ಪವರ್​ಫುಲ್ ಕರ್ವ್ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಡೇಟ್ ಫಿಕ್ಸ್ ಮಾಡಿದ ಟಾಟಾ ಮೋಟಾರ್ಸ್

|

Updated on: Jul 15, 2024 | 2:04 PM

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೊಸ ಕರ್ವ್ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಕಾರು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ.

ಪವರ್​ಫುಲ್ ಕರ್ವ್ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಡೇಟ್ ಫಿಕ್ಸ್ ಮಾಡಿದ ಟಾಟಾ ಮೋಟಾರ್ಸ್
ಟಾಟಾ ಕರ್ವ್ ಎಲೆಕ್ಟ್ರಿಕ್ ಕಾರು
Follow us on

ದೇಶದ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾಗಿರುವ ಟಾಟಾ ಮೋಟಾರ್ಸ್ (Tata Motors) ಕಂಪನಿಯು ತನ್ನ ಹೊಸ ಕರ್ವ್ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಮುಂದಿನ ತಿಂಗಳು ಅಗಸ್ಟ್ 7ರಂದು ಅಧಿಕೃತವಾಗಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಸದ್ಯ ಮಾರುಕಟ್ಟೆಯಲ್ಲಿ ನೆಕ್ಸಾನ್ ಇವಿ, ಟಿಗೋರ್ ಇವಿ, ಟಿಯಾಗೋ ಇವಿ ಮತ್ತು ಪಂಚ್ ಇವಿ ಕಾರುಗಳನ್ನು ಮಾರಾಟ ಮಾಡುತ್ತಿರುವ ಟಾಟಾ ಕಂಪನಿಯು ಇದೀಗ ಕರ್ವ್ ಇವಿ ಬಿಡುಗಡೆ ಮಾಡುತ್ತಿದೆ.

ಕರ್ವ್ ಇವಿ ಕಾರು ಮಾದರಿಯು ನೆಕ್ಸಾನ್ ಉತ್ಪಾದನಾ ಪ್ಲ್ಯಾಟ್ ಫಾರ್ಮ್ ನಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಇದು ವಿನೂತನ ಫೀಚರ್ಸ್ ಗಳೊಂದಿಗೆ ಕೂಪೆ ಎಸ್ ಯುವಿ ವೈಶಿಷ್ಟ್ಯತೆ ಹೊಂದಿರಲಿದೆ. ಇದು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಮಾತ್ರವಲ್ಲದೆ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲೂ ಸಹ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಇದರಲ್ಲಿ ಸದ್ಯಕ್ಕೆ ಎಲೆಕ್ಟ್ರಿಕ್ ಆವೃತ್ತಿ ಮಾತ್ರ ಬಿಡುಗಡೆಯಾಗುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳು 2025ರ ಮಧ್ಯಂತರದಲ್ಲಿ ಬಿಡುಗಡೆಯಾಗಬಹುದಾಗಿದ್ದು, ಇದು ನೆಕ್ಸಾನ್ ಇವಿಗಿಂತೂ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಬ್ಯಾಟರಿ ಪ್ಯಾಕ್ ಪಡೆದುಕೊಳ್ಳಲಿದೆ.

ಹೊಸ ಕರ್ವ್ ಇವಿಯಲ್ಲಿ ಟಾಟಾ ಮೋಟಾರ್ಸ್ ಹಲವಾರು ಪ್ರೀಮಿಯಂ ಫೀಚರ್ಸ್ ಗಳನ್ನು ಜೋಡಣೆ ಮಾಡುತ್ತಿದ್ದು, ಇದು ನೆಕ್ಸಾನ್ ಇವಿಗಿಂತಲೂ ಹೆಚ್ಚು ಮಟ್ಟದ ಐಷಾರಾಮಿ ಸೌಲಭ್ಯಗಳೊಂದಿಗೆ ತುಸು ದುಬಾರಿಯಾಗಿರಲಿದೆ. ಆದರೆ ಹೊಸ ಕಾರಿನಲ್ಲಿರುವ ವಿನೂತನ ಸೌಲಭ್ಯಗಳು ಎಂಜಿ ಜೆಡ್ಎಸ್ ಇವಿಗೆ ಉತ್ತಮ ಪೈಪೋಟಿಯಾಗಲಿದ್ದು, ಇದು ಗ್ರಾಹಕರ ಬೇಡಿಕೆಯೆಂತೆ ಹಲವಾರು ಬದಲಾವಣೆಗಳನ್ನು ಪಡೆದುಕೊಳ್ಳಲಿದೆ.

ಇದನ್ನೂ ಓದಿ: ಸುರಕ್ಷತೆ ಮತ್ತು ಅನುಕೂಲತೆ ಹೊಂದಿರುವ ಇಂತಹ ಕಾರುಗಳನ್ನೇ ಖರೀದಿಸಿ..

ಕರ್ವ್ ಇವಿ ಕಾರು ಮಾದರಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಜೆನ್ 2 ಆಕ್ಟಿ.ಇವಿ ತಂತ್ರಜ್ಞಾನ ಬಳಕೆ ಮಾಡಿದ್ದು, ಇದು ಪ್ರತಿ ಚಾರ್ಜ್ ಗೆ ಗರಿಷ್ಠ 450 ರಿಂದ 500 ಕಿ.ಮೀ ಮೈಲೇಜ್ ನೀಡಬಹುದಾಗಿದೆ. ಇದರೊಂದಿಗೆ ಹೊಸ ಕಾರಿನಲ್ಲಿ ನೆಕ್ಸಾನ್ ಇವಿ ಕಾರಿಗೆ ಹೋಲಿಕೆಯಾಗುವ ಮುಂಭಾಗದ ವಿನ್ಯಾಸ ಹೊಂದಿದ್ದು, ಜೊತೆಗೆ ಸ್ಪೋರ್ಟಿಯಾಗಿರುವ ಬಂಪರ್, ಎಲ್ಇಡಿ ಲೈಟ್ ಸಿಗ್ನಿಚೆರ್ ಹೊಂದಿರಲಿದೆ. ಕಾರಿನ ಒಳಭಾಗದಲ್ಲಿ ಫೋರ್-ಸ್ಪೋರ್ಕ್ ಸ್ಟೀರಿಂಗ್ ವ್ಹೀಲ್, 10.25 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಡಿಜಿಟಲ್ ಡಯಲ್ಸ್, ವೈರ್ ಲೆಸ್ ಚಾರ್ಜರ್, 360 ಡಿಗ್ರಿ ಕ್ಯಾಮೆರಾ, ವೆಂಟಿಲೆಟೆಡ್ ಸೀಟುಗಳು, ಕನೆಕ್ಟೆಡ್ ಕಾರ್ ಟೆಕ್ ಮತ್ತು ಪನೊರಮಿಕ್ ಸನ್ ರೂಫ್ ಸೌಲಭ್ಯಗಳಿರಲಿವೆ.

ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!

ಇನ್ನು ಕರ್ವ್ ಕಾರು ಹ್ಯಾರಿಯರ್ ಕಾರಿನಲ್ಲಿರುವ ಹಲವು ಸುರಕ್ಷಾ ಫೀಚರ್ಸ್ ಗಳನ್ನು ಪಡೆದುಕೊಂಡಿರಲಿದ್ದು, ಹೊಸ ಕಾರಿನಲ್ಲಿ ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಗಳಿರಲಿವೆ. ಈ ಮೂಲಕ ಹೊಸ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 18 ಲಕ್ಷದಿಂದ ರೂ. 23 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದಾಗಿದೆ.