Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!

ಹೊಸ ವಾಹನಗಳ ಖರೀದಿ ಸಂದರ್ಭದಲ್ಲಿ ಮೈಲೇಜ್ ಕುರಿತಾಗಿ ಬಹುತೇಕ ಗ್ರಾಹಕರು ಗಮನಹರಿಸುವುದು ಸಾಮಾನ್ಯವಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಸದ್ಯ ತಂತ್ರಜ್ಞಾನ ಪ್ರೇರಣೆಯೊಂದಿಗೆ ಖರೀದಿಗೆ ಲಭ್ಯವಿರುವ ಹೊಸ ಕಾರುಗಳ ಕುರಿತಾಗಿ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!
ಅತಿ ಹೆಚ್ಚು ಮೈಲೇಜ್ ನೀಡುವ ಕಾರುಗಳು
Follow us
Praveen Sannamani
|

Updated on: May 12, 2024 | 9:36 PM

ವಾಹನ ನಿರ್ವಹಣಾ ವೆಚ್ಚದಲ್ಲಿ ಇಂಧನ ಕಾರ್ಯಕ್ಷಮತೆ (Fuel-Efficient) ಅತಿಮುಖ್ಯವಾದ ವಿಚಾರ ಅಂದ್ರೆ ತಪ್ಪಾಗುವುದಿಲ್ಲ. ಹೈ ಎಂಡ್ ಕಾರುಗಳನ್ನು ಕೆಲವು ಗ್ರಾಹಕರು ತಮ್ಮ ಆದ್ಯತೆ ಅನುಗುಣವಾಗಿ ಖರೀದಿ ಮಾಡಿದರೂ ಕೂಡಾ ಸಾಮಾನ್ಯ ಗ್ರಾಹಕರು ಹೆಚ್ಚು ಗಮನಹರಿಸುವುದು ಬೆಲೆ ಮತ್ತು ಉತ್ತಮ ಇಂಧನ ದಕ್ಷತೆ ಮೇಲೆ ಎನ್ನಬಹುದು. ಹೀಗಾಗಿ ಭಾರತದಲ್ಲಿ ಕೈಗೆಟುಕುವ ಬೆಲೆಯಲ್ಲಿ ಖರೀದಿ ಮಾಡಬಹುದಾದ ಉತ್ತಮ ಮೈಲೇಜ್ ನೀಡುವ ಕಾರುಗಳ ಮಾಹಿತಿ ಇಲ್ಲಿದೆ.

ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ

ಹೈರೈಡರ್ ಮತ್ತು ಗ್ರ್ಯಾಂಡ್ ವಿಟಾರಾ ಎಸ್ ಯುವಿ ಕಾರುಗಳು ಭಾರತದಲ್ಲಿ ಸದ್ಯ ಅತಿ ಹೆಚ್ಚು ಮೈಲೇಜ್ ನೊಂದಿಗೆ ಉತ್ತಮ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಕಾರು ಮಾದರಿಗಳಾಗಿವೆ. ಟೊಯೊಟಾ ಮತ್ತು ಮಾರುತಿ ಸುಜುಕಿ ಕಂಪನಿಗಳ ಸಹಭಾಗಿತ್ವ ಯೋಜನೆಯಲ್ಲಿ ನಿರ್ಮಾಣವಾಗಿರುವ ಈ ಎರಡು ಕಾರುಗಳು ಪೆಟ್ರೋಲ್ ಮತ್ತು ಹೈಬ್ರಿಡ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿವೆ. ಇದರಲ್ಲಿ ಹೈಬ್ರಿಡ್ ವೆರಿಯೆಂಟ್ ಗಳು ಪ್ರತಿ ಲೀಟರ್ ಪೆಟ್ರೋಲ್ ಸಂಯೋಜನೆಯೊಂದಿಗೆ 27.93 ಕಿ.ಮೀ ಮೈಲೇಜ್ ನೀಡುತ್ತವೆ.

ಹೋಂಡಾ ಸಿಟಿ ಸೆಡಾನ್

ಸಿಟಿ ಸೆಡಾನ್ ಕಾರು ಮಾದರಿಯು ಸಹ ಉತ್ತಮ ಇಂಧನ ದಕ್ಷತೆ ಹೊಂದಿರುವ ಕಾರುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಇದು ಕೂಡಾ ಗ್ರಾಹಕರ ಆದ್ಯತೆಗೆ ತಕ್ಕಂತೆ ಪೆಟ್ರೋಲ್ ಮತ್ತು ಹೈಬ್ರಿಡ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದೆ. ಸಿಟಿ ಹೈ ಎಂಡ್ ಮಾದರಿಯಲ್ಲಿರುವ ಹೈಬ್ರಿಡ್ ಮಾದರಿಯು ಪೆಟ್ರೋಲ್ ಸಂಯೋಜನೆಯೊಂದಿಗೆ 27.13 ಕಿ.ಮೀ ಮೈಲೇಜ್ ನೀಡಲಿದ್ದು, ಆಕರ್ಷಕ ಬೆಲೆ ಹೊಂದಿದೆ.

ಇದನ್ನೂ ಓದಿ: ಎಡಿಎಎಸ್ ಸೌಲಭ್ಯ ಹೊಂದಿರುವ ಭಾರತದ ಬಜೆಟ್ ಕಾರುಗಳಿವು!

ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಸೆಲೆರಿಯೊ

ನವೀಕೃತ ಸ್ವಿಫ್ಟ್ ಕಾರು ಇತ್ತೀಚೆಗೆ ಬಿಡುಗಡೆಯಾಗಿದ್ದು, ಇದು 1.2 ಲೀಟರ್ ಜೆಡ್12ಇ ಪೆಟ್ರೋಲ್ ಎಂಜಿನ್ ಆಯ್ಕೆ ಪಡೆದುಕೊಂಡಿದೆ. ಇದು ಕಡಿಮೆ ಆರ್ ಪಿಎಂ ನಲ್ಲೂ ಕ್ವಿಕ್ ಪರ್ಫಾಮೆನ್ಸ್ ನೀಡಲಿದ್ದು, ಇದು ನಗರ ಪ್ರದೇಶಗಳಲ್ಲಿನ ಸಂಚಾರಕ್ಕೆ ಸಾಕಷ್ಟು ಸಹಕಾರಿಯಾಗುವುದರ ಜೊತೆಗೆ ಹೆಚ್ಚು ಇಂಧನ ದಕ್ಷತೆಯನ್ನು ಖಾತ್ರಿಪಡಿಸುತ್ತದೆ. ಇದರಲ್ಲಿರುವ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್ ಗೆ 24.8 ಕಿ.ಮೀ ಮೈಲೇಜ್ ನೀಡಿದರೆ ಆಟೋಮ್ಯಾಟಿಕ್ ಮಾದರಿಯು 25.75 ಕಿ.ಮೀ ಮೈಲೇಜ್ ನೀಡುತ್ತದೆ. ಹಾಗೆಯೇ ಸೆಲೆರಿಯೊ ಕಾರು 1.0 ಲೀಟರ್ ಪೆಟ್ರೋಲ್ ಎಂಜಿನ್ ನೊಂದಿಗೆ 25.96 ಕಿ.ಮೀ ಮೈಲೇಜ್ ನೀಡುತ್ತದೆ.

ಮಾರುತಿ ಸುಜುಕಿ ವ್ಯಾಗನ್ಆರ್ ಮತ್ತು ಆಲ್ಟೊ ಕೆ10

ಸಣ್ಣ ಗಾತ್ರದ ಕಾರುಗಳಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ವ್ಯಾಗನ್ಆರ್ ಮತ್ತು ಆಲ್ಟೊ ಕೆ10 ಕಾರುಗಳು ಇಂಧನ ದಕ್ಷತೆಯಲ್ಲೂ ಗಮನಸೆಳೆಯುತ್ತಿವೆ. ಇವು ಕೂಡಾ ವಿವಿಧ ಪೆಟ್ರೋಲ್ ಎಂಜಿನ್ ನೊಂದಿಗೆ ಪ್ರತಿ ಲೀಟರ್ ಗೆ 24.77 ಕಿ.ಮೀ ಮತ್ತು 24.65 ಕಿ.ಮೀ ಮೈಲೇಜ್ ನೀಡುತ್ತವೆ. ಜೊತೆಗೆ ಇವು ಸಿಎನ್ ಜಿ ಮಾದರಿಯಲ್ಲೂ ಖರೀದಿಗೆ ಲಭ್ಯವಿದ್ದು, ಇದರಿಂದ ಇನ್ನು ಹೆಚ್ಚಿನ ಮೈಲೇಜ್ ನೀರಿಕ್ಷೆ ಮಾಡಬಹುದಾಗಿದೆ.

ಮಾರುತಿ ಸುಜುಕಿ ಬಲೆನೊ ಮತ್ತು ಡಿಜೈರ್

ಅತಿ ಹೆಚ್ಚು ಮೈಲೇಜ್ ಕಾರುಗಳಲ್ಲಿ ಮಾರುತಿ ಸುಜುಕಿ ನಿರ್ಮಾಣದ ಕಾರುಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವುಗಳಲ್ಲಿ ಬಲೆನೊ ಮತ್ತು ಡಿಜೈರ್ ಕೂಡಾ ಪ್ರಮುಖವಾಗಿವೆ. ಈ ಕಾರುಗಳು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಪ್ರತಿ ಲೀಟರ್ ಗೆ 23.69 ಕಿ.ಮೀ ನಿಂದ 22.64 ಕಿ.ಮೀ ಮೈಲೇಜ್ ನೀಡುತ್ತವೆ.

ಇದನ್ನೂ ಓದಿ: ಕೋಟಿ ಬೆಲೆಯ ಪವರ್ ಫುಲ್ ಐಷಾರಾಮಿ ಕಾರು ಖರೀದಿಸಿದ ‘ಸಿಂಹಪ್ರಿಯಾ’ ಜೋಡಿ

ಮಾರುತಿ ಸುಜುಕಿ ಫ್ರಾಂಕ್ಸ್ ಮತ್ತು ಟೊಯೊಟಾ ಟೈಸರ್

ಫ್ರಾಂಕ್ಸ್ ಮತ್ತು ಟೈಸರ್ ಕಾರುಗಳು ಕೂಡಾ ಉತ್ತಮ ಇಂಧನ ದಕ್ಷತೆ ಹೊಂದಿದ್ದು, ಈ ಎರಡು ಕಾರುಗಳಲ್ಲೂ ಒಂದೇ ಮಾದರಿಯ ಎಂಜಿನ್ ಆಯ್ಕೆ ನೀಡಲಾಗಿದೆ. ಸಾಮಾನ್ಯ ಪೆಟ್ರೋಲ್ ಮತ್ತು ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರುವ ಫ್ರಾಂಕ್ಸ್ ಮತ್ತು ಟೈಸರ್ ಕಾರುಗಳು ಪ್ರತಿ ಲೀಟರ್ ಗೆ 22.34 ಕಿ.ಮೀ ಮೈಲೇಜ್ ನೀಡುತ್ತವೆ.