕಿ.ಮೀ ವೇಗವನ್ನು ಪಡೆದುಕೊಳ್ಳಬಹುದಾಗಿದೆ.

ಇದರೊಂದಿಗೆ ಹೊಸ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಟ್ಯೂಬ್‌ಲೆಸ್ ಟೈಯರ್ಸ್ ವೈಶಿಷ್ಟ್ಯತೆಯೊಂದಿಗೆ ಮುಂಭಾಗ ಹಾಗೂ ಹಿಂಬದಿಯಲ್ಲಿ 12 ಇಂಚಿನ ಅಲಾಯ್ ವ್ಹೀಲ್ಸ್, 35 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೋರೇಜ್ ಮತ್ತು ಸುರಕ್ಷತೆಗಾಗಿ ಕಾಂಬಿ ಬ್ರೇಕಿಂಗ್ ಸಿಸ್ಟಂನೊಂದಿಗೆ ಡಿಸ್ಕ್ ಬ್ರೇಕ್ ಸೇರಿದಂತೆ ಹಲವಾರು ಹೊಸ ಫೀಚರ್ಸ್ ಹೊಂದಿದೆ.

ಇದನ್ನೂ ಓದಿ: ರೂ. 25 ಸಾವಿರ ಬೆಲೆ ಇಳಿಕೆಯೊಂದಿಗೆ ಹೊಸ ಕವಾಸಕಿ ಡಬ್ಲ್ಯೂ175 ಬೈಕ್ ಬಿಡುಗಡೆ

ಈ ಮೂಲಕ ಹೊಸ ಇವಿ ಸ್ಕೂಟರ್ ಮಾದರಿಯೊಂದಿಗೆ ಸಿಂಪಲ್ ಎನರ್ಜಿ ಕಂಪನಿಯ ಕಡಿಮೆ ಬೆಲೆಯ ಇವಿ ಸ್ಕೂಟರ್ ಖರೀದಿದಾರರನ್ನು ಸೆಳೆಯುವ ತಂತ್ರ ರೂಪಿಸಿದ್ದು, ಇದು ಪ್ರಮುಖ ಇವಿ ಸ್ಕೂಟರ್ ಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.